ವಿಕಿರಣ ಪರೀಕ್ಷೆಗೆ 500 ಮಂದಿಯ ನೇಮಕ: ಚೀನಾ
ಬೀಜಿಂಗ್, ಜ. 11: ತನ್ನ ನಾಲ್ಕನೆ ಪರಮಾಣು ಪರೀಕ್ಷೆಯನ್ನು ನಡೆಸಿರುವುದಾಗಿ ಉತ್ತರ ಕೊರಿಯ ಕಳೆದ ವಾರ ಘೋಷಿಸಿದ ಬಳಿಕ, ವಿಕಿರಣ ಮಟ್ಟದ ಮೇಲೆ ನಿಗಾ ಇಡಲು ಆ ದೇಶದೊಂದಿಗಿನ ತನ್ನ ಗಡಿಯುದ್ದಕ್ಕೂ 500ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಿರುವುದಾಗಿ ಚೀನಾ ಸರಕಾರ ಹೇಳಿದೆ. ಆದರೆ, ಅಸಾಮಾನ್ಯ ವಿದ್ಯಮಾನವೇನೂ ಕಂಡುಬಂದಿಲ್ಲ ಎಂದು ಅದು ತಿಳಿಸಿದೆ.
ತಾನು ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ್ದೇನೆ ಎಂಬುದಾಗಿ ಉತ್ತರ ಕೊರಿಯ ಘೋಷಿಸಿದ ಬಳಿಕ ಚೀನ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ರಾಷ್ಟ್ರಗಳು ಅದರ ವಿರುದ್ಧ ತಿರುಗಿಬಿದ್ದಿವೆ.
ಅದೇ ವೇಳೆ, ಉತ್ತರ ಕೊರಿಯ ಪರೀಕ್ಷಾ ಸ್ಫೋಟ ನಡೆಸಿದ ಸಾಧನ ಹೈಡ್ರೋಜನ್ ಬಾಂಬ್ ಹೌದೇ ಎನ್ನುವ ಬಗ್ಗೆ ಅಮೆರಿಕ ಸರಕಾರ ಮತ್ತು ಶಸ್ತ್ರಾಸ್ತ್ರ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.
ವಿಕಿರಣ ಮಟ್ಟದ ಮೇಲೆ 500ಕ್ಕೂ ಅಧಿಕ ಮಂದಿ ನಿಗಾ ಇಡುತ್ತಿದ್ದಾರೆ ಎಂದು ಚೀನಾದ ಪರಿಸರ ಸಚಿವಾಲಯ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಪೈಕಿ 350 ಮಂದಿಯನ್ನು ಗಡಿಯುದ್ದಕ್ಕೂ ಇರುವ 37 ಸ್ಥಿರ ಪರೀಕ್ಷಾ ಕೇಂದ್ರಗಳು ಮತ್ತು 14 ಚಲಿಸುವ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.
ಆದಾಗ್ಯೂ, ಈ ಸ್ಫೋಟದಿಂದ ಚೀನಾದ ವಿಕಿರಣ ಮಟ್ಟದಲ್ಲಿ ಯಾವುದೇ ಬದಲಾವಣೆಯಯಾಗುವ ಸಾಧ್ಯತೆಯನ್ನು ಅದು ಈಗಾಗಲೇ ತಳ್ಳಿಹಾಕಿದೆ. ವಿಕಿರಣ ಮಟ್ಟದಲ್ಲಿ ಅಸಾಮಾನ್ಯ ಏರಿಕೆಯೇನೂ ದಾಖಲಾಗಿಲ್ಲ ಎಂದು ಅದು ಹೇಳಿದೆ.