ವಿಜಯಾ ಬ್ಯಾಂಕ್ ವಿ-ಜೆನ್ ಯೂತ್ ಕ್ವಿಝ್: ಪಿಎಸ್ಬಿಬಿ ಲರ್ನಿಂಗ್ ಅಕಾಡಮಿಗೆ ಪ್ರಶಸ್ತಿ
ಬೆಂಗಳೂರು, ಜ.26: ವಿಜಯಾ ಬ್ಯಾಂಕ್ ವತಿಯಿಂದ ವರ್ಷಂಪ್ರತಿ ನಡೆಸಲಾಗುವ ಅಂತರ್ ಪ್ರೌಢಶಾಲಾ ಮಟ್ಟದ ವಿ-ಜೆನ್ ಯೂತ್ ಕ್ವಿಝ್ (ರಸಪ್ರಶ್ನೆ) ಸ್ಪರ್ಧೆಯು ಜ.24ರಂದು ರವಿವಾರ ನಗರದ ಎಂ.ಜಿ.ರಸ್ತೆಯಲ್ಲಿರುವ ವಿಜಯಾ ಬ್ಯಾಂಕ್ ಮುಖ್ಯ ಕಾರ್ಯಾಲಯದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ರಾಜ್ಯದ 100 ಶಾಲೆಗಳ ಸುಮಾರು 600 ವಿದ್ಯಾರ್ಥಿಗಳು ಹಾಗೂ ಹೆತ್ತವರು ಪಾಲ್ಗೊಂಡಿದ್ದರು. ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ್ ರಾವ್ ಪ್ರಥಮ ಪ್ರಶ್ನೆಯನ್ನು ಕೇಳುವುದರ ಮೂಲಕ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಿರಿ ಬಾಲ ಸುಬ್ರಹ್ಮಣ್ಯಂ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಿಎಸ್ಬಿಬಿ ಲರ್ನಿಂಗ್ ಅಕಾಡೆಮಿ ಬೆಂಗಳೂರು ತಂಡವು ಪ್ರಥಮ ಸ್ಥಾನವನ್ನು ಗಳಿಸಿಕೊಂಡರೆ ಪ್ರೆಸಿಡೆನ್ಸಿ ಸ್ಕೂಲ್ ಬೆಂಗಳೂರು ತಂಡಕ್ಕೆ ದ್ವಿತೀಯ ಬಹುಮಾನ ಒಲಿಯಿತು. ವಿಜೇತ ತಂಡಗಳಿಗೆ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡವರನ್ನು ನಾಗೇಶ್ವರ್ ರಾವ್ ಅಭಿನಂದಿಸಿದರು. ಅತ್ಯುತ್ತಮ ಸಾಧನೆ ಮಾಡಿದ ತಂಡ ಮಾತ್ರವಲ್ಲದೆ, ಫೈನಲ್ ಪ್ರವೇಶಿಸಿದ ಎಲ್ಲ ತಂಡಗಳಿಗೂ ಟ್ರೋಫಿ ಪ್ರದಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆ ವೀಕ್ಷಣೆಗೆ ಬ್ಯಾಂಕ್ನ ಕಾರ್ಯನಿರ್ವಾಹಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಗಮಿಸಿದ್ದವು.