ಸ್ಮಾ ರ್ಟ್ ಸಿಟಿ ಬಡತನ ನಿವಾರಿಸುವುದೇ?
ಭಾರತ ಉದಯಿಸುತ್ತಿದೆ. ದೇಶದ ಉದ್ದಗಲ ಗಳಲ್ಲಿರುವ ನಗರಗಳಲ್ಲಿ ನಿರ್ಮಾಣದ ವೇಗ ಹುಚ್ಚು ಹಿಡಿಸುವಷ್ಟು ಎತ್ತರಕ್ಕೆ ತಲುಪಿದೆ. ಪ್ರತೀ ನಗರ, ಪ್ರತೀ ಜಿಲ್ಲೆ, ಪ್ರತೀ ಪ್ರಾದೇಶಿಕ ಸ್ಥಳಗಳು ತಮ್ಮನ್ನು ಮರುಸಂಶೋಧಿಸುತ್ತಿವೆ: ಒಂದೇ ಸಮಯದಲ್ಲಿ ಒಂದು ಸ್ಮಾರ್ಟ್ಫೋನ್, ಒಂದು ಫ್ಲೈಓವರ್,ಒಂದು ಸೂಪರ್ ಹೆದ್ದಾರಿ,ಒಂದು ಬೃಹತ್ ಯೋಜನೆ.
ತಮ್ಮ ಇತ್ತೀಚಿನ ಭಾಷಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ,ದೇಶವು ಭಾರತದ ಬೆಳವಣಿಗೆಯ ಕತೆಯನ್ನು ಪುನರುಜ್ಜೀವನಗೊಳಿಸಲು ದೊಡ್ಡದನ್ನು ಯೋಚಿಸುವ ಮತ್ತು ಕೌಶಲ್ಯ, ಪ್ರಮಾಣ ಮತ್ತು ವೇಗದ ಮೇಲೆ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದ್ದರು. ಅದಕ್ಕಾಗಿ ಮೋದಿ ನಗರೀಕರಣಕ್ಕೆ ಒಂದು ಹೊಸ ಉದ್ಯಮ ಮಾದರಿಯನ್ನು ವಿವರಿಸಿದರು: ನೂರು ಸಣ್ಣ ಮತ್ತು ಮಧ್ಯಮ ಗಾತ್ರದ ಪ್ರದೇಶಗಳನ್ನು ಸ್ಮಾರ್ಟ್ ಸಿಟಿಗಳಾಗಿ ಬದಲಾಯಿಸುವ ಉದ್ದೇಶ ಹೊಂದಿರುವ ಭಾರತದ ಮಹತ್ವಾಕಾಂಕ್ಷಿಯ ಸ್ಮಾರ್ಟ್ ಸಿಟಿ ಯೋಜನೆ.
ಸ್ಮಾರ್ಟ್ ಆಗುವುದು
ಮೋದಿಯ ಯೋಜನೆಯ ಭಾಗವಾಗಿ ಸ್ಥಳೀಯ ಸರಕಾರಗಳು ಪ್ರಜೆಗಳ ಜೊತೆ ಸಲಹೆಗಳನ್ನು ಪಡೆದ ನಂತರ ತಮ್ಮ ನಗರವನ್ನು ಸ್ಮಾರ್ಟ್ ಮಾಡುವ ಪ್ರಸ್ತಾಪದೊಂದಿಗೆ ಬರಬೇಕು. ಕೇಂದ್ರ ಸರಕಾರವು ಅವುಗಳಲ್ಲಿ ನೂರು ನಗರಗಳನ್ನು-ಅವುಗಳ ಹಿಂದಿನ ದಾಖಲೆ ಮತ್ತು ಭವಿಷ್ಯದ ಸಾಮರ್ಥ್ಯದ ಆಧಾರದಲ್ಲಿ ತಮ್ಮ ಯೋಜನೆಯಲ್ಲಿ ಗುರುತಿಸುವಿಕೆ ಮತ್ತು ಸಂಪನ್ಮೂಲಗಳನ್ನು ಪಡೆಯಲು ಆಯ್ಕೆ ಮಾಡುತ್ತದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಸ್ಮಾರ್ಟ್ ಸಿಟಿಗಳು ಅಲ್ಲಿನ ಗಣಿ ಮತ್ತು ಬೃಹತ್ ದತ್ತಾಂಶಗಳ ವಿಶ್ಲೇಷಣೆಯ ಮೇಲೆ ಅವಲಂಬಿತವಾಗಿದ್ದರೆ ಭಾರತದ ಸ್ಮಾರ್ಟ್ ಸಿಟಿಗಳು ಮುಖ್ಯವಾಗಿ ನೀರು, ನೈರ್ಮಲ್ಯ, ವಿದ್ಯುತ್, ಗೃಹ ಮತ್ತು ಇತರ ಸವಲತ್ತುಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಇ-ಆಡಳಿತ, ಫೈಬರ್ ಆಫ್ಟಿಕ್ ಕೇಬಲ್ಗಳು ಮತ್ತು ಅತ್ಯಂತವೇಗದ ಅಂತರ್ಜಾಲ ಸಂಪರ್ಕ ಈ ಯೋಜನೆಯ ಪ್ರಮುಖ ಅಂಶಗಳು.
ಭಾರತದಲ್ಲಿ ಸ್ಮಾರ್ಟ್ ಸಿಟಿಯ ವಿವರಣೆಯು ಹೊಸತನ, ಉದ್ಯಮಶೀಲತೆ ಮತ್ತು ವ್ಯವಹಾರ ಕೇಂದ್ರೀಕೃತ ಪ್ರಾದೇಶಿಕ ವ್ಯತ್ಯಾಸವನ್ನು ಆಹ್ವಾನಿಸಲು ತೆರೆದುಕೊಳ್ಳುತ್ತದೆ. ಇದರ ಉದ್ದೇಶವು ನಗರೀಕರಣವನ್ನು ಸಂಪತ್ತು ಮತ್ತು ಸಮೃದ್ಧಿ ಸೃಷ್ಟಿಸುವ ಅವಕಾಶವನ್ನಾಗಿ ಬಳಸುವುದಾಗಿದೆ. ಹೊಸ ಸ್ಮಾರ್ಟ್ ಸಿಟಿಗಳು ಜಾಗತಿಕವಾಗಿ ದಕ್ಷಿಣದಲ್ಲಿ ಬೃಹತ್ ನಗರಗಳನ್ನು ಹಿಡಿದಿಟ್ಟಿರುವ ಅಭಿವೃದ್ಧಿ ಸಮಸ್ಯೆಯಿಂದ (ಅಪರಾಧ, ಬಡತನ, ವಿದ್ಯುತ್ ಕೊರತೆ ಮತ್ತು ಕೊಳೆಗೇರಿಗಳು) ಮುಕ್ತವಾಗಿರಬಹುದು ಎಂದು ನಂಬಲಾಗಿದೆ. ಈ ದೃಷ್ಟಿಯಿಂದ ನೋಡಿದರೆ ಭಾರತ ಸ್ಮಾರ್ಟ್ ಸಿಟಿಗಳ ಮೇಲೆ ಹೂಡುವ ಬಂಡವಾಳ ಸರಕಾರ ಮತ್ತು ಪ್ರಜೆಗಳಿಗೆ ವಿನ್-ವಿನ್ ಸ್ಥಿತಿ ಎಂದು ತೋರುತ್ತದೆ.
ಇನ್ನೊಂದು ಮುಖ
ಆದರೆ ಮೇಲ್ಮೈಯನ್ನು ಕೆದಕಿದರೆ ಬೇರೆಯದ್ದೇ ಚಿತ್ರಣ ಸಿಗುತ್ತದೆ. ನಿಜವಾಗಿ ಸ್ಮಾರ್ಟ್ ಸಿಟಿ ಯೋಜನೆಯು ಪ್ರಾದೇಶಿಕ ನಗರೀಕರಣವನ್ನು ಸಾಮಾನ್ಯರ ಮೇಲೆ ಗೊತ್ತುಪಡಿಸಿ ಪ್ರೋತ್ಸಾಹಿಸುತ್ತದೆ. ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ರೈತರು ಮತ್ತು ಬುಡಕಟ್ಟು ಜನರಿಗೆ ಸೇರಿದ, ಅವರು ತಲೆತಲಾಂತರಗಳಿಂದ ಉಪಯೋಗಿಸುತ್ತಾ ಬರುತ್ತಿರುವ ಭೂಮಿಯನ್ನು ಊಹಿಸಿ ಮತ್ತು ಗೊತ್ತುಪಡಿಸಿ ಮತ್ತು ಅದನ್ನು ರಿಯಲ್ ಎಸ್ಟೇಟ್ಗಳಿಗೆ ಪರಿವರ್ತಿಸುತ್ತದೆ. ಬಹುಮುಖ್ಯವಾಗಿ, ಈ ಪರಿವರ್ತನೆ ಸ್ಮಾರ್ಟ್ ಸಿಟಿ ಪರಿಕಲ್ಪನೆಗೆ ಸರಿಹೊಂದದವರನ್ನು ಹೊರಗಿಡುತ್ತದೆ.
ಸ್ಮಾರ್ಟ್ ಸಿಟಿ ಪರಿವರ್ತನೆಗೆ ಹೂಡಲು ಬಂಡವಾಳವನ್ನು ಆಕರ್ಷಿಸುವುದೇ ಬಹುದೊಡ್ಡ ಸವಾಲು. ಸಾರ್ವಜನಿಕ ಹೂಡಿಕೆಯುವ ಸಾಕಾಗುವುದಿಲ್ಲ, ಹಾಗಾಗಿ ಸಾರ್ವಜನಿಕ- ಖಾಸಗಿ ಜೊತೆಗಾರಿಕೆಯಲ್ಲಿ ಬಂಡವಾಳವನ್ನು ಪಡೆಯಲಾಗುತ್ತದೆ. ಜಾಗತಿಕ ಐಟಿ ಕಂಪೆನಿಗಳಾದ ಸಿಸ್ಕೊ, ಸೀಮೆನ್ಸ್, ಸ್ಯಾಮ್ಸಂಗ್; ಮೂಲಸೌಕರ್ಯ ಸಂಸ್ಥೆಗಳಾದ ಏಕಾಮ್ ಮತ್ತು ಯೋಜನೆ, ಶಿಲ್ಪಕಲೆ ಮತ್ತು ವ್ಯವಸ್ಥಾಪನಾ ಸಂಸ್ಥೆಗಳ ಮೈತ್ರಿಗಳು ಸ್ಮಾರ್ಟ್ ಸಿಟಿಗೆ ಕೌಶಲ್ಯ, ತಾಂತ್ರಿಕತೆ ಮತ್ತು ಜ್ಞಾನವನ್ನು ಪೂರೈಸಲು ಸಾಲುಗಟ್ಟಿ ನಿಂತಿವೆ. ಎಲ್ಲವೂ, ಒಂದು ಬೆಲೆಗಾಗಿ-ಈ ಜೊತೆಗಾರಿಕೆಗಳ ನಿಯಮಗಳು ಹಲವು ಬಾರಿ ಯೋಜನೆ ಮತ್ತು ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಪ್ರಜಾಸತಾತ್ಮಕ ಪ್ರಕ್ರಿಯೆಯನ್ನು ಉಲ್ಲಂಘಿಸಿರುತ್ತವೆ.
ಉದಾಹರಣೆಗೆ, ಒಂದಷ್ಟು ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇವು ಸ್ಮಾರ್ಟ್ ನಗರೀಕರಣದ ಮೇಲೆ ಕಾರ್ಪೊರೇಟ್ ಹಿತಾಸಕ್ತಿಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಎತ್ತಿ ತೋರಿಸುತ್ತವೆ. ನಿರ್ಮಾಣ ಕಾರ್ಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಬೃಹತ್ ಯೋಜನೆಗಳಿಗಾಗಿ ಪರಿಸರ ಇಲಾಖೆಯ ಒಪ್ಪಿಗೆಯನ್ನು ಪಡೆಯುವಲ್ಲಿ ವೇಗ ಪಡೆಯುವುದು ಮುಂತಾದವುಗಳು ಈ ಕಾನೂನುಗಳಲ್ಲಿ ಸೇರಿವೆ. ಮತ್ತು ಬಹಳಷ್ಟು ಚರ್ಚೆಗೆ ಗ್ರಾಸವಾಗಿರುವ ರಾಷ್ಟ್ರೀಯ ಭೂಸ್ವಾಧೀನ ಕಾಯ್ದೆಯ ನಿಯಂತ್ರಣದ ಸಡಿಲಿಕೆ ಪ್ರಸ್ತಾಪ ಸೇರಿದೆ.
ಅಂತಾರಾಷ್ಟ್ರೀಯ ಹೂಡಿಕೆ
ಹಾಗಾಗಿ ಪ್ರಶ್ನೆ ಉಳಿಯುತ್ತದೆ: ಈ ಸ್ಮಾರ್ಟ್ ಸಿಟಿ ಯೋಜನೆಯಿಂದ ಲಾಭ ಪಡೆಯುವವರು ಯಾರು? ಕಳೆದ ವರ್ಷ ಅಭೂತಪೂರ್ವ ಸಂಖ್ಯೆಯ ವಿದೇಶ ಭೇಟಿಗಳನ್ನು ನಮ್ಮ ಪ್ರಧಾನ ಮಂತ್ರಿ ಮತ್ತು ಹೂಡಿಕೆ ಮಾಡಬಲ್ಲ ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಕಾಣಲಾಯಿತು. 21ರಿಂದ ಡೇವಿಡ್ ಕ್ಯಾಮರೂನ್, ಬರಾಕ್ ಒಬಾಮಾ, ಫ್ರಾಂಕೊಯಿಸ್ ಹೋಲ್ಲಾಂಡೆ ಮತ್ತು ಇತರ ಹಲವಾರು ಜಾಗತಿಕ ನಾಯಕರು ಭಾರತಕ್ಕೆ ಭೇಟಿ ನೀಡಿ ಸ್ಮಾರ್ಟ್ ಸಿಟಿಗಳು ರೂಪುಗೊಳ್ಳಲು ಭಾರತಕ್ಕೆ ಅಗತ್ಯವಿರುವ ಜ್ಞಾನ,ಕೌಶಲ್ಯ ಮತ್ತು ಹೂಡಿಕೆಯನ್ನು ಪೂರೈಸುವ ಪ್ರಸ್ತಾಪ ಇಟ್ಟರು.
ನಿಜವಾಗಿ, ಜಪಾನ್ನ ಶಿಂಝೊ ಅಬೆ ಇತ್ತೀಚೆಗೆ ಭಾರತದ ಪವಿತ್ರ ನಗರ ವಾರಣಾಸಿಯನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿ ಸುವ ಪರಸ್ಪರ ಒಪ್ಪಿಗೆಯ ನಿವೇದನಾ ಪತ್ರಕ್ಕೆ ಸಹಿ ಹಾಕಲು ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಪ್ರಧಾನ ಮಂತ್ರಿಯವರ ವಿದೇಶಿ ಹೂಡಿಕೆದಾರರಿಗೆ ಕೆಂಪು ಪಟ್ಟಿಯ ಬದಲಾಗಿ ಕೆಂಪು ಹಾಸುಹಾಕುವ ಭರವಸೆಯ ಪರಿಣಾಮವಾಗಿ ಎಲ್ಲದಕ್ಕೂ ಮೀರಿ ಈ ಪ್ರಕ್ರಿಯೆ ವೇಗ ಪಡೆದಿದೆ. ಸ್ಮಾರ್ಟ್ ಸಿಟಿ ಒಪ್ಪಂದಗಳ ಹೂಡಿಕೆಯ ಅಧಿಕಾರಾತ್ಮಕ ಪ್ರಕ್ರಿಯೆ ಮತ್ತು ಒಪ್ಪಿಗೆಗಳು ಈ ಪ್ರಕ್ರಿಯೆಯಲ್ಲಿರುವ ಬಹುದೊಡ್ಡ ತೊಡಕು. ಈ ತೊಡಕುಗಳು ಖಾಸಗಿ ಹೂಡಿಕೆದಾರರು ಹಲವು ಒಪ್ಪಂದಗಳನ್ನು ಹಿಂಪಡೆಯುವಂತೆ ಮಾಡಿವೆ.
ನಗರ ಮಟ್ಟದಲ್ಲಿ ಕೆಲವು ಸ್ಥಳೀಯಾಡಳಿತಗಳು, ಇದು ಭಾರತದ ಕೇಂದ್ರ ಸರಕಾರಕ್ಕೆ, ಸಾಂವಿಧಾನಿಕವಾಗಿ ಸ್ಥಳೀಯಾಡಳಿತಗಳಿಗೆ ಮೀಸಲಿಟ್ಟಿರುವ ನಗರಾಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಅಧಿಕಾರ ನೀಡುತ್ತದೆ ಎಂಬ ಆಧಾರದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರಾಕರಿಸುತ್ತಿದ್ದಾರೆ.
ಆದರೆ ನಿಜವಾಗಿ ಸ್ಮಾರ್ಟ್ ಸಿಟಿ ಯೋಜನೆಗೆ ಸವಾಲು ಹಾಕಿರುವುದು ಮೂಲಮಟ್ಟದಲ್ಲಿ. ದೇಶವ್ಯಾಪಿ ಪ್ರತಿಭಟನೆ ಮತ್ತು ದಾವೆಗಳ ನಂತರ ಸರಕಾರ ಭೂಸ್ವಾಧೀನ ಕಾಯ್ದೆಯನ್ನು ಸಡಿಲಗೊಳಿಸುವ,ಆ ಮೂಲಕ ಅದರಲ್ಲಿರುವ ಸಮಾಲೋಚನೆ ಮತ್ತು ಪರಿಹಾರ ಅಧಿನಿಯಮಗಳನ್ನು ತೆಗೆದು ಹಾಕುವ ಪ್ರಸ್ತಾಪವನ್ನು ಹಿಂಪಡೆಯುವ ಒತ್ತಡಕ್ಕೊಳಗಾಯಿತು.
ದೊಲೆರಾ, ರಾಜರ್ಹತ್, ಅಮರಾವತಿ, ಹೋಲೆನ್ಫಾಯಿ ಮತ್ತು ಇತರ ಹಲವು ಹೊಸ ಸ್ಮಾರ್ಟ್ ಸಿಟಿಗಳಲ್ಲಿ, ರೈತರು, ಬುಡಕಟ್ಟು ಜನರು ಮತ್ತು ದೇಶೀಯ ಗುಂಪುಗಳು ತಮ್ಮನ್ನು ಸ್ಮಾರ್ಟ್ ಸಿಟಿ ಯೋಜನೆಯಿಂದ ಹೊರಗಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ತಮ್ಮ ಜಮೀನು, ಸುಖಜೀವನ ಮತ್ತು ಸ್ಥಳೀಯ ಸಂಸ್ಕೃತಿಯ ಸಾಂವಿಧಾನಿಕ ಹಕ್ಕಿಗಾಗಿ ಅಭಿಯಾನ ನಡೆಸುತ್ತಿದ್ದಾರೆ.ಅವರ ಹೋರಾಟ ಭಾರತದ ಸರಕಾರವಾಗಲೀ ಅಥವಾ ಕಾರ್ಪೊರೇಟ್ ವಲಯದಲ್ಲಿರುವ ಅದರ ಮಿತ್ರರಾಗಲೀ ಕೊನೆಯ ಮಾತನ್ನು ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಸ್ಮಾರ್ಟ್ ನಗರ ಭವಿಷ್ಯದ ಜೊತೆಗಿನ ಭಾರತದ ಪ್ರಯೋಗ ವಾಗ್ವಾದದಲ್ಲಿದೆ ಮತ್ತದು ನಿರಂತರ ವಿಕಾಸಗೊಳ್ಳುತ್ತಲೇ ಇರುತ್ತದೆ.
(ಅಯೋನಾ ದತ್ತಾ, ಹಿರಿಯ ಉಪನ್ಯಾಸಕರು, ಲೀಡ್ಸ್ ವಿಶ್ವವಿದ್ಯಾನಿಲಯ)