ಹಳೆಯ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳದೆ ಹೋದರೆ ಅಧಿಕಾರಿಗಳ ವಿರುದ್ಧ ಕ್ರಮ
ಬೆಂಗಳೂರು, ಫೆ.5: ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್ ಅನುಮತಿಗಾಗಿ ಕಾಯುತ್ತಿರುವ ಭ್ರಷ್ಟಾಚಾರ ಆರೋಪದ ಹಳೆಯ ಪ್ರಕರಣಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದೇ ಹೋದರೆ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.
ಲೋಕಾಯುಕ್ತ ಪೊಲೀಸರ ಕಾರ್ಯವೈಖರಿ ವಿರುದ್ಧ ಮಂಡ್ಯದ ಡಾ.ವಿ.ಎಲ್.ನಂದೀಶ್ ದಾಖಲಿಸಿರುವ ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಈ ವೇಳೆ ಮೌಖಿಕ ಎಚ್ಚರಿಕೆ ನೀಡಿದ ನ್ಯಾಯಮೂರ್ತಿ, ಎಲ್ಲೂ ಸಲ್ಲದ ಪೊಲೀಸ್ ಅಧಿಕಾರಿಗಳನ್ನು ತಂದು ಲೋಕಾಯುಕ್ತಕ್ಕೆ ಹಾಕುತ್ತೀರಿ. ಹೀಗಾದರೆ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ಸಂಸ್ಥೆಯ ಆವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದರು.
ಲೋಕಾಯುಕ್ತ ನ್ಯಾಯಾಲಯಗಳನ್ನು ಸ್ಥಾಪಿಸಿ ಎಂದು ಹೇಳಲಾಗುತ್ತಿದ್ದರೂ ಅದರ ಬಗೆಗೂ ಸರಕಾರ ಹೆಚ್ಚಿನ ಗಮನ ನೀಡುತ್ತಿಲ್ಲ. ಈಗ ಸರಕಾರ 205 ಹೊಸ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ. ಈ ಕುರಿತ ವಿವರಗಳನ್ನು ಇದೇ 8ರಂದು ನ್ಯಾಯಪೀಠಕ್ಕೆ ನೀಡಿ ಎಂದು ನ್ಯಾಯಮೂರ್ತಿ ಸೂಚಿಸಿದರು.