ವಿದೇಶಿಯರ ದಾಂಧಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದೇಶಿಯರು ನೆಲಸಿರುವ ಮನೆಗಳಮೇಲೂ ನಿಗಾಇಡುವಂತೆ ಗೃಹ ಇಲಾಖೆ ಸೂಚನೆ
ಬೆಂಗಳೂರು.ಫೆ.8: ವಿದೇಶಿಯರ ದಾಂಧಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿಯರು ನೆಲಸಿರುವ ಮನೆಗಳಮೇಲೂ ನಿಗಾ ಇಡುವಂತೆ ಗೃಹ ಇಲಾಖೆ ಸೂಚನೆ ನೀಡಿದೆ. ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ವಿದೇಶಿಯರ ದಾಂಧಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿಯರ ಮನೆಗಳ ಮೇಲೂ ಕಣ್ಗಾವಲು ಹಾಕುವಂತೆ ಸೂಚಿಸಿದೆ. ನಿಗದಿತ ಅವಧಿಯ ಕಾಲ ಇರಲು ಬಂದು ಇಲ್ಲೇ ಖಾಯಂ ಆಗಿ ನೆಲೆಯೂರಿರುವವರ ಸಂಖ್ಯೆ 40 ಸಾವಿರಕ್ಕೂ ಹೆಚ್ಚಿದೆ ಎಂಬ ಮಾಹಿತಿ ಗೃಹ ಇಲಾಖೆಗೆ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಮನೆ ಮನೆಯ ಮೇಲೂ ನಿಗಾ ವಹಿಸುವಂತೆ ಪೋಲೀಸರಿಗೆ ಸೂಚನೆ ನೀಡಿದೆ.
ವ್ಯಾಸಂಗಕ್ಕೆಂದು ಬಂದವರ ವಿವರ, ಅವರು ಇಲ್ಲಿರುವ ಅವಧಿಯ ವಿವರಗಳನ್ನು ಆಯಾ ಶಿಕ್ಷಣ ಸಂಸ್ಥೆಗಳೇ ನೀಡಬೇಕೆಂದು ಈಗಾಗಲೇ ಸೂಚಿಸಿರುವ ಗೃಹ ಇಲಾಖೆ,ಈ ಮಧ್ಯೆ ಅನಧಿಕೃತವಾಗಿ ನೆಲೆಸಿರುವವರ ಮೇಲೆ ಹದ್ದುಗಣ್ಣಿಡಲು ತೀರ್ಮಾನಿಸಿದೆ.
ರಾಜಧಾನಿಯ ಹೊರಭಾಗದಲ್ಲಿರುವ ಹಲವು ಏರಿಯಾಗಳಲ್ಲಿ ವಿದೇಶಿಯರ ಹಾವಳಿ ಹೆಚ್ಚಿದ್ದು ಹಲ್ಲೆ, ಗೂಂಡಾಗಿರಿಯಂತಹ ಚಟುವಟಿಕೆಗಳಲ್ಲಿ ಬಹುತೇಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ದೂರುಗಳು ಗೃಹ ಇಲಾಖೆಗೆ ಬಂದಿವೆ.
ಹೀಗಾಗಿ ಅನುಮಾನ ಬಂದಲ್ಲಿ ತಕ್ಷಣವೇ ವಿದೇಶಿಗರ ಪಾಸ್ಪೋರ್ಟ್ ಪರಿಶೀಲಿಸಬೇಕು.ಅವರು ಎಷ್ಟು ಕಾಲಕ್ಕೆಂದು ಇಲ್ಲಿಗೆ ಪ್ರವಾಸ ಬಂದಿದ್ದಾರೆ ಎಂಬುದನ್ನು ಅರಿಯಬೇಕು.
ಒಂದು ವೇಳೆ ನಿಗದಿತ ಅವಧಿಗಿಂತ ಹೆಚ್ಚು ಕಾಲ ಆಕ್ರಮವಾಗಿ ವಾಸಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಗೃಹ ಇಲಾಖೆ ಆದೇಶ ನೀಡಿದೆ ಎಂದು ಪೋಲೀಸ್ ಮೂಲಗಳು ಹೇಳಿವೆ.
ಬಾಡಿಗೆಗೆಂದು ಭಾರೀ ಪ್ರಮಾಣದ ಹಣ ನೀಡುವ ಇವರ ಕುರಿತು ಮನೆಯ ಮಾಲೀಕರೂ ನಿರಾಸಕ್ತಿ ತಳೆದಿದ್ದು ಕೇವಲ ದುಡ್ಡಿನ ಆಸೆಗಾಗಿ ಅವರ ಕುರಿತು ಮಾಹಿತಿ ನೀಡುತ್ತಿಲ್ಲ.
ಹೀಗಾಗಿ ವಿದೇಶಿಯರು ವಾಸವಾಗಿರುವ ಸ್ಥಳದ ವಿವರ ಪಡೆಯುವುದಲ್ಲದೆ ಅವರನ್ನು ಖುದ್ದಾಗಿ ಪರಿಶೀಲಿಸಬೇಕು.ಅದೇ ರೀತಿ ಅವರು ಅನಧಿಕೃತವಾಗಿ ರಾಜ್ಯದಲ್ಲಿ ನೆಲೆಸಿದ್ದರೆ ಅವರಿಗೆ ವಾಸಿಸಲು ಬಾಡಿಗೆ ಆಧಾರದ ಮೇಲೆ ಮನೆ ಕೊಟ್ಟವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಗೃಹ ಇಲಾಖೆ ಸೂಚಿಸಿದೆ.