ಹತಾಶೆ ಭಾರತದ ಬಗ್ಗೆಯಲ್ಲ ಆಡಳಿತದ ಬಗ್ಗೆ
ನನ್ನ ಹತಾಶೆ ಭಾರತದ ಬಗ್ಗೆಯಲ್ಲ, ದೇಶದ ಆಡಳಿತದ ಬಗ್ಗೆ- ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ.ಅಮರ್ತ್ಯ ಸೇನ್ ಅವರ ಸ್ಪಷ್ಟ ಅಭಿಪ್ರಾಯ ಇದು. ದೇಶದ ಆಡಳಿತಗಾರರು ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತೆಗೆ ಒತ್ತು ನೀಡಿದರೆ ಮಾತ್ರ ಪ್ರಗತಿಗೆ ವೇಗ ನೀಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:
* ಭಾರತದ ಅಭಿವೃದ್ಧಿ ಸ್ಥಿತಿಗತಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಭಾರತದ ಅಭಿವೃದ್ಧಿ ಬಗ್ಗೆ ನನ್ನಲ್ಲಿ ಕೆಲ ನಿರ್ದಿಷ್ಟ ದೃಷ್ಟಿಕೋನವಿದೆ. ದೇಶದ ಆರ್ಥಿಕತೆಯಲ್ಲಿ ಹಲವು ಕೊರತೆಗಳಿವೆ. ಇದು ಹಿಂದಿನ ಸರಕಾರದ ಅವಧಿಯಲ್ಲೇ ಇದ್ದ ಕೊರತೆಗಳು. ಆದರೆ ಅವುಗಳು ಉಳಿದುಕೊಂಡಿರುವುದಷ್ಟೇ ಅಲ್ಲದೇ, ಇದೀಗ ತೀವ್ರವಾಗಿರುವುದು ಆತಂಕಕಾರಿ ವಿಚಾರ. ಇದರ ಜತೆಗೆ ಜಾತ್ಯತೀತ ವಾದ, ಧಾರ್ಮಿಕ ಸಹಿಷ್ಣುತೆಯಂಥ ಸಮಸ್ಯೆಗಳೂ ಇವೆ.
ಮೂಲಭೂತವಾಗಿ ಸಾಮಾನ್ಯ ಭಾರತೀಯರಿಗೆ ಪ್ರಾಥಮಿಕ ಶಿಕ್ಷಣ ಅಥವಾ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಅಥವಾ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಅಂತೆಯೇ ಒಟ್ಟಾರೆ ಅರಾಜಕತೆ ಇದೆ. ತಾವು ಯಾವುದರ ಮೇಲೆ ಖರ್ಚು ಮಾಡುತ್ತಿದ್ದೇವೆ ಎನ್ನುವ ಕಲ್ಪನೆ ಜನರಿಗೆ ಇಲ್ಲ. ಉತ್ತಮ ಸಾರ್ವಜನಿಕ ಸೇವೆ ಸೌಲಭ್ಯ ಇಲ್ಲದಾಗ ಅವರನ್ನು ಶೋಷಿಸುವುದು ಸುಲಭ. ಈ ಸೌಲಭ್ಯಗಳನ್ನು ನಿರಾಕರಿಸುವ ಪದ್ಧತಿ ಹಿಂದಿನ ಸರಕಾರದ ಅವಧಿಯಲ್ಲೂ ಇತ್ತು. ನಾನು ಯುಪಿಎ ಸರಕಾರವನ್ನು ಬೆಂಬಲಿಸಿದ್ದೆ ಎಂದು ಭಾವಿಸಿದ್ದಾರೆ. ನಾನು ಅವರನ್ನು ಟೀಕಿಸಿದ್ದೇನೆ. ಅವರು ಬಹಳಷ್ಟನ್ನು ಸಾಧಿಸಿಲ್ಲ. ಶಾಲಾ ಬಿಸಿಯೂಟ, ಸರ್ವಶಿಕ್ಷಣ ಅಭಿಯಾನ ಹಾಗೂ ಆರೋಗ್ಯ ಸೇವೆಗಳ ಬಜೆಟ್ ಕಡಿತಗೊಳಿಸಿದೆ. ಆ ಸರಕಾರ ಏನೂ ಮಾಡಿಲ್ಲ. ಆದ್ದರಿಂದ ನಾನು ಹತಾಶನಾಗಿದ್ದೇನೆ.
ಪ್ರಗತಿ ಎನ್ನುವುದು ಸುರಕ್ಷಿತವಾಗಿ ಕಂಡುಬರಬೇಕೆಂದರೆ ಹಾಗೂ ಎಲ್ಲರ ನಡುವೆ ಹಂಚಿಕೆಯಾಗಬೇಕಿದ್ದರೆ, ಸಾರ್ವಜನಿಕ ಸೇವೆಗಳಾದ ಆರೋಗ್ಯ ಕಾಳಜಿ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತಾ ಜಾಲ ಬಲಗೊಳ್ಳಬೇಕು. ಭಾರತದಲ್ಲಿ ನಿರಂತರವಾಗಿ ಇದನ್ನು ನಿರ್ಲಕ್ಷಿಸಲಾಗಿದ್ದು, ಈಗಂತೂ ಹೆಚ್ಚಿನ ನಿರ್ಲಕ್ಷ್ಯ ವಹಿಸಲಾಗುತ್ತಿದೆ.
*ಭಾರತದ ಅಭಿವೃದ್ಧಿ ತಂತ್ರವನ್ನು ಬದಲಿಸುವ ಅಗತ್ಯವಿದೆಯೇ?
ಭಾರತ ಯಾವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆಯೋ ಆ ಕ್ಷೇತ್ರಗಳು ಸಾಮಾನ್ಯ ಕಾರ್ಮಿಕವರ್ಗವನ್ನು ಅವಲಂಬಿಸಿಲ್ಲ. ಅದಕ್ಕೆ ವಿಶೇಷ ಪರಿಣತಿಯ ಉದ್ಯೋಗಿಗಳು ಬೇಕು. ಇದಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇನ್ಫೋಸಿಸ್ ಉತ್ತಮ ನಿದರ್ಶನ. ಫಾರ್ಮಸ್ಯೂಟಿಕಲ್ಸ್, ವಾಹನ ಬಿಡಿಭಾಗಗಳು ಕೂಡಾ ಇದಕ್ಕೆ ಉದಾಹರಣೆ.
ಹೊಸ ಸರಕನ್ನು ಉತ್ಪಾದಿಸುವುದು ಅನಕ್ಷರಸ್ಥ ಕಾರ್ಮಿಕ ವರ್ಗಕ್ಕೆ ಕಷ್ಟಸಾಧ್ಯ. ಆದರೆ ಚೀನಾದ ವಿಷಯದಲ್ಲಿ ಇದು ನಿಜವಲ್ಲ. ನಾನು ಒಂದು ಪೆನ್ ತೆಗೆದುಕೊಳ್ಳಲಿ, ಟೆಲಿಫೋನ್ ತೆಗೆದುಕೊಳ್ಳಲಿ ಅಥವಾ ಒಂದು ವಾಚ್ ಕೈಗೆತ್ತಿಕೊಳ್ಳಲಿ. ಇವೆಲ್ಲವೂ ಚೀನಾ ಉತ್ಪಾದಿತ ಸರಕುಗಳು. ಅವರು ಹೇಗೆ ಈ ಎಲ್ಲ ಸರಕುಗಳನ್ನು ಉತ್ಪಾದಿಸುವುದು ಸಾಧ್ಯವಾಗಿದೆ? ನಿಮಗೆ ಓದಲು, ಬರೆಯಲು ಮತ್ತು ಲೆಕ್ಕ ಮಾಡಲು ಬರುತ್ತದೆ ಎಂದಾದರೆ ಅಥವಾ ಉತ್ತಮ ಆರೋಗ್ಯ ಸ್ಥಿತಿ ಹೊಂದಿ ಪೂರ್ಣ ಸಾಮರ್ಥ್ಯದಿಂದ ಪೂರ್ಣಾವಧಿ ಕೆಲಸ ಮಾಡಲು ಶಕ್ತರಾಗಿದ್ದೀರಿ ಎಂದಾದರೆ ನೀವು ವಿಶೇಷ ಪರಿಣತಿ ಪಡೆಯುವ ಅಗತ್ಯವಿಲ್ಲ. ಅವುಗಳನ್ನು ನಾವೂ ಉತ್ಪಾದಿಸಬಹುದು. ಆದರೆ ಇದಕ್ಕೆ ಪ್ರಗತಿ ತಂತ್ರ ಬದಲಾಯಿಸುವ ಬದಲು ಆರ್ಥಿಕ ಹಾಗೂ ಸಾಮಾಜಿಕ ತಂತ್ರಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಅಗತ್ಯ.
* ಉದ್ಯೋಗ ಖಾತ್ರಿ ಯೋಜನೆಯ ಪರಿಷ್ಕರಣೆ ಅಗತ್ಯವಿದೆಯೇ?
ನಾನು ಖಂಡಿತವಾಗಿಯೂ ಅಂಥ ಪರಿಷ್ಕರಣೆಯ ಪರವಾಗಿದ್ದೇನೆ. ಅದನ್ನು ನಾನು ಸಂಪೂರ್ಣ ಸೋರಿಕೆ ಎಂದು ಭಾವಿಸಬೇಕೇ? ಆ ಬಗ್ಗೆ ನಾನು ಚಿಂತನೆ ನಡೆಸಿದ್ದೇನೆ. ಅದರ ಸೋರಿಕೆಯ ನಡುವೆಯೂ ಅದು ಒಂದಷ್ಟನ್ನು ಸಾಧಿಸಿದೆ. ಬಹುತೇಕ ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಪ್ರಸ್ತುತ ಸರಕಾರ, ಈ ಯೋಜನೆಯ ಸಾಧನೆಯನ್ನು ಮನಗಂಡು, ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿದೆ.
ಈ ಯೋಜನೆಯ ಬದ್ಧತೆಯನ್ನು ಉಲ್ಲಂಘಿಸದೇ, ಅದನ್ನು ಇನ್ನಷ್ಟು ಸೋರಿಕೆ ರಹಿತ ಹಾಗೂ ಆಸ್ತಿ ಸೃಷ್ಟಿಯ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುವಂತೆ ಮಾಡಿದರೆ, ಅದು ಒಳ್ಳೆಯ ಯೋಜನೆಯಾಗಬಹುದು. ನೀವು ಎಷ್ಟರಮಟ್ಟಿಗೆ ಆ ಯೋಜನೆಯ ಮೇಲೆ ಹೂಡಿಕೆ ಮಾಡುತ್ತೀರೋ, ಅಷ್ಟು ಪ್ರತಿಫಲ ಪಡೆಯಬಹುದು. ನರೇಗಾ ಯೋಜನೆಗೆ ದೊಡ್ಡಮೊತ್ತದ ಅಗತ್ಯವಿದೆ. ಆದರೆ ಬಜೆಟ್ನ ಒಟ್ಟು ಗಾತ್ರಕ್ಕೆ ಹೋಲಿಸಿದರೆ ತುಲನಾತ್ಮಕವಾಗಿ ಅದು ಸಣ್ಣ ಮೊತ್ತ. ಆದರೆ ಈ ಬಗ್ಗೆ ಬಹಳಷ್ಟು ಮಂದಿ ದಾಳಿ ಮಾಡಲು ಕಾರಣವೆಂದರೆ, ಬಡವರು ಅದರಿಂದ ಒಂದಷ್ಟು ಪ್ರಯೋಜನ ಪಡೆಯುತ್ತಾರೆ. ಬಡವರು ಏನಾದರೂ ಪಡೆಯುತ್ತಾರೆ ಎಂದಾದರೆ, ಅದರ ಮೇಲೆ ದಾಳಿ ಇದ್ದೇ ಇರುತ್ತದೆ.
* ಮಧ್ಯಮವರ್ಗ ಹಾಗೂ ಶ್ರೀಮಂತರಿಗೆ ಹೋಲಿಸಿದರೆ ಬಡವರ ಧ್ವನಿ ಕ್ಷೀಣ ಎಂಬ ಕಾರಣಕ್ಕಾಗಿಯೇ?
ಅದು ಶೇಕಡ 100ರಷ್ಟು ಸರಿಯಾದ ವಿಶ್ಲೇಷಣೆ.
*ನರೇಗಾ ಯೋಜನೆಯ ಯಶಸ್ಸನ್ನು ಹಿನ್ನೆಲೆಯಾಗಿಟ್ಟುಕೊಂಡು, ಯೋಜನೆ ಪರಿಷ್ಕರಿಸಬೇಕು ಎನ್ನುವುದು ನಿಮ್ಮ ಸಲಹೆಯೇ?
ಹೌದು. ಆದರೆ ಪರ್ಯಾಯಗಳನ್ನು ಮುಂದಿಡದೇ ಇರುವ ಸೌಲಭ್ಯಗಳನ್ನು ಕಿತ್ತುಕೊಳ್ಳಬಾರದು. ಈ ಯೋಜನೆಯ ಸುಧಾರಣೆಯ ಭರವಸೆ, ನಾಜೂಕಿನಿಂದ ಯೋಜನೆಯನ್ನು ವಾಪಸು ಪಡೆಯುವ ಹುನ್ನಾರವೂ ಆಗಿರಬಹುದು. ಹಾಗೆ ಮಾಡಬೇಡಿ. ಹೌದು; ಸುಧಾರಣೆ ಮಾಡಿ. ನೀವು ಸುಧಾರಣೆ ಮಾಡುವಾಗ ಹಾಲಿ ಇರುವುದರ ಬದಲಾಗಿ ಸುಧಾರಿತ ಯೋಜನೆ ಜಾರಿಗೆ ತನ್ನಿ. ನೀವು ಸುಧಾರಣೆ ತರುವ ಭರವಸೆ ನೀಡಿ ಹಾಲಿ ಇರುವುದನ್ನು ರದ್ದು ಮಾಡುವ ಪ್ರಯತ್ನಕ್ಕೆ ಕೈಹಾಕಬೇಡಿ.
* ಈ ಸರಕಾರ ಅಡುಗೆ ಅನಿಲ ಸಬ್ಸಿಡಿ ವಿತರಣೆಯ ವಿಧಾನವನ್ನು ಸುಧಾರಿಸಿದ್ದು, ಇದೀಗ ರಸಗೊಬ್ಬರ ಹಾಗೂ ಆಹಾರ ಸಬ್ಸಿಡಿ ಬಗ್ಗೆಯೂ ಮಾತನಾಡುತ್ತಿದೆ... ತೈಲಬೆಲೆ ಇಳಿಕೆಯ ಲಾಭ ಪಡೆದು ಸರಕಾರ ಸಬ್ಸಿಡಿಗೆ ಕತ್ತರಿ ಹಾಕುವ ಉತ್ತಮ ಕಾರ್ಯವನ್ನು ಮಾಡಿದೆ ಎನ್ನುವುದು ನನ್ನ ಅಭಿಮತ, ಇದು ಸ್ವಾಗತಾರ್ಹ. ಭಾರತದ ಬಗ್ಗೆ ನೀವು ಹತಾಶರಾಗಿದ್ದೀರಾ ಎಂದು ಜನ ಕೇಳುತ್ತಾರೆ. ಆದರೆ ಖಂಡಿತವಾಗಿಯೂ ನಾನು ಎಂದಿಗೂ ಭಾರತದ ಬಗ್ಗೆ ಹತಾಶನಾಗಿಲ್ಲ. ನನಗೆ ಹತಾಶೆಯಾಗಿರುವುದು ಭಾರತ ಸರಕಾರದ ಬಗ್ಗೆ.
ಮುಖ್ಯವಾಗಿ ಯಾರ ಧ್ವನಿ ಗಟ್ಟಿಯಾಗಿ ಕೇಳಿ ಬರಬೇಕೋ ಅವರ ಧ್ವನಿ ಕೇಳಿಸುತ್ತಿಲ್ಲ. ನಾನು ಯಾವ ಸರ್ಕಾರಕ್ಕೂ ಸಲಹೆ ಮಾಡಲು ಹೋಗುವುದಿಲ್ಲ. ನನ್ನ ಅಭಿಪ್ರಾಯದಂತೆ ನಮ್ಮ ಆದ್ಯತೆಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಹೊಣೆ. ಅಂತಿಮವಾಗಿ ಆರ್ಥಿಕತೆಯ ಶಕ್ತಿ ಅಡಗಿರುವುದು ಜನಶಕ್ತಿಯಲ್ಲಿ. ಹಾಗೆಯೇ ಜನರ ಶಕ್ತಿ ಅಡಗಿರುವುದು ಅವರು ವಿದ್ಯಾವಂತರಾಗಿದ್ದಾರೆಯೇ, ಆರೋಗ್ಯ ಸ್ಥಿತಿ ಉತ್ತಮವಾಗಿದೆಯೇ ಅಥವಾ ಅನಾರೋಗ್ಯದಿಂದ ಇದ್ದಾರೆಯೇ? ಮುಂದೊಂದು ಕಾಯಿಲೆ ಬಂದಾಗ ಅವರು ಉಳಿದುಕೊಳ್ಳಬಲ್ಲರೇ ಅಥವಾ ದಿವಾಳಿಯಾಗಬಹುದೇ ಎಂಬ ಚಿಂತೆಯನ್ನು ಹೊಂದಿದ್ದಾರೆಯೇ ಎನ್ನುವುದರ ಮೇಲೆ ಹಾಗೂ ಸರಕಾರಗಳ ಮೂಲಕ ತಾವು ಒಂದಷ್ಟು ಮಟ್ಟಿಗೆ ಸುರಕ್ಷಾ ಜಾಲವನ್ನು ಹೊಂದಲು ಸಾಧ್ಯವೇ ಎನ್ನುವುದರ ಮೇಲೆ ಜನರ ಶಕ್ತಿ ಅಡಗಿದೆ. ಇಂಥ ವಿಷಯಗಳ ಬಗ್ಗೆ ಆಡಳಿತ ಯಂತ್ರ ದೃಷ್ಟಿ ಹರಿಸಬೇಕು.
ನಳಂದ ವಿವಿ ಅನುಭವ ಇನ್ನೂ ನಿಮ್ಮನ್ನು ಪೀಡಿಸುತ್ತಿದೆಯೇ?
ನಾನು ಏಕೆ ಅಲ್ಲಿಂದ ಹೊರಟೆ ಎನ್ನುವುದನ್ನು ನಿಮಗೆ ತಿಳಿಸಬಲ್ಲೆ. ನಾನು ಅಲ್ಲೇ ಉಳಿದುಕೊಳ್ಳಬೇಕು ಎನ್ನುವುದು ಆಡಳಿತ ಮಂಡಳಿಯ ಉತ್ಕಟ ಇಚ್ಛೆಯಾಗಿತ್ತು. ಆದರೆ ನಾನು ಅಲ್ಲಿರುವುದು ಸರಕಾರಕ್ಕೆ ಇಷ್ಟವಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟವಾಗಿ ತಿಳಿದಿತ್ತು. ನನ್ನ ಅಹಮಿಕೆಯಿಂದ ನಾನು ಅಲ್ಲೇ ಉಳಿದುಕೊಳ್ಳಬಹುದಿತ್ತು. ಆದರೆ ಅದು ನಳಂದ ವಿಶ್ವವಿದ್ಯಾನಿಲಯಕ್ಕೆ ಒಳ್ಳೆಯದಾಗಿರುತ್ತಿರಲಿಲ್ಲ ಎನ್ನುವುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಏಕೆಂದರೆ ಪ್ರತಿಯೊಂದು ಪ್ರಸ್ತಾವವನ್ನೂ ತಡೆಹಿಡಿದು, ಸರಕಾರ ವಿರೋಧಿಸುತ್ತಿತ್ತು.