ಮಲೆನಾಡ ಗೌಡ್ಲು ಒಂದು ಜಾನಪದ ಅಧ್ಯಯನ
ಮಲೆನಾಡೆಂದರೆ ಮಳೆನಾಡು. ಇಲ್ಲಿನ ಪರಿಸರ ಜೀವ ವೈವಿಧ್ಯ, ಜನಾಂಗ, ಕೃಷಿ, ಕಾಲ ಎಲ್ಲವೂ ಮಳೆಯಾ ಧಾರಿತವಾಗಿಯೇ ಇರುತ್ತದೆ. ಪಶ್ಚಿಮಘಟ್ಟದ ಹೃದಯಭಾಗವಾದ ಶೃಂಗೇರಿ, ಕೊಪ್ಪ, ಮೂಡಿಗೆರೆ, ತೀರ್ಥಹಳ್ಳಿ ಈ ತಾಲೂಕುಗಳ ವ್ಯಾಪ್ತಿಯ ಘಾಟಿಯ ಗುಡ್ಡಗಳ ಮೇಲೆ ಕನ್ನಡ ಭಾಷೆಯನ್ನು ಮಾತನಾಡುವ ಜನಾಂಗವಾದ ಇವರು ಗುಡ್ಡಗಳಲ್ಲಿ ಹೆಚ್ಚಾಗಿ ವಾಸಮಾಡುತ್ತಿರುವುದರಿಂದ ಗುಡ್ಡದ ಕೆಳಗಿನವರು ಇವರನ್ನು ಗಿರಿಜನರು ಎಂದು ಕರೆಯುತ್ತಾರೆ.
ಪರಿಸರದೊಂದಿಗೆ ಸಹಬಾಳ್ವೆ ನಡೆಸುತ್ತಾ ಅಲ್ಪ ಸ್ವಲ್ಪ ಕೃಷಿಯನ್ನೂ ಉಳಿದಂತೆ ಕರಕುಶಲ ವೃತ್ತಿಯನ್ನು ಮಾಡಿಕೊಂಡು ಪರಿಸರಸ್ನೇಹಿಯಾಗಿ ಬದುಕುವ ಇವರನ್ನು ಗೌಡ್ಲುಗಳು ಎಂದು ಕರೆಯುತ್ತಾರೆ.
ಅರಬ್ಬಿ ಸಮುದ್ರದಿಂದ ಐವತ್ತು ಕಿಲೋ.ಮೀಟರ್ ದೂರದಲ್ಲಿರುವ ಪಶ್ಚಿಮಘಟ್ಟದ ಪೂರ್ವದಿಕ್ಕಿನ ಏರುಗುಡ್ಡಗಳಲ್ಲಿ ವಾಸಮಾಡುವ ಕನ್ನಡ ಮಾತನಾಡುವ ಜನರನ್ನು ಗೌಡ್ಲುಗಳೆಂದು ಕರೆದರೆ ಇದೇ ಗುಡ್ಡದ ಘಾಟಿಯ ಕೆಳಗಿನ ತಪ್ಪಲಲ್ಲಿ ಕುಂದಾಪುರ, ಉಡುಪಿ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಈ ತಾಲೂಕು ವ್ಯಾಪ್ತಿಯ ತುಳು ಮಾತನಾಡುವ ಇದೇ ಜನಾಂಗಕ್ಕೆ ಮಲೆಕುಡಿಯರು ಎಂದು ಹೇಳುತ್ತಾರೆ.
ಮಲೆನಾಡ ಗೌಡ್ಲುಗಳು ಏರುಗುಡ್ಡದ ತಪ್ಪಲುಗಳಲ್ಲಿ ಮನೆ, ಜಮೀನುಗಳನ್ನು ಮಾಡಿಕೊಂಡಿರುತ್ತಾರೆ. ಈ ಜನಾಂಗದ ವಿಶೇಷವೇನೆಂದರೆ ಜಲಮೂಲಗಳನ್ನು ಹುಡುಕಿ ಅಲ್ಲಿಯೇ ವಾಸ್ತವ್ಯ ಹೂಡುವುದು. ಇದಕ್ಕೆ ಕಾರಣವೇನೆಂದರೆ ಬೇರಾರಿಗೂ ಇಲ್ಲದ ನೀರಿನ ಮಡಿವಂತಿಕೆ ಇವರಿಗಿದೆ. ಇವರು ಬೇರೆಯವರು ಬಳಸಿ ಬಿಟ್ಟ ನೀರನ್ನು ಬಳಸುವುದಿಲ್ಲ. ಇವರಿಗೆ ನೀರಿನ ಬಗ್ಗೆ ಎಷ್ಟು ಮಡಿವಂತಿಕೆಯೆಂದರೆ ಹಿಂದಿನ ದಿನ ಸಂಗ್ರಹಿಸಿದ ನೀರನ್ನು ಮರುದಿನ ಬಳಸುವುದಿಲ್ಲ. ಹಿಂದಿನ ದಿನದ ನೀರಿಗೆ ಹಳಸು ನೀರು ಎಂದು ಹೆಸರು.
ಮಲೆನಾಡಿನ ಏರುಗುಡ್ಡಗಳಲ್ಲಿ ಅಂದರೆ ಈ ಜನಾಂಗವು ಬದುಕುತ್ತಿರುವ ಪ್ರದೇಶ ಬಹುತೇಕ ಇನ್ನೂರು ಇಂಚು ಅಥವಾ ಅದಕ್ಕಿಂತ ಹೆಚ್ಚು ವಾರ್ಷಿಕ ಸರಾಸರಿ ಮಳೆಬೀಳುವ ಪ್ರದೇಶ. ಈ ಮಲೆನಾಡಿನ ಗುಡ್ಡಗಳು ಅರಬ್ಬಿ ಸಮುದ್ರದಿಂದ ಬರುವ ಮಾನ್ಸೂನ್ ಅಥವಾ ಮುಂಗಾರು ಮೋಡಗಳನ್ನು ತಡೆದು ಮಳೆಸುರಿಸುತ್ತವೆ. ಇಲ್ಲಿ ಬೀಳುವ ಮಳೆಯ ಅರ್ಧಕ್ಕಿಂತಲೂ ಹೆಚ್ಚಿನ ನೀರನ್ನು ತಮ್ಮ ಒಡಲಲ್ಲಿ ಇಂಗಿಸಿಕೊಳ್ಳುವ ಅತೀ ಅದ್ಭುತವಾದಂತಹ ಒಂದು ಪರಿಸರ ಏರ್ಪಾಡು ಈ ಮಲೆಕಾಡಿನ ಪ್ರದೇಶಕ್ಕಿದೆ. ಒಂದರ ಹಿಂದೆ ಒಂದು ಹೇರಿ ನಿಂತಂತಿರುವ ಆಕಾಶದೆತ್ತರದ ಈ ಎಲ್ಲಾ ಗುಡ್ಡಗಳು ನೀರಿನ ಖಣಿಗಳೆ. ಈ ಮಳೆನಾಡಿನ ಗುಡ್ಡಗಳು ಒಂದು ರೀತಿಯ ಮನೆಯ ಮಹಡಿಯ ಮೇಲಿರುವ ಓವರ್ ಹೆಡ್ ಟ್ಯಾಂಕುಗಳಂತೆ.
ಇಂತಹ ಗುಡ್ಡಗಳ ಪ್ರತಿಕಣಿವೆಯಲ್ಲೂ ಜಲಮೂಲಗಳು ಉದ್ಭವಿಸುತ್ತವೆ. ಇಂತಹ ಜಲಮೂಲಗಳ ಝರಿ ಅಥವ ತೊರೆಗಳಿಗೆ ನೀರಿನ ಸರ್ಕ್ಲು ಎಂದು ಕರೆಯುತ್ತಾರೆ. ಒಂದು ನೀರಿನ ಸರ್ಕ್ಲಿನಲ್ಲಿ ಒಂದು ಮನೆ ಮಾತ್ರ ಇರುತ್ತದೆ. ಆ ಸರ್ಕ್ಲಿನ ಬುಡದಲ್ಲಿ ಇನ್ನೊಂದು ಮನೆ ಇರುವುದಿಲ್ಲ. ಕಾರಣ ಬೇರೆಯವರು ಬಳಸಿಬಿಟ್ಟ ನೀರನ್ನು ಬಳಸುವ ಪದ್ಧ್ದತಿ ಈ ಜನಾಂಗದಲ್ಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಗುಡ್ಡಗಳಿಂದ ಹುಟ್ಟಿ ಹರಿಯುವ ಜಲಮೂಲಗಳನ್ನು ಆಶ್ರಯಿಸಿ ಬದುಕುವುದು ಈ ಜನಾಂಗದ ವಿಶೇಷ ಪದ್ಧತಿಯಾಗಿದೆ.
ಏರುಗುಡ್ಡಗಳ ಪ್ರದೇಶದಲ್ಲಿ ವಾಸಮಾಡುವುದರಿಂದ ಇವರ ಕೃಷಿ ಜಮೀನುಗಳು ಮೆಟ್ಟಿಲುಗಳಂತೆ ಹಂತ ಹಂತವಾಗಿ ಏರ್ಪಟ್ಟಿರುತ್ತವೆ. ಇವರು ಮುಖ್ಯವಾಗಿ ಭತ್ತವನ್ನು ಬೆಳೆಯುತ್ತಾರೆ.
ಬೇಸಿಗೆ ಮತ್ತು ಮಳೆಗಾಲದ ಎರಡು ಬೆಳೆಗೆ ಎರಡು ಜಾತಿಯ ಭತ್ತದ ತಳಿಗಳನ್ನು ಹಾಕಿ ಕೃಷಿ ಮಾಡುತ್ತಾರೆ. ಮಳೆಗಾಲದ ಭತ್ತಕ್ಕೆ ಕಾರ್ಭತ್ತ ಅಂತಲೂ, ಬೇಸಗೆಯಲ್ಲಿ ಬೆಳೆಯುವ ಭತ್ತಕ್ಕೆ ಕ್ವಾಡೇ ಎಂತಲೂ ಅತಿಯಾಗಿ ಮಳೆಬೀಳುವ ದೆಸೆಯಿಂದ ಜಮೀನುಗಳು ಆಮ್ಲೀಯವಾಗಿ ಹೆಚ್ಚೇನು ಫಲವತ್ತಾಗಿರುವುದಿಲ್ಲ. ಒಂದು ಎಕರೆ ಭತ್ತದ ಗದ್ದೆಯಲ್ಲಿ ಐದರಿಂದ ಹೆಚ್ಚೆಂದರೆ ಎಂಟು ಕ್ವಿಂಟಾಲ್ ಭತ್ತ ಬೆಳೆಯಬಹುದು.
ಕೃಷಿಯ ಜೊತೆಗೆ ಕಾಡುತ್ಪನ್ನವನ್ನು ಹೇರಳವಾಗಿ ಸಂಗ್ರಹಿಸುತ್ತಾರೆ. ಬೇಸಿಗೆಯಲ್ಲಿ ಜೇನು, ಸೀಗೆ, ರಾಮ್ಪತ್ರೆ, ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ ಇತ್ಯಾದಿ ಕಾಡುತ್ಪನ್ನಗಳ ಜೊತೆಗೆ ಕೆಲವರು ಕಾಳುಮೆಣಸು ಏಲಕ್ಕಿಯಂತಹ ಸಾಂಬಾರು ಪದಾರ್ಥಗಳನ್ನೂ ಸಹ ಬೆಳೆಯುತ್ತಾರೆ.
ಈ ಪ್ರದೇಶದಲ್ಲಿ ವಿಶೇಷವಾಗಿ ಬೆಳೆಯುವ ಮುರ್ಗನಹುಳಿ ಎನ್ನುವ ಒಂದು ಹುಳಿ ಪದಾರ್ಥದ ಹಣ್ಣು ಮಳೆಗಾಲದಲ್ಲೆಯೇ ವಿಶೇಷವಾಗಿ ಹಣ್ಣಾಗುವುದರಿಂದ ಅದನ್ನೂ ಸಂಗ್ರಹಿಸಿ ಬೆಂಕಿಯಲ್ಲಿ ಒಣಗಿಸಿ ಮಾರಾಟ ಮಾಡುತ್ತಾರೆ. ಈ ಹುಳಿಗೆ ಕೊಬ್ಬುಕರಗಿಸುವ ಶಕ್ತಿ ಇದ್ದು ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಕೇರಳದಲ್ಲಿ ಮೀನು ಪದಾರ್ಥಕ್ಕೆ ಮುರುಗನ ಹುಳಿಯನ್ನು ಬಳಸುತ್ತಾರೆ. ಮಳೆನಾಡಿನ ಗೌಡ್ಲು ಜನಾಂಗದವರು ಅತ್ಯಂತ ನಿಪುಣರು, ಸೂಕ್ಷ್ಮ ಕುಶಲಕರ್ಮಿಗಳು, ಪ್ರಾಣಿಗಳಂತೆ ಮಹಾ ಪುಕುಲರು. ಇವರ ಬದುಕು, ಬದುಕುವ ಕಲೆ, ವೃತ್ತಿ, ಎಲ್ಲವೂ ಉಪಾಯದಿಂದಲೇ ಕೂಡಿರುತ್ತದೆ. ತಮ್ಮ ಪರಿಸರದಲ್ಲಿ ಹೇರಳವಾಗಿ ಬೆಳೆಯುವ ಬೆತ್ತ ಮತ್ತು ವಾಟೆ ಇವುಗಳಿಂದ ತಟ್ಟಿ, ಬುಟ್ಟಿ, ಕೃಷಿ ಬದುಕಿಗೆ ಬೇಕಾದ ಎಲ್ಲಾ ರೀತಿಯ ಸಾಮಗ್ರಿಗಳನ್ನು ಅತ್ಯಂತ ನಾಜೂಕಾಗಿ ನೈಪುಣ್ಯತೆಯಿಂದ ತಯಾರಿಸುತ್ತಾರೆ. ಇವರು ಉಪಾಯದಲ್ಲಿ ಯುದ್ಧಗೆದ್ದ ಒಂದು ಕಥೆಯಿದೆ. ಅದು ಕೆಳದಿರಾಜರಿಗೂ ಸ್ಥಳೀಯ ಕಳಸಾದ ದೊರೆ ಬೈರರಸನಿಗೂ ನಡೆದ ಯುದ್ಧ ಸಂದರ್ಭ. ಶೃಂಗೇರಿ ದೇವಸ್ಥಾನ ಕಳಸದ ಅರಸರಿಗೆ ಸೇರಿದ್ದು. ಅದು ಜೈನದೇವರಾಗಿತ್ತಂತೆ. ಶೃಂಗೇರಿ ಮಠದವರು ಪದ್ಮಾವತಿಯನ್ನು ಶಾರದಾಂಬ ಮಾಡಿದರು. ಇದರಿಂದ ಕೋಪಗೊಂಡ ಬೈರರಸ ಶೃಂಗೇರಿ ಮಠದ ಮೇಲೆ ದಾಳಿಮಾಡಿ ಅಲ್ಲಿನ ಸ್ವಾಮಿಯನ್ನು ಎಳೆಸಿಕೊಂಡು ಬಂದು ತನ್ನ ಕಾಲಿಗೆ ಬೀಳಿಸಿಕೊಂಡನಂತೆ. ಇದರಿಂದ ಶೃಂಗೇರಿ ಮಠದವರು ಆಶ್ರಯಕ್ಕಾಗಿ ಕೆಳದಿ ಅರಸರ ಮೊರೆ ಹೋದರು. ಕೆಳದಿ ಅರಸರು ಬೈರರಸನ ಮೇಲೆ ದಂಡೆತ್ತಿಬಂದರು. ಪಟ್ಟದ ಆನೆಯ ಮೇಲೆ ದಂಡೆತ್ತಿಬಂದ ರಾಜನ ಪಟ್ಟದಾನೆಯ ಕಣ್ಣಿಗೆ ಗುರಿಯಿಟ್ಟು ಅವಿತುಕುಳಿತಿದ್ದ ಗೌಡ್ಲು ಜನಾಂಗದ ಒಬ್ಬ ಧೀರ ಬಾಣಬಿಟ್ಟನಂತೆ. ಇದರಿಂದ ಪಟ್ಟದಾನೆಯು ಮುಂದಕ್ಕೆ ಬರದೇ ಹಿಂದೆ ಇದ್ದ ಅವರ ಸೈನಿಕರಮೇಲೆ ದಾಳಿ ಮಾಡಿ ಯುದ್ಧ ವಿಫಲವಾಯಿತಂತೆ. ಅಲ್ಲಿಂದ ಕಳಸಬೈರರಸನಿಗೆ ಗೌಡ್ಲು ಜನಾಂಗದವರೇ ಅಚ್ಚುಮೆಚ್ಚಿನವರಾಗಿ ದಂಡನಾಯಕರಾಗಿ ಕಾಡಿನ ಎಲ್ಲಾ ಹಕ್ಕುಗಳೂ ಪಾರಂಪರಗತವಾಗಿ ಇವರಿಗೆ ದಕ್ಕಿತಂತೆ.
ಇವರು ಅವಿಭಕ್ತ ಕುಟುಂಬವನ್ನು ಏರ್ಪಡಿಸಿಕೊಂಡು ಒಂದು ವಿಶಾಲವಾದ ಮತ್ತು ಎತ್ತರವಾದ ಮಾಡು ಇರುವ ಛಾವಣಿಗಳನ್ನು ಏರ್ಪಡಿಸಿಕೊಳ್ಳುತ್ತಾರೆ. ಇವರ ಮನೆಗಳಿಗೆ ವಿಶೇಷವೆಂದರೆ ಗೋಡೆಗಳೇ ಇರುವುದಿಲ್ಲ. ಮನೆಯ ಮಧ್ಯದಲ್ಲಿ ಸದಾ ಉರಿಯುತ್ತಿರುವ ಬೆಂಕಿಯನ್ನು ಅಗ್ಗಿಷ್ಟಿಕೆ ಎಂದು ಕರೆಯುತ್ತಾರೆ. ಆ ಅಗ್ಗಿಷ್ಟಿಕೆಯ ಸುತ್ತಲೂ ಎಲ್ಲರೂ ಮಲಗುತ್ತಾರೆ.
ಹೆಚ್ಚೆಂದರೆ ಅಡುಗೆ ಮಾಡಿಕೊಳ್ಳುವ ಜಾಗಕ್ಕೆ ಜಿಗ್ಗುವಾಟೆಯ ತಡಿಕೆ ಇರುತ್ತದೆ. ಈ ಅಗ್ಗಿಷ್ಟಿಕೆಯ ಮೇಲೆ ಮಾಂಸ, ಮೀನು, ಅಥವಾ ಒಣಗಬೇಕಾದ ಮತ್ತು ಸಂರಕ್ಷಿಸಿಡಬೇಕಾದ ಎಲ್ಲಾ ಪದಾರ್ಥಗಳನ್ನು ನೇತು ಹಾಕಿರುತ್ತಾರೆ. ಅಲ್ಲಿನ ತಂಡಿ, ಹವೆಗೆ ಅಗ್ಗಿಷ್ಟಿಕೆಯ ಹೊಗೆಯೇ ರಕ್ಷಣೆ. ಇವರ ಮನೆಯ ಒಳಗಡೆ ಎಷ್ಟು ವಿಶಾಲವಾಗಿರುತ್ತದೆಂದರೆ ಮೂರು ನಾಲ್ಕು ಎತ್ತುಗಳನ್ನು ಮನೆಯ ಮದ್ಯದ ಬೆಂಕ್ಟೆಕಂಬವನ್ನೇ ಮೇಟಿಮಾಡಿ ಭತ್ತದ ಒಕ್ಕಲು ಮಾಡುತ್ತಾರೆ. ಈ ಸಾಹಸ ಏಕೆಂದರೆ ? ಇವರು ಬೇಸಿಗೆಯಲ್ಲಿ ಬೆಳೆಯುವ ಕೋಡೆಭತ್ತ ಎನ್ನುವ ತಳಿ ಅದು ಕೊಯ್ಲಿಗೆ ಬರುವುದೇ ಮೇ, ಜೂನ್ ತಿಂಗಳಲ್ಲಿ. ಅಷ್ಟರಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಹೊರಗಡೆ ಒಕ್ಕಲು ಮಾಡಲು ಸಾಧ್ಯವಿರುವುದಿಲ್ಲ. ಆದ್ದರಿಂದ ಮನೆಯೊಳಗೇ ಕೆಲವರು ಎತ್ತುಕಟ್ಟಿ ಒಕ್ಕಲು ಮಾಡುತ್ತಾರೆ. ಅಲ್ಪಸ್ವಲ್ಪ ಇರುವವರು ಮನೆಯೊಳಗೇ ಬಡಿದು ಭತ್ತ ಸಂಸ್ಕರಿಸುತ್ತಾರೆ.
ಇವರ ಹಬ್ಬಗಳಲ್ಲಿ ಸೀಮೆ ಜಾತ್ರೆ ಬಿಟ್ಟರೆ ದೀಪಾವಳಿಯೇ ದೊಡ್ಡ ಹಬ್ಬ. ದೀಪಾವಳಿ ಹಬ್ಬ ಸರಿಯಾಗಿ ಒಂದು ವಾರ ನಡೆಯುತ್ತದೆ. ಮೊದಲನೆ ದಿನ ಮಣ್ಣುಬೂದಿ, ಎರಡನೆ ದಿನ ಘನಬೂದಿ, ಪಾಡ್ಯ, ಕರಿ, ಸಿರಿ, ವರ್ಷತೊಡಕು. ಹಬ್ಬ ಮುಗಿಯುವುದೇ ವರ್ಷತೊಡುಕಿನೊಂದಿಗೆ. ಈ ಒಂದು ವಾರದ ಹಬ್ಬದಲ್ಲಿ ಹೊಳೆಬೇಟೆ, ಗುಡ್ಡದಬೇಟೆ ಎಲ್ಲಾ ಶಿಕಾರಿಗಳು ನಡೆಯುತ್ತವೆ. ರಾತ್ರಿಯಲ್ಲ ಅಂಟಿಕೆಪಂಟಿಕೆ ನಡೆಯುತ್ತವೆ ಮತ್ತು ಹಗಲು ಇವರಲ್ಲೇ ಕೆಲವರು ವಿವಿಧ ವೇಷಗಳನ್ನು ಹಾಕಿ ಮನೆಮನೆಗೆ ತಿರುಗುತ್ತಾರೆ. ಇವರಲ್ಲಿ ‘ಹಬ್ಬ ಬರುವುದೇ ಹಂಚಿ ತಿನ್ನುವುದಕ್ಕೆ’ ಎಂದು ಒಂದು ಮಾತಿದೆ. ‘ಹಂಚಿ ತಿಂದರೆ ಹಸು ಅಡಗಿತ್ತು, ಮುಚು ್ಚ ತಿಂದರೆ ತುಡು ಅಡಗಿತ್ತು’ ಎಂಬ ಮಾತಿದೆ. ಅಲ್ಲದೇ ಹಬ್ಬಗಳೂ ಅಂದರೆ ಹಬ್ಬದಂತಹ ವಿಶೇಷ ಸಂದರ್ಭದಲ್ಲಿ ಯಾರಿಗೇ ಸೇರಿದ ತೋಟ ಹಿತ್ತಲುಗಳಲ್ಲಿ ತಿನ್ನಲು ಅವಶ್ಯವಾದ ಯಾವುದೇ ತರಕಾರಿ, ಹಣ್ಣು, ಇತ್ಯಾದಿಗಳಿದ್ದರೆ ಅದನ್ನು ಯಾರು ಬೇಕಾದರೂ ಕುಯ್ದುಕೊಂಡು ಹೋಗಬಹುದು. ಇದು ಅಪರಾಧವಲ್ಲ. ಇದಕ್ಕೆ ಹಬ್ಬಗಳು ಎಂದು ಹೆಸರು.
ಇವರು ಕೃಷಿಗಾಗಿ ಜಾನುವಾರುಗಳನ್ನು ಸಾಕುತ್ತಾರೆ. ಆದರೆ ಅವುಗಳ ಹಾಲನ್ನು ಎಳೆಯ ಮಕ್ಕಳಿಗೆ ಕೂಡಾ ಕುಡಿಸುವುದಿಲ್ಲ. ಜಾನುವಾರಿನ ಹಾಲು ಮಕ್ಕಳಿಗೆ ಕುಡಿಸಿದರೆ ಅವು ಕಕ್ಕುತ್ತವೆ. ಅಂದರೆ ವಾಂತಿ ಮಾಡಿಕೊಳ್ಳುತ್ತವೆ ಎನ್ನುವುದು ಇವರ ಹೇಳಿಕೆ. ಸಣ್ಣ ಮಕ್ಕಳಿಗೂ ತಾಯಿಯ ಹಾಲು ಅಕ್ಕಿತಿಳಿಯನ್ನು ಕುಡಿಸುತ್ತಾರೆಯೇ ಹೊರತು ಜಾನುವಾರುಗಳ ಹಾಲು ಕುಡಿಸುವುದಿಲ್ಲ. ಎದೆಯ ಹಾಲು ಕುಡಿಯುವ ಎಳೆಯ ಮಕ್ಕಳ ತಾಯಿ ಏನಾದರೂ ಕಾರಣಕ್ಕೆ ಮರಣವನ್ನಪ್ಪಿದರೆ ಅಂತಹ ಅನಾಥಮಕ್ಕಳನ್ನು ಅದೇ ಜನಾಂಗದ ಅದೇ ವಯಸ್ಸಿನ ಬಾಣಂತಿಯರು ಎಲ್ಲಿದ್ದಾರೆಂದು ಹುಡುಕಿ ಅವರ ಮನೆಯಲ್ಲಿ ಬಿಡುತ್ತಾರೆ. ಅಂತಹ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಅನೇಕ ಜನ ತಾಯಂದಿರು ಸಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಂತಹ ಮಕ್ಕಳಿಗೆ ತಮ್ಮ ಮಕ್ಕಳಂತೆಯೇ ಮನೆಯಲ್ಲಿ ಎಲ್ಲಾ ಹಕ್ಕುಗಳೂ ಇರುತ್ತವೆ. ಮನೆ ವಿಭಜನೆಯಾಗುವ ಸಂದರ್ಭದಲ್ಲಿ ಅಂತಹ ಸಾಕು ಮಕ್ಕಳಿಗೆ ತಮ್ಮ ಮಕ್ಕಳಂತೆಯೇ ಸಮಾನ ಆಸ್ತಿ ಪಾಲುಕೊಟ್ಟ ಅನೇಕ ಉದಾಹರಣೆಗಳಿವೆ. ಅಪರೂಪಕ್ಕೆ ಕೆಲವರು ತುಪ್ಪ ಮಾಡುವುದನ್ನು ಕಲಿತಿರುತ್ತಾರೆ. ಅಂತಹ ಕರಾವು ಮಾಡಿದ ತುಪ್ಪವನ್ನು ಗಟ್ಟದ ಕೆಳಗಿನ ಭಟ್ಟರ ಮನೆಗಳಿಗೆ ಅಥವಾ ಬ್ರಾಹ್ಮಣರ ಮನೆಗಳಿಗೆ ಕೊಟ್ಟು ಗೌರಿ ಹಬ್ಬಕ್ಕೆ ತೆಂಗಿನ ಕಾಯಿ ಸಂಗ್ರಹಿಸುವ ಪದ್ಧತಿಯುಂಟು. ಹಸುವಿನ ತುಪ್ಪ ಮಾಡದವರು ಗೌರೀ ಹಬ್ಬಕ್ಕೆ ಜೇನು ತುಪ್ಪವನ್ನು ಕೊಟ್ಟು ಒಂದೆರಡು ತೆಂಗಿನ ಕಾಯಿಯನ್ನು ಸಂಗ್ರಹಿಸುತ್ತಾರೆ. ಇವರ ಕುಲಕಸುಬುಗಳಲ್ಲಿ ಬೈನೇಕಟ್ಟಿ ಸೇಂದಿ ಇಳಿಸುವುದು ಪ್ರಮುಖ ಹವ್ಯಾಸ. ನಲವತ್ತು ಅರವತ್ತು ಅಡಿ ಎತ್ತರವಿರುವ ಬೆಳೆದ ಬೈನೇಮರಗಳ ಮೂರನೆ ಹೊಂಬಾಳೆ ಒಡೆದು ಇನ್ನೇನು ಸಿಂಗಾರ ಒಡೆದು ಹೊರಗೆ ಬರುತ್ತದೆ ಅನ್ನುವ ಸಂದರ್ಭದಲ್ಲಿ ನೋಡಿ ಆ ಬೈನೇಕೈಗೆ ಹೊಂಬಾಳೆಯನ್ನು ತೆಗೆದು ಅದರ ದಿಂಡಿಗೆ ಕಾರೆಮುಳ್ಳು ಎನ್ನುವ ಮುಳ್ಳಿನಿಂದ ಗೀರಿ ಕಂಚಿಕಾಯಿ, ಕಾಳುಮೆಣಸು, ಮಡಿಕೆಯ ಕರಿ ಇವು ಮೂರನ್ನೂ ಅರೆದು ತಯಾರಿಸಿದ ಖಾರ ಎನ್ನುವ ಪದಾರ್ಥದಿಂದ ಹಚ್ಚಿ ಮೂವತ್ತು ನಲವತ್ತು ಕೆ.ಜಿ. ತೂಗುವ ಕಲ್ಲುಗಳನ್ನು ಬಳ್ಳಿಗಳಿಂದ ಬಿಗಿದು ಹದಮಾಡಿದ ಬೈನೇಕೈಗೆ ನೇತು ಹಾಕುತ್ತಾರೆ. ಈ ಬೈನೇಮರದಿಂದ ಸೇಂದಿ ಎನ್ನುವ ರಸವನ್ನು ತೆಗೆಯುವುದು ಸಾಹಸಕ್ಕಿಂತಲೂ ಅತ್ಯಂತ ನೈಪುಣ್ಯತೆಯ ಕೌಶಲ್ಯದ ತಂತ್ರ. ಈ ಸೇಂದಿ ಇಳಿಸುವ ತಂತ್ರದಲ್ಲಿ ಸಣ್ಣ ತಪ್ಪುಗಳಾದರೂ ಅದು ರಸ ಸುರಿಯುವುದಿಲ್ಲ. ಅದಕ್ಕೆ ಪೂರಕವಾದ ವಾತವರಣವೂ, ಸೂಕ್ಷ್ಮವಾದ ಕೆಲಸವೂ ಅಗತ್ಯ. ಸೇಂದಿ ಎನ್ನುವುದನ್ನು ಬೈನೇಕಳ್ಳು ಎಂತಲೂ ಕರೆಯುತ್ತಾರೆ. ಬೆಳಿಗ್ಗೆ ಸಿಹಿ ಸಿಹಿ ಇರುವ ಕಳ್ಳನ್ನು ಮನೆಮಂದಿಯಲ್ಲರೂ ಕುಡಿಯುತ್ತಾರೆ. ಕಳ್ಳಿನ ಮಡಿಕೆಯ ತಳದಲ್ಲಿ ಅಕ್ಕಿಯ ಗಂಜಿಯ ರೀತಿಯ ಗಸಿ ಇರುತ್ತದೆ. ಅದಕ್ಕೆ ಕಳ್ಳನ್ನ ಎಂದು ಕರೆಯುತ್ತಾರೆ. ಕಳ್ಳನ್ನವನ್ನು ಪುಟ್ಟ ಪುಟ್ಟ ಮಕ್ಕಳಿಗೆ ಹಸುಳೆಗಳಾದಿಯಾಗಿ ತಿನಿಸುತ್ತಾರೆ. ಕಳ್ಳುಕುಡಿದು ಕುಡಿಬಿಸಿಲಿಗೆ ಮಲಗುವುದು ಎನ್ನುವುದು ಈ ಜನಾಂಗದ ಸಂಭ್ರಮ. ಮಲಪತ್ತಾದ ಇವರ ಮನೆಗಳಿಗೆ ನೀರಬಿಸಿಲ ಬಿಡುವುದು ಮದ್ಯಾಹ್ನದ ನಂತರವೇ. ಬೆಳಗ್ಗೆ ಮುಂಚೆ ಬೀಳುವ ಕೋಲು ಬೆಳಕಿನ ಕುಡಿಬಿಸಲು ಬೀಳುವ ಸ್ಥಳಗಳನ್ನು ಹುಡುಕಿ ಕಳ್ಳುಕುಡಿದು ಬಿಸಿಲೇರುವ ವರೆಗೂ ಮಲಗುವುದು ಚಳಿಗಾಲದ ಒಂದು ಚಾಳಿ.
ಇವರನ್ನ ಉದ್ಧೇಶ ಪೂರ್ವಕವಾಗಿಯೇ ಗೌಡ್ಲುಗಳು ಎಂದು ಕರೆದಿರಬಹುದು ಎನ್ನುವುದು ನನ್ನ ಅನಿಸಿಕೆ. ಗೌಡ್ಲುಗಳು ವಾಸಮಾಡುವ ಪ್ರದೇಶಕ್ಕೆ ಕುಡಿಗೆ ಎಂತಲೂ ಕರೆಯುತ್ತಾರೆ. ಇಂತದೇ ಪ್ರದೇಶದಲ್ಲಿ ವಾಸಮಾಡುವ ಒಕ್ಕಲಿಗರಿಗೂ ಇವರಿಗೂ ಬೇರಾವ ಪದ್ದತಿಯಲ್ಲೂ ಹೆಚ್ಚು ವ್ಯತ್ಯಾಸವಿಲ್ಲ.
ಒಕ್ಕಲಿಗರನ್ನು ಗೌಡರು ಎಂದು ಕರೆಯುತ್ತಾರೆ. ಉದಾಹರಣೆಗೆ ರಾಮ, ಸೋಮ, ಗಿಡ್ಡ, ಪುಟ್ಟ ಈ ರೀತಿ ಹೆಸರುಗಳ ಮುಂದೆ ಒಕ್ಕಲಿಗರಾದರೆ ರಾಮೇಗೌಡ, ಸೋಮೇಗೌಡ, ಪುಟ್ಟೇಗೌಡ, ಗಿಡ್ಡೇಗೌಡ ಎಂದು ಇರುತ್ತದೆ. ಅದೇ ಗೌಡ್ಲು ಜನಾಂಗದವರನ್ನು ಹೆಸರಿಸುವಾಗ ಪುಟ್ಗೌಡ, ಗಿಡ್ಗೌಡ, ರಾಮ್ಗೌಡ, ಸೋಮ್ಗೌಡ ಎಂದಾಗುತ್ತದೆ. ದೀರ್ಗಾಕ್ಷರವನ್ನು ತೆಗೆದು ಅಲ್ಲದೇ ಈ ಕೊಡಗೀ ಗೌಡ್ಲು ಜನಾಂಗಗಳಿಗೆ ಇರುವ ನಾಯಕನನ್ನು ಕೊಡಗೀಗೌಡ ಎಂದು ಕರೆಯುತ್ತಾರೆ. ಈ ನಾಲ್ಕಾರು ಕೊಡಗೀಗೌಡರುಗಳಿಗೆ ಒಕ್ಕಲಿಗರ ಜಾತಿಯ ಗೌಡ ನಾಯಕನಾಗಿರಿತ್ತಾನೆ. ಅವನನ್ನು ಸೀಮೆ ಗೌಡ ಎಂದು ಕರೆಯುತ್ತಾರೆ. ಇಂತದೇ ಪರಿಸರದಲ್ಲಿ ಬದುಕುವ ಒಕ್ಕಲಿಗರಿಗೂ ಮತ್ತು ಈ ಗೌಡ್ಲು ಜನಾಂಗದವರಿಗೂ ಇರುವ ಮುಖ್ಯ ವ್ಯತ್ಯಾಸವೇನೆಂದರೆ ಒಕ್ಕಲಿಗರು ಬೈನೇಕಟ್ಟಿ ಕಳ್ಳು ಬೇಳಿಸುವುದಿಲ್ಲ. ಅವರದ್ದೇನಿದ್ದರೂ ಕೃಷಿಯೇ ಪ್ರಧಾನ. ಗೌಡ್ಲು ಜನಾಂಗದವರಿಗೆ ಬೈನೇಕಳ್ಳು ಕಟ್ಟಿ ಅದೇನಾದರೂ ದಿನಕ್ಕೆ ಐದತ್ತು ಸೇರು ಇಳಿದರೆ ಅವರಿಗೆ ಹತ್ತಿಪ್ಪತ್ತು ಕಂಡುಗ ಭತ್ತದ ಅಕ್ಕಿ ಉಳಿಯಿತೆಂದೇ ಅರ್ಥ. ಏಕೆಂದರೆ ಕಳ್ಳು ಬೀಳುವ ಕಾಲದಲ್ಲಿ ಯಾರೂ ಬೆಳಿಗ್ಗೆ ಸಂಜೆ ವಿಶೇಷವಾಗಿ ಊಟಮಾಡುವುದಿಲ್ಲ.
ಬಗನೇ ಕಳ್ಳು ಅತ್ಯಂತ ಪೌಷ್ಟಿಕವಾದ ಆಹಾರ. ಅದನ್ನು ಗೌಡ್ಲುಗಳು ಅತ್ಯಂತ ಶ್ರದ್ಧೆಯಿಂದ ಮಾಡಿ ಅಮೃತದಷ್ಟೇ ಪವಿತ್ರವೆಂದು ಭಾವಿಸುತ್ತಾರೆ. ಇದರ ಹೆಚ್ಚಿನ ಮಾಹಿತಿಗೆ ನನ್ನದೇ ಪುಸ್ತಕ ಮಂಗಬ್ಯಾಟೆ, ಮಳೆನಾಡ ಪರಿಸರ ಕಥನ ನೋಡಿ ಗೌಡ್ಲುಜನಾಂಗದವರಿಗೆ ಒಕ್ಕಲಿಗರ ಎಲ್ಲ ಜನಪದ ದೇವರುಗಳು ಅವರ ದೇವರುಗಳೂ ಕೊಡ. ಅವರಲ್ಲಿ ವಡಮ್ದೇವರು, ಹೊಸದೇವರು ಎಂಬ ಎರಡು ಬೇರೆದೇವರುಗಳಿದೆ. ಅದು ಬಿಟ್ಟರೆ ಇವರನ್ನು ನಿಜವಾದ ಗಿರಿಜನರು ಎಂದು ಕರೆಯಬಹುದಾಗಿದ್ದಕ್ಕೆ ಇವರ ಮುಖ್ಯವಾದ ದೇವರೇ (ಖಾನ್ ದೇವರು) ಕಾಡು ಇವರು ಸರ್ವಸ್ವ.
ಇವರ ಎಲ್ಲಾ ಹರಕೆ, ಪೂಜೆ, ಸೇಂದಿ ಇಳಿಸುವ ಶಿಕಾರಿ ಮಾಡುವಂತಹ ಎಲ್ಲಾ ಅದೃಷ್ಟದ ಕಾರ್ಯಗಳಿಗೂ ಇವರು ಪ್ರಮುಖವಾಗಿ ಹರಕೆ ಹೇಳಿಕೊಳ್ಳುವುದು, ಪೂಜೆಮಾಡುವುದು ಖಾನ್ ದೇವರು. ಈ ದೇವರಿಗೆ ನಿರ್ದಿಷ್ಟವಾದ ಗುಡಿ ಇಲ್ಲ. ಸ್ಥಳವಿಲ್ಲ. ಕಾಡು ಗುಡ್ಡದ ಯಾವುದಾದರೂ
ಒಂದು ಜಾಗದಲ್ಲಿ ತಮ್ಮ ಹರಕೆಯ ನೈವೇದ್ಯವನ್ನು ಇರಿಸಿ ಅಲ್ಲಿಯ ಸೊಪ್ಪು ಕುಡಿಗಳನ್ನು ಎರಚಿ ಕಾಡಿಗೇ ಕೈಮುಗಿಯುತ್ತಾರೆ. ಈಗ ಇದೇ ಖಾನ್ ದೇವರುಗಳಿಗೆ ವೈಧಿಕರು ವನದುರ್ಗೀ, ಬನಶಂಕರೀ, ಇತ್ಯಾದಿ ಹೆಸರುಗಳನ್ನು ಕೊಟ್ಟು ಆಲಯವನ್ನು ಸೃಷ್ಟಿಸುತ್ತಿದ್ದಾರೆ. ಉಳಿದಂತೆ ಮಲೆನಾಡಿನ ಎಲ್ಲಾ ಸೀಮೆ ದೇವರುಗಳ ಸೀಮೆ ಜಾತ್ರೆಯಲ್ಲಿ ರಥಕಟ್ಟುವುದರಿಂದ ಹಿಡಿದು ಬೇರೆಲ್ಲಾ ಕೆಲಸಗಳನ್ನು ಬಿಟ್ಟಿಕೆಲಸವಾಗಿ ಅಂದರೆ ಸೀಮೆ ಜಾತ್ರೆಯಲ್ಲಿ ಆಯಾಯಾ ಸೀಮೆಗಳ ದೇವಸ್ಥಾನಗಳ ಕೆಲಸಗಳನ್ನು ಈ ಜನಾಂಗದವರಿಂದ ಪುಕ್ಕಟ್ಟೆಯಾಗಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ದೇವಸ್ಥಾನ ಬಿಟ್ಟಿ ಎಂದು ಹೆಸರು. ಈ ಬಿಟ್ಟಿಯನ್ನು ಆಗುಂಬೆ, ಕಿಗ್ಗಾ, ಮೇಗೂರು, ಕಳಸ, ಧರ್ಮಸ್ಥಳದ ದೇವಸ್ಥಾನದವರೂ ಮಾಡಿಸಿಕೊಳ್ಳುತ್ತಾರೆ.
ಮಲೆನಾಡಿನಲ್ಲೇ ಪ್ರಮುಖವಾದ ಮಳೆದೇವರೆಂದು ಹೆಸರಾದ ಕಿಗ್ಗಾ ಕೆಳಗಣೇಶ್ವರ ಈಗ ಅದರ ಹೆಸರನ್ನು ಋಷ್ಯಶೃಂಗ ಎಂದು ಬದಲಾಯಿಸಿಲಾಗಿದೆ. ಈ ಋಷ್ಯಶೃಂಗನ ಜಾತ್ರೆಯು ಕಿಗ್ಗಾ ಸೀಮೆಯ ಅದರ ಆ ದೇವರ ಒಕ್ಕಲುಗಳು ಪ್ರತಿವರ್ಷವೂ ನಡೆಸುತ್ತಾರೆ. ಈ ದೇವಸ್ಥಾನವು ಈಗ ಸರಕಾರದ ಮುಜರಾಯಿ ಇಲಾಖೆಗೆ ಸೇರಿದೆ. ಈ ದೇವರ ಜಾತ್ರೆಯ ರಥ ಹೊರಡಬೇಕಾದರೆ ಅದಕ್ಕೆ ಹಂದಿಯ ಆಯಾರವಾಗಬೇಕು ಹಾಗಾಗಿ ಈ ಋಷ್ಯಶೃಂಗ ದೇವಸ್ಥಾನದವರೇ ಪ್ರತಿವರ್ಷ ಒಂದು ಹಂದಿಯನ್ನು ತಮ್ಮ ಖರ್ಚಿನಲ್ಲಿ ಸಾಕುತ್ತಾರೆ. ಈ ಹಂದಿಯನ್ನು ದೇವಸ್ಥಾನ ಪಕ್ಕದ ಕೇರಿಯಲ್ಲಿರುವ ದಲಿತರ ಜವಾಬ್ದಾರಿಯಲ್ಲಿ ಪೋಷಣೆಗೆ ಬಿಡುತ್ತಾರೆ. ಈ ಹಂದಿ ರಥಕ್ಕೆ ಸುತ್ತುಬರಿಸಿ ಭಟ್ಟರು ಕೊಡುವ ಚರುವಿಗೆ ಕಡಿದು ಆಯಾರ ಕೊಡುವ ಕರ್ತವ್ಯ ಗೌಡ್ಲು ಜನಾಂಗದವರಿಗೆ ಸೇರಿದ್ದು. ಕಡಿದ ಹಂದಿ ಒಂದು ವರ್ಷ ಕೇರಿಯ ದಲಿತರಿಗಾದರೆ ಮತ್ತೊಂದುವರ್ಷ ಗೌಡ್ಲು ಜನಾಂಗದವರಿಗೆ. ಈ ರೀತಿ ಗೌಡ್ಲು ಜನಾಂಗದವರಿಗೆ ಸೀಮೆ ಜಾತ್ರೆಯಲ್ಲಿ ಸೀಮೆ ಕೆಲವು ಕಟ್ಟುಪಾಡುಗಳಿದ್ದು ಸೀಮೆ ತೇರಿನ ತೇರ್ಜಟಕಾಕ್ಕೆ ಹಂದಿಕಡಿಯುವ ಪದ್ಧತಿ ಮೇಲೆ ಹೆಸರಿಸಿದ ಎಲ್ಲಾ ದೇವಸ್ಥಾನಗಳಲ್ಲಿ ಒಂದು ಕಾಲದಲ್ಲಿ ಇತ್ತಂತೆ. ವೈದಿಕರ ಪ್ರವೇಶದ ನಂತರ ಇಂತಹ ಜನಪದ ಆಚರಣೆಗಳು ನಿಂತುಹೋದವಂತೆ. ಆದರೆ ಕಿಗ್ಗಾದ ಕೆಳಗಣೇಶ್ವರ ಶೃಂಗೇರಿ ಮಠದವರ ಅವಶ್ಯಕತೆಗಾಗಿ ಋಷ್ಯಶೃಂಗನಾದರೂ ಹಂದಿ ಕಡಿಯುವ ಪದ್ಧತಿ ಉಳಿದುಕೊಂಡು ಬಂದಿದೆ. ಸ್ಥಳೀಯ ಆಚಾರರು ಮತ್ತು ಗಿರಿಜನರು ಆಕಾಶದೆತ್ತರದ ಗರುಡುಗಂಬಕ್ಕೆ ಸಮಾನಾಂತರವಾಗಿ ರಥಕಟ್ಟುವುದರಿಂದ ಋಷ್ಯಶೃಂಗನ ರಥ ಅತ್ಯಂತ ಎತ್ತರದ್ದು ಎಂದು ಹೆಸರುವಾಸಿಯಾಗಿದೆ. ಒಂದು ವರ್ಷ ಬ್ರಾಹ್ಮಣರ ವತ್ತಾಯದಿಂದ ತೇರಿಗೆ ಹಂದಿ ಕಡಿಯದೇ ಎಳೆದದ್ದರಿಂದ ಅದು ಆಯ ತಪ್ಪಿ ರಸ್ತೆಯ ಚರಂಡಿ ಹೊಂಡಕ್ಕೆ ಇಳಿದಿತ್ತಂತೆ. ಆ ಭಯದಿಂದಾಗಿ ಇಂದಿಗೂ ತೇರುಜಟಕಾಕ್ಕೆ ಹಂದಿ ಕಡೆಯುವ ಪದ್ಧತಿ ಗುಟ್ಟಾಗಿ ಉಳಿದುಕೊಂಡು ಬಂದಿದೆ.
ಇವರ ಮದುವೆ, ಬಾಲೆತೊಟ್ಲು, (ನಾಮಕರಣ) ಸಾವು, ನೋವು, ಪೂಜೆ, ಹಬ್ಬ, ಈ ಯಾವು ಶುಭ ಅಶುಭ ಕಾರ್ಯಕ್ರಮಗಳಲ್ಲೂ ವೈಧಿಕರಿಗೆ ಪ್ರವೇಶವಿಲ್ಲ. ಇವರ ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮದುವೆಮಾಡಿಸುವವರು ಎಂದು ಇವರಲ್ಲೇ ಕೆಲವರು ಇರುತ್ತಾರೆ. ಅವರು ನಾಡು ನೆಂಟರು, ಕುಲದೇವರು, ಖಾನ್ದೇವರು, ಇವರುಗಳ ಮತ್ತು ಗಂಗೆ ಸಾಕ್ಷಿಯಾಗಿ ಊರಮುಖಂಡರು ಸಭೆಯಲ್ಲಿ ನೆರೆದವರ ಸಾಕ್ಷಿಯ ಹೆಸರು ಹೇಳಿ ತಾಯಿಯಿಂದ ಬರುವ ಬಳಿ ಪ್ರಕಾರ ಮದುವೆ ದಾರೆಯೆರೆಯುತ್ತಾರೆ. ಈ ಜನಾಂಗದವರಲ್ಲಿ ಘಟ್ಟದ ಮೇಲೆ ಕಳಸ ಆ ಭಾಗದಲ್ಲಿ ಅಳಿಯ ಸಂತಾನ ಜಾರಿಯಲ್ಲಿದೆ. ಇದು ಘಟ್ಟದ ಕೆಳಗಿನ ಮಳೆಕುಡಿಯರಲ್ಲಿ ಸಹಜವಾಗಿದೆ. ಮತ್ತೆಲ್ಲಾ ಮಳೆನಾಡಿನ ಪ್ರದೇಶದಲ್ಲಿ ಮಕ್ಕಳಕಟ್ಟೆ ಜಾರಿಯಲ್ಲಿದೆ. ವಿಶೇಷವೆಂದರೆ ಗಾಟಿಗುಡ್ಡದ ಮೇಲಿನವರು ಕನ್ನಡ ಮಾ�