ಬುಲೆಟ್ ಟ್ರೈನ್ ಸಿಂಡ್ರೋಮ್: ಭಾರತೀಯ ರೈಲ್ವೆಗೆ ಗಣ್ಯತೆಯ ಕನವರಿಕೆ
ಸಂಸತ್ತಿನಲ್ಲಿ ರೈಲ್ವೆ ನೀತಿ ಬಗ್ಗೆ ಹಾಗೂ ಮುಖ್ಯವಾಹಿನಿ ಮಾಧ್ಯಮದಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ಭ್ರಮೆ ಕಟ್ಟಿಕೊಂಡು ರೈಲು ಪ್ರಯಾಣ ಮಾಡಿದರೆ ಭ್ರಮನಿರಸನ ಖಚಿತ. ಉದಾಹರಣೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಹೇಳಿಕೆಯನ್ನೇ ತೆಗೆದುಕೊಳ್ಳಿ. ಭಾರತದಲ್ಲಿ ಬುಲೆಟ್ ರೈಲು ಸಾಧ್ಯವಾದಷ್ಟು ಬೇಗ ಓಡಾಡುವುದು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆ ಹಾಗೂ ಕನಸು
ನಿಜವಾಗಿಯೂ? ಮುಕ್ತವಾಗಿ ಹೇಳಬೇಕೆಂದರೆ, ಸಾಮಾನ್ಯ ಭಾರತೀಯನ ಕನಸು ಹಾಲಿ ಇರುವ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸಲಿ ಎನ್ನುವುದಷ್ಟೇ ಆಗಿದೆ. ಇದು ದುಬಾರಿ ದರದ ರಾಜಧಾನಿ ಎಕ್ಸ್ಪ್ರೆಸ್ನಂಥ ರೈಲುಗಳಲ್ಲಿ ಓಡಾಡುವವರಿಗೆ ಅನ್ವಯವಾಗದು. ಏಕೆಂದರೆ ಬಹುತೇಕ ಈ ರೈಲುಗಳು ಆದ್ಯತೆಯ ಮೇರೆಗೆ ಸಮಯಕ್ಕೆ ಸರಿಯಾಗಿ ಓಡುತ್ತವೆ. (ಇತರ ರೈಲುಗಳ ವಿಳಂಬಕ್ಕೆ ಕಾರಣವಾಗಿ). ಆದರೆ ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೆ ಹತಾಶೆಯಿಂದ ಗಂಟೆಗಟ್ಟಲೆ ರೈಲಲ್ಲಿ ಕಳೆಯುವ ಅನಿವಾರ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂಥ ರೈಲುಗಳು ನಿಗದಿತ ವೇಳೆಗಿಂತ ಹಲವು ಗಂಟೆಗಳಷ್ಟು ತಡವಾಗಿ ಚಲಿಸುವುದು ಮಾಮೂಲಿ.
ಜನದಟ್ಟಣೆ
ವಿಭಿನ್ನ ವರ್ಗದ ಪ್ರಯಾಣಿಕರಿಗೆ ಸಂಬಂಧಪಡುವಂತೆ, ಸುಮಾರು ಮೂರು ದಶಕಗಳ ಹಿಂದೆಗೆ ಸದ್ಯದ ರೈಲ್ವೆ ಸ್ಥಿತಿಗತಿಯನ್ನು ಹೋಲಿಸುವುದು ಹೆಚ್ಚು ಕುತೂಹಲಕಾರಿ ಎನಿಸುತ್ತದೆ. ಮೇಲ್ವರ್ಗದ ಪ್ರಯಾಣಿಕರಿಗೆ ಖಂಡಿತವಾಗಿಯೂ ರೈಲ್ವೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಇಂಟರ್ನೆಟ್ ಮೂಲಕ ಕಾಯ್ದಿರಿಸುವಿಕೆ, ಎಸ್ಎಂಎಸ್ ವಿಚಾರಣಾ ಸೇವೆ, ತತ್ಕಾಲ್ ಕೋಟಾ, ಫುಡ್ ಪ್ಲಾಝ, ಆದ್ಯತಾ ರೈಲುಗಳ ಉತ್ತಮ ಸೇವೆ (ಕೇವಲ ಹಳೆಯ ರಾಜಧಾನಿ ರೈಲುಗಳಷ್ಟೇ ಅಲ್ಲದೆ ಶತಾಬ್ದಿ, ದುರಂತೊ, ಯುವಾ, ಗರೀಬ್ರಥ ಹೀಗೆ..)
ನಿಮ್ಮಲ್ಲಿ ಸಾಕಷ್ಟು ಹಣವಿದ್ದರೆ ಭಾರತೀಯ ರೈಲ್ವೆ ದೊಡ್ಡ ಮೋಜು; ಅದು ಬುಲೆಟ್ ರೈಲು ಇರಬಹುದು. ಇತರ ರೈಲುಗಳೂ ಆಗಿರಬಹುದು. ಆದರೆ ಬಡವರಿಗೆ ಅಂದರೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರ ಸೌಕರ್ಯಗಳು ಮಾತ್ರ 35 ವರ್ಷ ಕೆಳಗೆ ಹೇಗಿದೆಯೋ ಹಾಗೆಯೇ ಇದೆ. ಇಂದಿಗೂ ಕಾಯ್ದಿರಿಸದ ಟಿಕೆಟ್ಗಾಗಿ ಗಂಟೆಗಟ್ಟಲೆ ಕಾಯಬೇಕು; ಇಂಥ ರೈಲುಗಳು ಎಲ್ಲಿ, ಯಾವ ವೇಳೆಯಲ್ಲಿ ಬರುತ್ತವೆ ಎನ್ನುವುದನ್ನು ಸೂಚಿಸುವ ಸಮರ್ಪಕ ವ್ಯವಸ್ಥೆ ಇಲ್ಲ; ಕಿಕ್ಕಿರಿದ ವಿಚಾರಣಾ ಕೌಂಟರ್ಗಳು. ಎಲ್ಲಕ್ಕಿಂತ ಹೆಚ್ಚಾಗಿ ಕಿಕ್ಕಿರಿದು ತುಂಬಿರುವ ಇಂಥಹ ರೈಲುಗಳನ್ನು ಹತ್ತುವುದೇ ಒಂದು ಬಗೆಯ ದೊಂಬರಾಟ.
ಇಲ್ಲಿ ಜನದಟ್ಟಣೆ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ಕೆಲವೊಮ್ಮೆ ಪ್ರಯಾಣಿಕರ ನಡುವೆ ಪರಸ್ಪರ ಸಂಘರ್ಷಕ್ಕೂ ಕಾರಣವಾಗುತ್ತದೆ. ಮೂರು ದಶಕಗಳ ಮೊದಲು ಬಹುತೇಕ ಎಲ್ಲ ಮಾರ್ಗಗಳಲ್ಲಿ ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವುದು ಕೂಡಾ ತೀರಾ ಆರಾಮದಾಯಕ ಹಾಗೂ ಆಹ್ಲಾದದಾಯಕವಾಗಿತ್ತು. ಪಶ್ಚಿಮ ಭಾರತ ಹಾಗೂ ದಕ್ಷಿಣ ಭಾರತದ ಕೆಲ ಮಾರ್ಗಗಳಲ್ಲಿ ಇದು ಇಂದಿಗೂ ಸಾಧ್ಯವಿದೆ. ಆದರೆ ಉತ್ತರ ಭಾರತದಲ್ಲಂತೂ ಕಾಯ್ದಿರಿಸದ ರೈಲು ಪ್ರಯಾಣ ತ್ರಾಸದಾಯಕ ಹಾಗೂ ಮರೀಚಿಕೆಯೇ ಆಗಿದೆ. ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದ್ದರೆ, ಇದಕ್ಕೆ ತಕ್ಕಂತೆ ಕಾಯ್ದಿರಿಸದ ಬೋಗಿಗಳ ಸಂಖ್ಯೆ ಹೆಚ್ಚಿಲ್ಲ.
ಹಲವು ಆದ್ಯತಾ ರೈಲುಗಳು ಹೆಚ್ಚಿರುವ ಕಾರಣದಿಂದಾಗಿ ಈ ರೈಲುಗಳ ಕಾಯ್ದಿರಿಸದ ಬೋಗಿಗಳ ಸಂಖ್ಯೆ ಹೆಚ್ಚಿಲ್ಲ. ಹಲವು ಪ್ರಯಾಣಿಕರ ದಟ್ಟಣೆ ಮಾರ್ಗಗಳಲ್ಲಿ ಇಂಥ ಕಾಯ್ದಿರಿಸದ ಬೋಗಿಗಳನ್ನು ಏರುವಲ್ಲಿ ಲಾಠಿ ಹಿಡಿದ ಪೊಲೀಸರು ಇರುವುದು ಅನಿವಾರ್ಯವಾಗಿದೆ. ಜನದಟ್ಟಣೆಯಿಂದ ತುಂಬಿದ ಬೋಗಿಗಳಲ್ಲಿ ಜನರನ್ನು ಕುರಿಮಂದೆಯಂತೆ ತುಂಬಿಕೊಂಡು ಹೋಗುವ ದೃಶ್ಯ ಕರುಣಾಜನಕ.
ತುರ್ತು ಅಗತ್ಯ
ರಾಷ್ಟ್ರೀಯ ಘನತೆ ಎನಿಸಿದ ಬುಲೆಟ್ ರೈಲಿಗಿಂತ ಇಂಥ ನತದೃಷ್ಟ ಸಾಮಾನ್ಯ ಪ್ರಯಾಣಿಕರ ಬಗ್ಗೆ ದೃಷ್ಟಿ ಹರಿಸಿದರೆ, ಕೆಲವೇ ವಾರಗಳಲ್ಲಿ ಪವಾಡಸಧೃಶ ಬದಲಾವಣೆ ಕಾಣಬಹುದು. ಒಂದು ಬುಲೆಟ್ ರೈಲು ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಅದನ್ನು ಸಾಮಾನ್ಯ ಪ್ರಯಾಣಿಕರ ಕ್ಷೇತ್ರಕ್ಕೆ ವೆಚ್ಚ ಮಾಡಿದರೆ ಇಡೀ ದೇಶಕ್ಕೆ ಅದರ ಪ್ರಯೋಜನ ಲಭಿಸಲಿದೆ. ರೈಲು ವಿಳಂಬದ ಬಗ್ಗೆ ಮಾಹಿತಿಯನ್ನು ಇದೀಗ ಪ್ರತಿ ಸೆಂಕೆಡುಗಳಿಗೂ ಪಡೆಯಬಹುದು. ಆದರೆ ಯಾರಾದರೂ ಈ ಮಾಹಿತಿಯನ್ನು ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳುತ್ತಾರೆಯೇ? ಟಿಕೆಟ್ ಕೌಂಟರ್ಗಳಲ್ಲಿ ಉದ್ದುದ್ದ ಸರತಿ ಸಾಲುಗಳು ನಾಚಿಕೆಗೇಡು. ಬಹುಕೌಂಟರ್ಗಳಿಗೆ ಒಂದೇ ಸಾಲು ಹಾಗೂ ಸರದಿ ಉಲ್ಲಂಘನೆಯನ್ನು ತಡೆಯಲು ಬೇಲಿ ನಿರ್ಮಿಸಿದರೆ ಸಮಸ್ಯೆ ಬಗೆಹರಿಯಬಹುದು. ಹಲವು ವಿಮಾನ ನಿಲ್ದಾಣಗಳಲ್ಲಿ ಇಂಥ ವ್ಯವಸ್ಥೆ ಯಶಸ್ವಿಯಾಗಿದೆ. ರೈಲು ನಿಲ್ದಾಣಗಳಿಗೆ ಇದು ಏಕೆ ಆಗಬಾರದು?
ರೈಲುಗಳ ಕಾರ್ಯಾಚರಣೆ ಫಲಕಗಳ ಬಗ್ಗೆ ಹೇಗೆ? ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕೂಡಾ ಇಲೆಕ್ಟ್ರಾನಿಕ್ ಫಲಕ ಸಮರ್ಪಕವಾಗಿ ಕೆಲಸ ಮಾಡುವುದು ಅಪರೂಪ ಎಂದು ನಿಸ್ಸಂದೇಹವಾಗಿ ಹೇಳಬಹುದು. ಹಲವು ಬಾರಿ ಇದು ತಪ್ಪು ಹಾಗೂ ಅಸಮರ್ಪಕ ಮಾಹಿತಿಯನ್ನು ನೀಡುತ್ತದೆ. ಈಗಾಗಲೇ ನಿರ್ಗಮಿಸಿದ ರೈಲುಗಳ ಹೆಸರು ಕೂಡಾ ಮತ್ತೆ ಫಲಕದಲ್ಲಿ ಓಡುತ್ತಲೇ ಇರುತ್ತವೆ. ಕೆಲವೊಮ್ಮೆ ಕ್ರಿಸ್ಮಸ್ ಟ್ರೀ ಮಾದರಿಯಲ್ಲಿ ಬೇಕೆನಿಸಿದಾಗ ಕಾರ್ಯನಿರ್ವಹಿಸಿ, ಉಳಿದಂತೆ ನಿಶ್ಚಲವಾಗಿರುತ್ತವೆ. ಹೊಸದಿಲ್ಲಿ ಅಥವಾ ಇತರ ನಿಲ್ದಾಣಗಳಲ್ಲಿ ಸಮರ್ಪಕವಾಗಿ ರೈಲು ಕಾರ್ಯಾಚರಣೆ ಮಾಹಿತಿ ಸಿಗುವುದು ತೂಕಡಿಸುವ ಹಳೆಕಾಲದಂತೆ, ರೈಲು ಸಿಬ್ಬಂದಿ ಸುಣ್ಣದ ಕಡ್ಡಿಯಲ್ಲಿ ಬರೆಯುವ ಮಾಹಿತಿಯಿಂದಲೇ. ಅದನ್ನು ಓದಬೇಕಾದರೆ ಗುಂಪಿನಲ್ಲಿ ಕುತೂಹಲದಿಂದ ಫಲಕದ ತೀರಾ ಸನಿಹಕ್ಕೆ ಹೋಗಬೇಕಾಗುತ್ತದೆ.
ಆಹಾರ ವ್ಯವಸ್ಥೆ ಭಾರತೀಯ ರೈಲ್ವೆಯ ಇನ್ನೊಂದು ವಿಷಾದಗೀತೆ. ಹಿಂದಿನ ಕಾಲದಲ್ಲಿ ನಿಮಗೆ ಯಾವ ನಿಲ್ದಾಣದಲ್ಲಾದರೂ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಪೂರಿ- ಸಾಗು ಕೆಲವೇ ರೂಪಾಯಿಗಳಿಗೆ ಸಿಗುತ್ತಿತ್ತು. ಇದರ ಜತೆಗೆ ಆಯಾ ಋತುಮಾನಕ್ಕೆ ತಕ್ಕಂತೆ ಸೌತೆಕಾಯಿ, ಮಾವಿನಹಣ್ಣು, ಜಂಬು ಹೀಗೆ ಹಲವು ಹಣ್ಣುಗಳು ಸಿಗುತ್ತಿದ್ದವು. ಸ್ಥಳೀಯ ಪುಟ್ಟ ವ್ಯಾಪಾರಿಗಳು ಆಯಾ ಪ್ರದೇಶದ ಸ್ಥಳೀಯ ವೈಶಿಷ್ಟ್ಯಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದರು. ಆದರೆ ಇದೀಗ ಆಹಾರ ಗುತ್ತಿಗೆದಾರರು ಇಂಥ ಬರಿಗಾಲ ವ್ಯಾಪಾರಿಗಳನ್ನು ದೂರ ತಳ್ಳಿದ್ದಾರೆ. ಇದೀಗ ಇಂಥ ಗುತ್ತಿಗೆದಾರರು ಮಾರಾಟ ಮಾಡುವುದು ಬಿಸ್ಕೆಟ್ನಿಂದ ಹಿಡಿದು ಬಾಟಲಿ ನೀರಿನವರೆಗೆ ಬ್ರಾಂಡೆಡ್ ವಸ್ತುಗಳು.
ಪಠ್ಯದ ಮಾದರಿಯಲ್ಲಿ ಅವರು ಮಾರುಕಟ್ಟೆಯನ್ನು ವಿಭಜಿಸಿ, ಶ್ರೀಮಂತರಿಗೆ ಮಾತ್ರ ಸೇವೆ ನೀಡುವ ಮೂಲಕ ಹಣ ಕೊಳ್ಳೆ ಹೊಡೆಯುತ್ತಾರೆ. ಕೇವಲ ಪೂರಿ-ಬಾಜಿ ಮಳಿಗೆಗಳಿಂದ ಮರೆಯಾಗಿರುವುದಷ್ಟೇ ಅಲ್ಲದೆ, ಅಗ್ಗದ ಗ್ಲೂಕೋಸ್ ಬಿಸ್ಕೆಟ್ ಕೂಡಾ ಈ ಸಾಲಿಗೆ ಸೇರುತ್ತದೆ. ಏಕೆಂದರೆ ವಿವಿಧ ಬ್ರಾಂಡ್ಗಳ ಕ್ರೀಂ ಬಿಸ್ಕೆಟ್ಗಳು ಅವರಿಗೆ ಹೆಚ್ಚು ಲಾಭ ತಂದುಕೊಡುತ್ತವೆ. ಬಹುತೇಕ ನಿಲ್ದಾಣಗಳಲ್ಲಿ ಜನಸಾಮಾನ್ಯರು ತಿನ್ನಬಹುದಾದ ಅಥವಾ ಅವರ ಕೈಗೆಟುಕುವ ಯಾವ ಆಹಾರವಸ್ತುಗಳೂ ಇರುವುದಿಲ್ಲ.
( ಜೀನ್ ಡ್ರೀಝ್ ಅವರು ರಾಂಚಿ ವಿವಿಯ ಅರ್ಥಶಾಸ್ತ್ರ ವಿಭಾಗದ ಸಂದರ್ಶನ ಪ್ರಾಧ್ಯಾಪಕ)
ಉತ್ತಮ ಭವಿಷ್ಯ
ಇಷ್ಟಾಗಿಯೂ ಕೇವಲ ಇದಿಷ್ಟನ್ನೇ ಹೇಳುವುದು ಸರಿ ಎನಿಸದು. ಮೇಲೆ ಹೇಳಿದ ಎಲ್ಲ ಅಂಶಗಳ ನಡುವೆಯೂ ಭಾರತೀಯ ರೈಲ್ವೆ ಮೇಲೆ ನನಗೆ ಅಪಾರ ಪ್ರೀತಿ ಇದೆ. ಉನ್ನತ ನಿರೀಕ್ಷೆಗಳಿವೆ. ವಿಶ್ವದ ಯಾವುದೇ ದೇಶಗಳನ್ನು ತೆಗೆದುಕೊಂಡರೂ, ದೀರ್ಘ ರೈಲು ಪ್ರಯಾಣ ಭಾರತದ ಸೇವೆಯ ಮಟ್ಟಕ್ಕೆ ಬರುತ್ತದೆ ಎಂದು ನನಗೆ ಅನಿಸುವುದಿಲ್ಲ. ಅಪೂರ್ವ ದೃಶ್ಯಾವಳಿ, ಬೀಸುವ ಹಿತವಾದ ಗಾಳಿ, ಪ್ರಾಂಜಲ ಚರ್ಚೆಗಳು, ಸುದೀರ್ಘ ಅವಧಿಯ ಶಾಂತ ಓದುವಿಕೆಗೆ ಭಂಗ ಅಲೆಮಾರಿ ಗಾಯಕರು ತರುವ ಹವ್ಯಾಸಿ ಮೋಜು, ನಿಗೂಢ ಸಾಧುಗಳು ಅಥವಾ ಸಹಪ್ರಯಾಣಿಕರು...
ಆದರೆ ಸಾರ್ವಜನಿಕ ಸೇವೆಯ ಈ ಉದ್ದಿಮೆ ಇನ್ನೂ ಉತ್ತಮವಾಗಿ ಬೆಳೆಯಬೇಕು ಎನ್ನುವುದು ನನ್ನ ನಿರೀಕ್ಷೆ. ಬುಲೆಟ್ ರೈಲು ಸಿಂಡ್ರೋಮ್ ಬಹುಶಃ ಉಳ್ಳವರ ಆರಾಮದಾಯಕ, ಐಷಾರಾಮಿ ಪ್ರಯಾಣಕ್ಕೆ ಪೂರಕವಾಗಬಹುದು. ಆದರೆ ಇದರಿಂದ ಪ್ರಯೋಜನ ಪಡೆಯುವವರ ಸಂಖ್ಯೆ ಬಹಳಷ್ಟು ಕಡಿಮೆ. ಇದಕ್ಕಾಗಿ ಬಹುಸಂಖ್ಯಾತ ಸಾಮಾನ್ಯ ಪ್ರಯಾಣಿಕರನ್ನು ಕಡೆಗಣಿಸುವುದು ಸರಿಯಲ್ಲ. ಬಹುಶಃ ಇದು ಇತರ ಕ್ಷೇತ್ರಗಳ ಸರಕಾರಿ ನೀತಿಗಳಿಗೂ ಅನ್ವಯಿಸುತ್ತದೆ.