ದೇಶದ್ರೋಹದ ಆರೋಪ ಹೊತ್ತವರಿವರು
ಜೆಎನ್ಯು ವಿದ್ಯಾರ್ಥಿಗಳಾದ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆಂದು ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಲಾಗಿದೆ. ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಕನ್ಹಯ್ಯಾ ಕುಮಾರ್ ತನ್ನ ಮೇಲಿನ ಆಪಾದನೆಯನ್ನು ಅಲ್ಲಗಳೆದಿದ್ದು ತನ್ನನ್ನು ಬಂಧಿಸಲು ಕಾರಣವಾದಿ ವೀಡಿಯೊವೊಂದನ್ನು ತಿದ್ದಲಾಗಿದೆಯೆಂದು ಆರೋಪಿಸಿದ್ದಾರೆ.
ಖಾಲಿದ್ ಹಾಗೂ ಭಟ್ಟಾಚಾರ್ಯ ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದು ಗುರುವಾರ ಅವರ ಕಸ್ಟಡಿ ಅವಧಿಯನ್ನು ಮತ್ತೆ ಒಂದು ದಿನ ವಿಸ್ತರಿಸಲಾಗಿದೆ. ಇನ್ನೊಂದು ಬೆಳವಣಿಗೆಯಲ್ಲಿ ಬುಧವಾರದಂದು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಇವರಿಗೆ ಹತ್ತಿರದವರೆಂದು ಹೇಳಲಾದ ಪ್ರೊಫೆೆಸರ್ ವೀರೇಂದರ್ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ವಿರೇಂದರ್ ಅವರು ಖಾಪ್ ನಾಯಕರೊಬ್ಬರಿಗೆ ಸಿರ್ಸಾದಲ್ಲಿ ಹಿಂಸಾತ್ಮಕ ಜಾಟ್ ಚಳುವಳಿ ನಡೆಸುವಂತೆ ಹೇಳಿದ ಆಡಿಯೋ ಕ್ಲಿಪ್ ಒಂದರ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ, ಆದರೆ ವೀರೇಂದರ್ ಈ ಆರೋಪ ನಿರಾಕರಿಸಿದ್ದಾರೆ.
ಹಿಂದೆ ಕೂಡ ಹಲವರು ದೇಶದ್ರೋಹದ ಆರೋಪಕ್ಕೊಳಗಾಗಿ ಪ್ರಕರಣಗಳನ್ನು ಎದುರಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.
ಕೋವನ್
ಕೋವನ್ ಎಂಬ ಹೆಸರಿನ ಒಬ್ಬ ಗಾಯಕನನ್ನು ಅಕ್ಟೋಬರ್ 2015ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾರಿಗೆ ‘ಅಪಚಾರ’ ಮಾಡುವಂತಹ ವಿಚಾರಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ ಆರೋಪದ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾ ಗಿತ್ತು. ಆತನಿಗೆ ನಂತರ ಜಾಮೀನು ದೊರಕಿತ್ತು.
ಬಿನಾಯಕ್ ಸೇನ್
ಛತ್ತೀಸಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಾರ್ವಜನಿಕ ಆರೋಗ್ಯ ತಜ್ಞ ಮಾವೋವಾದಿ ಗಳನ್ನು ಬೆಂಬಲಿಸಿದ್ದಾರೆಂದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ರಾಯಪುರದ ಸೆಷನ್ಸ್ ಕೋರ್ಟ್ ಅವರನ್ನು ಈ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟ್ ಅವರಿಗೆ 2011ರಲ್ಲಿ ಜಾಮೀನು ನೀಡಿತ್ತು.
ಹಾರ್ದಿಕ್ ಪಟೇಲ್
ತಮ್ಮ ಸಮುದಾಯದ ಮಂದಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆ ಮುಂದಿರಿಸಿದ ಪಟೇಲ್ ವಿರುದ್ಧ ಕಳೆದ ವರ್ಷ ಪಟೇಲ್ ಯುವಕ ವಿಪುಲ್ ದೇಸಾಯಿಗೆ ಆತ್ಮಹತ್ಯೆ ಮಾಡಿಕೊ ಳ್ಳುವ ಬದಲು ಪೊಲೀಸರನ್ನು ಕೊಲ್ಲಲು ಹೇಳಿದ್ದಾ ರೆಂಬ ಆರೋಪದ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಪಟೇಲ್ ಈಗ ಬಂಧನದಲ್ಲಿದ್ದಾನೆ.
ಅರುಂಧತಿ ರಾಯ್
ಲೇಖಕಿ ಹಾಗೂ ರಾಜಕೀಯ ಕಾರ್ಯಕರ್ತೆಯಾಗಿರುವ ಅರುಂಧತಿ 2010ರಲ್ಲಿ ಹುರ್ರಿಯತ್ ನಾಯಕ ಸಯ್ಯದ್ ಆಲಿ ಶಾಹ್ ಗೀಲಾನಿ ಜತೆ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಹೇಳಿದ್ದಕ್ಕೆ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು.
ಅಕ್ಬರುದ್ದೀನ್ ಉವೈಸಿ
ಮಜ್ಲಿಸ್-ಇ- ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಶಾಸಕನಾಗಿರುವ ಈತ ಆಂಧ್ರ ಪ್ರದೇಶದಲ್ಲಿ 2013ರಲ್ಲಿ ನೀಡಿದ ಭಾಷಣ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವಂತಿತ್ತು ಎಂದು ಆರೋಪಿಸಿ ಈತನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು.
ಸಿಮ್ರಾಂಜಿತ್ ಸಿಂಗ್ ಮನ್ನ್
ಶಿರೋಮಣಿ ಅಕಾಲಿ ದಳ-ಅಮೃತ್ಸರ ಇದರ ಅಧ್ಯಕ್ಷರಾಗಿರುವ ಇವರ ಮೇಲೆ ಸ್ವರ್ಣದೇಗುಲದಲ್ಲಿ 2005ರಲ್ಲಿ ಖಲಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಕ್ಕಾಗಿ ನಾಲ್ಕು ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಅಸ್ಸೆಂ ತ್ರಿವೇದಿ
ಕಾನ್ಪುರ ಮೂಲದ ಕಾರ್ಟೂನ್ ಕಲಾವಿದರಾಗಿರುವ ಇವರ ವಿರುದ್ಧ 2011ರಲ್ಲಿ ಅಣ್ಣಾ ಹಜಾರೆ ಮುಂಬೈಯಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ರ್ಯಾಲಿ ಸಂದರ್ಭ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.
ಪ್ರವೀಣ್ ತೊಗಾಡಿಯಾ
ವಿಶ್ವ ಹಿಂದೂ ಪರಿಷತ್ ನಾಯಕರಾಗಿರುವ ಇವರು ನಿಷೇಧದ ಹೊರತಾಗಿಯೂ ತ್ರಿಶೂಲ ವಿತರಿಸಿದ್ದಕ್ಕೆ ರಾಜಸ್ಥಾನ ಸರಕಾರ 2003ರಲ್ಲಿ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸಿತ್ತು.