ಅದ್ದೂರಿ ವಿವಾಹ ಮಹೋತ್ಸವದ ಜೊತೆಗೆ ವೈಭವಯುತ ಜೀವನವೂ ಬೇಡ
ಮಾನ್ಯರೆ,
ಒಂದು ಸಣ್ಣ ಬಂಗಾರದ ತಾಳಿಗೆ ಹಣವಿಲ್ಲದೆ ಪರದಾಡುವ ಲಕ್ಷಾಂತರ ಕುಟುಂಬಗಳಿವೆ. ಕಲ್ಯಾಣ ಮಂಟಪಗಳಿಗೆ ದುಬಾರಿ ಬಾಡಿಗೆಯನ್ನು ಕಟ್ಟಲಾಗದೆ ಸಾಲವನ್ನು ಮಾಡಿ ಅದನ್ನು ತೀರಿಸುವ ಸಲುವಾಗಿ ಸದಾ ಕಾಲ ಒತ್ತಡಕ್ಕೆ ಸಿಲುಕುವ ಕುಟುಂಬಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಇದರ ನಡುವೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ಮಂದಿ ಕೋಟ್ಯಂತರ ರೂಪಾಯಿಗಳನ್ನು ಹಣವನ್ನು ಖರ್ಚು ಮಾಡಿ ದುಬಾರಿ ಮದುವೆಗಳನ್ನು ಮಾಡಿ ಲಕ್ಷಾಂತರ ರೂಪಾಯಿ ವೌಲ್ಯದ ಆಹಾರ ಪದಾರ್ಥಗಳನ್ನು ತಿನ್ನುವವರು ಇಲ್ಲದೆ ಬೀದಿಗೆ ಹಾಕುವಂತಹ ತೋರಿಕೆಗಳಿಗೇನು ಕಡಿಮೆಯಿಲ್ಲ. ಇನ್ನು ಇಂತಹ ಶ್ರೀಮಂತರು ಮಾಡುವ ಮದುವೆ ಕಾರ್ಯಕ್ರಮಗಳನ್ನು ನಮ್ಮ ಅನೇಕ ದೃಶ್ಯ ಮಾಧ್ಯಮಗಳ ವರದಿಗಾರರು ಹಲವಾರು ಗಂಟೆಗಳ ಕಾಲ ಬಿತ್ತರಿಸುತ್ತ ಮದುವೆಗೆ ಯಾವ ಯಾವ ಶಾಸ್ತ್ರವನ್ನು ಮಾಡಿದ್ದಾರೆ, ಯಾವ ಯಾವ ಗಣ್ಯರು ಬಂದಿದ್ದಾರೆ, ಎಷ್ಟು ರೀತಿಯ ಪದಾರ್ಥಗಳನ್ನು ಅತಿಥಿಗಳಿಗೆ ತಯಾರಿಸಿದ್ದಾರೆ ಮುಂತಾದ ವರದಿಗಳನ್ನು ಅತೀ ಮಹತ್ವದ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಬಿತ್ತರಿಸುತ್ತಿವೆ. ನಿಜಕ್ಕೂ ಇಂತಹ ದುಬಾರಿ ಮದುವೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಹಿರಿಯ ಶಾಸಕ ರಮೇಶ್ ಕುಮಾರ್ ಮಂಡಿಸಿರುವ ಖಾಸಗಿ ವಿಧೇಯಕವನ್ನು ಎಲ್ಲರೂ ಬೆಂಬಲಿಸಬೇಕು. ದುಬಾರಿ ಮದುವೆಗಳಿಗೆ ರಾಜ್ಯದ ಯಾವುದೇ ಮಂತ್ರಿಗಳಿರಲಿ, ಮುಖ್ಯಮಂತ್ರಿಗಳಿರಲಿ ಹಾಜರಾಗಬಾರದು ಎನ್ನುವ ನಿಯಮವನ್ನು ರೂಪಿಸಬೇಕು. ಅತೀ ಗಣ್ಯ ವ್ಯಕ್ತಿಗಳು ಬರುತ್ತಾರೆನ್ನುವ ಕಾರಣಕ್ಕಾಗಿಯೇ ದುಬಾರಿ ಮದುವೆಗಳನ್ನು ಮಾಡುತ್ತಾರೆ. ಕೇವಲ ಕಾನೂನುಗಳನ್ನು ತಂದರೆ ಸಾಲದು ನಮ್ಮನ್ನಾಳುವ ಪ್ರತಿನಿಧಿಗಳು ಮೊದಲು ತಮ್ಮ ತಮ್ಮ ಕುಟುಂಬಗಳಿಗೆ ಇಂತಹ ಕಾನೂನನ್ನು ಅನ್ವಯಗೊಳಿಸಬೇಕು. ದುಬಾರಿ ಮದುವೆಗಳಿಗೆ ಹೋಗುವಂತಹ ಪದ್ಧತಿಯನ್ನು ಕೈಬಿಡಬೇಕು. ಇದರ ಜೊತೆಗೆ ಅಗತ್ಯಕ್ಕಿಂತ ಹೆಚ್ಚಿನ ಐಷಾರಾಮಿ ಜೀವನವನ್ನು ನಡೆಸುವ ಪದ್ಧತಿಗೂ ಕಡಿವಾಣ ಹಾಕಬೇಕು. ಒಂದೇ ಕುಟುಂಬಕ್ಕೆ ಹಲವಾರು ಕಾರುಗಳು, ಎಕರೆಗಳ ವಿಸ್ತೀರ್ಣದಲ್ಲಿ ಮನೆಗಳು, ಕೋಲಾರ ಚಿನ್ನದ ಗಣಿಯ ಪ್ರತಿರೂಪದಂತೆ ಒಡವೆಗಳನ್ನು ಮೈತುಂಬಾ ಧರಿಸುವುದು ಇವುಗಳಿಗೂ ಕಾನೂನು ತರಲು ಸಾಧ್ಯವಾಗದಿದ್ದರೂ ನಮ್ಮನ್ನಾಳುವ ಪ್ರತಿನಿಧಿಗಳು, ಅಧಿಕಾರಿಶಾಹಿ ವರ್ಗದವರು, ಸಮಾಜದ ಬಗ್ಗೆ ಕಾಳಜಿವುಳ್ಳವರು, ತಮಗೇ ತಾವು ಕಟ್ಟುಪಾಡುಗಳನ್ನು ಹಾಕಿಕೊಂಡು ಜೀವನವನ್ನು ನಡೆಸಿದರೆ ಎಲ್ಲವೂ ಸರಿ ಹೋಗುತ್ತದೆ. ಈ ಸಂದರ್ಭದಲ್ಲಿ ನಿಸಾರ್ ಅಹ್ಮದ್ರವರ ಕವನ ನೆನಪಾಗುತ್ತದೆ. ಒಂದು ಕಡೆಯಲ್ಲಿ ಅದ್ದೂರಿಯ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಶವ ಸಂಸ್ಕಾರಗಳಿಗೆ ಹಣವಿಲ್ಲದೆ ಕಷ್ಟದಲ್ಲಿರುವಂತಹ ಪರಿಸ್ಥಿತಿ ಏಕಕಾಲದಲ್ಲಿಯೇ ನಮ್ಮ ಸಮಾಜದಲ್ಲಿ ಕಾಣಬಹುದು ಎನ್ನುವ ಅವರ ಕವನದ ಸಾಲುಗಳು ಉಲ್ಲೇಖಿಸಬಹುದು.