ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಬೇಡಿ: ತಾರಾ
ಬೆಂಗಳೂರು, ಮಾ. 13: ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೆ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯ ಆಚಾರ-ವಿಚಾರಗಳ ವ್ಯಾಮೋಹಕ್ಕೆ ಒಳಗಾಗದೆ, ನಮ್ಮ ಸಂಸ್ಕೃತಿ ಪರಂಪರೆ ರಕ್ಷಣೆಗೆ ಮುಂದಾಗಬೇಕೆಂದು ವಿಧಾನಪರಿಷತ್ ಸದಸ್ಯೆ ತಾರಾಅನುರಾಧಾ ಕರೆ ನೀಡಿದ್ದಾರೆ.
ರವಿವಾರ ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ಶ್ರೀಭುವನೇಶ್ವರಿ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರ ಚಿಂತನೆ, ಆಲೋಚನೆಗಳಿಗೆ ಸ್ಪಂದಿಸಿ ಪುರುಷರು ಸಹಕಾರ ನೀಡಲು ಮುಂದಾದರೆ ಮಹಿಳೆಯರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತಿದೆ. ನಮ್ಮಲ್ಲಿನ ಅಸೂಯೆಯನ್ನು ದೂರ ಮಾಡಿಕೊಂಡು ಎಲ್ಲರೂ ಸಂಘಟಿತರಾಗುವ ಮೂಲಕ ತಮ್ಮ ನಡುವೆ ಪ್ರೀತಿ ವಿಶ್ವಾಸ ಬಾಂಧವ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಬೇಕೆಂದು ತಾರಾ ಅನುರಾಧ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಜೆ.ಎಚ್.ರಾಮಚಂದ್ರ, ಎಂ.ಮಂಜು,ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷೆ ಹನುಮಕ್ಕ ರಾಮಚಂದ್ರ ಸೇರಿ ಪ್ರಮುಖರು ಹಾಜರಿದ್ದರು.