ಆರ್ಟ್ ಆಫ್ ಲಿವಿಂಗ್ನ ಹಬ್ಬದ ಕರ್ತವ್ಯದಿಂದ ಭಾರತೀಯ ಸೇನೆ ಸಂತುಷ್ಟವಾಗಿಲ್ಲ
ಸೇವಾನಿರತ ಮತ್ತು ನಿವೃತ್ತಿಯಾದ ಸೇನಾ ಅಧಿಕಾರಿಗಳು ಮತ್ತು ಇತರ ಕಾಳಜಿ ಹೊಂದಿದ ನಾಗರಿಕರು ಸೇನೆಯ ಇಂಜಿನಿಯರ್ಗಳನ್ನು ಮತ್ತು ಯುದ್ಧಸಾಧನಗಳನ್ನು ಮಾರ್ಚ್ 11ರಿಂದ 13ರವರೆಗೆ ಯಮುನಾ ನದಿಯ ದಿಲ್ಲಿಯ ಪ್ರಸ್ಥಭೂಮಿಯಲ್ಲಿ ನಡೆದ ಮೂರು ದಿನಗಳ ವಿಶ್ವ ಸಂಸ್ಕೃತಿ ಹಬ್ಬದ ಪ್ರಯುಕ್ತ ನದಿಯ ಮೇಲೆ ಎರಡು ದೋಣಿಯಾಧಾರಿತ ಸೇತುವೆಗಳನ್ನು ನಿರ್ಮಿಸಲು ಬಳಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ಹಸಿರು ಪೀಠ ಪ್ರತ್ಯೇಕವಾಗಿ, ನೂರು ಸಾವಿರ ಜನರು ಭೇಟಿ ನೀಡುವ ಹಾಗೂ ಬೃಹತ್ ಕಟ್ಟಡಗಳ ನಿರ್ಮಾಣದಿಂದ ಯಮುನಾದ ಸೂಕ್ಷ್ಮಭೂಮಿ ಮತ್ತು ಅದರಲ್ಲಿ ವಾಸವಾಗಿರುವ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲಗಳ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಕಾಳಜಿ ವ್ಯಕ್ತಪಡಿಸಿತ್ತು. ವಿಶ್ವ ಸಂಸ್ಕೃತಿ ಉತ್ಸವವನ್ನು ಶ್ರೀಶ್ರೀ ರವಿಶಂಕರ್ ಅವರ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಆಯೋಜಿಸುತ್ತಿದೆ, ಇದು ಒತ್ತಡ ರಹಿತ, ಹಿಂಸೆ ರಹಿತ ವಿಶ್ವದ ಬಗ್ಗೆ ಬೋಧಿಸುತ್ತದೆ ಎಂದು ಹೇಳಿಕೊಳ್ಳುತ್ತದೆ. ಇದರ ಸಂಸ್ಥಾಪಕ, ಗೌರವದಿಂದ ಶ್ರೀಶ್ರೀ ಎಂದು ಕರೆಯಲ್ಪಡುವವರು ಭಾರತೀಯ ಜನತಾಪಕ್ಷಕ್ಕೆ ಹತ್ತಿರವಾಗಿದ್ದು ಈ ವರ್ಷ ಪದ್ಮವಿಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದರು. ವಿಶ್ವ ಸಂಸ್ಕೃತಿ ಉತ್ಸವ ವೆಬ್ಸೈಟ್ನಲ್ಲಿ ಮುಖ್ಯವಾಗಿ ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರ ಜೊತೆಗಿರುವ ಭಾವಚಿತ್ರವನ್ನು ಹಾಕಲಾಗಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಆಜ್ ತಕ್ ವಾಹಿನಿಯಲ್ಲಿ ಹಬ್ಬಕ್ಕೆ ಇರುವ ಭದ್ರತಾ ಬೆದರಿಕೆಯ ದೃಷ್ಟಿಯಿಂದ ಸೇನಾ ಜವಾನರನ್ನು ಮತ್ತು ಯುದ್ಧ ಸಾಧನಗಳನ್ನು ಸೇತುವೆ ನಿರ್ಮಿಸಲು ಬಳಸುವಂತೆ ನಾನೇ ಆದೇಶ ನೀಡಿದ್ದೆ ಎಂದು ಒಪ್ಪಿಕೊಂಡಿದ್ದರು. ವಿಶ್ವ ಸಂಸ್ಕೃತಿ ಉತ್ಸವಕ್ಕೆ ದೋಣಿಯಾಧಾರಿತ ಸೇತುವೆಗಳನ್ನು ನಿರ್ಮಿಸುವ ಮೂಲಕ ಭದ್ರತಾ ಬೆದರಿಕೆಗಳನ್ನು ಹೇಗೆ ನಿಭಾಯಿಸಬಹುದು ಎಂದು ಆಜ್ತಕ್ ಮರು ಪ್ರಶ್ನಿಸಲಿಲ್ಲ. ಭದ್ರತಾ ಅಥವಾ ಉಗ್ರರ ಬೆದರಿಕೆಯನ್ನು ನಿಭಾಯಿಸುವ ಯಾವುದೇ ಕಾರ್ಯವನ್ನು ಸೇನೆಗೆ ಒಪ್ಪಿಸಿಯೂ ಇರಲಿಲ್ಲ. ಕುಂಭ ಮೇಳದ ಸಮಯದಲ್ಲಿ ಸೇನಾ ಇಂಜಿನಿಯರ್ಗಳು ನದಿಯ ಮೇಲೆ ಸೇತುವೆಗಳನ್ನು ನಿರ್ಮಿಸಿ ಅಲ್ಲಿಗೆ ಭೇಟಿ ನೀಡುವ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ನೆರವಾದರು ಎಂಬುದನ್ನು ಪರಿಕ್ಕರ್ ನೆನಪು ಮಾಡಿಕೊಂಡರು. ಇಂತಹ ದೋಣಿಯಾಧಾರಿತ ಸೇತುವೆಗಳು ಕಾಲ್ತುಳಿತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿಸಿದ ಅವರು, ಅದನ್ನು ಕೇವಲ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಿದ್ದರು. ಸೇನೆಯ ಹಿರಿಯ ಅಧಿಕಾರಿಗಳು ಬ್ಯುಸಿನೆಸ್ ಸ್ಟಾಂಡರ್ಡ್ಗೆ ತಿಳಿಸಿರುವಂತೆ, ಸೇನಾ ಜವಾನರನ್ನು ಮತ್ತು ಉಪಕರಣಗಳನ್ನು ಒಂದು ಖಾಸಗಿ, ಆರ್ಥಿಕ ಸಂಘಟನೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಬಳಸುವುದು ಅವರಿಗೆ ಅಷ್ಟೊಂದು ಇಷ್ಟವಾಗಿರಲಿಲ್ಲ, ಆದರೆ ಅವರಿಗೆ ಬೇರೆ ಆಯ್ಕೆ ಕೂಡಾ ಇರಲಿಲ್ಲ. ನಮ್ಮಲ್ಲಿ ಕೇಳಲೂ ಇಲ್ಲ, ಚರ್ಚಿಸಲಿಲ್ಲ. ರಕ್ಷಣಾ ಮಂತ್ರಿ ಸೇತುವೆ ನಿರ್ಮಿಸುವಂತೆ ನಮಗೆ ಸೂಚಿಸಿದರು ಎಂದು ಸೇನೆ ಮುಖ್ಯಕಚೇರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಸೇನೆಯನ್ನು ಇಂತಹ ಕರ್ತವ್ಯಗಳಿಗೆ ನಿಯೋಜಿಸುವ ಬಗೆಗಿನ ನಿಯಮಗಳನ್ನು ಸೇನೆಯ ನಿಬಂಧನೆಗಳು ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ. ಅದರ 100ನೆ ಪುಟದ 301ನೆ ಪ್ಯಾರಾಗ್ರಾಫ್ನಲ್ಲಿ ‘ನಾಗರಿಕ ಸಂಸ್ಥೆಗಳ ಕರ್ತವ್ಯದಲ್ಲಿ ಸೇನೆಯ ಬಳಕೆ’ ಯ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ: ಈ ಕೆಳಗೆ ಹೇಳಲಾಗಿರುವ ಯಾವುದೇ ಕರ್ತವ್ಯಗಳಲ್ಲಿ ನಾಗರಿಕ ಸಂಸ್ಥೆಗಳಿಗೆ ನೆರವಾಗಲು ಸೇನೆಯನ್ನು ಬಳಸಬಹುದು: ಕಾನೂನು ಸುವ್ಯವಸ್ಥೆ ಕಾಪಾಡಲು, ಅಗತ್ಯ ಸೇವೆಗಳ ಸುವ್ಯವಸ್ಥೆಗೆ, ಭೂಕಂಪ ಮತ್ತು ನೆರೆಯಂತಹ ನೈಸರ್ಗಿಕ ಅವಘಡಗಳ ಸಂದರ್ಭದಲ್ಲಿ ನೆರವಾಗಲು ಮತ್ತು ನಾಗರಿಕ ಸಂಸ್ಥೆಗೆ ಅಗತ್ಯವಾಗಿರುವ ಯಾವುದೇ ಇತರ ಕಾರ್ಯಗಳಲ್ಲಿ ನೆರವಾಗಲು. ನಾಗರಿಕ ಸಂಸ್ಥೆಗಳು ಸೇನೆಯ ನೆರವನ್ನು ಬಯಸಿದ ಸಂದರ್ಭದಲ್ಲಿ ಸೇನೆಯ ಕಮಾಂಡರ್ ಮೊದಲು ಸಂಬಂಧಪಟ್ಟ ವ್ಯವಸ್ಥೆಯ ಮೂಲಕ ಕೇಂದ್ರ ಸರಕಾರದ ಒಪ್ಪಿಗೆಯನ್ನು ಅದರ ಉದ್ಯೋಗಿಗಳಿಗೆ ಪಡೆಯುತ್ತಾರೆ. ತಾಂತ್ರಿಕವಾಗಿ ನೋಡುವುದಾದರೆ ಈ ಕಾನೂನು ರಕ್ಷಣಾ ಸಚಿವರ ಆದೇಶವನ್ನು ಬೆಂಬಲಿಸುತ್ತದೆ ಮತ್ತು ಸೇನಾ ಅಧಿಕಾರಿಗಳಿಗೆ ಇದನ್ನು ಪಾಲಿಸುವುದರ ಹೊರತು ಬೇರೆ ದಾರಿಯಿರಲಿಲ್ಲ. ಆದರೆ ರಕ್ಷಣಾ ಸಚಿವರ ಆದೇಶವು ಸೈದ್ಧಾಂತಿಕವಾಗಿ ಮತ್ತು ನೈತಿಕವಾಗಿ ಸಮಂಜಸವೇ ಎಂಬುದು ಮಾತ್ರ ಬೇರೆ ಪ್ರಶ್ನೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ ಮುಂತಾದವುಗಳಲ್ಲಿ ಸೇನೆಯ ಒಳಗೆಯೇ ನಡೆದ ಆಕ್ರೋಶಭರಿತ ಚರ್ಚೆಯಲ್ಲಿ ಬಹಳಷ್ಟು ಸೇನಾಧಿಕಾರಿಗಳು, ಸೇನಾ ಸಂಪನ್ಮೂಲಗಳನ್ನು ಸರಕಾರ ಸ್ನೇಹಿ ದೇವಮಾನವನ ನೆರವಿಗಾಗಿ ಬಳಸುವುದರ ವಿರುದ್ಧ ಸೇನಾ ಮುಖ್ಯಸ್ಥರು ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಿತ್ತು ಎಂದು ವಾದ ಮಾಡುತ್ತಾರೆ. ಸೇನಾ ಮುಖ್ಯಸ್ಥರು ಈ ವಿಷಯದಲ್ಲಿ ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದರೆ ಸರಕಾರ ಬೇರೆ ವಿಧಿಯಿಲ್ಲದೆ ತಲೆಬಾಗಲೇಬೇಕಿತ್ತು ಎಂದು ಹೇಳುತ್ತಾರೆ ಸೇವೆಯಲ್ಲಿರುವ ಅಧಿಕಾರಿಯೊಬ್ಬರು. ರಾಜಕೀಯ ಧ್ರುವೀಕರಣಗೊಂಡಿರುವ ಈ ಚರ್ಚೆಯಲ್ಲಿ, ಸೇನೆಯ ಸಂಪನ್ಮೂಲಗಳನ್ನು ಧಾರ್ಮಿಕ, ಸಾರ್ವಜನಿಕ ಕಾರ್ಯಕ್ರಮಗಳಾದ ಅಮರನಾಥ ಯಾತ್ರೆ ಮತ್ತು ಕುಂಭಮೇಳಗಳನ್ನು ಆಯೋಜಿಸಲು ಕಾನೂನಾತ್ಮಕವಾಗಿ ಬಳಸುವಾಗ ಅದನ್ನು ವಿಶ್ವ ಸಂಸ್ಕೃತಿ ಹಬ್ಬಕ್ಕೂ ಬಳಸಬಹುದು ಎಂದು ಕೆಲವರು ವಾದಿಸುತ್ತಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿರುವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯ್ಯದ್ ಅಟಾ ಹಸೈನ್, ಯಾವುದಾದರೂ ತಪ್ಪಾಗಿದ್ದರೆ ಅದನ್ನು ತಪ್ಪೆಂದೇ ಹೇಳಬೇಕು. ಈ ಕಾರ್ಯಕ್ರಮಕ್ಕೆ ಸೇನೆಯನ್ನು ಬಳಸಬಾರದಿತ್ತು ಎಂದು ನಾನು ಶೇ.100ರಷ್ಟು ಒಪ್ಪುತ್ತೇನೆ. ಶ್ರೀ ಅಮರನಾಥ ಯಾತ್ರೆಗೆ ನಾವು ಹಲವು ಸಾಧನಗಳನ್ನು ಪೂರೈಸುತ್ತೇವೆ. ಆದರೆ ಅಲ್ಲಿನ ಭದ್ರತೆಯ ಕಾರಣ ಮತ್ತು ಭೂಪ್ರದೇಶದಿಂದಾಗಿ ಅದು ಸಂಪೂರ್ಣ ಭಿನ್ನ ವಿಷಯವಾಗಿದೆ ಎಂದು ಹೇಳುತ್ತಾರೆ. ಅದಕ್ಕಿಂತಲೂ ಮಿಗಿಲಾಗಿ ಶ್ರೀಶ್ರೀ ಪ್ರತಿಷ್ಠಾನವು ಒಂದು ಆರ್ಥಿಕ ಸಂಸ್ಥೆಯಾಗಿದ್ದು ದಾನಿಗಳಿಂದ ಅದು ಬಹಿರಂಗವಾಗಿ ತಮ್ಮ ಜಾಲತಾಣಗಳಲ್ಲಿ ಹಣವನ್ನು ಸ್ವೀಕರಿಸುತ್ತದೆ. ಸರಕಾರಕ್ಕೆ ಶ್ರೀ ತಮಗೆ ದೇಣಿಗೆಯನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ತಿಳಿದಿದೆಯೇ? ಅದು ಒಂದು ಲಾಭರಹಿತ ಸಂಸ್ಥೆಯೆಂದು ಹೇಳಿಕೊಳ್ಳುತ್ತದೆ. ಆದರೆ ನಾವು ಅದರ ಲೆಕ್ಕಪತ್ರವನ್ನು ನೋಡಲು ಬಯಸುತ್ತೇವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಾಕೀತು ಮಾಡುತ್ತಾರೆ. ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜ್ ಕದ್ಯಾನ್ನಂತಹ ಕೆಲವು ಅಧಿಕಾರಿಗಳು, ಇಂತಹ ಕಾರ್ಯಕ್ರಮಗಳಿಗೆ ಫಂಟೂನ್ ಸೇತುವೆಗಳನ್ನು ನಿರ್ಮಿಸುವುದರಿಂದ ಸೇನಾ ಜವಾನರಿಗೆ ಉತ್ತಮ ತರಬೇತಿ ಸಿಕ್ಕಿದ ಹಾಗಾಗುತ್ತದೆ ಎಂಬಂತಹ ದುರ್ಬಲ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಈಗ ಸೇನೆಯು ನಿರ್ಮಾಣ ಮಾಡಿರುವ ಸೇತುವೆಯ ಪರಿಸರವು ಯಾವುದೇ ರೀತಿಯಲ್ಲೂ ಯುದ್ಧಕ್ಕೆ ತರಬೇತಿ ಪಡೆಯಬಹುದಾದ ಪರಿಸ್ಥಿತಿಗಳಲ್ಲಿ ನಿರ್ಮಾಣ ಮಾಡಲಾಗುವ ಸೇತುವೆಗಳೊಂದಿಗೆ ಯಾವುದೇ ರೀತಿಯಲ್ಲೂ ಸಾಮ್ಯತೆ ಹೊಂದಿಲ್ಲ ಎಂದು ಇನ್ನು ಕೆಲವರು ಬೆಟ್ಟು ಮಾಡುತ್ತಾರೆ. ಇಂತಹ ಕಾರ್ಯಕ್ರಮಗಳಿಗೆ ಸೇನೆಯನ್ನು ಬಳಸಬಾರದು ಎಂದು ವಾದಿಸಲು ಅತ್ಯಂತ ಪ್ರಬಲವಾದ ಕಾರಣವೆಂದರೆ, ಇಂದು ನಾವು ಶ್ರೀಶ್ರೀ ಪ್ರತಿಷ್ಠಾನವನ್ನು ಬೆಂಬಲಿಸುತ್ತೇವೆ, ನಾಳೆ ಬಾಬಾ ರಾಮ್ ದೇವ್, ನಂತರ ಜಮಾತೆ-ಇ-ಇಸ್ಲಾಮಿ, ಅದರ ಮುಂದಿನ ದಿನ ದೇರಾ ಸಾಚಾ ಸೌದಾ ಅಥವಾ ನಿರಂಕಾರಿ ಸಂಸ್ಥೆ, ಹೀಗೆ ಎಲ್ಲವೂ ಸೇನೆಯ ನೆರವನ್ನು ಕೇಳಲು ಆರಂಭಿಸುತ್ತವೆ. ಆಗ ನಾವು ಮಿತಿಯ ಗೆರೆಯನ್ನು ಎಳೆಯುವುದಾದರೂ ಎಲ್ಲಿ? ಎಂದು ಸೇವಾನಿರತ ಲೆಫ್ಟಿನೆಂಟ್ ಜನರಲ್ ಒಬ್ಬರು ಪ್ರಶ್ನಿಸುತ್ತಾರೆ.
ಕೃಪೆ: business-standard.com