ಮುಂಬೈ: ಇಬ್ಬರು ಒಳಚರಂಡಿ ಸ್ವಚ್ಛತಾ ಸಿಬ್ಬಂದಿ ಸಾವು
ಸಫಾಯಿ ಕರ್ಮಚಾರಿಗಳ ಹಕ್ಕು ಯಾತ್ರೆ
ಪ್ರತೀ ಸೆಪ್ಟಂಬರ್ನಲ್ಲಿ ನೂರಾರು ಮಂದಿ ಹತಾಶ ಪುರುಷರು ಹಾಗೂ ಮಹಿಳೆಯರು ತೆಲಂಗಾಣದ ಒಣಪ್ರದೇಶ ಮೆಹಬೂಬ್ನಗರ ಜಿಲ್ಲೆಯಿಂದ ಮುಂಬೈಗೆ ವಲಸೆ ಬರುತ್ತಾರೆ. ಎಂಟು ತಿಂಗಳ ಕಾಲ ಒಳಚರಂಡಿ ಸ್ವಚ್ಛತಾ ಕಾರ್ಮಿಕರಾಗಿ ದುಡಿದು ಮಳೆಗಾಲದಲ್ಲಿ ಮತ್ತೆ ತಮ್ಮ ಮನೆಗಳಿಗೆ ವಾಪಸಾಗುತ್ತಾರೆ. ಹೀಗೆ ವಲಸೆ ಬಂದವರಲ್ಲಿ ಇಬ್ಬರು ತಮ್ಮ ಊರಿಗೆ ಈ ಜೂನ್ನಲ್ಲಿ ಮತ್ತೆ ಮರಳುತ್ತಿಲ್ಲ.
ಮಾರ್ಚ್ 21ರಂದು ಸಂತುಲ್ಲಾ ಮೆಹಬೂಬ್ (30) ಮತ್ತು ಕರಿ ನರಸಿಂಹ (42) ಅವರು ಉತ್ತರ ಮುಂಬೈನ ಖಾಂಡಿವ್ಲಿ ಉಪನಗರದ ಒಳಚರಂಡಿ ಪೈಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆ ಸ್ವಚ್ಛತಾ ಕಾರ್ಯವನ್ನು ಗುತ್ತಿಗೆಗೆ ನೀಡಿದ್ದು, ಇಂಥ ಗುತ್ತಿಗೆದಾರರ ಬಳಿ ಇಬ್ಬರೂ ಗುತ್ತಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದವರು.
ಪ್ರತೀ ವರ್ಷ ಹೀಗೆ ಸಾಯುವ ಇತರ ನೂರಾರು ಮಂದಿ ಒಳಚರಂಡಿ ಕಾರ್ಮಿಕರಂತೆ, ಮೆಹಬೂಬ್ ಹಾಗೂ ನರಸಿಂಹ ಅವರೂ ಜೀವ ಕಳೆದುಕೊಂಡಿದ್ದಾರೆ. ಮಾಮೂಲಿನಂತೆ ಈ ಬಾರಿಯೂ ಪಾಲಿಕೆಯ ವಾರ್ಡ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಮ್ಮ ಹೊಣೆಯಿಂದ ನುಣುಚಿಕೊಂಡಿದ್ದಾರೆ. ಈ ಕಾರ್ಮಿಕರಿಗೆ ಆಮ್ಲಜನಕದ ಮಾಸ್ಕ್ಗಳು ಇರಲಿಲ್ಲ. ಕೈಗವಚ ಹಾಗೂ ಸುರಕ್ಷತಾ ಗೇರ್, ವಿಷಕಾರಿ ಅನಿಲವನ್ನು ಪತ್ತೆ ಮಾಡುವ ಯಂತ್ರವಾಗಲಿ ಹಾಗೂ ಮೇಲ್ವಿಚಾರಣೆಗೆ ಅನುಭವಿ ಅಧೀಕ್ಷಕ ಇರಲಿಲ್ಲ.
ವಿಚಿತ್ರವೆಂದರೆ, ಸಫಾಯಿ ಕರ್ಮಚಾರಿಗಳು ತಮ್ಮ ಹಕ್ಕುಗಳ ಈಡೇರಿಕೆಗೆ ಆಗ್ರಹಿಸಿ 125 ದಿನಗಳ ಭೀಮ ಯಾತ್ರೆ ಕೈಗೊಂಡಿರುವ ಸಂದರ್ಭದಲ್ಲೇ ಈ ಸಾವು ಸಂಭವಿಸಿದೆ. ಜಾಡಮಾಲಿ, ಒಳಚರಂಡಿ ಕಾರ್ಮಿಕರು ಹಾಗೂ ಇತರ ಸ್ವಚ್ಛತಾ ಕಾರ್ಮಿಕರ ವಿರುದ್ಧದ ತಾರತಮ್ಯ ಮುಂದುವರಿದಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಗಮನ ಸೆಳೆಯಲು ಈ ಯಾತ್ರೆ ಕೈಗೊಳ್ಳಲಾಗಿದೆ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಸಲುವಾಗಿ ಈ ಯಾತ್ರೆ ಅರಂಭವಾಗಿದೆ. ಅಸ್ಸಾಂನ ದಿಬ್ರೂಗಢದಲ್ಲಿ ಡಿಸೆಂಬರ್ 10ರಂದು ಆರಂಭವಾದ ಯಾತ್ರೆ ಮಾರ್ಚ್ 18ರಂದು 100 ದಿನ ಪೂರೈಸಿದೆ. ದೇಶದ ಎಲ್ಲ 30 ರಾಜ್ಯಗಳ 500 ಜಿಲ್ಲೆಗಳಲ್ಲಿ 30 ಸಾವಿರ ಕಿ.ಮೀ. ಕ್ರಮಿಸಿ, ದಿಲ್ಲಿಯಲ್ಲಿ ಎಪ್ರಿಲ್ 13ರಂದು ಯಾತ್ರೆ ಮುಕ್ತಾಯವಾಗಲಿದೆ. ಈ ಯಾತ್ರೆ ಆಯೋಜಸಿದ ಸಫಾಯಿ ಕರ್ಮಚಾರಿ ಆಂದೋಲನದ ಪ್ರಕಾರ, ಇದುವರೆಗೆ ಕಳೆದ ಎರಡು ವರ್ಷದಲ್ಲಿ ಮುಂಬೈನಲ್ಲಿ ಒಳಚರಂಡಿ ಸ್ವಚ್ಛಗೊಳಿಸುವಾಗ 1,268 ಮಂದಿ ಮೃತಪಟ್ಟಿದ್ದಾರೆ.
ಎರಡು ಸಾವು
ಮಾರ್ಚ್ 21ರಂದು ಮಧ್ಯಾಹ್ನ 2:30ರ ಸುಮಾರಿಗೆ ಕರಿನರಸಿಂಹ ಹಾಗೂ ಇತರ ನಾಲ್ವರು ಕಾರ್ಮಿಕರು, ಕಳೆದ ಕೆಲ ತಿಂಗಳ ಹಿಂದೆ ಭೂಗತ ಪೈಪ್ನ ಒಂದು ಭಾಗವನ್ನು ಸ್ವಚ್ಛಗೊಳಿಸುವ ಸಲುವಾಗಿ ಖಾಂಡಿವ್ಲಿಯಲ್ಲಿ ಮ್ಯಾನ್ಹೋಲ್ ತೆರೆದರು. ಈ ಗುತ್ತಿಗೆ ಕಾರ್ಮಿಕರ ಮೇಲ್ವಿಚಾರಣೆಗಾಗಿ ಮುಕ್ದಂ ಒಬ್ಬನನ್ನು ಗುತ್ತಿಗೆದಾರರು ನೇಮಿಸಿದ್ದಾರೆ. ಆದರೆ ಆತ ಅದರಲ್ಲಿ ಪರಿಣತ ಅಲ್ಲ. ಜತೆಗೆ ಆತನ ಸಂಬಳ ದಿನಕ್ಕೆ 150 ರಿಂದ 200 ರೂಪಾಯಿ.
ಮ್ಯಾನ್ಹೋಲ್ ತೆರೆದ ತಕ್ಷಣ ಮೊದಲು ಬೆಂಕಿಕಡ್ಡಿಯನ್ನು ಗೀರಿ ಒಳಕ್ಕೆ ಎಸೆದು, ಪೈಪ್ನಲ್ಲಿ ಯಾವುದೇ ಅನಿಲ ಇದೆಯೇ ಎಂದು ಪರೀಕ್ಷಿಸಿದೆವು ಎಂದು ನರಸಿಂಹನ ಸ್ನೇಹಿತ ಹಾಗೂ ಸಹ ಕಾರ್ಮಿಕ ಮಸಣ್ಣ ವಿವರಿಸಿದರು. ಬೆಂಕಿ ಹತ್ತಿಕೊಳ್ಳಲಿಲ್ಲ. ಆದ್ದರಿಂದ ಮತ್ತೆ ಅರ್ಧಗಂಟೆ ಕಾದು, ಬಳಿಕ ನರಸಿಂಹ ಕೆಳಕ್ಕೆ ಇಳಿದ ಎಂದು ಘಟನೆಯ ಬಗ್ಗೆ ವಿವರ ನೀಡಿದರು.
ಆತ ತಳಭಾಗವನ್ನು ತಲುಪುತ್ತಿದ್ದಂತೆ, ನರಸಿಂಹ ಬಿದ್ದ ಸದ್ದು ಕೇಳಿತು. ಬಳಿಕ ಸಂತುಲಾ ಮೆಹಬೂಬ್ ಏನು ಆಯಿತು ಎಂದು ತಿಳಿಯಲು ಕೆಳಗೆ ಇಳಿದರು. ಆತ ಕೂಡಾ ಪ್ರಜ್ಞೆ ತಪ್ಪಿ ಬಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಇಬ್ಬರನ್ನೂ ಹೊರಕ್ಕೆ ತರುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು. ಮುಕ್ದಂ, ಸಹೋದ್ಯೋಗಿಗಳಿಗೆ ಏನಾಯಿತು ಎಂದು ತಿಳಿದುಕೊಳ್ಳಲು ಕೆಲ ಹೆಜ್ಜೆ ಕೆಳಕ್ಕೆ ಇಳಿದಿದ್ದರು. ಅವರಿಗೂ ವಿಷಾನಿಲದ ಹೊಗೆ ಅನುಭವಕ್ಕೆ ಬಂತು. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಈಗ ಚೇತರಿಸಿಕೊಂಡಿದ್ದಾರೆ.
ನಾವು ಒಳಕ್ಕೆ ಎಸೆದ ಬೆಂಕಿಕಡ್ಡಿ ಹತ್ತಿಕೊಂಡು ಉರಿಯದಿದ್ದರೂ, ಒಳಗೆ ಅಷ್ಟು ಪ್ರಾಣಾಂತಿಕ ಅನಿಲ ಯಾವುದು ಇತ್ತು ಎನ್ನುವುದು ಮತ್ತು ಒಳಗೆ ಏನಾಯಿತು ಎನ್ನುವುದು ನಮಗೆ ತಿಳಿಯದು ಎಂದು ಮಸಣ್ಣ ವಿವರಿಸಿದರು.
ಕುಟುಂಬಗಳು
ನರಸಿಂಹ ಹಾಗೂ ಮೆಹಬೂಬ್ ಇಬ್ಬರಿಗೂ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಮಂಗಳವಾರ ಸಂಜೆ ಇಬ್ಬರು ವಿಧವಾ ಪತ್ನಿಯರು ಮತ್ತು ನತದೃಷ್ಟ ಹೆಣ್ಣುಮಕ್ಕಳು ಆಸ್ಪತ್ರೆ ಎದುರಿನ ಹುಲ್ಲುಹಾಸಿನಲ್ಲಿ ಯಾವ ಪರಿವೆಯೂ ಇಲ್ಲದೆ, ತೆಲಂಗಾಣದ ಹಳ್ಳಿಗಳಿಂದ ಧಾವಿಸಿದ ಸಂಬಂಧಿಕರ ಸುಪರ್ದಿಯಲ್ಲಿ ಕುಳಿತ್ತಿದ್ದರು.
ಈ ಕುಟುಂಬದವರು ತೀರಾ ಹಿಂದುಳಿದ ವರ್ಗಕ್ಕೆ ಸೇರಿದವರು. ಅಕ್ಷರಶಃ ಮೆಹಬೂಬನಗರದಲ್ಲಿ ಮನೆಯಲ್ಲಿ ಇವರಿಗೆ ಏನೂ ಇಲ್ಲ ಎಂದು ಬಹಳ ಹಿಂದೆಯೇ ನರಸಿಂಹ ಜತೆ ಬಂದಿದ್ದ ಮತ್ತೊಬ್ಬ ನೈರ್ಮಲ್ಯ ಕಾರ್ಮಿಕ ಸಾಂಬಶಿವುಡು ಹೇಳುತ್ತಾರೆ. ಹಳ್ಳಿಯಲ್ಲಿ ಅವರು ಭೂರಹಿತ ಕಾರ್ಮಿಕರು. ಇತರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮುಂಬೈನಲ್ಲಿ ಅವರು ಟರ್ಪಾಲ್ ಡೇರೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇಂಥ ಅಸಂಘಟಿತ ಸ್ವರೂಪದ ಗುತ್ತಿಗೆ ಕೆಲಸವನ್ನಾದರೂ ಪಡೆದಿದ್ದಾರೆ ಎನ್ನುವುದು ಅದೃಷ್ಟ. ಇದೀಗ ಅವರ ಕುಟುಂಬದ ಸ್ಥಿತಿ ಏನಾಗಬೇಡ? ಇದುವರೆಗೆ ನರಸಿಂಹ ಕಷ್ಟಪಟ್ಟು ದುಡಿದು ಇಬ್ಬರು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದ. ಇದೀಗ ಅವರು ಶಾಲೆ ತೊರೆಯುವುದು ಅನಿವಾರ್ಯ
ಕಚ್ರ ವಹತುಕ್ ಶ್ರಮಿಕ ಸಂಘ ಎಂಬ ನೈರ್ಮಲ್ಯ ಕಾರ್ಮಿಕ ಸಂಘದ ಅಲಮುತ್ತು ಹರಿಜನ್ ಅವರ ಪ್ರಕಾರ, ಈ ಸಾವಿನ ಬಳಿಕವೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬ ಮನೋಭಾವ ಹೊಂದಿರುವುದು ಖಂಡನೀಯ. ಇದುವರೆಗೂ ಮೃತ ಕಾರ್ಮಿಕರ ಕುಟುಂಬದವರನ್ನು ಭೇಟಿ ಮಾಡುವ ಸೌಜನ್ಯವನ್ನು ಒಬ್ಬ ವಾರ್ಡ್ ಅಧಿಕಾರಿಗೂ ತೋರಿಲ್ಲ.
ಮಂಗಳವಾರ ರಾತ್ರಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದ ನಾರಾಯಣ ಕನ್ಸ್ಟ್ರಕ್ಷನ್ಸ್ ಕಂಪೆನಿಯ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ, ಕಾರ್ಮಿಕ ಸಂಘಟನೆಗಳ ಜತೆ ರಾಜಿ ಸಂಧಾನ ನಡೆಸುತ್ತಿದ್ದರು. ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿದ್ದವು. ನಮ್ಮಿಂದಿಗೆ ಚುಟುಕಾಗಿ ಮಾತನಾಡಿದ ಅವರು, ಪ್ರತೀ ಕುಟುಂಬಕ್ಕೆ ತಲಾ 7.5 ಲಕ್ಷ ರೂ.ಅನ್ನು ನಿರಖು ಠೇವಣಿ ರೂಪದಲ್ಲಿ ನೀಡುವುದಾಗಿ ಭರವಸೆ ನೀಡಿ ವಾಪಸಾದರು ಎಂದು ಹರಿಜನ್ ವಿವರಿಸಿದರು. ಹರಿಜನ್ ಅವರ ಸಂಘಟನೆ ಗುತ್ತಿಗೆದಾರರು ಹಾಗೂ ಸ್ಥಳೀಯ ಸಂಸ್ಥೆ ವಿರುದ್ಧ ರಾಜ್ಯ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ನಾವು ಯಾವುದೇ ಆಗ್ರಹ ಮಾಡದಿದ್ದರೆ, ಅವರು ಪ್ರತೀ ಕುಟುಂಬಕ್ಕೆ ಕೇವಲ 20 ಸಾವಿರ ರೂ.ಪರಿಹಾರ ನೀಡುತ್ತಿದ್ದರು. ಈ ಹಿಂದೆ ಹೀಗಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ, ವಾರ್ಡ್ ಅಧಿಕಾರಿಗಳು ಅಥವಾ ಗುತ್ತಿಗೆದಾರರ ಪ್ರತಿನಿಧಿಗಳ ಜತೆ ಚರ್ಚಿಸಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ದಿನದ ಕೊನೆಗೆ ವಾಸ್ತವವಾಗಿ ಯಾರೂ ನಮ್ಮಂಥ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅಥವಾ ಜವಾಬ್ದಾರಿಯನ್ನೂ ತೆಗೆದುಕೊಳ್ಳುವುದಿಲ್ಲ. ನಮ್ಮನ್ನು ಎಲ್ಲರೂ ಮರೆಯುತ್ತಾರೆ ಎಂದು ಸಾಂಬಸದಾಶಿವಡು ನಿಟ್ಟುಸಿರು ಬಿಡುತ್ತಾರೆ.
ಅಸಮರ್ಪಕ ವ್ಯವಸ್ಥೆ
ಖಾಂಡಿವ್ಲಿಯ ಶತಾಬ್ದಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಶವವನ್ನೂ ಇಡಲಾಗಿತ್ತು. ಹಲವು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಈ ಸಾವು ಹೇಗೆ ಸಂಭವಿಸಿತು ಎನ್ನುವುದನ್ನು ವಿವರಿಸುವ ಪ್ರಯತ್ನ ಮಾಡಿದರು.
ಒಳಚರಂಡಿ ಪೈಪ್ಗಳನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದೇ ಇದ್ದಾಗ, ಅದರಲ್ಲಿ ಮಿಥೇನ್ ಮತ್ತು ಇತರ ಪ್ರಬಲ ವಿಷಾನಿಲಯಗಳು ತುಂಬಿಕೊಳ್ಳುತ್ತವೆ. ಇದು ಮನುಷ್ಯರನ್ನು ತಕ್ಷಣ ಸಾಯಿಸುವಷ್ಟು ಪ್ರಬಲವಾಗಿರುತ್ತವೆ. ಸಾಮಾನ್ಯವಾಗಿ ಇದೇ ಉದ್ದೇಶಕ್ಕೆ ಇರುವ ವಿಶೇಷ ಯಂತ್ರಗಳನ್ನು ಒಳಕ್ಕೆ ಇಳಿಸಿ ನೋಡಿ, ಮನುಷ್ಯರು ಕೆಳಕ್ಕೆ ಇಳಿದರೆ ಸಾಕಷ್ಟು ಆಮ್ಲಜನಕ ಸಿಗುತ್ತದೆಯೇ ಎನ್ನುವುದನ್ನು ಪರೀಕ್ಷಿಸಬೇಕು. ಆದರೆ ಇದನ್ನು ಮಾಡುವುದು ಅಪರೂಪ ಎನ್ನುತ್ತಾರೆ ಶ್ರಮಜೀವಿ ಸಂಘಟನ್ ಯೂನಿಯನ್ ಫಾರ್ ಲೇಬರ್ ರೈಟ್ಸ್ ಸಂಘಟನೆಯ ದುರ್ಗೇಶ್ ಅಕ್ಕನಪಲ್ಲಿ.
ಇನ್ನೊಂದು ಸುರಕ್ಷಾ ಕ್ರಮವೆಂದರೆ, ಮ್ಯಾನ್ಹೋಲ್ ತೆರೆದ ಬಳಿಕ ಮನುಷ್ಯ ಕೆಳಗೆ ಇಳಿಯುವ ಮುನ್ನ ಕನಿಷ್ಠ ಎರಡು ಗಂಟೆ ಕಾಯಬೇಕು. ಆದರೆ ಸಾಮಾನ್ಯವಾಗಿ ಮ್ಯಾನ್ಹೋಲ್ ತೆರೆದು ಸ್ವಲ್ಪ ಸಮಯ ಕಾದು ಕಾರ್ಮಿಕರನ್ನು ಇಳಿಸಲಾಗುತ್ತದೆ. ಇದಕ್ಕೆ ಒಪ್ಪದಿದ್ದರೆ ಗುತ್ತಿಗೆದಾರರು ನೇರವಾಗಿ ಅವರನ್ನು ಮನೆಗೆ ಕಳುಹಿಸಿಬಿಡುತ್ತಾರೆ ಎಂದು ಅಕ್ಕನಪಲ್ಲಿ ವಿವರಿಸುತ್ತಾರೆ.
ಮುಂಬೈನಲ್ಲಿ ಮತ್ತು ದೇಶದ ಇತರೆಡೆಗಳಲ್ಲಿ ಇಂಥ ಒಳಚರಂಡಿ ಕಾರ್ಮಿಕರಿಗೆ ಆಮ್ಲಜನಕ ಮಾಸ್ಕ್ ಗಳನ್ನು ನೀಡುವುದು ತೀರಾ ವಿರಳ. ಅವರಿಗೆ ಮಾಸ್ಕ್ ಎಂದು ನೀಡುವುದು ಕೇವಲ ಬಟ್ಟೆಯ ತುಂಡು. ಬಹುತೇಕ ಮಂದಿ ಅದನ್ನು ಪಕ್ಕಕ್ಕೆ ಇಡುತ್ತ್ತಾರೆ. ಇಂಥ ಬಟ್ಟೆ ಮಾಸ್ಕ್ಗಳು ಗಾಳಿಯನ್ನು ಸ್ವಲ್ಪಮಟ್ಟಿಗೆ ಸೋಸುತ್ತವೆ. ಆದರೆ ವಿಷಕಾರಿ ಅನಿಲದಿಂದ ರಕ್ಷಣೆ ಒದಗಿಸಲಾರವು. ಜತೆಗೆ ಪರಸ್ಪರ ಮಾತನಾಡಿಕೊಳ್ಳಲು ಕೂಡಾ ಇದು ಅಡ್ಡಿಯಾಗುತ್ತದೆ ಎನ್ನುವುದು ಮಸಣ್ಣ ಅವರ ಅಭಿಪ್ರಾಯ.