ಆಕರ್ಷಕ ಬ್ಲೂಬೆರಿಗಳು ಆರೋಗ್ಯಕ್ಕೂ ಅತ್ಯುಪಯುಕ್ತ !
ಭಾರತದಲ್ಲಿ ಬ್ಲೂಬೆರಿಗಳು ಸಾಮಾನ್ಯವಾಗಿ ಸ್ಟ್ರಾಬರಿಗಳಷ್ಟು ಪ್ರಾಮುಖ್ಯತೆ ಗಳಿಸಿಲ್ಲ. ಐಸ್ ಕ್ರೀಂಗಳು, ಸ್ಮೂತೀಗಳು ಮತ್ತು ಡೆಸರ್ಟುಗಳಲ್ಲಿ ಇವುಗಳಿಗೆ ಸ್ಥಾನ ಕಡಿಮೆ. ಆದರೆ ಇದನ್ನು ಇಷ್ಟಪಡುವವರೂ ಸಾಕಷ್ಟಿದ್ದಾರೆ.
ಉತ್ತರ ಅಮೆರಿಕದಲ್ಲಿ ಶತಮಾನಗಳಿಂದ ಇವನ್ನು ಸೂಪ್, ಸ್ಟ್ಯೂ ಮತ್ತು ಮಾಂಸಾಹಾರದಲ್ಲಿ ಬಳಸುತ್ತಾರೆ. ಇವುಗಳು ಆಹಾರದ ರುಚಿಯನ್ನು ಹೆಚ್ಚಿಸುವುದೇ ಬಳಕೆಗೆ ಕಾರಣ. ಅಲ್ಲದೆ ಆಹಾರಕ್ಕೆ ಆಳವಾದ ನೀಲಿ ಬಣ್ಣ ಕೊಡುವುದರಲ್ಲೂ ಇವು ಎತ್ತಿದ ಕೈ. ಬ್ಲೂಬೆರಿಗಳ ಪಾನೀಯಗಳೂ ಆರೋಗ್ಯಕಾರಿ.
ಆರೋಗ್ಯ ಲಾಭಗಳು:
ಇವುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸುವುದು ಸುಲಭವಲ್ಲ. ಭಾರತೀಯ ಪರಿಸ್ಥಿತಿಯಲ್ಲಿ ಇವುಗಳು ಬಹಳ ಕಡಿಮೆ ಸಿಗುತ್ತವೆ. ಯಾವಾಗಲಾದರೂ ಸಿಕ್ಕಾಗ ಬಳಸಬಹುದು.
ಆಂಟಿ ಆಕ್ಸಿಡಂಟ್ಗಳ ಉತ್ತಮ ಮೂಲ:
ಬ್ಲೂಬೆರಿಗಳು ಆಂಟಿ ಆಕ್ಸಿಡಂಟ್ಗಳನ್ನು ಶ್ರೀಮಂತವಾಗಿ ಹೊಂದಿರುತ್ತವೆ. ಸಾಮಾನ್ಯವಾಗಿ ಸೇವಿಸುವ ಹಣ್ಣುಗಳು ಮತ್ತು ತರಕಾರಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಮುಖ್ಯವಾಗಿ ಆಂಥೋಸಿಯನಿನ್. ಅದರಿಂದಾಗಿಯೇ ಆಳವಾದ ನೀಲಿ ಬಣ್ಣ ಬಂದಿರುತ್ತದೆ. ರಕ್ತದಿಂದ ಸ್ವತಂತ್ರ ಕಣಗಳನ್ನು ನಿವಾರಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ನಿತ್ಯ ಸೇವನೆಯಿಂದ ಹೃದಯ ಸಂಬಂಧ ಆರೋಗ್ಯ ಮತ್ತು ನರವ್ಯೆಹಕ್ಕೆ ಉತ್ತಮ. ಅಜೀರ್ಣ ಸಮಸ್ಯೆಗಳನ್ನು ನಿವಾರಿಸಬಹುದು.
ನಿರೋಧಕ ಶಕ್ತಿ:
ಬ್ಲೂಬೆರಿಗಳು ಮಾನವ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ ಎಂದು ಅಧ್ಯಯನ ಹೇಳಿದೆ. ಬ್ಯಾಕ್ಟೀರಿಯ ಸೋಂಕಿನ ವಿರುದ್ಧ ಹೋರಾಡುವ ದೇಹದ ಮೊದಲ ರಕ್ಷಣಾ ವ್ಯವಸ್ಥೆಗೆ ಬ್ಲೂ ಬೆರಿಗಳ ಕೊಡುಗೆ ಅಪಾರ. ರಕ್ಷಣಾ ವ್ಯವಸ್ಥೆ ಕುಸಿದಾಗ ಬ್ಲೂ ಬೆರಿ ಸೇವನೆ ಆರೋಗ್ಯಕಾರಿ. ಇವುಗಳಿಗೆ ಉರಿಯೂತ ವಿರೋಧಿ ತತ್ವಗಳೂ ಇವೆ. ಹೀಗಾಗಿ ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಉಪಯುಕ್ತ.
ಅಧಿಕ ಕೊಬ್ಬಿನ ಸಮಸ್ಯೆಗೆ ಪರಿಹಾರ:
ಬ್ಲೂಬೆರಿಗಳ ಸೇವನೆಯಿಂದ ಅಧಿಕ ಕೊಬ್ಬಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ವೈಲ್ಡ್ ಬ್ಲೂಬೆರಿಗಳು ಸಾಮಾನ್ಯ ಬ್ಲೂಬೆರಿಗಳಿಗಿಂತ ಸಣ್ಣ ಗಾತ್ರದಲ್ಲಿದ್ದು, ಹೆಚ್ಚು ಅಸಿಡಿಕ್ ಆಗಿರುತ್ತವೆ. ಇವು ರಕ್ತದ ಒತ್ತಡ ಮತ್ತು ಉರಿಯೂತದಿಂದ ಆಗುವ ಪೌಷ್ಠಿಕಾಂಶ ಕೊರತೆ ಸಮಸ್ಯೆಗೆ ಪರಿಹಾರ ಒದಗಿಸುತ್ತವೆ.
ಹೃದಯ ರೋಗದ ಸಮಸ್ಯೆಗೆ ಪರಿಹಾರ
ಬ್ಲೂ ಬೆರಿಗಳಲ್ಲಿ ಆಂಟಿ ಆಕ್ಸಿಡಂಟ್ಗಳು ಹೆಚ್ಚಾಗಿ ಇರುವ ಕಾರಣ ಕೊಲೆಸ್ಟರಾಲ್ ಪರಿಣಾಮವನ್ನು ಕುಗ್ಗಿಸುತ್ತದೆ. ರಕ್ತದ ಕೊಬ್ಬಿನ ಸಮತೋಲನ ಕಾಯ್ದುಕೊಳ್ಳುವುದಲ್ಲದೆ ರಕ್ತನಾಳಗಳಲ್ಲಿ ತಡೆಯಾಗಿದ್ದರೆ ನಿವಾರಿಸುತ್ತದೆ. ಈ ಫ್ಲಾವನಾಯ್ಡಾಗಳು ರಕ್ತದ ಒತ್ತಡವನ್ನು ಕಡಿಮೆ ಮಾಡಿ ಹೃದಯ ರೋಗದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಇವು ಉತ್ತಮ.
ಮೆದುಳಿನ ಆರೋಗ್ಯ:
ಬ್ಲೂಬೆರಿಗಳ ಸೇವನೆಯಿಂದ ಮೆದುಳಿನ ಆರೋಗ್ಯ ವೃದ್ಧಿಯಾಗುತ್ತದೆ. ಬ್ಲೂಬೆರಿಗಳಲ್ಲಿರುವ ಅಂಶಗಳು ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ. ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪಾರ್ಕಿನ್ಸನ್ನಂತಹ ಮೆದುಳು ರೋಗಗಳ ಆತಂಕವನ್ನು ಕುಗ್ಗಿಸುತ್ತವೆ. ವಾರಕ್ಕೊಮ್ಮೆ ಬ್ಲೂಬೆರಿ ತಿಂದವರು ಈ ರೋಗದ ಆತಂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅಲ್ಲದೆ ನರವ್ಯೆಹದ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನೂ ಕಡಿಮೆ ಮಾಡುತ್ತವೆ.
ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣ:
ಅಧ್ಯಯನಗಳ ಪ್ರಕಾರ ಬ್ಲೂಬೆರಿಗಳು ರಕ್ತದ ಸಕ್ಕರೆ ಕಾಯಿಲೆಗಳಾಗಿರುವ ಮಧುಮೇಹ ಮತ್ತು ಇನ್ಸುಲಿನ್ ನಿರೋಧಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ ಕೊಬ್ಬಿನ ಸಮಸ್ಯೆ ಇದ್ದವರಿಗೂ ಉತ್ತಮ ಆರೋಗ್ಯದ ಭರವಸೆ ನೀಡುತ್ತವೆ. ಗ್ಲಿಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಕಾರಣದಿಂದ ಒಂದೆರಡು ಕಪ್ ಬ್ಲೂಬೆರಿಗಳ ಸೇವನೆ ಆರೋಗ್ಯಕಾರಿ.
ವಿಟಮಿನ್, ಲವಣಗಳು ಮತ್ತು ಫೈಬರ್:
ಬ್ಲೂಬೆರಿಗಳಲ್ಲಿ ವಿಟಮಿನ್, ಲವಣ ಮತ್ತು ಮುಖ್ಯವಾಗಿ ವಿಟಮಿನ್ ಸಿ ಹೆಚ್ಚಾಗಿದೆ. ಸಕ್ಕರೆ ಪ್ರಮಾಣ ಕಡಿಮೆ. ಒಂದು ಕಪ್ ಬ್ಲೂಬೆರಿ 15 ಗ್ರಾಂ ಸಕ್ಕರೆ ಹೊಂದಿರುತ್ತವೆ. ಅವು ಸಣ್ಣ ಸೇಬಿಗೆ ಸಮಾನ. ಸಕ್ಕರೆಯ ಯಾವುದೇ ನಕಾರಾತ್ಮಕ ಪರಿಣಾಮವನ್ನು ಅದರಲ್ಲಿನ ಬಯೋ ಆಕ್ಟಿವ್ ಸಂಯುಕ್ತಗಳು ನಿಯಂತ್ರಿಸುತ್ತವೆ. ಬ್ಲೂಬೆರಿಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುವ ಕಾರಣ ಜೀರ್ಣಕ್ರಿಯೆಗೂ ಉತ್ತಮ.