ಇವತ್ತು ಕ್ಯಾರೆಟ್ ತಿನ್ನಲೇಬೇಕಾದ ದಿನ !
ಕ್ಯಾರೆಟ್ ಸ್ಟಿಕ್ಸ್, ಕ್ಯಾರೆಟ್ ಸ್ನ್ಯಾಕ್ಸ್, ಕ್ಯಾರೆಟ್ ಕೇಕ್- ಯಾವ ಬಗೆಯಲ್ಲೆಲ್ಲ ಸಾಧ್ಯವೋ ಹಾಗೆಲ್ಲ ಕ್ಯಾರೆಟ್ ತಿನ್ನಿ. ಯಾಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಅಲ್ಲವೇ? ಏಕೆಂದರೆ ಏಪ್ರಿಲ್ 4 ವಿಶ್ವ ಕ್ಯಾರೆಟ್ ದಿನ.
ಫ್ರಾನ್ಸ್, ಸ್ವೀಡನ್, ಇಟೆಲಿ, ಜಪಾನ್ ಹಾಗೂ ರಷ್ಯಾ ಸೇರಿದಂತೆ ವಿವಿಧೆಡೆ 2003ರಿಂದ ಈ ವಿಶಿಷ್ಟ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಕ್ಯಾರೆಟ್ನ ಉತ್ತಮ ಅಂಶಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ.
ಕ್ಯಾರೆಟ್ನಲ್ಲೂ ಎಷ್ಟು ವೈವಿಧ್ಯವಿದೆ ಗೊತ್ತೇ?
ಮೂಲವಾಗಿ ಇದು ನೇರಳೆ ಬಣ್ಣದ ಗಡ್ಡೆ ತರಕಾರಿ. ಈಗ 100ಕ್ಕೂ ಹೆಚ್ಚು ಚಿಕ್ಕ ಹಾಗೂ ದೊಡ್ಡ ತಳಿಗಳಿವೆ. ಕೇಸರಿ ಬಣ್ಣದ ಕ್ಯಾರೆಟ್ ಕಂಡುಬಂದದ್ದು 17ನೇ ಶತಮಾನದಲ್ಲಿ. ಇದೀಗ ಒಳಗೆ ಕೇಸರಿ ಹೊರಗೆ ನೇರಳೆ ಬಣ್ಣದ ಕ್ಯಾರೆಟ್ ಕೂಡಾ ಲಭ್ಯ. 1980ರ ದಶಕದಿಂದೀಚೆಗೆ ಬೇಬಿ ಕ್ಯಾರೆಟ್ ಸಿದ್ದ ಆಹಾರವಾಗಿ ಸೂಪರ್ ಮಾರ್ಕೆಟ್ಗಳಲ್ಲಿ ಜನಪ್ರಿಯ..
ಕ್ಯಾರೆಟ್ ಪೌಷ್ಟಿಕಾಂಶಗಳ ಕಣಜ. ಕ್ಯಾರೆಟ್ ಹಾಗೇ ತಿನ್ನುವುದಕ್ಕಿಂತ ಬೇಯಿಸಿ, ಅರೆದು ಅಥವಾ ರಸ ಹಿಂಡಿ ಕುಡಿದರೆ ಅದರ ಕೆರೋಟಿನಾಯ್ಡ್ಸಿ ಎಂಬ ಪೋಷಕಾಂಶ ಶೇಕಡ 600ರಷ್ಟು ಹೆಚ್ಚುತ್ತದೆ.
ಬೇಯಿಸಿದಾಗ ಹೆಚ್ಚು ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಪುಟ್ಟ ಕಂದಮ್ಮಗಳಿಗೆ ಹಲ್ಲು ಬರುವಾಗ ಕ್ಯಾರೆಟ್ ಕಡಿಯುವ ಅಭ್ಯಾಸ ಮಾಡಿಸಿದರೆ ಅದರ ರುಚಿ ಹಿಡಿಯುತ್ತವೆ. ಅದರ ಸೂಪ್ ಅಂತೂ ಮಕ್ಕಳು ಬಾಯಿ ಚಪ್ಪರಿಸಿಕೊಂಡು ಸೇವಿಸುತ್ತವೆ. ಪಲಾವ್ ಅಥವಾ ವೆಜ್ ನೂಡಲ್ಸ್ಗೆ ಇದನ್ನು ಬಳಸಿದರೆ ರುಚಿ ಜತೆಗೆ ಬಣ್ಣವೂ ಆಕರ್ಷಕವಾಗಿ ಕಾಣುತ್ತದೆ.
ಸಲಾಡ್ ಪ್ಲೇಟ್ಗೂ ಬಣ್ಣ ತುಂಬುವ ತರಕಾರಿ ಇದು. ಜತೆಗೆ ಇದರಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು. ಕ್ಯಾರೆಟ್ ಕೇಕ್, ಪುಡ್ಡಿಂಗ್ ಕೂಡಾ ಇಂಗ್ಲೆಂಡಿನಲ್ಲಿ ಜನಪ್ರಿಯ. ಗಾಜರ್ ಕಂಜಿಯನ್ನು ಆರೋಗ್ಯಕರ ಪೇಯವಾಗಿಯೂ ಬಳಕೆ ಮಾಡಲಾಗುತ್ತದೆ. ಮಿಶ್ರ ತರಕಾರಿಯ ಸೂಪ್, ಜ್ಯೂಸ್, ಜಾಮ್ ಕೂಡಾ ರುಚಿಕರ. ಮೊಲ ಹಾಗೂ ಕುದುರೆಗಳಿಗೂ ಕ್ಯಾರೆಟ್ ಎಂದರೆ ಅಚ್ಚುಮೆಚ್ಚು.
ಕ್ಯಾರೆಟ್ ಹಲ್ವದ ಹೆಸರು ಹೇಳಿದರೇ ಬಾಯಲ್ಲಿ ನೀರೂರುತ್ತದೆ. ಮಾಡಲು ಸುಲಭ. ತಿನ್ನಲು ರುಚಿ. ಇನ್ನೂ ಹಲವು ವಿಧದಲ್ಲಿ ಇದನ್ನು ಬಳಸಬಹುದು. ಈ ಆರೋಗ್ಯಕರ ತರಕಾರಿ ವೈವಿಧ್ಯಗಳನ್ನು ನೀವೂ ಟ್ರೈ ಮಾಡಿ... ಹ್ಯಾಪಿ ಕ್ಯಾರೆಟ್ ಡೇ..