ಬೆಳೆಯುತ್ತಿದೆ ಭೂಕಂಪ ಅಪಾಯ ನಗರಗಳ ಪಟ್ಟಿ
ಈ ವಾರ ಈಶಾನ್ಯ ಭಾರತದ ನಗರಗಳಲ್ಲಿ ಕಂಪನ ಉಂಟಾಗುವುದರೊಂದಿಗೆ, ತೀವ್ರ ಭೂಕಂಪದ ಅಪಾಯ ಇರುವ ನಗರಗಳ ಸರಕಾರಿ ಪಟ್ಟಿಗೆ ಮತ್ತೆ ಎಂಟು ನಗರಗಳು ಹೊಸದಾಗಿ ಸೇರ್ಪಡೆಯಾಗಿವೆ. ಭೂಕಂಪ ಅಪಾಯ ಇರುವ ಪಟ್ಟಣಗಳ ಸಂಖ್ಯೆ ಇದೀಗ 81ಕ್ಕೆ ತಲುಪಿದ್ದು, ಒಟ್ಟು 107 ನಗರ- ಪಟ್ಟಣಗಳು ಈ ಪಟ್ಟಿಯಲ್ಲಿವೆ ಎನ್ನುವ ಅಂಶ 2016ರ ಮಾರ್ಚ್ 16ರಂದು ಸರಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
2002ರಲ್ಲಿ ಗುವಾಹತಿ ಹಾಗೂ ಶ್ರೀನಗರವನ್ನಷ್ಟೇ ತೀವ್ರ ಭೂಕಂಪ ಅಪಾಯದ ವಲಯ ಅಥವಾ ವಲಯ-5 ಎಂದು ಗುರುತಿಸಲಾಗಿತ್ತು. ಇದು ಅತಿ ತೀವ್ರ ಭೂಕಂಪ ಸಾಧ್ಯತೆ ಇರುವ ಪ್ರದೇಶ ಎಂದು ಬಿಂಬಿಸಲಾಗಿತ್ತು. ಇತ್ತೀಚಿನ ಸೇರ್ಪಡೆ ಎಂದರೆ, ಅಸ್ಸಾಂನ ಜೋರ್ಹತ್, ಸಾದಿಯಾ ಹಾಗೂ ತೇಜಪುರ. ಗುಜರಾತ್ನ ಭುಜ್; ಬಿಹಾರದ ದರ್ಭಾಂಗ, ಮಣಿಪುರದ ಇಂಪಾಲ, ನಾಗಾಲ್ಯಾಂಡಿನ ಕೋಹಿಮಾ ಹಾಗೂ ಹಿಮಾಚಲಪ್ರದೇಶದ ಮಂಡಿ, ಅಂದರೆ ಇಡೀ ಈಶಾನ್ಯ ಭಾಗ ಭೂಕಂಪ ವಲಯ-5ರ ವ್ಯಾಪ್ತಿಗೆ ಸೇರುತ್ತದೆ. ಈ ವಾರ ಸಂಭವಿಸಿದ ಭೂಕಂಪದಿಂದಾಗಿ ಭೂಕಂಪ ಅಪಾಯ ಸಾಧ್ಯತೆ ಇರುವ ಪ್ರದೇಶ ಭಾರತದಲ್ಲಿ ವಿಸ್ತೃತವಾಗಿದೆ ಎನ್ನುವ ಭೀತಿಯನ್ನು ಹುಟ್ಟುಹಾಕಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ 2002ರಲ್ಲಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಭಾರತ ಉಪಖಂಡದ ಶೇ.60ರಷ್ಟು ಭೂಭಾಗ ಭೂಕಂಪ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. 38 ನಗರಗಳಲ್ಲಿ ಭೂಕಂಪ ಸಾಧ್ಯತೆ ಪ್ರಬಲವಾಗಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಭೂಕಂಪ ವಲಯ 3,4,5ರಲ್ಲಿ ವಾಸವಿದ್ದಾರೆ.
ಸುಮಾರು 500 ವರ್ಷಗಳಿಂದ ಸಂಭವಿಸದ ದೊಡ್ಡ ಪ್ರಮಾಣದ ಹಿಮಾಲಯನ್ ಭೂಕಂಪಗಳನ್ನು ನಿರೀಕ್ಷಿಸಲಾಗಿದೆ. ಆದರೆ ಅದು ಯಾವಾಗ ಸಂಭವಿಸುತ್ತದೆ ಎನ್ನುವುದನ್ನು ಯಾರೂ ಅಂದಾಜು ಮಾಡಲು ಸಾಧ್ಯವಿಲ್ಲ.
ಭೀತಿ ಏಕೆ?
ಹಿಮಾಲಯ ಹಾಗೂ ಉತ್ತರ ಭಾರತ ಕಂಪಿಸುವ ಭೂಭಾಗದಲ್ಲೇ ಇವೆ. ಹಲವು ವರ್ಷಗಳಿಗೆ ಮೊದಲು ಅಂದರೆ ಮನುಕುಲದ ಹುಟ್ಟಿಗೆ ಮುನ್ನ ಭಾರತವು ಗೊಂಡ್ವಾನಾ ಎಂಬ ದೊಡ್ಡ ಖಂಡದಿಂದ ವಿಭಜನೆಯಾಗಿದೆ. (ಈ ಪ್ರದೇಶವನ್ನು ಛತ್ತೀಸ್ಗಡ ಎಂದು ಈಗ ಕರೆಯಲಾಗುತ್ತದೆ).
ಭಾರತೀಯ ಹಾಗೂ ಯುರೇಶಿಯಾ ಭೂಪದರಗಳು ಸುಮಾರು 50 ದಶಲಕ್ಷ ವರ್ಷಗಳಿಂದ, ಈ ಢಿಕ್ಕಿ ವಲಯದಲ್ಲಿ ಸಂಘರ್ಷವನ್ನು ಎದುರಿಸುತ್ತಲೇ ಬಂದಿವೆ. ಯುರೇಶಿಯಾ ಪದರದ ಕೆಳಗೆ ಭಾರತ ಪದರ ಉತ್ತರದ ಕಡೆಗೆ ಜಾರಿರುವುದು ಇದಕ್ಕೆ ಕಾರಣ. ಈ ಕಾರಣದಿಂದಾಗಿಯೇ ಹಿಮಾಲಯ ಹಾಗೂ ವೌಂಟ್ ಎವೆರೆಸ್ಟ್ ಇನ್ನೂ ಬೆಳೆಯುತ್ತಲೇ ಇವೆ.
ರಿಕ್ಟರ್ ಮಾಪಕದಲ್ಲಿ 3ಕ್ಕಿಂತ ಹೆಚ್ಚು ತೀವ್ರತೆ ಹೊಂದಿದ್ದ 392 ಭೂಕಂಪಗಳು ಭಾರತದಲ್ಲಿ 2015ರಲ್ಲಿ ಸಂಭವಿಸಿವೆ ಎಂದು ನ್ಯಾಶನಲ್ ಸೆಂಟರ್ ಫಾರ್ ಸಿಸ್ಮಾಲಜಿಯ ಅಂಕಿ ಅಂಶ ಹೇಳುತ್ತದೆ. 2015ರ ಡಿಸೆಂಬರ್ 2ರಂದು ಭೂವಿಜ್ಞಾನ ಖಾತೆ ಸಚಿವರು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಈ ಅಂಕಿ ಅಂಶದ ಉಲ್ಲೇಖವಿದೆ. ಈ ಪೈಕಿ 136 ಭೂಕಂಪಗಳು ಭಾರತದಲ್ಲಿ ಸಂಭವಿಸಿವೆ. ವಲಯ 5ರಲ್ಲಿ 114, ವಲಯ 4ರಲ್ಲಿ 14, ವಲಯ 3ರಲ್ಲಿ 5 ಹಾಗೂ ವಲಯ 2ರಲ್ಲಿ ಮೂರು ಭೂಕಂಪಗಳು ಸಂಭವಿಸಿವೆ. ಕಳೆದ 30 ವರ್ಷಗಳ ಭೂಕಂಪ ಮಾಹಿತಿಗಳನ್ನು ವಿಶ್ಲೇಷಿಸಿದಾಗ ತಿಳಿದು ಬರುವ ಮಹತ್ವದ ಅಂಶವೆಂದರೆ, ಭೂಕಂಪದ ತೀವ್ರತೆಯಲ್ಲಿ ಹೆಚ್ಚಳ ಅಥವಾ ಇಳಿಕೆ ಉಂಟಾಗಿಲ್ಲ ಎಂದು ಸಚಿವರುವಿವರಿಸಿದ್ದರು.
2015ರ ಎಪ್ರಿಲ್ನಲ್ಲಿ ನೇಪಾಳದಲ್ಲಿ ಪ್ರಬಲ ಭೂಕಂಪ (7.9 ತೀವ್ರತೆ) ಸಂಭವಿಸಿತು. ಇದರಲ್ಲಿ ಎಂಟು ಸಾವಿರ ಮಂದಿ ಮೃತಪಟ್ಟು 20 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು. ಭಾರತದಲ್ಲೂ ಮೂರು ಭೂಕಂಪಗಳು ಈ ಅವಧಿಯಲ್ಲಿ ಸಂಭವಿಸಿ, 102 ಮಂದಿ ಬಲಿಯಾದರು. ಸುಮಾರು 13 ಸಾವಿರ ಮನೆಗಳು ಹಾನಿಗೀಡಾದವು.
ಸ್ವಾತಂತ್ರ್ಯೋತ್ತರ ಕಂಪನ ಇತಿಹಾಸ
ಭಾರತದಲ್ಲಿ ಜನಸಾಮಾನ್ಯರು ನೆನಪಲ್ಲಿಟ್ಟುಕೊಂಡ ಏಕೈಕ ಭೀಕರ ಭೂಕಂಪವೆಂದರೆ 2001ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಭೀಕರ ಭೂಕಂಪ. ಇದು 20 ಸಾವಿರ ಮಂದಿಯನ್ನು ಬಲಿ ಪಡೆದಿತ್ತು. 2004ರ ಸುನಾಮಿಗೆ ಕಾರಣವಾದದ್ದು ಮೂರನೆ ಅತ್ಯಂತ ಭೀಕರ ಭೂಕಂಪ. ರಿಕ್ಟರ್ ಮಾಪಕದಲ್ಲಿ ಭೂಕಂಪ ತೀವ್ರತೆ 9.3ರಷ್ಟು ದಾಖಲಾಗಿತ್ತು. ಅಂಡಮಾನ್ ನಿಕೋಬಾರ್ ದ್ವೀಪ ಇರುವ ನೆರೆಯ ಬರ್ಮಾ ಪದರದ ಬಳಿ ಮಾಮೂಲಿ ಪ್ರಕ್ರಿಯೆಗೆ ಭಿನ್ನವಾಗಿ ಭೀಕರ ಪ್ರಮಾಣದ ಚಂಚಲತೆಯಿಂದ ಭಾರತೀಯ ಪದರ ಜಾರಿದ್ದು ಇದಕ್ಕೆ ಕಾರಣ. ಇದು ಭೂಮಿಯ ಚಿಪ್ಪಿನಲ್ಲಿ ಸುಮಾರು 100 ಕಿಲೋಮೀಟರ್ ಉದ್ದದ ಬಿರುಕಿಗೆ ಕಾರಣವಾಯಿತು. ಇದರಿಂದ ಸಮುದ್ರದ ಮೇಲ್ಮೈ ಅಲೆಗಳು ಎತ್ತರಕ್ಕೆ ಬೆಳೆದು, ಜಲರಾಶಿ ಮೇಲಕ್ಕೆ ಚಿಮ್ಮಿತು. ಇದು ದೈತ್ಯ ಅಲೆಗಳಾಗಿ ಅಪ್ಪಳಿಸಿ 14 ದೇಶಗಳ 2.30 ಲಕ್ಷ ಮಂದಿಯನ್ನು ಬಲಿ ಪಡೆಯಿತು.
ಭಾರತದ ಮೆಟ್ರೊಪಾಲಿಟನ್ ನಗರಗಳು ಎಂದೂ ಭೀಕರ ಭೂಕಂಪವನ್ನು ಕಂಡಿಲ್ಲ. ದಿಲ್ಲಿ ಭೂಕಂಪದ ನಾಲ್ಕನೆ ವಲಯದಲ್ಲಿ, ಮುಂಬೈ, ಚೆನ್ನೈ ಹಗೂ ಕೊಲ್ಕತಾ 3ನೆ ವಲಯದಲ್ಲಿದ್ದರೂ ಇದುವರೆಗೆ ಅಂಥ ಭೀಕರ ಹಾನಿ ಈ ನಗರಗಳಲ್ಲಿ ಸಂಭವಿಸಿಲ್ಲ.
ಇತಿಹಾಸದ ಪಾಠ
ವೌಂಟ್ ಎವರೆಸ್ಟ್ನ ದಕ್ಷಿಣದಲ್ಲಿ 10 ಕಿಲೋಮೀಟರ್ ದೂರದಲ್ಲಿ ಕೇಂದ್ರಬಿಂದುವನ್ನು ಹೊಂದಿದ್ದ ಭೂಕಂಪ 1934ರಲ್ಲಿ ಬಿಹಾರದಲ್ಲಿ ಸಂಭವಿಸಿತು. ಇದು ಮುಂಬೈನಿಂದ ಲ್ಹಾಸಾವರೆಗೂ ಅನುಭವಕ್ಕೆ ಬಂತು. ಬಿಹಾರದ ಬಹಳಷ್ಟು ಜಿಲ್ಲೆಗಳಲ್ಲಿ ಹಾಗೂ ಕೊಲ್ಕತಾದಲ್ಲಿ ಹಲವು ಕಟ್ಟಡಗಳಿಗೆ ಇದರಿಂದ ಹಾನಿ ಉಂಟಾಯಿತು. ರಿಕ್ಟರ್ ಮಾಪಕದಲ್ಲಿ 8.4ರಷ್ಟು ತೀವ್ರತೆ ಇದ್ದ ಈ ಭೂಕಂಪದಿಂದ 8100ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. ಮಹಾತ್ಮಗಾಂಧಿ ಇದನ್ನು ಅಸ್ಪಶ್ಯತೆಗೆ ಶಿಕ್ಷೆ ಎಂದು ಬಣ್ಣಿಸಿದ್ದರು.
1950ರ ಅಸ್ಸಾಂ ಭೂಕಂಪ ಹಿಮಾಲಯ ಪ್ರದೇಶದ ಅತ್ಯಂತ ಭೀಕರ ಭೂಕಂಪ ಎಂದು ಭೂಗರ್ಭ ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)