ಮಾಹಿತಿ ಹಕ್ಕು ಕಾಯ್ದೆ ಮತ್ತು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ!
2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾನೂನಿಗೆ ಮೊದಮೊದಲು ರಾಜಕಾರಣಿಗಳಿಂದ ಮತ್ತು ಅಧಿಕಾರಶಾಹಿಯಿಂದ ತೀವ್ರ ವಿರೋಧ ವ್ಯಕ್ತವಾದರೂ ಬಹುತೇಕ ಮಾಧ್ಯಮಗಳು ಮತ್ತು ಸಾರ್ವಜನಿಕರು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಯಾಕೆಂದರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಹೊಣೆಗಾರಿಕೆಯನ್ನು ಹೇರಲು ಈ ಕಾನೂನನ್ನು ರೂಪಿಸಲಾಗಿತ್ತು. ತನ್ಮೂಲಕ ಜನತೆಯ ಕೈಗೆ ಮಹತ್ತರ ಆಯುಧವೊಂದನ್ನು ನೀಡುವ ಉದ್ದೇಶ ಸರಕಾರಕ್ಕಿತ್ತು. ಸರಕಾರದ ಪ್ರತೀ ಚಟುವಟಿಕೆಗಳ ಮಾಹಿತಿಯೂ ಜನರಿಗೆ ಗೊತ್ತಿರಬೇಕೆಂಬುದೇ ಕಾಯ್ದೆಯ ಮೂಲ ಮಂತ್ರವಾಗಿತ್ತು.
ಕಳೆದ ಹನ್ನೊಂದು ವರ್ಷಗಳಲ್ಲಿ ಈ ಮಾಹಿತಿಹಕ್ಕು ಕಾಯ್ದೆ ಹಲವು ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡಿರುವುದು ನಿಜವಾದರೂ, ಸದರಿ ಕಾಯ್ದೆಯ ಸದುಪಯೋಗ ಮತ್ತು ದುರುಪಯೋಗಗಳು ಸಮಾನವಾಗಿ ನಡೆದಿದ್ದು ಕಾಯ್ದೆಯ ಮೂಲ ಉದ್ದೇಶವನ್ನಿನ್ನೂ ಸಾಧಿಸಲಾಗಿಲ್ಲವೆಂಬುದೇ ವಿಷಾದದ ಸಂಗತಿ. ಹತ್ತು ವರ್ಷಗಳ ಹಿಂದೆ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಗೊಳಿಸಿದೆ. ದೇಶದಾದ್ಯಂತ ಸೃಷ್ಟಿಯಾದ ನೂರಾರು ಆರ್.ಟಿ.ಐ. ಕಾರ್ಯಕರ್ತರು ಇದನ್ನು ಬಳಸಿ ಹಲವು ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿದ್ದೆಗೆಡಿಸುತ್ತಿದ್ದಾರೆ. ಆದರೆ ದುರಂತವೆಂದರೆ ಮಾಹಿತಿ ಹಕ್ಕು ಕಾಯ್ದೆ ಹಲವು ಕ್ಷೇತ್ರಗಳಿಗೆ ಅನ್ವಯವಾಗದಿರುವುದು. ಹೀಗಾಗಿ ಈ ಕಾಯ್ದೆಯ ಮೂಲಮಂತ್ರವಾದ ಸಂಪೂರ್ಣ ಮಾಹಿತಿ ಎನ್ನುವುದು ಹುಸಿಯಾಗಿದೆ.
ಸಾರ್ವಜನಿಕ ಹಣದಲ್ಲಿ ನಡೆಯುವ ಎನ್.ಜಿ.ಒ.ಗಳನ್ನು, ಖಾಸಗಿ ಟ್ರಸ್ಟ್ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಮತ್ತು ಸರಕಾರದ ಪರೋಕ್ಷ ಹಿಡಿತದಲ್ಲಿರುವ ಹಲವು ಕ್ರೀಡಾ ಪ್ರಾಧಿಕಾರಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಾಹಿತಿ ಪಡೆಯುವ ಜನತೆಯ ಹಕ್ಕನ್ನು ಮೊಟಕುಗೊಳಿ ಸಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ಆರ್ಥಿಕ ನೀತಿಯನ್ನೇ ನಿರ್ದೇಶಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ಕಾರ್ಪೊರೇಟ್ ಕಂಪೆನಿಗಳನ್ನು ಈ ಕಾಯ್ದೆಯಿಂದ ಹೊರಗಿಟ್ಟು ಇದರ ಮೂಲ ಆಶಯವನ್ನೇ ಮಣ್ಣುಪಾಲು ಮಾಡಲಾಗಿದೆ.
ಇವೆಲ್ಲದರ ಹೊರತಾಗಿಯೂ ಈ ಕಾಯ್ದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ನಮ್ಮ ಸರಕಾರಗಳು ಅದರ ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು, ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತ ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇದಕ್ಕಾಗಿಯೇ ಸರಕಾರ ಮತ್ತು ಖಾಸಗಿ ಸಹಭಾಗಿತ್ವ ಎನ್ನುವ ಹೆಸರಿನಡಿಯಲ್ಲಿ ಹೊಸಯೋಜನೆಗಳನ್ನು ಜಾರಿಗೆ ತರುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯದಲ್ಲಿ ತೊಡಗಿವೆ. ಹೀಗೆ ಸರಕಾರ ಸಾರ್ವಜನಿಕರ ಸಾವಿರಾರು ಕೋಟಿ ರೂ.ಗಳನ್ನು ಮತ್ತು ರೈತರ ನೂರಾರು ಏಕರೆ ಭೂಮಿಯನ್ನು ಟೋಲ್ ರಸ್ತೆಗಳ ನಿರ್ಮಾಣಕ್ಕೆ, ರೈಲು, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರಕಾರಿ-ಖಾಸಗಿ ಸಹಭಾಗಿತ್ವದ ಹೆಸರಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ನೀಡುತ್ತಿವೆ. ಇದರಲ್ಲಿ ರಾಜಕೀಯ ನಾಯಕರು ಮತ್ತು ಸರಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮಾಡುವ ಭ್ರಷ್ಟತೆಯ ವಿಷಯ ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯು ಇಂತಹ ಯೋಜನೆಗಳಿಗೆ ಅನ್ವಯವಾಗುವುದಿಲ್ಲವಾದ್ದರಿಂದ ಇದರ ಬಗ್ಗೆ ಜನತೆಗೆ ಯಾವುದೇ ಸಣ್ಣ ಮಾಹಿತಿಯೂ ಅಧಿಕೃತವಾಗಿ ದೊರೆಯುತ್ತಿಲ್ಲ.
ಇದೆಲ್ಲಕ್ಕೂ ಕಳಸವಿಟ್ಟಂತೆ ನಮ್ಮ ರಾಜಕೀಯ ಪಕ್ಷಗಳನ್ನು ಸಹ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟು ದೊಡ್ಡ ಪ್ರಮಾದವೊಂದನ್ನು ಎಸಗಲಾಗಿದೆ. ಹೀಗಾಗಿ ಪ್ರತೀ ರಾಜಕೀಯ ಪಕ್ಷವೂ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಂದ ಕೋಟ್ಯಂತರ ರೂ.ಗಳ ದೇಣಿಗೆಯನ್ನು ಪಡೆದರೂ, ಅದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಹೀಗೆ ಖಾಸಗಿ ಕಂಪೆನಿಗಳು ಕೊಡುವ ಹಣದ ಬಗ್ಗೆ ಅವರಾಗಲಿ, ಪಡೆಯುವ ರಾಜಕೀಯ ಪಕ್ಷಗಳಾಗಲಿ ಸಾರ್ವಜನಿಕರಿಗೆ ಅಧಿಕೃತ ಮಾಹಿತಿ ನೀಡಬೇಕಾದ ಕಟ್ಟುಪಾಡಿಗೆ ಒಳಪಡದೇ ಇರುವುದರಿಂದ ಅಲ್ಲಿಯೂ ಸ್ವಹಿತಾಸಕ್ತಿಗಳೇ ಕೆಲಸ ಮಾಡುತ್ತಿವೆ. ಹೀಗಾಗಿಯೇ ಎಲ್ಲ ರಾಜಕೀಯಪಕ್ಷಗಳೂ ಸಹ ಚುನಾವಣೆಯ ಸಂದರ್ಭದಲ್ಲಿ ಸಾವಿರಾರು ರೂ.ಗಳನ್ನು ಖರ್ಚು ಮಾಡುತ್ತಾ ನಮ್ಮ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿಬಿಟ್ಟಿವೆ. ಹೀಗಾಗಿಯೇ ಅಧಿಕಾರಕ್ಕೇರಿದ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತವೆ.
ವಿಷಾದವೆಂದರೆ 2005ರಲ್ಲಿ ಯು.ಪಿ.ಎ. ಸರಕಾರ ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಬಗ್ಗೆ ದೊಡ್ಡ ಗಲಾಟೆ ಮಾಡಿದ ಭಾಜಪ ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದರೂ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇದರ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ, ಕಾರ್ಪೊರೇಟ್ ಕಂಪೆನಿಗಳನ್ನೂ ತರುವ ಯಾವ ಪ್ರಯತ್ನವನ್ನೂ ಮಾಡಲು ಮನಸ್ಸು ಮಾಡುವಂತೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಷಯಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ರೀತಿಯಲ್ಲಿ ಆಲೋಚಿಸುತ್ತವೆ ಮತ್ತು ಒಂದೇ ದಿಕ್ಕಿನಲ್ಲಿ ನಡೆಯುತ್ತವೆ ಎನ್ನುವುದು ಖಾತ್ರಿಯಾಗುತ್ತದೆ.
2005ರಲ್ಲಿ ಯುಪಿಎ ಸರಕಾರ ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಬಗ್ಗೆ ದೊಡ್ಡ ಗಲಾಟೆ ಮಾಡಿದ ಭಾಜಪ ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದರೂ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇದರ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ, ಕಾರ್ಪೊರೇಟ್ ಕಂಪೆನಿಗಳನ್ನೂ ತರುವ ಯಾವ ಪ್ರಯತ್ನವನ್ನೂ ಮಾಡಲು ಮನಸ್ಸು ಮಾಡುವಂತೆ ಕಾಣುತ್ತಿಲ್ಲ.