ನೀರಿನ ಪ್ರಯೋಗಾಲಯ ಸ್ಥಾಪನೆ
ತನಿಖೆಗೆ ಗ್ರಾಮೀಣಾಭಿವೃದ್ಧಿ ಸಚಿವರ ಆದೇಶ
ಬೆಂಗಳೂರು, ಮೇ 29: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಗ್ರಾಮೀಣ ಕುಡಿಯುವ ನೀರು ಪ್ರಯೋಗಾಲಯ ಘಟಕ ಸ್ಥಾಪನೆ ಅವ್ಯವಹಾರವನ್ನು ತನಿಖೆಗೆ ಒಳಪಡಿಸಲು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಆದೇಶಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಅಧಿಕಾರಿಗಳು ಕಾನೂನು ಮೀರಿ 474 ಕೋಟಿ ರೂ.ಟೆಂಡರ್ನ್ನು ಕರೆದಿದ್ದಾರೆ. ಈ ಟೆಂಡರ್ಗೆ ಸಂಬಂಧಪಟ್ಟಂತೆ ಅಧಿಕಾರಿಗಳು ರಾಜ್ಯಪಾಲರ ಅನುಮೋದನೆ ದೊರೆಯುವ ಮೊದಲೇ ಹಾಗೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಸುಮಾರು 7 ಸಭೆಗಳನ್ನು ಕಾನೂನು ಬಾಹಿರವಾಗಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಯುಕ್ತ ಸಮಿತಿಯನ್ನು ಸಂಪುಟದ ಮುಂದೆ ತಂದು ರದ್ದುಪಡಿಸಲು ಆದೇಶಿಸಲಾಗಿದೆ ಎಂದು ಹೇಳಿದರು. ಶೆಟ್ಟರ್ ಕಾಲದಲ್ಲಿ ಅಧಿಕಾರಿಗಳಿಗೆ 100 ಕೋಟಿ ರೂ.ವರೆಗೆ ಟೆಂಡರ್ ಕರೆಯಲು ಅಧಿಕಾರ ನೀಡಲಾಗಿತ್ತು. ಆದರೆ, ಇವರು ವ್ಯಾಪ್ತಿಯನ್ನು ಮೀರಿ ಟೆಂಡರ್ ಕರೆದಿದ್ದಾರೆ. ಅಲ್ಲದೆ, ಸದ್ಯ ಲಭ್ಯವಿರುವ ಮಾಹಿತಿಯಂತೆ 110 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿಯನ್ನು ನಿಯಮಬಾಹಿರವಾಗಿ ನೀಡಲಾಗಿದೆ ಎಂದು ತಿಳಿಸಿದರು.