‘ಕೆಪಿಎಸ್ಸಿಗೆ ಬೋವಿ ಜನಾಂಗದ ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಿಸಿ’
ಬೆಂಗಳೂರು, ಮೇ 29: ಶೋಷಣೆಯ ಸುಳಿಗೆ ಸಿಕ್ಕಿ ನಲುಗುತ್ತಿರುವ ಬೋವಿ ಸಮಾಜದವರು ಉನ್ನತ ವಿದ್ಯಾಭ್ಯಾಸ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಗುರುತಿಸಿಕೊಳ್ಳಬೇಕೆಂದು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಇಂದಿಲ್ಲಿ ಕರೆ ನೀಡಿದರು.
ರವಿವಾರ ಇಲ್ಲಿನ ಜಸ್ಮಭವನದಲ್ಲಿ ಕರ್ನಾಟಕ ಬೋವಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 39ನೆ ವರ್ಷದ ಬೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬೋವಿ ಸಮಾಜಕ್ಕಾಗಿಯೇ ಸಂಘ-ಸಂಸ್ಥೆಗಳು, ನಿಗಮ- ಮಂಡಳಿಗಳು ಎಲ್ಲವೂ ಇವೆ. ಅವುಗಳ ಅನುಕೂಲ ಪಡೆದುಕೊಂಡು ಭೋವಿ ಜನಾಂಗದವರು ಮುಂದೆ ಬರಬೇಕು. ರಾಜಕೀಯ, ವೈದ್ಯಕೀಯ, ಶಿಕ್ಷಣ ಯಾವುದೆ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಬೋವಿ ಜನಾಂಗದವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡುವ ಮೂಲಕ ಜನಾಂಗದ ಏಳಿಗೆಗೆ ಕೈಜೋಡಿಸಬೇಕು ಎಂದು ಕೋರಿದರು.
ಮುಂದಿನ ದಿನಗಳಲ್ಲಿ ಬೋವಿ ಸಮಾಜದ ವಿದ್ಯಾರ್ಥಿಗಳಿಗಾಗಿಯೇ ಒಂದು ವಿದ್ಯಾ ಸಂಸ್ಥೆ ಹಾಗೂ ಬೋವಿ ಜನಾಂಗದಿಂದ ವ್ಯಕ್ತಿಯೊಬ್ಬರನ್ನು ಕೆಪಿಎಸ್ಸಿಗೆ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದು ತಂಗಡಗಿ ಇದೇ ವೇಳೆ ಭರವಸೆ ನೀಡಿದರು.
ಸಿ.ವಿ.ರಾಮನ್ನಗರ ಕ್ಷೇತ್ರದ ಶಾಸಕ ಎಸ್.ರಘು ಮಾತನಾಡಿ, ಬೋವಿ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 39ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ. ಈ ಬಾರಿಯ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಶೇ.90ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ 586 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅವರನ್ನು ಹೆಚ್ಚಿನ ವಿದ್ಯಾಭ್ಯಾಸ ಕೈಗೊಳ್ಳುವಂತೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಶತಮಾನಗಳಿಂದಲೂ ಹಿಂದುಳಿದ ವರ್ಗ ಎಂಬ ಹಣೆಪಟ್ಟಿ ಕಟ್ಟಿಕೊಂಡು, ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಭೋವಿ ಜನಾಂಗದವರು ಇನ್ನು ಮುಂದೆ ಉನ್ನತ ವ್ಯಾಸಂಗ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದುವಂತೆ ಮಾಡುವುದು ನಮ್ಮ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಭೋವಿ ಸಮುದಾಯ ಬಂಡೆ ಒಡೆಯಲು ಪ್ರಸಿದ್ಧಿಯಾಗಿದ್ದಾರೆ. ಕಷ್ಟದ ಜೀವನ ನಡೆಸುತ್ತಿದ್ದಾರೆ. ನಾನು ಶಿಕ್ಷಣ ಸಚಿವನಾಗಿದ್ದಾಗ ಜನಾಂಗದ ಏಳ್ಗೆಗೆ ನೆರವಾಗುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಭೋವಿ ಜನಾಂಗಕ್ಕೆ ಶಿಕ್ಷಣದಲ್ಲಿ ಅನುದಾನ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಬೇಕು ಎಂದರು.ತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾ ಮೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಮಾಕಳಿ ರವಿ, ಎಚ್.ರವಿ, ಎಂ. ಮುನಿರಾಜು, ಎಂ.ಆರ್.ವೇಣುಗೋಪಾಲ್, ಪಿ.ಕೃಷ್ಣಮೂರ್ತಿ, ಗೋಪಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.