ಮನೋದಾರ್ಢ್ಯತೆಯ ಸಾಕಾರ ಮೂರ್ತಿ ಮನೋಹರ್ ಐಚ್
ದೇಶದ ಮೊದಲ ಮಿಸ್ಟರ್ ಯುನಿವರ್ಸ್

ಒಂದಲ್ಲ ಒಂದು ಬಗೆಯಲ್ಲಿ ಪೂಜನೀಯ ಮನೋಹರ್ ಐಚ್ ಅವರನ್ನು ಕೇಳದವರು ಬಂಗಾಳದಲ್ಲಿ ಸಿಗುವುದು ವಿರಳ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗಿಂತ ಮುನ್ನ ಜನಿಸಿದವರು ಕೂಡಾ ಇಂದು ನಮ್ಮಾಂದಿಗಿಲ್ಲ. ಕಳೆದ ರವಿವಾರ ಐಚ್ 102ರ ಹರೆಯದಲ್ಲಿ ಇಹಲೋಕ ತ್ಯಜಿಸಿದರು. ಆದರೆ ಪ್ರತಿಯೊಬ್ಬ ಬಂಗಾಲಿಯ ಹೃದಯದಲ್ಲಿ ಅವರು ಸದಾ ವೀರಯೋಧನಾಗಿ ಅಜರಾಮರ, ಇವರು ಸ್ವತಂತ್ರ ಭಾರತದ ಮೊಟ್ಟಮೊದಲ ಮಿಸ್ಟರ್ ಯುನಿವರ್ಸ್ ಪ್ರಶಸ್ತಿ ಪಡೆದ ಕಟ್ಟಾಳು.
ನಾಲ್ಕಡಿ 11 ಇಂಚು ಎತ್ತರದ, ಬಂಗಾಳದ ಈ ವಾಮನರೂಪಿ ದೇಹದಾರ್ಢ್ಯ ಪಟು 1952ರಲ್ಲಿ ರಾಷ್ಟ್ರೀಯ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಶನ್‌ನ ಪ್ರಶಸ್ತಿ ಗೆದ್ದರು. ಅದೇ ದಶಕದಲ್ಲಿ ಏಷ್ಯನ್ ಗೇಮ್ಸ್ ನ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು. 90ರ ಹರೆಯದಲ್ಲಿ ಹಾಗೂ 100ನೆ ಹುಟ್ಟುಹಬ್ಬದ ಸಮಾರಂಭದಲ್ಲಿ ಕೂಡಾ ತಮ್ಮ ಮಾಂಸಖಂಡದ ಸಾಮರ್ಥ್ಯ ಪ್ರದರ್ಶಿಸಿ, ಅಚ್ಚರಿ ಮೂಡಿಸಿದ್ದರು. ದೇಹದಾರ್ಢ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ ಪ್ರಸ್ತುತ ಪೀಳಿಗೆಗೆ ಮನೋಹರ್ ಸೂರ್ತಿಯ ಚಿಲುಮೆ.
ಆದಾಗ್ಯೂ ಐಚ್ ಕೇವಲ ಕ್ರೀಡಾಪಟುವಷ್ಟೇ ಅಲ್ಲ; ಸಾರ್ವಜನಿಕವಾಗಿ ಹಲವಾರು ದೇಹದಾರ್ಢ್ಯ ಪ್ರದರ್ಶನ ಮೂಲಕ ಮನೆಮಾತಾಗಿದ್ದ ಬಂಗಾಲದ ಅಗ್ರಗಣ್ಯ ದೇಹದಾರ್ಢ್ಯ ಪಟುಗಳಲ್ಲೊಬ್ಬರು. ಇವರ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಮಂದಿ ಸೇರುತ್ತಿದ್ದರು. ಬರಿಗೈನಿಂದ ಉಕ್ಕಿನ ಸಲಾಕೆಯನ್ನು ಬಾಗಿಸುವ ಸಾಮರ್ಥ್ಯ ಹೊಂದಿದ್ದರು. ಆನೆ ಇವರ ಮೇಲೆ ನಡೆದರೂ ಗಾಯಗೊಳ್ಳದಷ್ಟು ಉಕ್ಕಿನಂಥ ಶರೀರ. ಟ್ರಕ್‌ಗಳನ್ನು ಎತ್ತಿಹಿಡಿಯುವಷ್ಟು ಪೌರುಷ.
ಸಾಮಾನ್ಯವಾಗಿ ಅವರು ಒಂದು ರಸಮಂಜರಿ ತಂಡದ ಜತೆ ಪಯಣಿಸುತ್ತಿದ್ದವರು ಎಂದು ಅವರ ಪ್ರದರ್ಶನಗಳನ್ನು 1970ರ ದಶಕದಲ್ಲೇ ಆನಂದಿಸಿ ಅಭಿಮಾನಿಯಾಗಿದ್ದ 55 ವರ್ಷದ ಚಂದನ್‌ಬೋಸ್ ನೆನಪಿಸಿಕೊಳ್ಳುತ್ತಾರೆ. ''ಇಡೀ ಸಭಾಗೃಹವನ್ನೇ ತಲೆದೂಗಿಸಿದ ಅವರ ಪ್ರದರ್ಶನವನ್ನು ನಾನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ರಸಮಂಜರಿಯಲ್ಲಿ ಗಾನಸುಧೆ ಹರಿಯುತ್ತಿದ್ದರೆ, ಆ ತಾಳ ಹಾಗೂ ಲಯಕ್ಕೆ ತಕ್ಕಂತೆ ಐಚ್ ಅವರ ಮಾಂಸಖಂಡಗಳು ನರ್ತಿಸುತ್ತಿದ್ದವು'' ಅವರ ದೀರ್ಘಾಯುಷ್ಯದ ಗುಟ್ಟು ಅವರೇ ಹೇಳಿಕೊಂಡಂತೆ ತೀರಾ ಸರಳ. ಮೀನು, ಹಾಲು ಹಾಗೂ ಅಲ್ಪಪ್ರಮಾಣದ ತರಕಾರಿಯ ಹಿತಮಿತ ಸೇವನೆ. ದೇಹದ ಆರೈಕೆಗೆ ಸದಾ ಒತ್ತು ನೀಡುತ್ತಿದ್ದುದು. ''ನಿಮ್ಮ ಜೀರ್ಣಶಕ್ತಿ ಸಮರ್ಪಕವಾಗಿದ್ದರೆ, ನಿಮ್ಮ ದೇಹವನ್ನು ನೀವು ಸಮರ್ಪಕವಾಗಿ ಆರೈಕೆ ಮಾಡಿಕೊಂಡಂತೆ'' ಎಂದು ಅವರು ಒಮ್ಮೆ 'ಆನಂದ್‌ಬಜಾರ್ ಪತ್ರಿಕಾ' ಎಂಬ ಬೆಂಗಾಲಿ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಜತೆಗೆ ವೈದ್ಯರು ನಿಮ್ಮ ಮನೆಯಿಂದ ಹೊರಗೆಯೇ ಉಳಿಯುತ್ತಾರೆ...! ಎನ್ನುವುದು ಅವರ ಅಭಿಮತ.
ಇಂದಿನ ಬಾಂಗ್ಲಾದೇಶದಲ್ಲಿರುವ ಕೊಮಿಲ್ಲಾ ಗ್ರಾಮದಲ್ಲಿ ಜನಿಸಿದ ಐಚ್, ಬಾಲ್ಯದಲ್ಲೇ ಅಂದರೆ 12 ವರ್ಷದವರಿದ್ದಾಗಲೇ ಕಾಳಜ್ವರ ಎಂಬ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಗೆದ್ದವರು. 1942ರಲ್ಲಿ ಬ್ರಿಟಿಷ್ ರಾಯಲ್ ಏರ್‌ೆರ್ಸ್ ಸೇರಿದರು. ಅಲ್ಲಿ ಅಕಾರಿಯೊಬ್ಬರು ಇವರನ್ನು ದೇಹದಾರ್ಢ್ಯ ತರಬೇತಿಗೆ ಪರಿಚಯಿಸಿದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ ಅಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ಜೈಲು ಸೇರಿದರು. ಇದು ಆ ಪ್ರತಿಕೂಲ ಪರಿಸ್ಥಿತಿಯಲ್ಲೂ ಇವರಿಗೆ ವರದಾನವಾಯಿತು. ಜೈಲಿನಲ್ಲಿದ್ದ ಸುದೀರ್ಘ ಅವಯನ್ನು ತಮ್ಮ ದೇಹವನ್ನು ಕಟ್ಟುಮಸ್ತಾಗಿಸುವ ಕಸರತ್ತಿಗೆ ಸದುಪಯೋಗಪಡಿಸಿಕೊಂಡರು.
ಭಾರತ ಸ್ವತಂತ್ರಗೊಂಡ ಬಳಿಕ ಬಿಡುಗಡೆಯಾದ ಇವರು, 1950ರಲ್ಲಿ ಹರ್ಕ್ಯುಲೆಸ್ ಪ್ರಶಸ್ತಿ ಪಡೆಯುವ ಮೂಲಕ, 'ಪಾಕೆಟ್ ಹರ್ಕ್ಯುಲೆಸ್' ಎಂಬ ಅಭಿದಾನ ಪಡೆದರು. 1951ರ ಮಿಸ್ಟರ್ ಯುನಿವರ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ಇದು ಮರಳಿ ಯತ್ನ ಮಾಡಲು ಸ್ಪೂರ್ತಿಯಾಯಿತು. ಸಹಜವಾಗಿಯೇ ಮರು ವರ್ಷದ ಸ್ಪರ್ಧೆಯಲ್ಲಿ ಅವರು ಪ್ರತಿಷ್ಠಿತ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡು, ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬೋಸ್ ಅವರ ಪ್ರಕಾರ, ಐಚ್ ತಾವು 1952ರಲ್ಲಿ ಹೇಗೆ ವಿಶ್ವ ಕಿರೀಟ ಜಯಿಸಿದೆ ಎನ್ನುವುದನ್ನು ಸಾರ್ವಜನಿಕ ಪ್ರದರ್ಶನಗಳಲ್ಲಿ ಸದಾ ನೆನಪಿಸಿಕೊಳ್ಳುತ್ತಿದ್ದರು. ''ಮೊದಲಿಗೆ 1952ರಲ್ಲಿ ಮಿಸ್ಟರ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ ದೇಹದಾರ್ಢ್ಯ ಪಟುಗಳಿಂದ ಭೀತಿಗೆ ಒಳಗಾದೆ. ಎಲ್ಲರೂ ನನ್ನ ವಿರುದ್ಧ ಶಕ್ತಿ ಪ್ರದರ್ಶಿಸುತ್ತಿದ್ದರು. ಇದನ್ನು ಮೀರಿಸುವ ಪ್ರದರ್ಶನ ನೀಡಲು ಬಯಸಿದೆ. ನನ್ನ ಕೈಗಳನ್ನು ದೇಹದ ಹಿಂದಕ್ಕೆ ತಂದು, ಅಪೂರ್ವ ಎನಿಸಿದ ಇಡೀ ದೇಹಸೌಷ್ಟವವನ್ನು ಪ್ರೇಕ್ಷಕರಿಗೆ ಪ್ರದರ್ಶಿಸಿದೆ. ಇದು ಆ ವರ್ಷ ಪ್ರಶಸ್ತಿ ಜಯಿಸಲು ಕಾರಣವಾಯಿತು.''
ರವಿವಾರ ಮಧ್ಯಾಹ್ನ ಅವರ ಸಾವಿನ ಸುದ್ದಿಯನ್ನು ಘೋಷಿಸಿದಾಗ, ಇಡೀ ಬಂಗಾಳ ಶೋಕಸಾಗರದಲ್ಲಿ ಮುಳುಗಿತು. ಸ್ವಾತಂತ್ರ್ಯಾನಂತರ ಬೆಳೆದ ಪೀಳಿಗೆ ಗಳಿಗೆ ಐಚ್ ನಿಜವಾದ ಹೀರೊ. ಸಾವಿರಾರು ಮಂದಿ ದೇಹದಾರ್ಢ್ಯತೆ ಮೈಗೂಡಿಸಿಕೊಳ್ಳಲು ಸೂರ್ತಿಯಾದವರು. ಸ್ಪರ್ಧೆಗಾಗಿ ಅಲ್ಲದಿದ್ದರೂ, ನಮ್ಮ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಲಕ್ಷಾಂತರ ಮಂದಿಗೆ ಪ್ರೇರಣೆಯಾದವರು. ಬಹುತೇಕ ತಮ್ಮ ಬದುಕಿನ ಕೊನೆಯ ದಿನದ ವರೆಗೂ ಸ್ವಾಸ್ಥ್ಯ ಹಾಗೂ ಅರಿವು ಉಳಿಸಿಕೊಂಡವರು. ತಮ್ಮ ಸಾಧನೆ ಬಗ್ಗೆ ಸದಾ ತೃಪ್ತಿಯಿಂದ ಇದ್ದ ಅಪೂರ್ವ ಜೀವ.
''ಫಿಟ್ನೆಸ್ ಎಂಬ ಪದ ಅವರ ಹೆಸರಿನ ಜತೆಗೇ ಥಳುಕು ಹಾಕಿಕೊಂಡಿದೆ'' ಎನ್ನುತ್ತಾರೆ ಅವರ ಮಗ ಹಾಗೂ ಜಿಮ್ನಾಶಿಯಂ ನಡೆಸುತ್ತಿರುವ ಬಿಷ್ಣು ಐಚ್. ನನ್ನ ತಂದೆ ಸದಾ ಮಾನಸಿಕ ದೃಢತೆಗೆ ಒತ್ತು ನೀಡುತ್ತಿದ್ದರು. ಬಳಿಕ ದೈಹಿಕ ದೃಢತೆಗೆ ಆದ್ಯತೆ ನೀಡುತ್ತಿದ್ದರು. ತಮ್ಮ ಮಾಂಸಖಂಡಗಳನ್ನು ಬೆಳೆಸುವ ಸಲುವಾಗಿ ಜಿಮ್‌ಗಳಿಗೆ ಧಾಂಗುಡಿ ಇಡುವ ಆಧುನಿಕ ಪ್ರವೃತ್ತಿಯನ್ನು ಅವರು ಎಂದೂ ಇಷ್ಟಪಡುತ್ತಿರಲಿಲ್ಲ. ಅವರ ಸಿದ್ಧಾಂತ ತೀರಾ ಸರಳ- ನಿಮ್ಮ ಮನಸ್ಸನ್ನು ಸದೃಢವಾಗಿಡಿ ಎನ್ನುವುದು.
ಕೃಪೆ: scroll.in