ಮಹಿಳಾ ಆಯೋಗ ಸದಸ್ಯೆಯ ತಲೆದಂಡ
ಜೈಪುರ,ಜೂ.30: ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಕ್ಕಾಗಿ, ವಿವಾದಕ್ಕೆ ಸಿಲುಕಿರುವ ರಾಜಸ್ಥಾನ ಮಹಿಳಾ ಸಮಿತಿಯ ಸದಸ್ಯೆ ಸೌಮ್ಯಾ ಗುಜ್ಜಾರ್ ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ತನ್ನ ಪತಿಯ ಕುಟುಂಬಿಕರಿಂದಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾದ 28 ವರ್ಷದ ಯುವತಿಯೊಬ್ಬಳು ಬುಧವಾರ ರಾಜಸ್ಥಾನ ಮಹಿಳಾ ಆಯೋಗಕ್ಕೆ ದೂರು ನೀಡಲು ಬಂದಿದ್ದಾಗ, ಆಕೆಯೊಂದಿಗ ಸೌಮ್ಯಾ ಗುಜ್ಜಾರ್ ಸೆಲ್ಫಿ ತೆಗೆಸಿಕೊಂಡಿದ್ದರು.
ಅತ್ಯಾಚಾರ ಸಂತ್ರಸ್ತೆಯ ಜೊತೆ ಗುಜ್ಜಾರ್ಕ್ಲಿಕ್ಕಿಸಿದ ಎರಡು ಸೆಲ್ಫಿ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಭಾರೀ ವಿವಾದವನ್ನು ಸೃಷ್ಟಿಸಿತ್ತು. ಈ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾರಾಜೇ ಅವರು ಸೌಮ್ಯಾ ಗುಜ್ಜಾರ್ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಸೌಮ್ಯಾ ಗುಜ್ಜಾರ್ ದಾಖಲೆಗಳಿಗಾಗಿ ತಾನು ಸಂತ್ರಸ್ತೆಯ ಪೋಟೋಗಳನ್ನು ತೆಗೆದಿರುವುದಾಗಿ ಆಕೆ ಸ್ಪಷ್ಟೀಕರಣ ನೀಡಿದ್ದಾರೆ. ವಿನಾಕಾರಣ ಈ ವಿಷಯಕ್ಕೆ ವಿವಾದದ ಬಣ್ಣ ಬಳಿಯಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಯೋಗ ಶಿಕ್ಷಣದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಸುಮನ್ ಗುಜ್ಜ್ಜಾರ್ ಅವರನ್ನು ರಾಜಸ್ಥಾನ ಸರಕಾರವು ಜನವರಿಯಲ್ಲಿ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಿಸಿತ್ತು.