ಬಡವರಿಗಾಗಿ 1,000 ಮನೆಗಳನ್ನು ಕಟ್ಟಿಸುತ್ತಿರುವ ಮಲೆಯಾಳಂ ನಟ ದಿಲೀಪ್
ಆಲುವ,ಜುಲೈ 24: ಮಲೆಯಾಳಂ ಚಲನಚಿತ್ರ ನಟ ದಿಲೀಪ್ರ ಜಿ.ಪಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಕೇರಳ ಆಕ್ಷನ್ ಪೋರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಬಡವರಿಗಾಗಿ ಸುರಕ್ಷಿತ ಮನೆ ಯೋಜನೆಯ ಅಂಗವಾಗಿ ಮೊದಲ ಹಂತದ 140 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆಎಂದು ವರದಿಯಾಗಿದೆ. ಕೇರಳದ ಪ್ರತಿಜಿಲ್ಲೆಗಳಲ್ಲೂ ಹತ್ತು ಮನೆಗಳನ್ನು ಕಟ್ಟಿಸಲು ತೀರ್ಮಾನಿಸಲಾಗಿದ್ದು ಈ ಯೋಜನೆಯು ಘೋಷಣೆಯಾದ ಕೂಡಲೇ ಹಲವಾರು ಅರ್ಜಿಗಳು ಬಂದಿದ್ದವು. ಸಾವಿರ ಮನೆಗಳನ್ನು ಕಟ್ಟಿಸುವ ಯೋಜನೆಯಾಗಿದ್ದರೂ ಅದಕ್ಕಿಂತ ಐದು ಪಟ್ಟು ಹೆಚ್ಚು ಅರ್ಜಿಗಳು ಮನೆಗಾಗಿ ಕೋರಿಕೆ ಮುಂದಿಟ್ಟು ಬಂದಿವೆ ಎಂದು ಆಕ್ಷನ್ ಪೋರ್ಸ್ ಪದಾಧಿಕಾರಿಗಳು ಹೇಳಿದ್ದಾರೆ.
ಮಲಬಾರ್ ಪ್ರಾಂತದಿಂದ ಹೆಚ್ಚು ಅರ್ಜಿಗಳು ಬಂದಿವೆ. ಆಲುವದಲ್ಲಿ ಸ್ಕೂಟರ್ನಲ್ಲಿ ಪ್ರಯಾಣಿಸುತಿದ್ದ ಮರಬಿದ್ದು ಮೃತರಾಗಿದ್ದ ಸುರೇಶ್ ಎಂಬವರ ಕುಟುಂಬ ಮನೆಕಟ್ಟಿಸಿಕೊಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಇವರಿಗೆ ಸ್ವಂತ ಸ್ಥಳ ಇರಲಿಲ್ಲ. ಅರ್ಜಿಹಾಕುವವರಿಗೆ ಕನಿಷ್ಠ ಎರಡು ಸೆಂಟ್ಸ್ ಸ್ಥಳವಾದರೂ ಇರಬೇಕೆಂದು ನಿಯಮದಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಯಾವುದೇ ಉದ್ಯೋಗದಲ್ಲಿಲ್ಲದ ವಿಧವೆಯರಿಗೆ ಆದ್ಯತೆ ನೀಡಲಾಗುತ್ತಿದೆ. ದಿಲೀಪ್ ಅಭಿಮಾನಿಗಳ ಸಂಘ ಹಾಗೂ ಆಕ್ಷನ್ ಪೋರ್ಸ್ನ ಸ್ವಯಂಸೇವಕರು ಅರ್ಜಿಹಾಕುವವರ ಕುರಿತು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಜನರ ಸಹಕಾರದಲ್ಲಿ ಸುರಕ್ಷಿತ ಮನೆ ಯೋಜನೆಯನ್ನು ಪೂರ್ತಿಗೊಳಿಸಲಾಗುವುದು ಎಂದು ಯೋಜನೆಯ ಬ್ರಾಂಡ್ ಅಂಬಾಸಡರ್ ಕೂಡಾ ಆದ ನಟ ದಿಲೀಪ್ ಹೇಳಿದ್ದಾರೆಎಂದು ವರದಿಯಾಗಿದೆ.