ರಾಜ್ಯದ ಜನತೆ ಭಯ ಪಡುವ ಅಗತ್ಯವಿಲ್ಲ: ಎಚ್.ಕೆ.ಪಾಟೀಲ್
ಬೆಂಗಳೂರು, ಜು.27: ಮಹಾದಾಯಿ ್ಯಾಯಾಧಿಕರಣದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿ ರುವುದರಿಂದ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಅಭಯ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿಯಲ್ಲಿ ಲಭ್ಯವಾಗುವ 200 ಟಿಎಂಸಿ ನೀರಿನ ಪೈಕಿ 45 ಟಿಎಂಸಿ ನೀರು ನಮ್ಮ ನೆಲದಲ್ಲಿ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಮಗೆ ಸಿಗಬೇಕಾದ ನ್ಯಾಯಯುತವಾದ ನೀರಿನ ಪಾಲು ಬರಲೇಬೇಕು. ಆದರೆ, ನೀರು ಸಿಗುವುದರಲ್ಲಿ ಆಗುತ್ತಿರುವ ವಿಳಂಬ ಜನರಲ್ಲಿ ಆಕ್ರೋಶ ಮೂಡಿಸುತ್ತಿದೆ ಎಂದರು. ರಾಜ್ಯ ಸರಕಾರ ಪ್ರಧಾನಿ ಬಳಿ ನಿಯೋಗ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಸ್ಪಷ್ಟಪಡಿಸಿತ್ತು. ಅಲ್ಲದೆ, ರಾಜ್ಯ ಸರಕಾರ ಹಾಗೂ ಜನತೆಯ ನಿಲುವನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ, ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷ ಧೋರಣೆ ತಾಳಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನ್ಯಾಯಯುತ ಬೇಡಿಕೆಗಾಗಿ ಕಾನೂನು ಹಾಗೂ ರಾಜಕೀಯ ಹೋರಾಟವನ್ನು ಮುಂದುವರಿಸುತ್ತೇವೆ. ಇಂತಹ ಮಹತ್ವದ ವಿಚಾರಗಳಲ್ಲಿ ಕೇಂದ್ರ ಸರಕಾರ ಗಂಭೀರ, ವಿವೇಕ ಹಾಗೂ ವಿವೇಚನೆಯಂತೆ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ನಾವು ರಾಜಕೀಯ ಹಾಗೂ ಕಾನೂನು ಹೋರಾಟವನ್ನು ಮತ್ತಷ್ಟು ಬಲಗೊಳಿಸು ತ್ತೇವೆ. ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.