ಮಚಲಿ ಎಂಬ ರಣತಂಬೋರ್ ರಾಣಿ!

ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಈಕೆಗೆ ಜೀವಮಾನದ ಸಾಧನೆ ಪ್ರಶಸ್ತಿ ಸಂದಿತ್ತು. ಈಕೆಯ ಗೌರವಾರ್ಥ ಅಂಚೆಚೀಟಿ ಬಿಡುಗಡೆಯಾಗಿತ್ತು. ಈಕೆ ಕೊನೆಯುಸಿರೆಳೆದಾಗ, ಪೊಲೀಸರು, ಹೂಗುಚ್ಛವಿರಿಸಿದ್ದ ಆಕೆಯ ದೇಹಕ್ಕೆ ಹೆಗಲುಕೊಟ್ಟರು. ಈಕೆಯ ಭಾವಪೂರ್ಣ ವಿದಾಯದಲ್ಲಿ ಹಲವು ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು. ಆಕೆಯ ಮಕ್ಕಳು ಸುಸ್ಥಿತಿಯಲ್ಲಿದ್ದಾರೆ. ನಾವು ಮಾತನಾಡುತ್ತಿರುವುದು ಅಪರೂಪದ ಹೆಣ್ಣುಹುಲಿಯ ಬಗ್ಗೆ!
ರಣತಂಬೋರ್ ಹುಲಿಧಾಮದ ಒಡತಿ ಮಚಲಿ ಈ ವಾರ ಕೊನೆಯುಸಿರೆಳೆದಳು. ಜೀವದಲ್ಲಿದ್ದಾಗಿನಂತೆ ಸತ್ತಮೇಲೂ ಆಕೆ ಅಭೇದ್ಯ ಕಾನನ ಜಗತ್ತಿನ ರಾಣಿ. ಥಟ್ಟನೇ ಗಮನ ಸೆಳೆಯುತ್ತಿದ್ದ ಈ ದೈತ್ಯ ಪಟ್ಟಿಯ ಮಚಲಿ ಸಾವಿನ ಬಳಿಕವೂ ಜೀವನದಲ್ಲಿದ್ದಾಗ ಇದ್ದಷ್ಟೇ ಗಮನ ಸೆಳೆಯುತ್ತಿದ್ದಳು. ಸೆಟೆದು ನಿಂತ, ನಿರ್ಭೀತ ಹಾಗೂ ಧೀರ ಹೆಣ್ಣುಹುಲಿ. ವಿಶ್ವದ ಅತ್ಯಂತ ಹಳೆ ಹುಲಿ ಎಂಬ ಹೆಗ್ಗಳಿಕೆಗೆ ಅನ್ವರ್ಥವಾಗಿ ಬದುಕಿದವಳು. ಪ್ರಾಣಿಗಳ ಪೈಕಿ ದಂತಕಥೆ ಎನಿಸಿಕೊಂಡವಳು.
ಬಹುಶಃ ಭಾರತದಲ್ಲಿ ವನ್ಯಪ್ರಾಣಿಗಳ ಬಗೆಗಿನ ವೈಯಕ್ತಿಕ ಗುರುತಿಸಿಕೊಳ್ಳುವಿಕೆ ಆರಂಭವಾದದ್ದು ಮಚಲಿಯಿಂದ. ಉದಾಹರಣೆಗೆ ದೈತ್ಯ ಹುಲಿ ಜೈ ಉಮ್ರೆಡ್ನಿಂದ ಈ ವರ್ಷ ಕಣ್ಮರೆಯಾದಾಗ, ಅದನ್ನು ಹುಡುಕಲು ಅರಣ್ಯ ಇಲಾಖೆಯ ದೊಡ್ಡ ತಂಡವೇ ಕಾರ್ಯಾಚರಣೆಗೆ ಇಳಿದಿತ್ತು. ಫೆೇಸ್ಬುಕ್ನಂಥ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳೂ ಸ್ಪಂದಿಸಿದವು. ರಣತಂಬೋರ್ನ ಇನ್ನೊಂದು ಹುಲಿ ಉಸ್ತಾದ್ ಕಳೆದ ವರ್ಷ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿತು.
ಅರಣ್ಯ ರಕ್ಷಕರೊಬ್ಬರನ್ನು ಹತ್ಯೆ ಮಾಡಿದ ಆರೋಪದಲ್ಲಿ ಉಸ್ತಾದ್ನನ್ನು ಮೃಗಾಲಯಕ್ಕೆ ಕಳುಹಿಸಲು ಮುಂದಾದಾಗ, ದೊಡ್ಡ ಭಾವನಾತ್ಮಕ ಹಾಗೂ ರಾಜಕೀಯ ವಿವಾದ ಹುಟ್ಟಿಕೊಂಡಿತು. ಉಸ್ತಾದ್ ಪ್ರೇಮಿಗಳು ಭಾರತದ ಹಲವು ನಗರಗಳಲ್ಲಿ ಮೊಂಬತ್ತಿ ಯಾತ್ರೆ ನಡೆಸಿದರು. ಜೈಲಿನಿಂದ ಉಸ್ತಾದ್ನನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು. ಉಸ್ತಾದ್ ರಣತಂಬೋರ್ನಲ್ಲೇ ಉಳಿಯುವಂತಾಗಬೇಕು ಎಂದು ಆಗ್ರಹಿಸಿ ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಕರಣವೂ ದಾಖಲಾಯಿತು. ಕ್ರಮೇಣ ಉಸ್ತಾದ್ ಮೃಗಾಲಯ ಸೇರಬೇಕಾಯಿತಾದರೂ, ಉಸ್ತಾದ್ ಉದ್ಯಾನವನದ ಕೆಲ ಭಾಗಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ಬಲಿಪಶುವಾಗಬೇಕಾಯಿತು ಎಂದು ಕೆಲವರು ಅಭಿಪ್ರಾಯಪಟ್ಟರು.
ಈ ನಿದರ್ಶನದಲ್ಲಿ, ಹೀಗೆ ಒಂದು ಪ್ರಾಣಿಯ ಬಗ್ಗೆ ವೈಯಕ್ತಿಕ ಮಾಲಕತ್ವದ ಭಾವನೆ ಬರುವುದರಿಂದ ಅವುಗಳ ಸಂರಕ್ಷಣೆಗೆ ಪೂರಕವಾಗುತ್ತದೆ. ಖಂಡಿತವಾಗಿಯೂ ಮಚಲಿ ಇಂಥ ವೈಯಕ್ತಿಕ ಸಂರಕ್ಷಣಾ ವಿಧಾನಕ್ಕೆ ನಾಂದಿ ಹಾಡಿದ ಹುಲಿ ಎನ್ನಬಹುದು. ವರ್ಷವಿಡೀ, ಸಾಕ್ಷ್ಯ ಚಿತ್ರಗಳಿಗೆ, ಫೋಟೊಗಳಿಗೆ ಹಾಗೂ ವಿಕಿಪೀಡಿಯಾ ಪುಟಕ್ಕೂ ವಸ್ತುವಾದಳು. ಎಲ್ಲದರಲ್ಲೂ ಈಕೆ ಕೇಂದ್ರಬಿಂದು.
ಈ ದಂತಕಥೆಯ ಮೊದಲ ಗುರುತು ಹೊರಬಂದದ್ದು ಸತ್ಯದಿಂದ; ಆಕೆಯ ದಿಟ್ಟತನದಿಂದ. ಛಾಯಾಗ್ರಾಹಕ ಹಲವು ಪೀಳಿಗೆಗಳಿಗೆ, ಪ್ರವಾಸಿಗಳಿಗೆ ಹುಲಿಯ ಸಮಾಜಶಾಸ್ತ್ರ ಹಾಗೂ ನಡವಳಿಕೆಯ ಹಲವು ಒಳನೋಟಗಳಿಗೆ ಮಚಲಿ ಅವಕಾಶ ಮಾಡಿಕೊಟ್ಟಳು. ರಣತಂಬೋರ್ನಲ್ಲಿ ಟೂರಿಸ್ಟ್ ಜಿಪ್ಸಿ ವಾಹನಗಳ ಸುತ್ತ ಸದಾ ಕಾಣಿಸಿಕೊಳ್ಳುತ್ತಿದ್ದಳು. ಕಣ್ಣುಮಿಟುಕಿಸದೇ, ಯಾವ ಕಾಟವೂ ಇಲ್ಲದೇ ಕಾಣಿಸಿಕೊಳ್ಳುತ್ತಿದ್ದಳು. ತೀರಾ ಗಮನಾರ್ಹ ಎನಿಸುವಷ್ಟು ಆತ್ಮವಿಶ್ವಾಸ ಆಕೆಯಲ್ಲಿತ್ತು. ಆಕೆ ಮುಕ್ತ ಹಾಗೂ ಸ್ವಚ್ಛಂದವಾಗಿ ರಾಸಲೀಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಮರಿಗಳೊಂದಿಗೆ ಮುಕ್ತವಾಗಿ ಸಂಚರಿಸುತ್ತಿದ್ದಳು.
ಜನರ ಅಸ್ತಿತ್ವದ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ವೈಲ್ಡ್ಲೈಫ್ ಪ್ರೊಟೆಕ್ಷನ್ ಸೊಸೈಟಿಯ ಬೆಲಿಂಡಾ ರೈಟ್ ಹೇಳುತ್ತಾರೆ. ಮಚಲಿ ಹೇಗೆ ತನ್ನ ಮರಿಗಳನ್ನು ಹಾಗೂ ಆಹಾರವನ್ನು ರಕ್ಷಿಸುವ ಸಲುವಾಗಿ ಮೊಸಳೆ ಜತೆ ಹೋರಾಡಿತ್ತು ಎನ್ನುವುದನ್ನು ರೈಟ್ ನೆನಪಿಸಿಕೊಳ್ಳುತ್ತಾರೆ. ಸುಮಾರು ಒಂದೂವರೆ ಗಂಟೆ ಕಾಲ ದೈತ್ಯ ಮೊಸಳೆ ಜತೆಗಿನ ಹೋರಾಟದಲ್ಲಿ ಎರಡು ಹಲ್ಲುಗಳನ್ನು ಕಳೆದುಕೊಂಡಿತ್ತು. ಆದರೆ ಮಾತೃತ್ವದ ಪ್ರೀತಿ, ರಕ್ಷಣಾತ್ಮಕ ಮನೋಭಾವ, ಸಾಹಸ, ಹಾಗೂ ಸಾಹಸವನ್ನು ಇಡೀ ಮನುಕುಲಕ್ಕೆ ತೋರಿಸಿಕೊಟ್ಟಿತು. ರಣತಂಬೋರ್ ಹಾಗೂ ಸರಿಸ್ಕಾ ಹುಲಿ ಜೀವಶಾಸ್ತ್ರ ಪ್ರದೇಶದಲ್ಲಿ ಮಚಲಿ ಪಾತ್ರ ಅತ್ಯಂತ ಮಹತ್ವದ್ದು.
ಸುಮಾರು ಒಂದು ದಶಕದ ಕಾಲ ರಣತಂಬೋರ್ನ ಕೆರೆ ಪ್ರದೇಶದಲ್ಲಿ ಇದು ಅಧಿಪತ್ಯ ಸ್ಥಾಪಿಸಿತ್ತು. ಪ್ರವಾಸಿಗಳು ಹಾಗೂ ಕ್ಯಾಮರಾ ಮುಂದೆ ಆಕೆಯ ಆತ್ಮವಿಶ್ವಾಸ ಅಚ್ಚರಿಕೆಗೆ ಕಾರಣವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮರಿಗಳೊಂದಿಗೆ ರಣತಂಬೋರ್ ಉದ್ಯಾನವನದ ಹುಲಿ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದಳು ಎಂದು ರೈಟ್ ಹೇಳುತ್ತಾರೆ.
ಅದು ಕೇವಲ ರಣತಂಬೋರ್ನಲ್ಲಿ ಮಾತ್ರವಲ್ಲ.
2005ರ ವೇಳೆಗೆ ಸರಿಸ್ಕಾದಲ್ಲಿ ಕಳ್ಳಬೇಟೆಯಿಂದಾಗಿ ಎಲ್ಲ ಹುಲಿಸಂತತಿ ನಾಶವಾಯಿತು. ನಿರ್ಲಕ್ಷ ಹಾಗೂ ರಾಜಕೀಯ ಕಾರಣ ಹೊಂದಿರುವ ಆಧುನಿಕ ಹುಲಿ ಸಂರಕ್ಷಣೆಯ ಕಾಲಘಟ್ಟದಲ್ಲಿ, ಹುಲಿಧಾಮವನ್ನು ಮರು ಸ್ಥಾಪಿಸುವುದು ಅನಿವಾರ್ಯವಾಯಿತು. ಆಗ ಮಚಲಿಯ ಎರಡು ಮರಿಗಳನ್ನು ಹಿಡಿದು ವಿಮಾನದ ಮೂಲಕ ಸರಿಸ್ಕಾಗೆ ರವಾನಿಸಲಾಯಿತು.
ಮಾ ಮಚಲಿ, ಕ್ವೀನ್ ಮದರ್, ಲೇಡಿ ಆ ಲೇಕ್ ಎನ್ನುವುದು ಈಕೆಯ ಜನಪ್ರಿಯ ಹೆಸರುಗಳು. ಆದರೆ ಆಕೆಯ ಮಾತೃತ್ವದ ಐಡೆಂಟಿಟಿ, ಹುಲಿಗಳ ನಡವಳಿಕೆಯನ್ನು ಅರಿಯುವ ಪ್ರಮುಖ ಸಾಧನವಾಯಿತು. ಹುಲಿಗಳು ತಮ್ಮ ಪ್ರದೇಶವನ್ನು ಕಾಪಾಡಿಕೊಳ್ಳುತ್ತವೆ; ಮರಿಗಳನ್ನು ಅದರಲ್ಲೂ ಮುಖ್ಯವಾಗಿ ಗಂಡುಮರಿಗಳನ್ನು ಹೊರಹಾಕುತ್ತವೆ ಎಂಬ ನಡವಳಿಕೆಗಳು ಈಕೆಯಿಂದ ತಿಳಿದುಬಂದವು. ಅವುಗಳು ಜೀವಕ್ಕಾಗಿ ಪ್ರಾಂತವನ್ನು ರಕ್ಷಿಸಿಕೊಳ್ಳುತ್ತವೆ. ಮಚಲಿ ಸುದೀರ್ಘ ಕಾಲ ಬಾಳಿದ ಹುಲಿ. ಹುಲಿಗಳ ಸರಾಸರಿ ಆಯಸ್ಸಿಗಿಂತ ಅಧಿಕ ಕಾಲ ಬದುಕಿದ್ದಳು. ತನ್ನ ಹುಟ್ಟಿದ ಜಾಗದ ಸುತ್ತಮುತ್ತವೇ ಉಳಿದಿದ್ದಳು. ಅಕ್ಕಪಕ್ಕದಲ್ಲಿ ಇತರ ಹೆಣ್ಣುಹುಲಿಗಳೂ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಳು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಜಿ ಸದಸ್ಯ ರಾಜೇಶ್ ಗೋಪಾಲ್ ಹೇಳುತ್ತಾರೆ. ಆಕೆಯ ಆಕರ್ಷಕ ಸ್ಥಾನಮಾನವನ್ನು ಹುಲಿ ಸಂರಕ್ಷಣೆಯನ್ನು ಬಲಪಡಿಸಿಕೊಳ್ಳಲು ಬಳಸುವ ಅಗತ್ಯವಿದೆ. ಇದರ ಬಹುತೇಕ ಹೊಗಳಿಕೆಗೆ ಸಲ್ಲಬೇಕಾದ್ದು, ಆಕೆಯ ಮೇಲೆ ನಿಗಾ ಇಟ್ಟಿದ್ದ ಕ್ಷೇತ್ರ ಸಿಬ್ಬಂದಿಗೆ.
ವೈಯಕ್ತಿಕ ಪ್ರಾಣಿಗಳ ಜತೆ ಸಲುಗೆ, ಹೆಸರು ಇಡುವುದು ಎಲ್ಲವೂ ಮನುಷ್ಯನ ಸ್ಥಾನಮಾನದಂತೆ ಸ್ಥಾನಮಾನ ಕಲ್ಪಿಸುವುದಕ್ಕೆ ಟೀಕೆಯೂ ಇಲ್ಲದಿಲ್ಲ. ವನ್ಯಮೃಗಳನ್ನು ಮಾನವನ ಜತೆ ಸಮೀಕರಿಸಬಾರದು ಹಾಗೂ ಹೆಸರಿಡಬಾರದು ಅಥವಾ ಕೃತಕವಾಗಿ ಪರಿಗಣಿಸಬಾರದು ಎಂದು ಹೇಳುವವರೂ ಇದ್ದಾರೆ. ಮಚಲಿ ತನ್ನ ಬೇಟೆ ಹಲ್ಲುಗಳನ್ನು ಕಳೆದುಕೊಂಡ ಬಳಿಕ, ಆಕೆಗೆ ಜೀವಂತ ಪ್ರಾಣಿಗಳನ್ನು ಆಹಾರವಾಗಿ ನೀಡಲಾಗುತ್ತಿತ್ತು. ರಣತಂಬೋರ್ನಲ್ಲಿ ಇತರ ಕೆಲ ಹುಲಿಗಳಿಗೂ ವೈದ್ಯಕೀಯ ನಿಗಾ ವ್ಯವಸ್ಥೆ ಇದೆ. ಆದರೆ ನಾವು ನೈಸರ್ಗಿಕ ಜಗತ್ತಿನಲ್ಲಿ ಹಸ್ತಕ್ಷೇಪ ಮಾಡಬಾರದು ಎನ್ನುವುದು ಕೆಲ ಸಂರಕ್ಷಣಾಕಾರರ ವಾದ. ಉಳಿಯಲು ಯೋಗ್ಯವಾದಷ್ಟೇ ಉಳಿಯುತ್ತದೆ ಎಂಬ ವಾದ ಅವರದ್ದು. ಕೆಲ ಪ್ರಾಣಿಗಳ ಬಗ್ಗೆ ಅತೀವ ಕಾಳಜಿ ವಹಿಸುವುದರಿಂದ ಇತರ ಕೆಲ ಪ್ರಾಣಿಗಳಿಗೆ ಅಗತ್ಯದಷ್ಟು ಕಾಳಜಿ ಸಿಗುತ್ತಿಲ್ಲ ಎನ್ನುವವರೂ ಇದ್ದಾರೆ.
ಮಾನವನ ಕಾಳಜಿಯಲ್ಲಿ ಬೆಳೆಸುವುದು, ಅಪರೂಪದ ಹಸ್ತಕ್ಷೇಪ ಇಂದಿನ ಪರಿಸರ ವ್ಯವಸ್ಥೆಯಲ್ಲಿ ಅಗತ್ಯ ಎಂದು ಕೆಲವರು ಪ್ರತಿಪಾದಿಸುತ್ತಾರೆ. ಇಂಥ ಒಂದು ದೊಡ್ಡ ಚರ್ಚೆಯನ್ನು ಮಚಲಿ ಸುಧೀರ್ಘ ಅವಧಿಯಿಂದ ಹುಟ್ಟುಹಾಕಿದ್ದಾಳೆ.
ರಣತಂಬೋರ್ ಸಣ್ಣ ಉದ್ಯಾನವನವಾಗಿದ್ದು, ಸುತ್ತಲೂ ಮಾನವ ಒತ್ತಡವಿದೆ. ಹುಲಿಗಳಿಗೆ ಆಹಾರ ನೀಡುವುದು ಅಥವಾ ವೈದ್ಯಕೀಯ ಕಾಳಜಿ ವಹಿಸುವುದು ಸಾಮಾನ್ಯವಾಗಿ ಇಲ್ಲ. ಕೆಲವೊಮ್ಮೆ ಮಾತ್ರ ಮಾಡುತ್ತೇವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಜಿ.ವಿ.ರೆಡ್ಡಿ ಹೇಳುತ್ತಾರೆ. ಮಚಲಿ ಹುಟ್ಟಿದ್ದು, 1997ರಲ್ಲಿ. ರೆಡ್ಡಿ ವಿಭಾಗೀಯ ಅರಣ್ಯಾಧಿಕಾರಿಯಾಗಿದ್ದಾಗ. ಹಲವು ಹೋರಾಟಗಳಲ್ಲಿ ಉಳಿದುಕೊಂಡು ಸುದೀರ್ಘ ಕಾಲ ಜೀವಿಸಿದ ಮಚಲಿ ವಿಶಿಷ್ಟ ಹುಲಿ ಎಂದು ರೆಡ್ಡಿ ನಂಬುತ್ತಾರೆ.
ಯಾವ ರೀತಿಯಿಂದ ನೋಡಿದರೂ ಮಚಲಿ ಸರಕಾರಿ ಪ್ರಾಯೋಜಕತ್ವದ ಪ್ರಾಣಿಯಾಗಿರಲಿಲ್ಲ. ಆದರೆ ಹುಲಿಗಳ ಪರ ಚರ್ಚೆಯಲ್ಲಿ, ಅಥವಾ ಹುಲಿಗಳನ್ನು ಮಾನವನ ಜತೆ ಸಮೀಕರಣ ಮಾಡುವುದರಿಂದ ಭಾವನೆಗಳು ಹಾಗೂ ವಿಜ್ಞಾನದ ನಡುವಿನ ತುಮುಲ ಇದ್ದೇ ಇರುತ್ತದೆ. ಆದರೆ ಒಂದಂತೂ ಸತ್ಯ. ಹುಲಿಗಳಿಗೆ ಸೂಕ್ತ ರಕ್ಷಣೆ ನೀಡಿದರೆ ಏನಾಗುತ್ತದೆ ಎನ್ನುವುದಕ್ಕೆ ಮಚಲಿ ಉತ್ತಮ ಉದಾಹರಣೆ ಎಂದು ರೆಡ್ಡಿ ಹೇಳುತ್ತಾರೆ. ಆಕೆ ಹುಲಿ ಸಂರಕ್ಷಣೆಯ ಹಲವು ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾಳೆ.
ಕೃಪೆ: ದಿ ವೈರ್ ಡಾಟ್ ಇನ್