ಸಂಘಪರಿವಾರದಿಂದ ಗೋ ಭಯೋತ್ಪಾದನೆ: ದೇವನೂರ ಮಹಾದೇವ
ಬೆಂಗಳೂರು, ಅ.4: ಸಂಘಪರಿವಾರವು ಗೋ ಹೆಸರಿನಲ್ಲಿ ಭಯೋತ್ಪಾದನೆಯನ್ನು ಮಾಡುತ್ತಾ ವಿಶ್ವದಲ್ಲಿರುವ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಕೊಂಡಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದ್ದಾರೆ.
‘ಉಡುಪಿ ಚಲೋ’ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಗಾಳ, ನೇಪಾಳ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಬ್ರಾಹ್ಮಣರು ದನದ ಮಾಂಸವನ್ನು ತಿನ್ನುತ್ತಾರೆ. ಹಾಗೆ ನೋಡಿದರೆ ಯಜ್ಞ, ಯಾಗಾದಿಗಳಲ್ಲಿ ದನ, ಕೋಣಗಳನ್ನು ಬಲಿಕೊಡುವ ಪದ್ಧತಿ ಪ್ರಾರಂಭಿಸಿದ್ದೇ ಅವರು, ಆದರೆ, ಈಗ ತಮ್ಮ ರಾಜಕೀಯ ಸ್ವಾರ್ಥ ಹಿತಾಸಕ್ತಿಗಾಗಿ ದನದ ಹೆಸರಿನಲ್ಲಿ ಗೋ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಅಪಾಯದ ಅಂಚಿನಲ್ಲಿದೆ. ದೇಶದ ಚುಕ್ಕಾಣಿ ಹಿಡಿದಿರುವ ಸಂಘಪರಿವಾರದವರು ಸಂವಿಧಾನದ ಆಶಯಗಳಾದ ಸ್ವಾತಂತ್ರ, ಸಮಾನತೆ, ಸಹೋದರತೆ ಹಾಗೂ ಸಾಮಾಜಿಕ ನ್ಯಾಯವನ್ನು ಮಣ್ಣುಪಾಲು ಮಾಡಲು ಹೊರಟಿದ್ದಾರೆ. ಹೀಗಾಗಿ ಸಂವಿಧಾನವನ್ನು ರಕ್ಷಿಸುವಂತಹ ಕೆಲಸವಾಗಬೇಕಿದೆ ಎಂದು ಅವರು ಎಚ್ಚರಿಸಿದರು. ದೇಶದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ದಬ್ಬಾಳಿಕೆ, ಅನ್ಯಾಯವಾಗುತ್ತಿದ್ದರೂ ತಾಳ್ಮೆ, ಸಹನೆಯನ್ನು ಮೀರಿಲ್ಲ. ಇಷ್ಟಾಗಿಯೂ ಸಂಘಪರಿವಾರದವರು ತಿನ್ನುವ ಆಹಾರದ ಮೇಲೂ ದಬ್ಬಾಳಿಕೆ ಮಾಡುವ ಹಂತಕ್ಕೆ ಬಂದಿದ್ದಾರೆ. ಇವರನ್ನು ಮೆಟ್ಟಿ ನಿಲ್ಲಲೇಬೇಕಾದ ಸಂದರ್ಭ ಈಗ ಬಂದಿದೆ. ಅದಕ್ಕೆ ಉಡುಪಿ ಚಲೋ ಜಾಥಾ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು.
ಸಾವಿರಾರು ಸ್ವಾತಂತ್ರ ಸೇನಾನಿಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು. ಆದರೆ, ಆ ಸ್ವಾತಂತ್ರದ ಆಶಯ ಈಡೇರಿದೆಯೆ? ಆಗ ಬ್ರಿಟಿಷರ ಒಂದು ಕಂಪೆನಿ ದೇಶದ ಸಂಪತ್ತನ್ನು ದೋಚುತ್ತಿತ್ತು. ಈಗ ವಿಶ್ವದ ನೂರಾರು ಕಂಪೆನಿಗಳು ದೇಶವನ್ನು ನುಚ್ಚುನೂರು ಮಾಡುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಮಾತನಾಡಿ, ದಲಿತ ದಮನಿತರ ಹೋರಾಟ ಸಮಿತಿಯು ಪ್ರತಿ ದಲಿತ ಕುಟುಂಬಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಸರಕಾರದ ಮುಂದೆ ಬೇಡಿಕೆ ಇಟ್ಟಿರುವುದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಭೂಮಿ ಎನ್ನುವುದು ಸ್ವಾಭಿಮಾನದ ಸಂಕೇತವಾಗಿದ್ದು, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.ಭಾರತ-ಪಾಕ್ ಗಡಿಯಲ್ಲಿ ಸರ್ಜಿಕಲ್ ದಾಳಿಗಳ ಕುರಿತು ಚರ್ಚೆ ಆಗುತ್ತಿದೆ. ಆದರೆ, ಶತಶತಮಾನಗಳಿಂದ ಹಿಂಸೆಗೆ ಒಳಗಾಗುತ್ತಿರುವ ದಲಿತರು ಸರ್ಜಿಕಲ್ ಮೇಲ್ವರ್ಗದವರ ವಿರುದ್ಧ ಸರ್ಜಿಕಲ್ ದಾಳಿ ಮಾಡಬೇಕಾಗಿತ್ತು. ಆದರೆ, ದಲಿತರು, ಹಿಂದುಳಿದವರು ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಷ್ಟಾಗಿಯೂ ಮೂಲಭೂತವಾದಿಗಳ ಉಪಟಳ ಕಡಿಮೆಯಾಗಿಲ್ಲ ಎಂದು ಅವರು ವಿಷಾದಿಸಿದರು.