ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ ಆರಂಭ: ಸಚಿವ ರಮೇಶ್ಕುಮಾರ್
ಬೆಳಗಾವಿ(ಸುವರ್ಣ ವಿಧಾನಸೌಧ), ನ.22: ಮುಂದಿನ ಸಾಲಿನ ಜನವರಿ 1ರ ಒಳಗಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಡಯಾಲಿಸಿಸ್ ಘಟಕಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ಕುಮಾರ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವಿ.ಸೋಮಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಯಾಲಿಸಿಸ್ ಘಟಕ ಆರಂಭಿಸುವ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಎಲ್ಲ ಅತ್ಯಾಧುನಿಕ ಉಪಕರಣಗಳು ಹಾಗೂ ತಜ್ಞ ವೈದ್ಯರ ನೇಮಕವನ್ನು ಗುತ್ತಿಗೆ ಪಡೆದ ಏಜೆನ್ಸಿಗೆ ವಹಿಸಲಾಗುವುದು ಎಂದರು.
ನಾಗರಿಕ ಸಮಾಜದಲ್ಲಿ ಯಾವ ವ್ಯಕ್ತಿಗೂ ಡಯಾಲಿಸಿಸ್ ಮಾಡಿಸಿ ಕೊಳ್ಳುವ ಸ್ಥಿತಿ ಬರುವುದನ್ನು ಸರಕಾರ ಬಯಸುವುದಿಲ್ಲ. ರಾಜ್ಯದ ಜನರ ಹಿತ ಕಾಪಾಡಲು 146 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ 34 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳು ಇವೆ. ಉಳಿದೆಡೆ ಬರುವ ಜನವರಿ 1 ರೊಳಗಾಗಿ ಘಟಕಗಳನ್ನು ಆರಂಭಿಸಲಾಗುವುದು. ಸರಕಾರ ಈ ವಿಚಾರದಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು. ಮೂತ್ರಪಿಂಡದ ಕಸಿ ಚಿಕಿತ್ಸೆ ಒದಗಿಸಲು ತೊಡಕಾಗಿರುವ ನಿಯಮ ಗಳನ್ನು ಸಡಿಲಿಸಲಾಗುವುದು. ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿ ಸುವ ಉದ್ದೇಶ ಸರಕಾರಕ್ಕಿಲ್ಲ. ಪ್ರತಿ ತಾಲೂಕುಗಳಲ್ಲಿ ತೀವ್ರ ನಿಗಾ ಘಟಕಗಳನ್ನು ವೆಂಟಿಲೇಟರ್ಸ್ನೊಂದಿಗೆ ಸ್ಥಾಪಿಸಲಾಗುವುದು ಎಂದು ಬಿಜೆಪಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಡೆಂಗ್ ಪ್ರಕರಣಗಳಲ್ಲಿ ಸಾವನ್ನಪ್ಪಿದರೆ ಪರಿಹಾರ ಕೊಡುವ ನೀತಿ ಸರಕಾರದಲ್ಲಿಲ್ಲ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಡೆಂಗ್ರೋಗಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಪರಿಹಾರ ನೀಡಿರುವು ದಾಗಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿರುವುದನ್ನು ಪರಿಶೀಲಿಸಲಾ ಗುವುದು ಎಂದು ಅವರು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಡಿಸೆಂಬರ್ ಒಳಗಾಗಿ ಶೇ.100ರಷ್ಟು ಭರ್ತಿ ಮಾಡಲಾಗುವುದು. ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ 1,183 ತಜ್ಞ ವೈದ್ಯರ ಕೊರತೆ ಇದೆ. ಗುತ್ತಿಗೆ ಆಧಾರದಲ್ಲಿ ವೈದ್ಯರಿಗೆ ಮಾಸಿಕ 1 ಲಕ್ಷ ರೂ.ಗಳನ್ನು ಹಾಗೂ ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಮಾಸಿಕ 1.25 ಲಕ್ಷ ರೂ.ಗಳ ವೇತನ ನೀಡಿದರೂ ಸಹ ಎಂಬಿಬಿಎಸ್ ಪದವಿ ಪಡೆದ ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಬರುತ್ತಿಲ್ಲ. ಈ ಕೊರತೆ ನೀಗಿಸಲು ರಾಜ್ಯದ ಎಲ್ಲ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಡಿಪ್ಲೊಮಾ ಕೋರ್ಸ್ಗಳನ್ನು ಆರಂಭಿಸಲಾಗುವುದು ಎಂದು ರಮೇಶ್ಕುಮಾರ್ ತಿಳಿಸಿದರು. ಈಗಾಗಲೇ 2,100 ಲ್ಯಾಬ್ ಟೆಕ್ನಿಷಿಯನ್ಸ್, ಸ್ಟ್ಾ ನರ್ಸ್ ಗಳು, ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ಭರ್ತಿ ಮಾಡಿಕೊಳ್ಳಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಱಡಿೞಗ್ರೂಪ್ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಸ್ಥಳೀಯವಾಗಿರುವ ಆರೋಗ್ಯ ರಕ್ಷಾ ಸಮಿತಿಗಳು ಅಲ್ಲಿನ ಆಸ್ಪತ್ರೆಗಳ ನೈರ್ಮಲ್ಯ ನಿರ್ವಹಿಸಲು ಶ್ರಮಿಸಬೇಕು ಎಂದು ರಮೇಶ್ಕುಮಾರ್ ಹೇಳಿದರು.
ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೊಂಡಿರಲಿಲ್ಲ. ಇನ್ನು ಮುಂದೆ ಈ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿದವರನ್ನೇ ನೇಮಕ ಮಾಡಿಕೊಂಡು ಶಾಸನವನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಅಂತಿಮ ರೂಪ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ್ಗಳ ಅಕಾರಕ್ಕೆ ಧಕ್ಕೆ ಇಲ್ಲ: ರಮೇಶ್ಕುಮಾರ್
ಬೆಳಗಾವಿ(ಸುವರ್ಣ ವಿಧಾನಸೌಧ), ನ.22: ಪಂಚಾಯತ್ರಾಜ್ ಕಾಯ್ದೆಯ ಮೂಲಕ ಅಕಾರ ವಿಕೇಂದ್ರೀಕರಣಕ್ಕೆ ಸರಕಾರ ಬದ್ಧವಾಗಿದೆ. ವಸತಿ ಯೋಜನೆಗಳಡಿ ಲಾನುಭವಿಗಳನ್ನು ಆಯ್ಕೆ ಮಾಡುವ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಸಭೆಗಳ ಪರಮಾಕಾರ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ‘‘ಅ.30ರಂದು ಬಸವ ವಸತಿ ಯೋಜನೆಯಡಿ ಲಾನು ಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವ ವಿಧಾನ ತಡೆ ಹಿಡಿಯುವ ಸುತ್ತೋಲೆಯೊಂದು ಸರಕಾರದಿಂದ ಹೊರ ಬಿದ್ದಿದೆ. ಇದು ಅಕಾರ ವಿಕೇಂದ್ರೀಕರಣ ಆಶಯಕ್ಕೆ ವಿರುದ್ಧ ವಾಗಿದೆ, ಇದನ್ನು ಕೈ ಬಿಡಬೇಕು’’ ಎಂದು ಒತ್ತಾಯಿಸಿದರು.
ಈ ಬಗ್ಗೆ ಉತ್ತರಿಸಲು ಯತ್ನಿಸಿದ ವಸತಿ ಸಚಿವ ಎಂ.ಕೃಷ್ಣಪ್ಪ ಅವರ ನೆರವಿಗೆ ಧಾವಿಸಿದ ರಮೇಶ್ಕುಮಾರ್, ‘‘ಗ್ರಾಮ ಪಂಚಾಯತ್ಗಳನ್ನು ದುರ್ಬಲಗೊಳಿಸುವ ಸುತ್ತೋಲೆಗಳು ಶಾಸನಗಳಾಗುವುದಿಲ್ಲ. ಗ್ರಾಮ ಸ್ವರಾಜ್ ಕಾಯ್ದೆ ತಿದ್ದುಪಡಿಯಲ್ಲಿ ಗ್ರಾಮ ಸಭೆಗಳ ಸ್ವಾತಂತ್ರ್ಯ ರಕ್ಷಿಸಲಾಗುವುದು’’ ಎಂದರು.