ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಲಾಭಗಳೇನು ಗೊತ್ತಾ..?
ನೀರು ನಮ್ಮ ಶರೀರದ ಆರೋಗ್ಯಕ್ಕೆ ತುಂಬ ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ಈ ಅಂಶವನ್ನು ಅಲಕ್ಷಿಸುವವರೇ ಹೆಚ್ಚು. ನಮ್ಮ ದೇಹದ ಶೇ.60-70ರಷ್ಟು ನೀರೇ ಆಗಿದೆ. ನಮ್ಮ ಶರೀಕ್ಕೆ ಸಾಕಷ್ಟು ನೀರನ್ನು ಒದಗಿಸದಿದ್ದರೆ ಆರೋಗ್ಯ ಸಮಸ್ಯೆಗಳು ನಮಗೆ ಕಾದಿಟ್ಟ ಬುತ್ತಿ ಎನ್ನುವುದು ಗೊತ್ತಿರಲಿ.
ತಮಗೆ ಒಂದು ಗ್ಲಾಸ್ ನೀರು ಕುಡಿಯಲೂ ಪುರಸೊತ್ತಿರುವುದಿಲ್ಲ ಎಂದು ಜನರೂ ಆಗಾಗ್ಗೆ ಹೇಳುತ್ತಿರುತ್ತಾರೆ. ಇಷ್ಟೇ ಅಲ್ಲ,ನಮ್ಮ ಆಧುನಿಕ ಜೀವನಶೈಲಿ ಮತ್ತು ರುಚಿಗಳು ಕೂಡ ನಾವು ಪ್ರತಿದಿನ ಸೇವಿಸಿ ನೀರಿನ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ನೀರಿಗೆ ಬದಲಾಗಿ ಬೇರೇನನ್ನಾದರೂ ಸೇವಿಸಲು ಬಯಸುವವರೇ ಹೆಚ್ಚು.
ನೀರಿನ ಬದಲು ಸಿಹಿ ಅಥವಾ ಹಣ್ಣಿನ ರಸ ಬೆರೆತ ಸೋಡಾ ಮಿಶ್ರಿತ ಪಾನೀಯಗಳನ್ನು ಸೇವಿಸುತ್ತಿದ್ದರೆ ದಾಹ ತಣಿಸಲು ಅದಕ್ಕೇ ನಾವು ದಾಸರಾಗಿಬಿಡುತ್ತೇವೆ. ಶರೀರ ನೀರನ್ನು ಕೇಳಿತ್ತು, ಕೊಟ್ಟಿದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಗೊತ್ತಿರಲಿ. ಇದರಿಂದ ಶರೀರದ ನಿರ್ಜಲೀಕರಣ ಇನ್ನಷ್ಟು ಹೆಚ್ಚುತ್ತದೆ ಮತ್ತು ಅದು ಕಾಯಿಲೆಗಳ ಗೂಡಾಗುತ್ತದೆ.
ನಮ್ಮ ದೇಹಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ನಾಲ್ಕು ಅತ್ಯುತ್ತಮ ವಿಧಾನಗಳು:
►ಕನಿಷ್ಠ ಎರಡು ಗ್ಲಾಸ್ ನೀರಿನೊಂದಿಗೆ ನಿಮ್ಮ ದಿನ ಆರಂಭಗೊಳ್ಳಲಿ
ಬೆಳಿಗ್ಗೆ ಎದ್ದ ತಕ್ಷಣ ಎರಡು ಗ್ಲಾಸ್ ನೀರು ಕುಡಿಯುವುದರೊಂದಿಗೆ ನಮ್ಮ ದಿನವನ್ನು ಆರಂಭಿಸಿ. ನೀರಿನ ರುಚಿಯಿಂದ ನಿಮಗೆ ಬೋರ್ ಎನಿಸತೊಡಗಿದರೆ ಒಂಚೂರು ಲಿಂಬೆಹುಳಿಯನ್ನು ಹಿಂಡಿಕೊಳ್ಳಿ. ನಿಮಗೆ ಗೊತ್ತಾಗುವ ಮೊದಲೇ ನಿಮ್ಮ ಕೈಯಲ್ಲಿರುವ ಗ್ಲಾಸ್ ಖಾಲಿಯಾಗಿರುತ್ತದೆ ಮತ್ತು ನಿಮ್ಮ ಶರೀರ...ಅದೂ ಹ್ಯಾಪಿಯಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನೀರು ಸೇವನೆಗೆ ಆಯುರ್ವೇದದಲ್ಲಿ ಮತ್ತು ಜಪಾನಿನ ಸಂಸ್ಕೃತಿಯಲ್ಲಿ ತುಂಬ ಮಹತ್ವವಿದೆ. (ಜಪಾನಿನಲ್ಲಿ ದೀರ್ಘಾಯುಷಿಗಳ ಸಂಖ್ಯೆ ಹೆಚ್ಚು ಎನ್ನುವುದು ಗೊತ್ತಿರಲಿ). ಆಧುನಿಕ ವಿಜ್ಞಾನವೂ ಇದಕ್ಕೆ ಅಧಿಕೃತವಾಗಿ ಒಪ್ಪಿಗೆಯ ಮುದ್ರೆಯನ್ನೊತ್ತಿದೆ. ನಮ್ಮ ಶರೀರದಲ್ಲಿ ಶಕ್ತಿ-ಉತ್ಸಾಹವನ್ನು ದಿನವಿಡೀ ಕಾಯ್ದುಕೊಳ್ಳಲು ಬೆಳಿಗ್ಗೆ ಎದ್ದ ತಕ್ಷಣ ಎರಡು ಗ್ಲಾಸ್ ಶುದ್ಧ, ಉಗುರು ಬೆಚ್ಚಗಿನ ನೀರಿನ ಸೇವನೆಯನ್ನು ಆಯುರ್ವೇದವು ಬಲವಾಗಿ ಪ್ರತಿಪಾದಿಸುತ್ತದೆ. ಅಂದ ಹಾಗೆ ನೀರು ಸೇವಿಸಿದ ನಂತರ ಕನಿಷ್ಠ ಅರ್ಧ ಗಂಟೆಯ ವರೆಗೂ ಏನನ್ನೂ ತಿನ್ನಬಾರದು, ಕುಡಿಯಬಾರದು ಎನ್ನುವುದು ತುಂಬ ಮುಖ್ಯ.ದೇಹವು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು, ಶಕ್ತಿಯನ್ನು ತುಂಬಿಕೊಳ್ಳಲು, ಪ್ರತಿಯೊಂದು ಜೀವಕೋಶವೂ ನೀರಿನ ಅಂಶವನ್ನು ಪಡೆಯುವಂತಾಗಲು ಮತ್ತು ವಿಷಗಳನ್ನು ತೆಗೆದುಹಾಕಲು ಇಷ್ಟು ಸಮಯ ಬೇಕೇ ಬೇಕು.
►ಖಾಲಿಹೊಟ್ಟೆಯಲ್ಲಿ ನೀರು ಸೇವನೆಯ ಲಾಭ
ಬೆಳಿಗ್ಗೆ ಮೊಟ್ಟಮೊದಲು ನಾವು ಸೇವಿಸುವ ಉಗುರು ಬೆಚ್ಚಗಿನ ನೀರು ನಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ. ಅದೊಂದು ಥರಾ ನಮ್ಮ ದೇಹಕ್ಕೆ ಒಳಗಿನಿಂದ ಸ್ನಾನ ಮಾಡಿಸಿದಂತೆ. ನಾವು ತಿಂದ ಆಹಾರವು ಜೀರ್ಣವಾಗುವಲ್ಲಿ ಅದು ತುಂಬ ಉಪಕಾರಿಯಾಗಿದೆ. ಅದು ನಮ್ಮ ಕರುಳುಗಳ ಚಲನವಲನಗಳಿಗೂ ನೆರವಾಗುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಆಧುನಿಕ ಜೀವನಶೈಲಿಯ ಉಡುಗೊರೆಯಾಗಿರುವ ಮಲಬದ್ಧತೆ ಮೂಲವ್ಯಾಧಿಯಂತಹ ಇತರ ಗಂಭೀರ ರೋಗಗಳಿಗೆ ಸ್ವಾಗತ ಹಾಡುತ್ತದೆ.
ರಾತ್ರಿ ಒಂದು ಗ್ಲಾಸ್ ನೀರಿಗೆ ಒಂದು ಟೀಸ್ಪೂನ್ ಮೆಂತೆಕಾಳು ಬೆರೆಸಿಟ್ಟು ಬೆಳಿಗ್ಗೆ ಕಾಳನ್ನು ಬೇರ್ಪಡಿಸಿ ನೀರನ್ನು ಕುಡಿದರೆ ಅದು ಹೆಚ್ಚಿನ ರಕ್ತದೊತ್ತಡ ಮತ್ತು ಮಧುಮೇಹ ಇರುವರಿಗೆ ತುಂಬ ಉಪಕಾರಿ. 2-3 ತಿಂಗಳು ಇದನ್ನು ಬಿಟ್ಟೂಬಿಡದೆ ಮಾಡಿದರೆ ರಕ್ತದೊತ್ತಡ ಮತ್ತು ಮಧುಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
►ಹೊಳೆಯುವ ಚರ್ಮಕ್ಕೆ ಜಲಚಿಕಿತ್ಸೆ
ಬೆಳಿಗ್ಗೆದ್ದು ನೀರು ಕುಡಿಯುವುದರಿಂದ ನಮ್ಮ ದೇಹದ ಪ್ರತಿಯೊಂದೂ ಜೀವಕೋಶಕ್ಕೆ ನೀರಿನ ಅಂಶ ಪೂರೈಕೆಯಾಗುವುದರಿಂದ ನಮ್ಮ ಚರ್ಮದ ಮೇಲೆ ಸಹಜ ಪರಿಣಾಮ ಬೀರುತ್ತದೆ. ಜೀರ್ಣಶಕ್ತಿ ಸುಧಾರಿಸುವುದರಿಂದ ದೇಹದೊಳಗಿನ ವಿಷವಸ್ತುಗಳು ಹೊರದೂಡಲ್ಪಡುತ್ತವೆ,ತನ್ಮೂಲಕ ಆರೋಗ್ಯ ಲಭಿಸುವುದರ ಜೊತೆಗೆ ಚರ್ಮ ಹೊಳಪು ಪಡೆದುಕೊಳ್ಳುತ್ತದೆ.
►ತೂಕ ತಗ್ಗಿಸುವಲ್ಲಿ ಸಹಕಾರಿ
ಜಲಚಿಕಿತ್ಸೆ ದೇಹದಲ್ಲಿರುವ ಬೊಜ್ಜನ್ನು ಪವಾಡಸದೃಶವಾಗಿ ಕರಗಿಸುತ್ತದೆ. ನಿರ್ಜಲೀಕರಣಗೊಂಡ ದೇಹವು ಕ್ಯಾಲೊರಿಗಳನ್ನು ಪರಿಣಾಮಕಾರಿಯಗಿ ಕರಗಿಸುವುದಿಲ್ಲ. ಬೆಳಿಗ್ಗೆದ್ದಾಕ್ಷಣ ನೀರು ಕುಡಿಯುವುದರಿಂದ ದೇಹಕ್ಕೆ ಹೊಸ ಚೈತನ್ಯ ದೊರೆಯುತ್ತದೆ ಮತ್ತು ತೂಕ ಇಳಿಯಲು ಆರಂಭಗೊಳ್ಳುತ್ತದೆ. ಇದೊಂದು ಸರಳ,ಆದರೆ ಅತ್ಯಂತ ಪರಿಣಾಮಕಾರಿ ವಿಧಾನ,ಜೊತೆಗೆ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲ.
ಎಚ್ಚರಿಕೆ
ತಂಪು ಪಾನೀಯಗಳು ಮತ್ತು ತಣ್ಣನೆಯ ನೀರು ಕುಡಿಯುವುದನ್ನು ಇಷ್ಟಪಡುವವರಿಗೆ ಇದು ನಿಮ್ಮ ಶಕ್ತಿಯನ್ನು ಉಡುಗಿಸುತ್ತದೆ ಮತ್ತು ಮೂತ್ರಪಿಂಡಗಳನ್ನು ದುರ್ಬಲಗೊಳಿಸುತ್ತದೆ ಎನ್ನುವುದು ಗೊತ್ತಿರಲಿ. ಊಟದ ಜೊತೆಗೆ ಎಂದೂ ತಣ್ಣನೆಯ ನೀರನ್ನು ಕುಡಿಯಲೇಬೇಡಿ, ಏಕೆಂದರೆ ಇದು ಆಹಾರದೊಡನೆ ನಿಮ್ಮ ಶರೀರವನ್ನು ಸೇರಿರುವ ಎಣ್ಣೆಯನ್ನು ಘನೀಕರಿಸುತ್ತದೆ. ಶೀಘ್ರವೇ ಇದು ಬೊಜ್ಜಿನ ರೂಪಕ್ಕೆ ಪರಿವರ್ತನೆಗೊಂಡು ನಿಮ್ಮ ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ, ತನ್ಮೂಲಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಊಟದ ನಂತರ ಒಂದು ಕಪ್ ಉಗುರು ಬೆಚ್ಚನೆಯ ನೀರನ್ನು ಅಥವಾ ಚೀನಿಯರು ಮಾಡುವಂತೆ ಲಘು ಚೈನೀಸ್ ಚಹಾ ಸೇವಿಸಿ.
ಕೊನೆಯದಾಗಿ ಮದ್ಯ,ಕಾಫಿ ಅಥವಾ ಇನ್ಯಾವುದೇ ಪಾನೀಯವು ಈ ಅದ್ಭುತವಾದ ಜೀವಜಲಕ್ಕೆ ಸಾಟಿಯಲ್ಲ. ನಿಮ್ಮ ಶರೀರದ ನೀರಿನ ಅಗತ್ಯ ಕೇವಲ ನೀರು ಕುಡಿಯುವುದರಿಂದಲೇ ಪೂರೈಕೆಯಾಗುತ್ತದೆ.