ಟ್ವೀಟ್ನಲ್ಲಿ ಯಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ
ಸಿಚುವಾನ್ ಹೋಗಿ ಸಿಯಾಚಿನ್ ಆಯಿತು.....!
ಬೆಂಗಳೂರು,ಡಿ.22: ಕೆಲವು ಶಬ್ದಗಳಿವೆ. ಅವುಗಳ ಸ್ಪೆಲ್ಲಿಂಗ್ ತಪ್ಪಾಗಕೂಡದು. ಹಾಗೇನಾದರೂ ಆದರೆ ಅದು ಅಕ್ಷರಶಃ ಯುದ್ಧಕ್ಕೂ ಕಾರಣವಾಗಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯು ತಾನು ಮಾಡಿದ್ದ ಟ್ವೀಟೊಂದನ್ನು ಅದರಲ್ಲಿನ ಯಡವಟ್ಟು ಗಮನಕ್ಕೆ ಬಂದ ತಕ್ಷಣ ಹಿಂದೆಗೆದುಕೊಂಡಿದೆ. ಇದೊಂದು ಎಂದೆಂದಿಗೂ ಜನರ ನೆನಪಿನಲ್ಲಿರಬಹುದಾದ ತಪ್ಪು ಎನ್ನುವುದು ಸಕಾಲಕ್ಕೆ ಅದಕ್ಕೆ ಗೊತ್ತಾಗಿದ್ದು ಸಿದ್ದರಾಮಯ್ಯನವರ ಅದೃಷ್ಟ.
ಚೀನಾದ ನಿಯೋಗವೊಂದು ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ರಾಜಧಾನಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಚರ್ಚಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ನಿನ್ನೆ ಮಧ್ಯಾಹ್ನ ಟ್ವೀಟಿಸಿದ್ದರು. ‘‘ಸಿಯಾಚಿನ್ ಪ್ರಾಂತದ ಲೀ ರೊಂಗ್ ಸಿ.ಎಂ.ಅವರ ನೇತೃತ್ವದ ಚೀನಿ ನಿಯೋಗದೊಂದಿಗೆ ಮಾತುಕತೆಗಳು ಉತ್ತಮವಾಗಿ ನಡೆದಿವೆ. ಬೆಂಗಳೂರಿನ ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚಿಸಿದ್ದೇವೆ ’’ ಎನ್ನುವುದು ಈ ಟ್ವೀಟ್. ಇದರಲ್ಲಿ ಹಿಮಾಲಯದ ನೀರ್ಗಲ್ಲು ಪ್ರದೇಶ ಸಿಯಾಚಿನ್ ಚೀನಾದ ಭಾಗವಾಗಿಬಿಟ್ಟಿದೆ!
ವಾಸ್ತವದಲ್ಲಿ ಲೀ ರೊಂಗ್ ಅವರು ಚೀನಾದ ಸಿಚುವಾನ್ ಪ್ರಾಂತದವರು. ಈ ಸಿವಾಚುನ್ ತನ್ನ ಖಾರದ ಕೆಂಪು ಮಣಸಿಗೆ ಮತ್ತು ಸ್ವಾದಿಷ್ಟ ಖಾದ್ಯಗಳಿಗೆ ಹೆಸರಾಗಿದೆ. ಸಿಯಾಚಿನ್ ಗ್ಲೇಸಿಯರ್ ಭಾರತ ಮತ್ತು ಪಾಕಿಸ್ತಾನ್ಗಳ ನಡುವಿನ ನಿಯಂತ್ರಣ ರೇಖೆಯಲ್ಲಿ ಭಾರತದ ಪ್ರದೇಶದಲ್ಲಿದೆ. ಸಿಯಾಚಿನ್ ನೀರ್ಗಲ್ಲು ಪ್ರದೇಶ ಭಾಗಶಃ ತನಗೆ ಸೇರಿದ್ದು ಎಂದು ಪಾಕಿಸ್ತಾನವು ಪ್ರತಿಪಾದಿಸುತ್ತಿದೆ. ನಮ್ಮ ಮುಖ್ಯಮಂತ್ರಿಗಳ ಕಚೇರಿಯು ಸಿಚುವಾನ್ ಮತ್ತು ಸಿಯಾಚಿನ್ ನಡುವಿನ ವ್ಯತ್ಯಾಸವನ್ನು ತಿಳಿಯದೆ ಟ್ವೀಟ್ ಮಾಡಿ ಸಿದ್ದರಾಮಯ್ಯನವರು ಮುಜುಗರಗೊಳ್ಳುವಂತೆ ಮಾಡಿದೆ.
The chief minister of the Indian state of Karnataka can't seem to tell the difference between Sichuan and Siachen pic.twitter.com/lO0kO6jKkE
— omar r quraishi (@omar_quraishi) December 21, 2016