ಡಿಜಿಟಲ್ ಪಾವತಿಯಿಂದ ಕಪ್ಪುಹಣಕ್ಕೆ ಕಡಿವಾಣ: ಮನ್ಕಿ ಬಾತ್ನಲ್ಲಿ ಮೋದಿ

‘‘ ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಹೋರಾಟದಲ್ಲಿ ಪ್ರದಾನ ಪಾತ್ರವಹಿಸುವ ಡಿಜಿಟಲ್ ಪಾವತಿ ಚಳವಳಿಯ ನೇತೃತ್ವವನ್ನು ವಹಿಸಿಕೊಳ್ಳಿ. ಈ ಚಳವಳಿಯಲ್ಲಿ ಶಾಮೀಲಾದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಭ್ರಷ್ಟಾಚಾರ ನಿಗ್ರಹ ತಂಡದ ಸದಸ್ಯನೆನಿಸಿಕೊಳ್ಳುತ್ತಾನೆ. ಸ್ವಚ್ಛತೆ ಹಾಗೂ ಶುದ್ಧತೆಯ ಸೇನಾನಿಯೆನಿಸಿಕೊಳ್ಳುತ್ತಾನೆ’’
ಹೊಸದಿಲ್ಲಿ,ಫೆ.26: ಕಪ್ಪುಹಣವನ್ನು ಮಟ್ಟಹಾಕಲು ಹಾಗೂ ಲಂಚಗುಳಿತನದ ವಿರುದ್ಧ ಹೋರಾಡಲು ಡಿಜಿಟಲ್ ಪಾವತಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ,ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಕೈಜೋಡಿಸುವ ಮೂಲಕ ದೇಶವನ್ನು ‘ಸ್ವಚ್ಛಗೊಳಿಸುವ’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಯುವಜನತೆಗೆ ಕರೆ ನೀಡಿದರು.
‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರವು ಜಾರಿಗೊಳಿಸಿರುವ ಡಿಜಿಟಲ್ ಪಾವತಿ ಕಾರ್ಯಕ್ರಮಗಳಿಗೆ ಜನತೆ ಅದರಲ್ಲಿ ವಿಶೇಷವಾಗಿ ಯುವಜನರು ರಾಯಭಾರಿಗಳಾಗಬೇಕೆಂದು ಕರೆ ನೀಡಿದರು.
‘‘ ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಹೋರಾಟದಲ್ಲಿ ಪ್ರದಾನ ಪಾತ್ರವಹಿಸುವ ಡಿಜಿಟಲ್ ಪಾವತಿ ಚಳವಳಿಯ ನೇತೃತ್ವವನ್ನು ವಹಿಸಿಕೊಳ್ಳಿ. ಈ ಚಳವಳಿಯಲ್ಲಿ ಶಾಮೀಲಾದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಭ್ರಷ್ಟಾಚಾರ ನಿಗ್ರಹ ತಂಡದ ಸದಸ್ಯನೆನಿಸಿಕೊಳ್ಳುತ್ತಾನೆ. ಸ್ವಚ್ಛತೆ ಹಾಗೂ ಶುದ್ಧತೆಯ ಸೇನಾನಿಯೆನಿಸಿಕೊಳ್ಳುತ್ತಾನೆ’’ ಎಂದು ಪ್ರಧಾನಿ ಭಾಷಣದಲ್ಲಿ ಹೇಳಿದರು.
ದೇಶದ ಜನತೆ ನಿಧಾನವಾಗಿ ಡಿಜಿಟಲ್ ಕರೆನ್ಸಿ ವ್ಯವಸ್ಥೆಯೆಡೆಗೆ ಸಾಗುತ್ತಿದ್ದಾರೆಂದು ಹೇಳಿದ ಮೋದಿ, ಪಾವತಿಗಳನ್ನು ಮಾಡಲು ಹಾಗೂ ಸ್ವೀಕರಿಸಲು ಮೊಬೈಲ್ಫೋನ್ಗಳನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಯುವಜನತೆ ಡಿಜಿಟಲ್ ಪಾವತಿ ಚಳವಳಿಯ ಮುನ್ನಡೆ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಎಪ್ರಿಲ್ 14ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮದಿನವನ್ನು ಆಚರಿಸಲಿದ್ದು, ಅಂದು ಕೇಂದ್ರ ಸರಕಾರ ಜಾರಿಗೊಳಿಸಿರುವ ಡಿಜಿಟಲ್ ಪಾವತಿ ಯೋಜನೆಗಳಿಗೆ ನೂರು ದಿನಗಳು ತುಂಬಲಿವೆ. ಡಿಜಿಟಲ್ ವ್ಯವಹಾರಗಳಿಗಾಗಿ ಮೊಬೈಲ್ ಫೋನ್ನಲ್ಲಿ ಭೀಮ್ ಆ್ಯಪ್ ಅನ್ನು ಡೌನ್ಲೋಡ್ ಮಾಡಲು ಪ್ರತಿಯೊಬ್ಬರೂ, 125 ಮಂದಿಗೆ ನೆರವಾಗುವಂತೆ ಕರೆ ನೀಡಿದರು.
ತನ್ನ ಅಚ್ಚುಮೆಚ್ಚಿನ ಸ್ವಚ್ಛ ಭಾರತ್ ಅಭಿಯಾನವನ್ನು ಪ್ರಸ್ತಾಪಿಸಿದ ಅವರು, ಶೌಚಗೃಹಗಳನ್ನು ಸ್ವಚ್ಛಗೊಳಿಸುವುದಕ್ಕೆ ಯಾವುದೇ ರೀತಿಯ ಮಾನಸಿಕ ತಡೆಗೋಡೆ ಇರಕೂಡದು ಎಂದವರು ಹೇಳಿದರು.
ಇತ್ತೀಚೆಗೆ ನಡೆದ ಅಂಧರ ಟಿ-20 ಕ್ರಿಕೆಟ್ ವಿಶ್ವಕಪ್ನ ಫೈನಲ್ ಗೆದ್ಧ ಆಟಗಾರರನ್ನು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಪ್ರಸ್ತಾಪಿಸಿದ ಅವರು, ಕ್ರೀಡೆಯಾಗಲಿ ಅಥವಾ ಬಾಹ್ಯಾಕಾಶ ವಿಜ್ಞಾನವಾಗಲಿ, ವನಿತೆಯರು ಅಪ್ರತಿಮವಾದ ಸಾಧನೆಯನ್ನು ಪ್ರದರ್ಶಿಸಿದ್ದಾರೆ ಎಂದರು. ‘ಬೇಟಿ ಬಚಾವೋ, ಬೇಟಿ ಪಢಾವೊ’ ಕೇವಲ ಸರಕಾರದ ಕಾರ್ಯಕ್ರಮವಾಗಿ ಉಳಿಯದೆ, ಅದು ಸಾಮಾಜಿಕ ಸಹಾನುಭೂತಿ ಹಾಗೂ ಸಾರ್ವಜನಿಕ ಶಿಕ್ಷಣ ಚಳವಳಿಯಾಗಿ ರೂಪುಗೊಂಡಿರುವುದು ಆರೋಗ್ಯಕರ ಲಕ್ಷಣವೆಂದರು.