ಗೋಮಾಂಸ ಸಾಗಾಟ ಆರೋಪಿಸಿ ಗೋರಕ್ಷಕರಿಂದ ಚಾಲಕನಿಗೆ ಮಾರಣಾಂತಿಕ ಹಲ್ಲೆ, ವ್ಯಾನ್ಗೆ ಬೆಂಕಿ

ಮೀರತ್,ಮಾ.2: ಚಾಲಕನ ವಿರುದ್ಧ ಗೋಹತ್ಯೆ ಆರೋಪ ಹೊರಿಸಿದ ಗೋರಕ್ಷಕರು ಆತನನ್ನು ಮಾರಣಾಂತಿಕವಾಗಿ ಥಳಿಸಿ ,ವ್ಯಾನ್ಗೆ ಬೆಂಕಿ ಹಚ್ಚಿದ ಘಟನೆ ಉತ್ತರಪ್ರದೇಶದ ಮುಬಾರಕ್ ಪುರದಲ್ಲಿ ನಡೆದಿದೆ. ಪೊಲೀಸರು ಚಾಲಕನನ್ನು ಗೋರಕ್ಷಕರಿಂದ ಬಿಡಿಸಲು ಯಶಸ್ವಿಯಾಗಿದ್ದಾರೆ.
ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಪೊಲೀಸರು ವಿಚಾರಿಸಿದಾಗ ವಾಹನ ಚಾಲಕ ರಝಾಕ್, ಇರ್ಫಾನ್ ಎಂಬಾತನ ಎಮ್ಮೆಯನ್ನು ಹದಿನೇಳು ಸಾವಿರ ರೂಪಾಯಿಗೆ ಖರೀದಿಸಿ ಅದರ ಮಾಂಸವನ್ನು ವ್ಯಾನ್ನಲ್ಲಿ ಕೊಂಡು ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಭಾವನ್ಪುರದ ಎಸ್ಸೈ ಸತೇಂದ್ರ ಸಿಂಗ್ ಯಾದವ್ ರಝಾಕ್ನ ಹೇಳಿಕೆ ಸರಿಯಾಗಿದೆ. ವಾಹನದಲ್ಲಿ ಎಮ್ಮೆಯ ಮಾಂಸ ಇತ್ತು ಎಂದು ಅವರು ಹೇಳಿದ್ದಾರೆ. ನಾಲ್ವರು ಗ್ರಾಮೀಣರು ಮತ್ತು 40-50 ಮಂದಿ ಅಪರಿಚಿತರ ವಿರುದ್ಧ ಕೇಸು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
ಅಬ್ದುಲ್ಲಾಪುರದ ರಝಾಕ್ ಎಂಬಾತ ಬುಧವಾರ ಬೆಳಗ್ಗೆ ತನ್ನ ಮ್ಯಾಜಿಕ್ ವ್ಯಾನ್ನಲ್ಲಿ ಮಾಂಸವನ್ನು ಕೊಂಡೊಯ್ಯುತ್ತಿದ್ದ. ಮುಬಾರಕ್ ಪುರದಲ್ಲಿ ವ್ಯಾನ್ನ ಚಕ್ರ ಪಂಕ್ಚರ್ ಆಗಿತ್ತು. ಆವೇಳೆ ಅಲ್ಲಿ ಸೇರಿದ ಕೆಲವರಿಗೆ ವ್ಯಾನ್ನೊಳಗೆ ಮಾಂಸ ಇರುವುದು ಗೊತ್ತಾಗಿದೆ. ಅವರು ಜನರು ಸೇರಿಸಿ ರಝಾಕ್ ವಿರುದ್ಧ ಗೋಹತ್ಯೆ ಆರೋಪ ಹೊರಿಸಿ ಹೊಡೆದಿದ್ದಾರೆ. ವ್ಯಾನ್ಗೆ ಬೆಂಕಿ ಹಚ್ಚಿದ್ದಾರೆ. ರಝಾಕ್ನ ಜೊತೆ ಇದ್ದ ಆಝಾದ್ ಎನ್ನುವಾತ ಗೋರಕ್ಷಕರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.