ಕೈಕಾಲುಗಳನ್ನು ಕಟ್ಟಿಕೊಂಡು 5 ಕಿ.ಮೀ.ಈಜಿದ ವಿದ್ಯಾರ್ಥಿ

ನಾಗಪಟ್ಟಿಣಂ(ತ.ನಾ),ಮಾ.3: ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಲು ಇಲ್ಲಿಯ 19ರ ಹರೆಯದ ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಕೈ-ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡು ಬಂಗಾಳ ಕೊಲ್ಲಿಯಲಿ ಐದು ಕಿ.ಮೀ.ದೂರವನ್ನು ಈಜಿದ್ದಾನೆ.
ಗುರುವಾರ ಈ ಸಾಹಸವನ್ನು ಮೆರೆದ ಎಸ್.ಶಬರಿನಾಥನ್ 2 ಗಂಟೆ 20 ನಿಮಿಷ ಮತ್ತು 48 ಸೆಕಂಡ್‌ಗಳಲ್ಲಿ ಈ ಅಂತರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಹಿಂದಿನ ದಾಖಲೆ ಕರ್ನಾಟಕದ ಉಡುಪಿ ಜಿಲ್ಲೆಯ ಗೋಪಾಲ ಖಾರ್ವಿ ಅವರ ಹೆಸರಿನಲ್ಲಿದೆ. ಅವರು 2013ರಲ್ಲಿ ಕೈಕೋಳಗಳನ್ನು ಧರಿಸಿ, ಕಾಲುಗಳನ್ನು ಸರಪಳಿಯಿಂದ ಬಿಗಿದುಕೊಂಡು ಮಲ್ಪೆ ಕಡಲ ತೀರದಲ್ಲಿ 3.07 ಕಿ.ಮೀ.ದೂರವನ್ನು ಈಜಿದ್ದರು.
ಜಿಲ್ಲಾಡಳಿತ ಮತ್ತು ಪೊಲೀಸರ ಪೂರ್ವಾನುಮತಿಯೊಂದಿಗೆ ಗಿನ್ನೆಸ್ ಸಮಿತಿಯ ನಿಯಮಾವಳಿಗೆ ಅನುಗುಣವಾಗಿ ಶಬರಿನಾಥ್ ಹೊಸ ಗಿನ್ನೆಸ್ ದಾಖಲೆಗೆ ಪ್ರಯತ್ನಿಸಿದ್ದಾನೆ ಎಂದು ಜಿಲ್ಲಾ ಕ್ರೀಡಾಧಿಕಾರಿ ಬಿ.ಶಿವ ತಿಳಿಸಿದರು.
ಶಬರಿನಾಥನ ಈಜು ಸಾಹಸವನ್ನು ಆರಂಭದಿಂದ ಅಂತ್ಯದವರೆಗೆ ವೀಡಿಯೊ ಚಿತ್ರೀಕರಿಸಲಾಗಿದ್ದು, ಅದನ್ನು ಗಿನ್ನೆಸ್ ಸಮಿತಿಗೆ ಕಳುಹಿಸಲಾಗಿದೆ.