ವೀಸಾ ಕುರಿತು ತನ್ನ ಕಳವಳವನ್ನು ಭಾರತ ಅಮೆರಿಕಕ್ಕೆ ತಿಳಿಸಿದೆ: ರವಿಶಂಕರ್ ಪ್ರಸಾದ್
ಹೊಸದಿಲ್ಲಿ,ಮಾ.7: ಭಾರತ ಸರಕಾರವು ಎಚ್-1ಬಿ ವೀಸಾ ಅರ್ಜಿಗಳ ಸಂಸ್ಕರಣೆಯನ್ನು ನಿಲ್ಲಿಸುವ ಕ್ರಮದ ಬಗ್ಗೆ ತನ್ನ ಕಳವಳಗಳನ್ನು ಅಮೆರಿಕ ಸರಕಾರದ ಅತ್ಯುನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿದೆ ಎಂದು ಕಾನೂನು ಮತ್ತು ಐಟಿ ಸಚಿವ ರವಿಶಂಕರ ಪ್ರಸಾದ್ ಅವರು ಮಂಗಳವಾರ ಇಲ್ಲಿ ತಿಳಿಸಿದರು. ನಮ್ಮ ಕಳವಳಗಳನ್ನು ಈಗಾಗಲೇ ಅತ್ಯುನ್ನತ ಮಟ್ಟದಲ್ಲಿ ಅಮೆರಿಕ ಸರಕಾರಕ್ಕೆ ತಿಳಿಸಲಾಗಿದೆ ಎಂದು ನಾನು ಭಾವಿಸಿ ದ್ದೇನೆ ಎಂದು ಇಲ್ಲಿ ಸಮ್ಮೇಳನವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಎ.3ರಿಂದ ಎಚ್-1ಬಿ ವೀಸಾ ಅರ್ಜಿಗಳ ಪ್ರೀಮಿಯಂ ಅಥವಾ ಆದ್ಯತೆಯ ಸಂಸ್ಕರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕವು ಕಳೆದ ವಾರ ತಿಳಿಸಿತ್ತು ಮತ್ತು ತನ್ಮೂಲಕ ನುರಿತ ವಿದೇಶಿಯರಿಗೆ ಅಮೆರಿಕದ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ನೆರವಾಗುವ ಕಾರ್ಯಕ್ರಮಕ್ಕೆ ಸಂಕ್ಷಿಪ್ತ ಕಾಯುವಿಕೆ ಅವಧಿಯ ಪರ್ಯಾಯವನ್ನು ತೆಗೆದು ಹಾಕಿತ್ತು.
ಪ್ರಸಕ್ತ ವ್ಯವಸ್ಥೆಯಡಿ ತಮ್ಮ ಸಂಭಾವ್ಯ ಉದ್ಯೋಗಿಗಳಿಗಾಗಿ ಎಚ್-1ಬಿ ವೀಸಾ ಕೋರಿ ಅರ್ಜಿ ಸಲ್ಲಿಸುವ ಕಂಪೆನಿಗಳು ತ್ವರಿತ ಸೇವೆಗಾಗಿ ಹೆಚ್ಚುವರಿಯಾಗಿ 1,225ಡಾ. ಶುಲ್ಕವನ್ನು ಪಾವತಿಸಬಹುದಾಗಿತ್ತು. ಇದರಿಂದ 15 ದಿನಗಳಲ್ಲಿ ವೀಸಾ ಪಡೆಯಬಹುದಾಗಿದ್ದು, ಸಾಮಾನ್ಯ ವಿಧಾನದಲ್ಲಿ 3-6 ತಿಂಗಳುಗಳು ಬೇಕಾಗುತ್ತವೆ. ಇದಕ್ಕೆ ಆದ್ಯತೆಯ ಸಂಸ್ಕರಣೆ ಎನ್ನಲಾಗುತ್ತದೆ. ವೀಸಾ ಅರ್ಜಿಗಳ ಸಂಸ್ಕರಣೆಯ ತಾತ್ಕಾಲಿಕ ಅಮಾನತು ಆರು ತಿಂಗಳವರೆಗೂ ಮುಂದುವರಿಯಬಹುದೆಂದು ಅಮೆರಿಕನ್ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ತಿಳಿಸಿದೆ.
ಎಚ್-1ಬಿ ವೀಸಾಗಳನ್ನು ಭಾರತೀಯ ಐಟಿ ಕಂಪೆನಿಗಳು ವ್ಯಾಪಕವಾಗಿ ಬಳಸುತ್ತಿವೆ.