ಇನ್ನೂ ಬೆಂಬಿಡದ ಹಿಂಸಾಚಾರದ ಕರಿನೆರಳು
ತಮ್ಮ ಸಾವಿಗಾಗಿಯೇ ಹಂಬಲಿಸುವವರು!
ದಂಗೆಯ ಸಮಯದ ಮಕ್ಕಳು ಗುಜರಾತ್ನ ಪುನರ್ವಸತಿ ಕೇಂದ್ರದಲ್ಲಿ ಈಗಲೂ ಮಾನಸಿಕ ಮತ್ತು ದೈಹಿಕ ಗಾಯದಿಂದ ಬಳಲುತ್ತಿದ್ದಾರೆ ಮತ್ತು ಅದನ್ನು ಗುಣಪಡಿಸುವುದು ದೂರದ ಮಾತು. ಆದರೆ ಕನಿಷ್ಠ ಅರ್ಥಮಾಡಿಕೊಳ್ಳಲು ಕೂಡಾ ಯಾವುದೇ ಆಡಳಿತ ಪ್ರಯತ್ನಿಸಿಲ್ಲ.
‘‘ಕಳೆದ ಐದು ತಿಂಗಳಿಂದ ಏನೂ ಕುಡಿಯಲಾಗುತ್ತಿಲ್ಲ’’ ಎಂದು ಹೇಳುತ್ತಾರೆ ಜಾವೇದ್ ಶೇಖ್. ನಿಂದನೆಗಳಿಂದ ಕೂಡಿದ ಅವರ ಧ್ವನಿಯ ಜೊತೆಗೆ ಕೈಗಳು ನಡುಗುತ್ತಿರು ವಂತೆಯೇ ಪತ್ನಿ ತಂದು ನೀಡಿದ ಮಾವಿನ ರಸವನ್ನು ಮರಳಿ ಲೋಟಕ್ಕೆ ಉಗುಳುತ್ತಾರೆ ಜಾವೇದ್. ಹದಿನೈದು ವರ್ಷಗಳ ಹಿಂದಿನ ಘಟನೆ ಶೇಖ್ಗೆ ಜೀವನದ ವ್ಯಾಖ್ಯಾನವನ್ನು ತಿಳಿಸಿತ್ತು. 2002ರಲ್ಲಿ ಹದಿನಾಲ್ಕರ ಹರೆಯದವನಿದ್ದಾಗ ನಡೆದ ಗೋಧ್ರಾ ನರಮೇಧದಲ್ಲಿ ಕೇಸರಿ ಮತಾಂಧ ಗುಂಪೊಂದು ಮುಸ್ಲಿಂ ಗರ್ಭಿಣಿಯೊಬ್ಬಾಕೆಯನ್ನು ಜೀವಂತ ಸುಟ್ಟು ಹಾಕಿದ್ದನ್ನು ಶೇಖ್ ಕಣ್ಣಾರೆ ಕಂಡಿದ್ದರು. ಆ ದಿನ ಹೆಣಗಳ ರಾಶಿಯ ಅಡಿಯಲ್ಲಿ ಅಡಗಿ ಜೀವ ಉಳಿಸಿಕೊಂಡಿದ್ದ ಶೇಖ್ ತನ್ನ ಹೆತ್ತವರು ಮತ್ತು ಹಿರಿಯ ಸಹೋದರಿಯ ಹತ್ಯೆಯನ್ನೂ ಕಂಡಿದ್ದರು. ಅಂದಿನಿಂದ ಅವರು ತನ್ನ ಕತೆಯನ್ನು ವಿವಿಧ ನ್ಯಾಯಾಲಯಗಳು, ರಾಜಕಾರಣಿಗಳ ಜೊತೆಗೆ ಅಸಂಖ್ಯಾತ ಪತ್ರಕರ್ತರಿಗೆ ತಿಳಿಸಿದ್ದು, ಅವರೆಲ್ಲರೂ ಅವರಿಗೆ ಸಾಂತ್ವನ ನೀಡಿದ್ದಾರೆ. ಆದರೆ ಅವರು ಎಂದೂ ಮನೋವೈದ್ಯರಲ್ಲಿ ಅಥವಾ ಸಲಹೆಗಾರರಲ್ಲಿ ಈ ಬಗ್ಗೆ ಮಾತನಾಡಿಲ್ಲ. 2002ರಿಂದ ಅವರು ನೆಮ್ಮದಿಯನ್ನರಸಿ ಊರೂರು ಅಲೆಯುತ್ತಲೇ ಇದ್ದಾರೆ. ಆದರೆ ಪ್ರತೀಬಾರಿಯೂ ಅವರು ಮತ್ತೆ ಅಹ್ಮದಾಬಾದ್ಗೆ ಮರಳುತ್ತಾರೆ.
ಹದಿನೈದು ವರ್ಷಗಳ ನಂತರವೂ ದಂಗೆಯಲ್ಲಿ ಅನಾಥ ರಾದ ಮಕ್ಕಳೆಷ್ಟು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ‘‘ಶೇಖ್ನಂತೆ ಬದುಕುಳಿದವರು ತಮಗೆ ಸಾವು ಬರಬಾರದೆ ಎಂದು ಪ್ರತಿದಿನವೂ ಬೇಡುತ್ತಾರೆ’’ ಎಂದು ಹೇಳುತ್ತಾರೆ ‘ಜನ್ ವಿಕಾಸ್’ ಎಂಬ ಸರಕಾರೇತರ ಸಂಸ್ಥೆಯ ಮೂಲಕ ದಂಗೆಯ ಸಂತ್ರಸ್ತರಿಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತೆ ಹೊಝೆಫಾ ಉಜ್ಜೈನಿ. ಬದುಕುಳಿದಿರುವ ಮಕ್ಕಳನ್ನು ಅಂದಿನ ಹಿಂಸಾಚಾರವು ದುಃಸ್ವಪ್ನವಾಗಿ ಕಾಡುತ್ತಿದೆ. ಫೆಬ್ರವರಿ 28ರಿಂದ ಮಾರ್ಚ್ 2, 2002ರ ಮಧ್ಯೆ ಗುಜರಾತ್ನಾದ್ಯಂತ ನಡೆದ ಹಿಂಸಾಚಾರದಲ್ಲಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದರೆ 98,000ಕ್ಕಿಂತಲೂ ಅಧಿಕ ಜನರು ನಿರಾಶ್ರಿತರಾದರು. ರಾಜ್ಯವು ಸುಸ್ಥಿತಿಗೆ ಬಂದಿದ್ದರೂ ದಂಗೆಯಿಂದ ಬಾಧಿತ ಜನರು ಈಗಲೂ ಅದೇ ನಿರಾಶ್ರಿತ ಕೇಂದ್ರಗಳಲ್ಲಿ ಬಂದಿಯಾಗಿದ್ದಾರೆ. ಈ ನಿರಾಶ್ರಿತ ಕೇಂದ್ರಗಳನ್ನು ಹಿಂದೆ ತಾತ್ಕಾಲಿಕವಾಗಿ ತೆರೆದಿದ್ದರೂ ಬಹುತೇಕ ನಿರಾಶ್ರಿತರಿಗೆ ಮುಂದೆ ಅದೇ ಮನೆಗಳಾಗಿ ಮಾರ್ಪಟ್ಟಿವೆ. ದಂಗೆಯನ್ನು ಮರೆಯಲಾಗದ ಅದೆಷ್ಟೋ ಮಂದಿ ಹಲವು ವರ್ಷಗಳ ಕಾಲ ಅನುಭವಿಸಿದ ನಿರ್ಲಕ್ಷ ಕಡೆಗಣನೆ ಮತ್ತು ಸ್ಥಳಾಂತರದಿಂದ ಅಸಹನೆಯ ವಾತಾರಣದಲ್ಲೇ ಬೆಳೆದು ಬಂದಿದ್ದಾರೆ. ಅಂಥದ್ದೇ ಒಂದು ಶಿಬಿರ ಸಿಟಿಝನ್ ನಗರ ನಿವಾಸಿಗಳದ್ದು. ಅವರು ತಮ್ಮನ್ನು ‘‘ನಿಜವಾಗಿಯೂ ಈ ದೇಶದ ಪ್ರಜೆಗಳೆಂದು ಯಾವಾಗ ಭಾವಿಸಲಾಗುತ್ತದೆ’’ ಎಂದು ಪ್ರಶ್ನಿಸುತ್ತಾರೆ. ಅವರ ಮಕ್ಕಳು ಈಗಲೂ ಮಾನಸಿಕ ಮತ್ತು ದೈಹಿಕ ಗಾಯದಿಂದ ಬಳಲುತ್ತಿದ್ದಾರೆ ಮತ್ತು ಅದನ್ನು ಗುಣಪಡಿಸುವುದು ದೂರದ ಮಾತು. ಕನಿಷ್ಟ ಇದನ್ನು ಅರ್ಥಮಾಡಿಕೊಳ್ಳಲು ಕೂಡಾ ಯಾವುದೇ ಆಡಳಿತ ಪ್ರಯತ್ನಿಸಿಲ್ಲ.
ಶೇಖ್ ಸಾಕ್ಷಿಯಾಗಿದ್ದ ಕೌಸರ್ ಬಾನು ಹತ್ಯೆ ಪ್ರಕರಣ ವಿಚಾರಣೆ ಮುಗಿದಿದ್ದು 2012ರಲ್ಲಿ ಗುಜರಾತ್ ನ್ಯಾಯಾಲಯ ಬಾಬು ಬಜರಂಗಿ ಎಂಬಾತ ಬಾನುರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವುದಾಗಿ ತೀರ್ಪು ನೀಡಿತ್ತು. ಆದರೆ ನ್ಯಾಯಾಧೀಶೆ ಜ್ಯೋತ್ಸ್ನಾಯಾಜ್ಞಿಕ್ ತನ್ನ ತೀರ್ಪಿನಲ್ಲಿ, ‘‘ಭ್ರೂಣವು ಗರ್ಭಿಣಿಯ ದೇಹದಿಂದ ಹೊರಬಂದಿತ್ತೇ ಎಂದು ತಿಳಿಯಲು ಶೇಖ್ ಬಹಳ ಸಣ್ಣ ಬಾಲಕನಾಗಿದ್ದಾನೆ’’ ಎಂದು ತಿಳಿಸಿದ್ದರು. ಈ ಪ್ರಕರಣ ಮತ್ತು ಶೇಖ್ ಸೆರೆಯಾಗಿದ್ದ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಈಗಲೂ ಗುಜರಾತ್ ಉಚ್ಛನ್ಯಾಯಾಲಯದಲ್ಲಿ ಬಾಕಿಯುಳಿದಿದೆ. ಹೊಸ ಬದುಕನ್ನು ಅರಸಿ...
ಸಿಟಿಝನ್ ನಗರ್, ವತ್ವಾ ಮತ್ತು ಇತರ 67 ನಿರಾಶ್ರಿತ ಕಾಲನಿಗಳಲ್ಲಿ ಹರಿಯುವ ನೀರು, ವಿದ್ಯುತ್ ಮತ್ತು ತ್ಯಾಜ್ಯ ಸಂಗ್ರಹ ಹೀಗೆ ಮೂಲ ಸೌಕರ್ಯಗಳ ಕೊರತೆಯಿದೆ. ಸಿಟಿಝನ್ ನಗರದಲ್ಲಿರುವ 130 ಮನೆಗಳು ಕುಡಿಯುವ ನೀರಿಗಾಗಿ ಕೇವಲ ಒಂದು ಟ್ಯಾಂಕರನ್ನು ನೆಚ್ಚಿಕೊಂಡಿವೆ. ರಸ್ತೆಗಳು ನಾದುರಸ್ತಿಯಾಗಿವೆೆ ಮತ್ತು ಸಂಪೂರ್ಣ ಅಹ್ಮದಾ ಬಾದ್ನ ತ್ಯಾಜ್ಯ ಬಂದು ಬೀಳುವ ಕಾರಣ ತ್ಯಾಜ್ಯದ ದೊಡ್ಡ ಬೆಟ್ಟವೇ ಸೃಷ್ಟಿಯಾಗಿದ್ದು ಬೆಳೆಯುತ್ತಲೇ ಇದೆ. ಸಮೀಪದ ಅಲ್ಯುಮೀನಿಯಂ ಕಾರ್ಖಾನೆ ಹೊರಸೂಸುವ ಕಪ್ಪುಹೊಗೆ ಆಗಸವನ್ನು ಕಪ್ಪಾಗಿಸಿದ್ದು ಗಾಳಿಯನ್ನು ಮಲಿನಗೊಳಿಸಿದೆ. ಅಹ್ಮದಾಬಾದ್ನಲ್ಲಿ ದಂಗೆಯಿಂದ ಬಾಧಿತರಾದವರು ಅಕ್ಷರಶಃ ಮೌನವಾಗಿ ಯಾರಿಗೂ ಕಾಣದಂತೆ ಅಥವಾ ಕೇಳದಂತೆ ನಗರದ ಹೊರವಲಯಗಳಿಗೆ ಚಲಿಸಿದರು. ಬಹಳಷ್ಟು ಜನರು ಮೃತಪಟ್ಟಿದ್ದಾರೆ. ‘‘ನಮಗಿಲ್ಲಿ ಉಸಿರಾಟದ ಸಮಸ್ಯೆಯಿದೆ. 2002ರಲ್ಲಿ ನಾವಿಲ್ಲಿ ಬಂದಂದಿನಿಂದ ಇಂದಿನ ವರೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರ ಸಂಖ್ಯೆಯು ಹೆಚ್ಚಾಗಿದೆ’’ ಎಂದು ಹೇಳುತ್ತಾರೆ ದಂಗೆಯಲ್ಲಿ ಬದುಕುಳಿದ ಇನ್ನೊರ್ವ ವ್ಯಕ್ತಿ ಮತ್ತು ನರೋಡಾ ಪಾಟಿಯಾ ಹತ್ಯಾಕಾಂಡದ ಸಾಕ್ಷಿದಾರ ಮೊಯಿನುದ್ದೀನ್ ಶೇಖ್.
ದಂಗೆಯ ಸಮಯದಲ್ಲಿ ಮೊಯಿನುದ್ದೀನ್ ಪೊಲೀಸ್ ಆಗಿದ್ದರು. ನಂತರ ಆತ ಕೆಲಸಕ್ಕೆ ರಾಜೀನಾಮೆ ನೀಡಿದರು. ಆತ ನ್ಯಾಯಾಲಯದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಎಂದು ಗುರುತಿಸಿಕೊಂಡು ಬಂದಿರುವ ವ್ಯಕ್ತಿಗಳು ಜನರನ್ನು ಹತ್ಯೆ ಮಾಡುತ್ತಿದ್ದರೆ ಅಸಹಾಯಕನಾಗಿ ನೋಡಬೇಕಾದ ಆ ದುಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ. ‘‘ಅವರನ್ನು ತಡೆಯಲು ಜಿಲ್ಲಾಧಿಕಾರಿ ಯಿಂದ ಯಾವ ಆದೇಶವೂ ಇರಲಿಲ್ಲ. ಪೊಲೀಸರು ಮೊದಲು ಸ್ಥಳದಿಂದ ಓಡುತ್ತಿದ್ದರು ಯಾಕೆಂದರೆ ಅವರಿಗೆ ಅವರ ಪ್ರಾಣವನ್ನು ಉಳಿಸಿಕೊಳ್ಳಬೇಕಿತ್ತು’’ ಎಂದಾತ ಹೇಳುತ್ತಾರೆ. ಕಬ್ಬಿಣದ ಛಾವಣಿಯನ್ನು ಹೊಂದಿರುವ ತನ್ನ ಮನೆಯ ಹೊರಗೆ ಕುಳಿತು ಮೊಯಿನುದ್ದೀನ್ ದಂಗೆಯ ನಂತರ ಐದು ವರ್ಷಗಳ ಕಾಲ ತನ್ನ ಕುಟುಂಬ ಪಟ್ಟ ಕಷ್ಟವನ್ನು ಮೆಲುಕು ಹಾಕುತ್ತಾರೆ, ಆ ಹೋರಾಟ ಇನ್ನೂ ಮುಗಿದಿಲ್ಲ. ಮೊಯಿನುದ್ದೀನ್ ಶೇಖ್ಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳಿದ್ದು ದಂಗೆಯ ನಂತರ ಯಾರೂ ಕೂಡಾ ಶಾಲೆಗೆ ಹೋಗಿಲ್ಲ. ಓರ್ವ ಪದವೀಧರನಾಗಿರುವ ಮೊಯಿನುದ್ದೀನ್ಗೆ ತನ್ನ ಮಕ್ಕಳೂ ಸುಶಿಕ್ಷಿತರಾಗಬೇಕು ಮತ್ತು ಸರಕಾರಿ ಕೆಲಸಕ್ಕೆ ಸೇರಬೇಕು ಎಂಬ ಕನಸಿತ್ತು. ಆದರೆ 2002ರ ನಂತರ ಅದು ಅಸಾಧ್ಯವಾಯಿತು. ದಂಗೆಯಲ್ಲಿ ಬದುಕುಳಿದ ಇತರ ಮಕ್ಕಳಂತೆ ಮೊಯಿನುದ್ದೀನ್ರ ಮಕ್ಕಳೂ ಕೂಡಾ ಮಾನಸಿಕವಾಗಿ ಭಯಭೀತರಾಗಿದ್ದು ಶಾಲೆ ಅಥವಾ ಇತರ ಕಲಿಕೆಯಲ್ಲಿ ತೊಡಗಲು ಅಶಕ್ತರಾಗಿದ್ದಾರೆ. ‘‘ಮೊದಲ ಐದು ವರ್ಷ ಅವರು ಒಂದು ರೀತಿಯಲ್ಲಿ ಕೋಮಾದಲ್ಲಿದ್ದರು ಎಂದೇ ಹೇಳಬೇಕು’’ ಎನ್ನುತ್ತಾರೆ ಮೊಯಿನುದ್ದೀನ್. ‘‘ಅವರಿಗೆ ಚಲಿಸಲು ಅಥವಾ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಿದ್ದೆಗೆ ಜಾರಿದರೆ ಒಮ್ಮೆಲೇ ಚೀರುತ್ತಾ ಎದ್ದೇಳುತ್ತಿದ್ದರು-‘ಪಪ್ಪಾಆ ಗುಂಪು ನಮ್ಮನ್ನು ಕೊಲ್ಲಲು ಬರುತ್ತಿದೆ, ಆ ಗುಂಪು ನಮ್ಮನ್ನು ಕೊಲ್ಲಲು ಬರುತ್ತಿದೆ’. ಅವರೇನು ಕಂಡಿದ್ದಾರೋ ಅದು ಈಗಲೂ ಅವರ ತಲೆಯಲ್ಲಿ ಹಾಗೆಯೇ ಉಳಿದುಕೊಂಡಿದೆ’’ ಎನ್ನುತ್ತಾರೆ ಮೊಯಿನುದ್ದೀನ್.
ಅವರ ಮಕ್ಕಳೂ ಸೇರಿದಂತೆ ಈ ಬೀಭತ್ಸ ಕ್ರೌರ್ಯವನ್ನು ಕಣ್ಣಾರೆ ಕಂಡಿರುವ ನೂರಾರು ಮಕ್ಕಳು ಮಾನಸಿಕ ಚಿಕಿತ್ಸೆ ಅಥವಾ ಸಲಹೆಯನ್ನು ಇನ್ನಷ್ಟೇ ಪಡೆಯಬೇಕಿದೆ. ‘‘ಇನ್ನೆಷ್ಟು ಬಾರಿ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತದೆ ಎಂಬ ಪ್ರಶ್ನೆಯನ್ನು ಬದುಕುಳಿದವರು ಕೇಳುತ್ತಾರೆ’’ ಎನ್ನುತ್ತಾರೆ ಹೊಝೆಫಾ. ಕಳೆದ ಒಂದೂವರೆ ದಶಕಗಳಿಂದ ‘ಜನ್ ವಿಕಾಸ್’ ನೊಂದಿಗೆ ಸೇರಿ ದಂಗೆಪೀಡಿತ ಜನರಿಗಾಗಿ ದುಡಿಯುತ್ತಿರುವ ಹೊಝೆಫಾ, ‘‘ಪೀಡಿತರ ಪರಿಸ್ಥಿತಿಯ ಮಧ್ಯೆಪ್ರವೇಶಿಸಲು ರಾಜ್ಯ ಸರಕಾರಕ್ಕೆ ಇಷ್ಟು ವಿಳಂಬವಾಗಲು ಕಾರಣವೇನು ?’’ ಎಂದು ಪ್ರಶ್ನಿಸುತ್ತಾರೆ. ‘‘ಟಾಟಾ ತನ್ನ ಫ್ಯಾಕ್ಟರಿಯನ್ನು ಕೆಲವೇ ತಿಂಗಳಲ್ಲಿ ಮರುಪಡೆಯಿತು. ಈ ಪೀಡಿತರು ಕಳೆದ ಹದಿನೈದು ವರ್ಷಗಳಿಂದ ತಮ್ಮ ಹೆಸರಲ್ಲಿ ಒಂದು ಮನೆಯಿಲ್ಲದೆ, ನೀರು ಅಥವಾ ಇತರ ಯಾವುದೇ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದಾರೆ. ಸರಕಾರ ನಿಧಾನವಾಗಿ ಸ್ಪಂದಿಸಿದ ಕಾರಣ ಹೀಗಾಗಿದೆ ಎಂದು ನೀವು ಹೇಳುವಂತಿಲ್ಲ’’ ಎನ್ನುತ್ತಾರೆ ಹೊಝೆಫಾ. ಮೊಯಿನುದ್ದೀನ್ ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ; ಅವರ ಮಗಳಿಗೆ ಹದಿನೆಂಟಾದ ಕೂಡಲೇ ಮದುವೆಯಾದರೆ ಗಂಡು ಮಕ್ಕಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ ಮತ್ತು ಮೊಯಿನುದ್ದೀನ್ ಆಟೋ ಓಡಿಸುತ್ತಾರೆ. ಸಿಟಿಝನ್ ನಗರದಲ್ಲಿ ಮೊದಲ ಕೆಲವು ವರ್ಷಗಳು ನೆನಪಿಸುತ್ತಾ ತನ್ನ ಗೋರಂಟಿ ಹಚ್ಚಿದ ತಲೆಯನ್ನು ಅಲ್ಲಾಡಿಸುವಾಗ ಮೊಯಿನುದ್ದೀನ್ ಮುಖದಲ್ಲಿ ಹೆತ್ತವರ ಪಶ್ಚಾತ್ತಾಪ ಎದ್ದು ಕಾಣುತ್ತಿತ್ತು. ‘‘ನಾವು ಇಲ್ಲಿಯ ಆಪ್ತಸಲಹೆಗಾರರ ಬಳಿ ಹೋಗಿದ್ದೇವೆ, ನೀರಿಗಾಗಿ, ಸರಕಾರಿ ಆಸ್ಪತ್ರೆಗಾಗಿ, ಮಕ್ಕಳಿಗಾಗಿ ಶಾಲೆಗಾಗಿ ಸ್ಥಳೀಯ ಶಾಸಕರಲ್ಲಿ ಮನವಿ ಮಾಡಿದ್ದೇವೆ.. ಆದರೆ ಬಹುಶಃ ನಮ್ಮ ಮನವಿಗಳು ಕಿವುಡು ಕಿವಿಗಳಿಗೆ ಕೇಳಿಸಲಿಲ್ಲ ಎಂದನಿಸುತ್ತದೆ’’ ಎನ್ನುತ್ತಾರವರು. ದಂಗೆಯ ನಂತರ ನಿರಾಶ್ರಿತ ಕೇಂದ್ರಗಳಲ್ಲಿ ಹುಟ್ಟಿದ ಮಕ್ಕಳು ಮೊಯಿನುದ್ದೀನ್ರ ಮಕ್ಕಳಂತೆಯೇ ಬಳಲುವುದು ಮುಂದುವರಿದಿದೆ. ಶಾಲೆ ಬಹಳ ದೂರವಿದೆ ಮತ್ತು ಅಲ್ಲಿಗೆ ಮಕ್ಕಳು ಕಳುಹಿಸುವುದು ಬಹಳ ದುಬಾರಿ. ಇತ್ತೀಚೆಗೆ ನಡೆದ ಅಪಘಾತದಲ್ಲಿ ಕಾಲನಿಯ ಹಲವು ಮಕ್ಕಳು ಶಾಲೆಗೆ ಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದರು. ಹಾಗಾಗಿ ಈಗ ಶಾಲೆಗೆ ಮಕ್ಕಳನ್ನು ಕಳುಹಿಸಲು ಇನ್ನಷ್ಟು ಭಯಪಡುತ್ತಾರೆ.
ದಂಗೆಪೀಡಿತರಾಗಿರುವ ಮತ್ತು ‘ಜನ್ ವಿಕಾಸ್’ ಜೊತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು ಸದ್ಯ ಸಿಟಿಝನ್ ನಗರದ ನಿರಾಶ್ರಿತರಿಗಾಗಿ ಕೆಲಸ ಮಾಡುವ ರಶೀದಾ ಅನ್ಸಾರಿ ಕೂಡಾ ಮಕ್ಕಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ‘‘ಈ ಮಕ್ಕಳನ್ನು ಯಾರು ಕೂಡಾ ನೆನಪಿಸಿಕೊಳ್ಳುವುದಿಲ್ಲ, ಸರಕಾರವು ಅವರನ್ನು ನಿರ್ಲಕ್ಷಿಸಿದೆ’’ ಎನ್ನುತ್ತಾರೆ ರಶೀದಾ. ರಶೀದಾರಂಥಾ ಕಾರ್ಯಕರ್ತೆಯರು ಕೌನ್ಸಿಲಿಂಗ್ ತಂತ್ರಗಳನ್ನು ತಮ್ಮ ವೆಚ್ಚದಲ್ಲೇ ಕಲಿತು, ನಂತರ ಆಘಾತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವ ಇತರರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. 2002ರ ದಂಗೆಯ ನಂತರ ಪೀಡಿತ ಮಹಿಳೆಯರು ಮತ್ತು ಮಕ್ಕಳಿಗಾಗಿ ದುಡಿಯುವ ಸರಕಾರೇತರ ‘ಆ್ಯಕ್ಷನ್ ಏಡ್’ ಎಂಬ ಸಂಸ್ಥೆಯಿಂದ ರಶೀದಾ ಈ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಯಾವುದೇ ಔಪಚಾರಿಕ ಶಿಕ್ಷಣವಿಲ್ಲದೆ ಆಕೆಯಿಂದ ಇಷ್ಟು ಮಾಡಲು ಮಾತ್ರ ಸಾಧ್ಯ. ‘‘ನಾವೇನಿದ್ದರೂ ಮಾತನ್ನು ಕೇಳಬಲ್ಲೆವು’’ ಎಂದು ಹೇಳುತ್ತಾರೆ ಆಕೆ. ದಂಗೆಪೀಡಿತ ಮತ್ತು ಸಂಕಷ್ಟಕ್ಕೀಡಾಗಿರುವ ಮಕ್ಕಳಿಗೆ ಸುರಕ್ಷಿತವಾದ ತಾಣವನ್ನು ಒದಗಿಸಲು ಸರಕಾರ ಯಾಕೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬ ಬಗ್ಗೆ ರಶೀದಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ‘‘ಸರಕಾರ ಕನಿಷ್ಠ ಒಂದು ಅನಾಥಾಶ್ರಮವನ್ನಾದರೂ ನಿರ್ಮಿಸಿದ್ದರೆ ಅಲ್ಲಿ ಈ ಮಕ್ಕಳು ಇರುತ್ತಿದ್ದರು ಮತ್ತು ಅವರ ಪುನರ್ವಸತಿಯಾಗುತ್ತಿತ್ತು’’ ಎನ್ನುತ್ತಾರೆ ರಶೀದಾ. ಹೊರದಾರಿಯಿಲ್ಲ
ಇಂದು ದಂಗೆಪೀಡಿತ ಮಕ್ಕಳ ವಿದ್ಯಾಭ್ಯಾಸ ಮತ್ತು ಸ್ಥಿತಿಸ್ಥಾಪನೆ ಅವರ ವೈಯಕ್ತಿಕ ಹಣೆಬರಹ ಮತ್ತು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಶೇಖ್ ಸಾಹಿರ್ ಸಬೀರ್ ಹುಸೈನ್ ಗಿಡ್ಡ ಕೂದಲು ಮತ್ತು ತೀಕ್ಷ್ಣ ಕಣ್ಣುಗಳ ನವಯುವಕ. ಈಗಷ್ಟೇ ಹದಿನಾರರ ಹರೆಯಕ್ಕೆ ಕಾಲಿರಿಸಿರುವ ಆತ ದಂಗೆಯ ಸಮಯದಲ್ಲಿ ಏಳು ತಿಂಗಳ ಕೂಸು. ಹುಸೈನ್ ಸಿಟಿಝನ್ ನಗರದಲ್ಲಿ ತನ್ನ ಹೆತ್ತವರು ಮತ್ತು ಇಬ್ಬರು ಸಹೋದರರ ಜೊತೆ ವಾಸಿಸುತ್ತಾನೆ. ಆತನ 30 ಮತ್ತು 25ರ ಹರೆಯದ ಅಣ್ಣಂದಿರು ಐದನೆ ತರಗತಿಯ ನಂತರ ಶಾಲೆಯನ್ನು ತೊರೆದರು. ಹುಸೈನ್ ಪ್ರತಿದಿನ ಅರ್ಧಗಂಟೆಗಳ ಕಾಲ ಪ್ರಯಾಣಿಸಿ ರಾಯ್ಕಂಡ್ನಲ್ಲಿರುವ ಐರಿಶ್ ಪ್ರೆಸ್ಬಿಟೆರಿಯನ್ ಮಿಷನ್ ಪ್ರೌಢಶಾಲೆಗೆ ತಲುಪುತ್ತಾನೆ ಮತ್ತು ತನ್ನ ವಿದ್ಯಾಭ್ಯಾಸವನ್ನು ಮುಗಿಸಲು ನಿಶ್ಚಯಿಸಿದ್ದಾನೆ. ಹತ್ತನೆ ತರಗತಿವರೆಗೆ ಖಾಸಗಿ ಶಾಲೆಯಲ್ಲಿ ಕಲಿತ ಆತ ಮುಂದೆ ಅಲ್ಲಿ ಉನ್ನತ ಶಿಕ್ಷಣ ಸೌಲಭ್ಯವಿಲ್ಲದ ಕಾರಣ ಬೇರೆ ಶಾಲೆ ಸೇರಿದ. ‘‘ನಾನು ಕಲಿಯಬೇಕು. ನಾನು ಕಲಿಯಬೇಕು ಮತ್ತು ಅದರ ಫಲವಾಗಿ ಏನಾದರೂ ಆಗಬೇಕು’’ ಎಂದು ಆತ ಹೇಳುತ್ತಾನೆ. ಹುಸೈನ್ ಗೆಳೆಯ ಯಾಕೂಬ್ಗೆ ಕೂಡಾ ಹದಿನಾರರ ಹರೆಯ. ಆದರೆ ಆತ ಎಂಟನೆ ತರಗತಿಗೇ ಶಾಲೆ ತೊರೆದಿದ್ದಾನೆ. ಇಬ್ಬರು ಗೆಳೆಯರು ಸಂಜೆಯ ಸಮಯವನ್ನು ಜೊತೆಯಾಗಿ ಕಳೆಯುತ್ತಾರೆ ಆದರೆ ಹಗಲು ಹೊತ್ತು ಹುಸೈನ್ ಶಾಲೆಗೆ ತೆರಳಿದ ವೇಳೆ ಯಾಕೂಬ್ ಮರದ ಕೆಲಸ ಮಾಡುತ್ತಾನೆ. ‘‘ನನಗೆ ನನ್ನದೇ ಆದ ಸಮಸ್ಯೆಗಳಿದ್ದವು’’ ಎಂದು ಯಾಕೂಬ್ ಹೇಳುವಾಗ ಆತನಿದ್ದ ಪರಿಸ್ಥಿತಿ ಆತ ಮುಂದೆ ಕಲಿಯಲು ಅವಕಾಶ ನೀಡಲಿಲ್ಲ ಎಂಬುದನ್ನು ಸೂಚಿಸುತ್ತದೆ. ಮನೆಯ ಐದು ಮಕ್ಕಳ ಪೈಕಿ ಯಾಕೂಬ್ ಒಬ್ಬನೇ ದುಡಿಯುವಾತ. ಆತ ಶಾಲೆಯನ್ನು ತೊರೆದಾಗ ಹೆತ್ತವರು ತಡೆಯಲಿಲ್ಲ ಯಾಕೆಂದರೆ ಅದು ಐದು ಕಿ.ಮೀ. ದೂರವಿದ್ದು ಮನೆಯಲ್ಲಿ ತಿನ್ನುವ ಎಂಟು ಬಾಯಿಗಳಿದ್ದ ಕಾರಣ ಎಲ್ಲರಿಗೂ ಪಠ್ಯಪುಸ್ತಕ ಮತ್ತು ಆಟೋಗೆ ಹಣವನ್ನು ನೀಡುವಷ್ಟು ಆತನ ಹೆತ್ತವರು ಶಕ್ತರಾಗಿರಲಿಲ್ಲ. ಶಿಕ್ಷಣದ ಕೊರತೆಯು ಬೆಳೆಯುತ್ತಲೇ ಹೋಗುತ್ತಿರುವ ಸಮಸ್ಯೆ ಎಂಬುದನ್ನು ಅರಿತ ಸಿಟಿಝನ್ ನಗರದ ಕೆಲವು ಯುವಕರು ಶಾಲೆಗೆ ಹೋಗದ ಮಕ್ಕಳಿಗೆ ಪಾಠ ಹೇಳಿಕೊಡಲು ಟ್ಯೂಷನ್ ತರಗತಿಗಳನ್ನು ಆರಂಭಿಸಿದರು. ಬಹುತೇಕ ಹುಡುಗರೇ ಆಗಿರುವ ವಿದ್ಯಾರ್ಥಿಗಳು ಇಲ್ಲಿ ತಮ್ಮ ಹೆಸರನ್ನು ಬರೆಯುವುದು, ಚಿಹ್ನೆಗಳನ್ನು ಓದುವುದು, ಸರಳ ಗಣಿತ ಮುಂತಾದ ಮೂಲಶಿಕ್ಷಣವನ್ನು ಪಡೆಯುತ್ತಾರೆ. ಕಾಲೇಜಿಗೆ ಹೋಗುವ ಯುವಕರು ಇವರ ಶಿಕ್ಷಕರಾಗಿದ್ದು ತಮ್ಮ ನೆರೆಯ ಮಕ್ಕಳಿಗೆ ಕಲಿಸಲು ಸಮಯವನ್ನು ತೆಗೆದಿಡುತ್ತಾರೆ.
ಇನ್ನು ಹುಡುಗಿಯರ ಸಂಕಷ್ಟ ಘನಘೋರವಾದುದು. ಇನ್ನೂ ಭಯಮುಕ್ತರಾಗದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಎಂಟನೆ ತರಗತಿ ಕಲಿತ ನಂತರ ಶಾಲೆಯಿಂದ ಬಿಡಿಸುತ್ತಾರೆ. ಬಹಳಷ್ಟು ಹೆಣ್ಣು ಮಕ್ಕಳಿಗೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಅವಕಾಶವನ್ನೂ ನೀಡದೆ ಹದಿನೆಂಟು ವರ್ಷ ತುಂಬುವ ಮುನ್ನವೇ ಮದುವೆ ಮಾಡಿ ಮುಗಿಸುತ್ತಾರೆ. ವತ್ವಾದಲ್ಲಿ ಕೆಲವು ಹುಡುಗಿಯರು ಪರಿಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ ಆದರೆ ಇದೊಂದೇ ದಾರಿ ಎಂದು ತಿಳಿದು ಮೌನವಾಗುತ್ತಾರೆ. ಅವರಲ್ಲಿ ಯಾರೊಬ್ಬರೂ ಗುರುತಿಸಿಕೊಳ್ಳಲು ಬಯಸುವುದಿಲ್ಲ-ಮನೆಯಲ್ಲಿ ಹೆತ್ತವರಿಗೆ ಅದಕ್ಕಿಂತಲೂ ದೊಡ್ಡ ಸಮಸ್ಯೆಯಿದೆ ಎಂದವರು ಹೇಳುತ್ತಾರೆ.
ಕೃಪೆ: scroll.in