ಅರಣ್ಯ ಇಲಾಖೆಯ ಜೆಸಿಬಿ ಕಾರ್ಯಾಚರಣೆಗೆ ಹುಲಿ ಬಲಿ

ಡೆಹ್ರಾಡೂನ್, ಮಾ.19: ಜೆಸಿಬಿ ನೆರವಿನಿಂದ ಹುಲಿಯನ್ನು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ, ಹುಲಿಯ ಸಾವಿನೊಂದಿಗೆ ಅಂತ್ಯವಾಗಿದೆ. ಕಾಬೆಟ್ ಹುಲಿ ರಕ್ಷಿತಾರಣ್ಯದ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಹುಲಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ್ತುಬರಿಸುವ ಔಷಧ ನೀಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ದಬ್ಕಾ ನದಿಯ ಸಮೀಪ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಕಾಡಿನ ಒಳಕ್ಕೆ ಹೋದಾಗ, ಗಂಡುಹುಲಿ ಎದುರಾಯಿತು. ಭಗವತಿ ದೇವಿ (33) ಹಾಗೂ ಆಕೆಯ ಮಾವ ಲಕ್ಮತಿ ಎಂಬವರ ಮೇಲೆ ಹುಲಿ ದಾಳಿ ಮಾಡಿತು. ಇದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು.
ಕೂಲಿಗಳ ಮೇಲೆ ದಾಳಿ ಮಾಡಿದ ಕಾರಣಕ್ಕಾಗಿ ಹುಲಿಯನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಗಣಿ ಮಾಲಕರು ಅರಣ್ಯ ಇಲಾಖೆಯ ಮೇಲೆ ಒತ್ತಡ ತಂದರು. ತಕ್ಷಣ ಮತ್ತುಬರಿಸುವ ಔಷಧ ನೀಡುವ ಬಂದೂಕುಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಸ್ಥಳೀಯ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಸಹಾಯದಿಂದ ಅದನ್ನು ಸ್ಥಳಾಂತರಿಸಲು ಮುಂದಾದರು. ಆಗ ತೀವ್ರವಾಗಿ ಗಾಯಗೊಂಡ ಹುಲಿ, ಮೃಗಾಲಯಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನೀಗಿತು.