‘ಗೋರಕ್ಷಕ ಸಂಘಟನೆಯನ್ನು ಏಕೆ ನಿಷೇಧಿಸಬಾರದು’
ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್

ಹೊಸದಿಲ್ಲಿ, ಎ.7: ಗೋರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಸುತ್ತಿರುವ ಗೋರಕ್ಷಕ ಸಂಘಟನೆಗಳನ್ನು ಏಕೆ ನಿಷೇಧಿಸಬಾರದು ಎಂದು ಕೇಳಿರುವ ಸುಪ್ರೀಂಕೋರ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಹಾಗೂ ರಾಜಸ್ಥಾನ ಸೇರಿದಂತೆ ಇತರ ಆರು ರಾಜ್ಯಗಳಿಗೆ ಶುಕ್ರವಾರ ನೋಟಿಸ್ ಕಳುಹಿಸಿಕೊಟ್ಟಿದೆ.
ರಾಜಸ್ಥಾನದಲ್ಲಿ ಗೋರಕ್ಷಕ ಗುಂಪು 55 ವರ್ಷದ ವ್ಯಕ್ತಿಯನ್ನು ಸಾಯಿಸಿದ ಘಟನೆ ನಡೆದು ಒಂದು ವಾರದ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಕಾಂಗ್ರೆಸ್ ಮುಖಂಡ ಶೆಹ್ಝದ್ ಪೂನಾವಾಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ಪೂನಾವಾಲಾ ತಮ್ಮ ಅರ್ಜಿಯಲ್ಲಿ ಆರು ರಾಜ್ಯ ಸರಕಾರಗಳು ಇಂತಹ ಘಟನೆಗಳಿಗೆ ಹೊಣೆ ಎಂದು ಪಟ್ಟಿ ಮಾಡಿದ್ದರು.
ರಾಜಸ್ಥಾನ, ಗುಜರಾತ್, ಜಾರ್ಖಂಡ್, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ಮುಂದೂಡಿದೆ.
ಗೋರಕ್ಷಕರು ಅಲ್ಪ ಸಂಖ್ಯಾತರು ಹಾಗೂ ದಲಿತರಿಗೆ ಭಯೋತ್ಪಾದಕರಂತೆ ಕಾಡುತ್ತಿದ್ದಾರೆ. ಸಿಮಿ ಸಂಘಟನೆಯನ್ನು ನಿಷೇಧಿಸಿದ ರೀತಿಯೇ ಗೋರಕ್ಷಕ ಸಂಘಟನೆಗಳನ್ನು ನಿಷೇಧಿಸಬೇಕೆಂದು ಅರ್ಜಿದಾರ ಪೂನಾವಾಲಾ ಆಗ್ರಹಿಸಿದ್ದರು.
ಗುಜರಾತ್, ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಗೋರಕ್ಷಕರಿಗೆ ರಕ್ಷಣೆಯ ಜೊತೆಗೆ ಬಹುಮಾನವನ್ನು ನೀಡಲಾಗುತ್ತದೆ. ಇಂತಹ ಸಂಘಟನೆಗಳು ಗೋರಕ್ಷಣೆಯ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.