ವಿಮಾನನಿಲ್ದಾಣಕ್ಕೆ ಹೋಗಿ ಶೇಖ್ ಹಸೀನಾರನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಎ.7: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಎಲ್ಲ ಶಿಷ್ಟಾಚಾರವನ್ನು ಬದಿಗಿಟ್ಟು ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ತೆರಳಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾರನ್ನು ಸ್ವಾಗತಿಸಿದ್ದಾರೆ.
ಮೋದಿ ಅವರು 2014ರ ಮೇನಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಹಸೀನಾ ಭಾರತಕ್ಕೆ ಭೇಟಿ ನೀಡಿದ್ದಾರೆ. ಮೋದಿ ಅವರು ಲೋಕ ಕಲ್ಯಾಣ ಮಾರ್ಗದಿಂದ ಏರ್ಪೋರ್ಟ್ ತನಕ ಟ್ರಾಫಿಕ್ ನಿರ್ಬಂಧವಿಲ್ಲದೆ ಸಾಮಾನ್ಯ ಟ್ರಾಫಿಕ್ನಲ್ಲಿ ತೆರಳಿ ಹಸೀನಾರನ್ನು ಸ್ವಾಗತಿಸಿದರು. ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮದ ರಾಜ್ಯ ಸಚಿವ ಬಬುಲ್ ಸುಪ್ರಿಯೋ ಈ ವೇಳೆ ಏರ್ಪೋರ್ಟ್ನಲ್ಲಿ ಹಾಜರಿದ್ದರು.
ನಾಲ್ಕು ದಿನಗಳ ಭಾರತ ಭೇಟಿಯಲ್ಲಿರುವ ಹಸೀನಾ ನಾಗರಿಕ ಪರಮಾಣು ಸಹಕಾರ ಹಾಗೂ ರಕ್ಷಣೆ ಸೇರಿದಂತೆ ಕನಿಷ್ಠ 25 ಒಪ್ಪಂದಗಳಿಗೆ ಭಾರತದೊಂದಿಗೆ ಸಹಿ ಹಾಕುವ ಸಾಧ್ಯತೆಯಿದೆ.
ಉಗ್ರಗಾಮಿ ಚಟುವಟಿಕೆಯನ್ನು ಹತ್ತಿಕ್ಕಲು ಹಾಗೂ ಎರಡೂ ದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಕುರಿತು ಉಭಯ ದೇಶದ ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಕೋಲ್ಕತಾ ಹಾಗೂ ಖುಲ್ನಾ ನಡುವೆ ಬಸ್ ಹಾಗೂ ರೈಲ್ವೆ ಸೇವೆಗಳ ಉದ್ಘಾಟನಾ ಕಾರ್ಯಕ್ರಮವೂ ನಡೆಯಲಿದೆ.
ರವಿವಾರ ಅಜ್ಮೀರ್ ಶರೀಫ್ಗೆ ಭೇಟಿ ನೀಡಲಿರುವ ಬಾಂಗ್ಲಾ ಪ್ರಧಾನಿ ಸೋಮವಾರ ಭಾರತದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.