ಕಾಶ್ಮೀರ ಹಿಂಸಾಚಾರ: ಚುನಾವಣೆ ಮುಂದೂಡಿಕೆಗೆ ಮನವಿ
ಶ್ರೀನಗರ: ನಿನ್ನೆ ವ್ಯಾಪಕ ಹಿಂಸಾಚಾರ ನಡೆದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರದ ಅನಂತನಾಗ್ ಕ್ಷೇತ್ರದ ಉಪಚುನಾವಣೆಯನ್ನು ಮುಂದೂಡಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಸಹೋದರ ತಸಾದುಕ್ ಹುಸೈನ್ ಮುಫ್ತಿ ಆಗ್ರಹಿಸಿದ್ದಾರೆ. ಏಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡುವ ಸಲುವಾಗಿ ಕಣದಿಂದ ಹಿಂದೆ ಸರಿಯಲೂ ಸಿದ್ಧ ಎಂದು ಅವರು ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ಚುನಾವಣೆ ನಡೆಸಲು ಯೋಗ್ಯವಾದ ವಾತಾವರಣ ಇಲ್ಲ. ಈ ಹಿನ್ನೆಲೆಯಲ್ಲಿ ಮತದಾನ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಮುಫ್ತಿ ಮಾಡಿಕೊಂಡಿರುವ ಈ ಮನವಿಯಿಂದ ಅವರ ಸಹೋದರಿ ಮೆಹಬೂಬ ಮುಫ್ತಿ ಸರ್ಕಾರ ಹಾಗೂ ಅದರ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಲೇವಡಿ ಮಾಡಿದ್ದಾರೆ.
ಶ್ರೀನಗರ ಲೋಕಸಭೆ ಕ್ಷೇತ್ರದ ಮತಗಟ್ಟೆಯ ಮೇಲೆ ದಾಳಿ ಮಾಡಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಹಾನಿ ಮಾಡಲು ಮುಂದಾದ ಗುಂಪಿನ ಮೇಲೆ ಸೇನೆಯ ಯೋಧರು ಗುಂಡು ಹಾರಿಸಿದಾಗ ಎಂಟು ಮಂದಿ ನಾಗರಿಕರು ಮೃತಪಟ್ಟಿದ್ದರು. ಪ್ರತ್ಯೇಕತಾವಾದಿಗಳು ಈ ಚುನಾವಣೆಯ ಬಹಿಷ್ಕಾರಕ್ಕೆ ಕರೆ ನೀಡಿದ್ದು ಮಾತ್ರವಲ್ಲದೇ, 200ಕ್ಕೂ ಹೆಚ್ಚು ಹಿಂಸಾಚಾರ ಘಟನೆಗಳು ಮತದಾನದ ವೇಳೆ ವರದಿಯಾಗಿದ್ದವು. ಕೇವಲ ಶೇಕಡ 7ರಷ್ಟು ಮಂದಿ ಮಾತ್ರ ಮತ ಚಲಾಯಿಸಿದ್ದು, ಇದು 30 ವರ್ಷಗಳಲ್ಲೇ ಕನಿಷ್ಠ ಮತದಾನವಾಗಿತ್ತು.
ಶನಿವಾರ ನಾಗರಿಕರ ಹತ್ಯೆಯಾದ ಹಿನ್ನೆಲೆಯಲ್ಲಿ ಎರಡು ದಿನಗಳ ಸಂಪೂರ್ಣ ಬಂದ್ ಹಾಗೂ ಪ್ರತಿಭಟನೆಗೆ ಪ್ರತ್ಯೇಕತಾವಾದಿ ಸಂಘಟನೆಗಳು ಕರೆ ನೀಡಿವೆ. ಕಾಶ್ಮೀರ ಕಣಿವೆಯ ಎಲ್ಲ ಶಾಲಾ ಕಾಲೇಜುಗಳು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಅನಂತ್ನಾಗ್ ಕ್ಷೇತ್ರ ಮುಫ್ತಿ ಕುಟುಂಬದ ಪ್ರಬಲ ನೆಲೆಯಾಗಿದೆ. ಮುಫ್ತಿ ಮೊಹ್ಮದ್ ಸಯೀದ್ ಅವರ ನಿಧನದ ಬಳಿಕ ಮೆಹಬೂಬಾ ಮುಫ್ತಿಯವರು ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ- ಬಿಜೆಪಿ ಮೈತ್ರಿಕೂಟ ಆಡಳಿತದ ಚುಕ್ಕಾಣಿ ಹಿಡಿದಿದೆ.
ಅನಂತ್ನಾಗ್ ಉಪಚುನಾವಣೆ ಮೂಲಕ ತಸಾದುಕ್ ಮುಫ್ತಿ ರಾಜಕೀಯ ರಂಗಪ್ರವೇಶ ಮಾಡಿದ್ದರು. ಇವರು ಖ್ಯಾತ ಚಲನಚಿತ್ರ ಛಾಯಾಗ್ರಾಹಕರಾಗಿದ್ದು, ಬಾಲಿವುಡ್ ಹಿಟ್ ಎನಿಸಿದ ಓಂಕಾರ ಹಾಗೂ ಕಾಮಿನಿ ಚಿತ್ರಗಳಲ್ಲಿ ಮಿಂಚಿದ್ದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ಅಹ್ಮದ್ ಮೀರ್ ಅವರ ವಿರುದ್ಧ ಅನಂತ್ನಾಗ್ನಲ್ಲಿ ಕಣಕ್ಕೆ ಧುಮುಕಿದ್ದರು. ಜಮ್ಮು- ಕಾಶ್ಮೀರದಲ್ಲಿ ಆರು ಲೋಕಸಭಾ ಸ್ಥಾನಗಳಿವೆ.