ತೊಗರಿ ಬೆಳೆಗಾರರಿಗೆ ಬೆಲೆಕುಸಿತದ ಬಿಸಿ

ಮುಂಬೈ, ಮೇ 4: ವರ್ಷಗಳ ಹಿಂದೆ ತೊಗರಿಬೇಳೆ ಗಗನಕ್ಕೆ ತಲುಪಿದ್ದು ಈಗ ಇತಿಹಾಸ. ಈಗ ಅದೇ ತೊಗರಿ ಬೆಳೆಗಾರ ಬೆಲೆ ಕುಸಿತದಿಂದ ಕಂಗೆಟ್ಟಿದ್ದಾನೆ. ದೇಶದಲ್ಲಿ ಅತಿಹೆಚ್ಚು ತೊಗರಿ ಬೆಳೆಯುವ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಕಳೆದ ಜನವರಿ- ಫೆಬ್ರವರಿ ತಿಂಗಳಲ್ಲಿ ಕ್ವಿಂಟಲ್ಗೆ 8,500 ರೂಪಾಯಿ ಇದ್ದ ತೊಗರಿ ದರ ಇದೀಗ 4,000- 4,500 ರೂಪಾಯಿಗೆ ಕುಸಿದಿದೆ.
ಮಾರುಕಟ್ಟೆಗೆ ಅಧಿಕ ಆವಕವಾಗುವ ಅವಧಿ ಮುಗಿದರೂ ಬೆಲೆ ಚೇತರಿಸಿಕೊಂಡಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ 4,000 ರೂಪಾಯಿಗಿಂತ ಕೆಳಗಿಳಿದರೆ, ರೈತರ ನಿರೀಕ್ಷೆಗಳು ನುಚ್ಚುನೂರಾಗಲಿವೆ. ಜನವರಿಯಲ್ಲಿ ಮಾರಾಟ ಮಾಡದೇ ದಾಸ್ತಾನು ಉಳಿಸಿಕೊಂಡಿದ್ದ ರೈತರು ಇದೀಗ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರ ತೊಗರಿ ಬೆಳೆಗೆ ಕ್ವಿಂಟಲ್ಗೆ 5,050 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ನಫೆಡ್ ಮೂಲಕ ಕೂಡಾ ರೈತರು ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ನಫೆಡ್ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ತೂಕದ ಕೂಲಿಗಳ ಸಮಸ್ಯೆಯಿಂದಾಗಿ ಈ ಕೇಂದ್ರಗಳಲ್ಲಿ ಖರೀದಿ ಮಾಡುತ್ತಿಲ್ಲ. ಜತೆಗೆ ಸಣಬಿನ ಚೀಲಗಳ ಕೊರತೆ ಕೂಡಾ ಇದೆ ಎಂದು ರೈತ ಸುರೇಶ್ ದೇಶಮುಖ್ ಹೇಳುತ್ತಾರೆ. ಕಳೆದ ವರ್ಷ ಇದ್ದ ಬೆಲೆಯ ಅರ್ಧದಷ್ಟೂ ಬೆಲೆ ದೊರಕದ ಕಾರಣ ಉತ್ಪಾದನಾ ವೆಚ್ಚ ಕೂಡಾ ಹುಟ್ಟುತ್ತಿಲ್ಲ ಎನ್ನುವುದು ರೈತರ ಅಳಲು.