ಎಸಿ ಕಾರು ಬಿಟ್ಟು ನರ್ಮ್ ಬಸ್ಸಿನಲ್ಲಿ ಸಂಚರಿಸಿದ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ, ಮೇ 19: ಶುಕ್ರವಾರ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 11 ರಸ್ತೆ ಕಾಮಗಾರಿ ಹಾಗೂ ಎರಡು ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸರಕಾರ ನೀಡಿದ ವಾತಾನುಕೂಲಿ ಕಾರನ್ನು ತೊರೆದು ನರ್ಮ್ನ ಹಸಿರು ಬಣ್ಣದ ನಗರ ಸಾರಿಗೆ ಬಸ್ಸಿನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಚರಿಸಿದರು.
ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಹೆಚ್ಚಾಗಿ ಬೆರೆಯುವುದಿಲ್ಲ ಎಂಬ ಅಸಮಧಾನ ತನ್ನ ಅಭಿಮಾನಿಗಳು ಹಾಗೂ ಕಾರ್ಯ ಕರ್ತರಿಗಿತ್ತು. ಇದನ್ನು ಹೋಗಲಾಡಿಸಲು ತಾನಿಂದು ಇಡೀ ದಿನ ಕಾರ್ಯಕರ್ತರೊಂದಿಗೆ ಬಸ್ಸಿನಲ್ಲಿ ಸಂಚರಿಸಿ 11 ಹೊಸ ರಸ್ತೆ ಹಾಗೂ ಎರಡು ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸುತ್ತಿದ್ದೇನೆ ಎಂದವರು ನುಡಿದರು.
ಬ್ರಹ್ಮಾವರ ಹೋಬಳಿಯ ಚಾಂತಾರು, ಕುಂಜಾಲು, ಚೇರ್ಕಾಡಿ, ನೀಲಾವರ ಗ್ರಾಮಗಳ ತೀರಾ ಗ್ರಾಮೀಣ ಪ್ರದೇಶಗಳಿಗೆ ಬಸ್ನಲ್ಲೇ ತೆರಳಿ, ಕೆಲವೊಂದು ಕಡೆ ಸುಮಾರು ಅರ್ಧ ಕಿ.ಮೀ.ಗೂ ಹೆಚ್ಚು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಅವರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದರಲ್ಲದೇ, ಅಲ್ಲಿನ ಗ್ರಾಮಸ್ಥರೊಂದಿಗೆ ಉಭಯ ಕುಶಲೋಪರಿ ನಡೆಸಿದರು.
7-8 ದಿನಕ್ಕಷ್ಟೇ ನೀರು
ಈ ಬಾರಿ ಭೀಕರ ಬರಗಾಲದ ಹೊರತಾಗಿಯೂ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ವಿಶೇಷ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಸ್ವರ್ಣ ನದಿಯಲ್ಲಿ ಇನ್ನು ಹೆಚ್ಚದಂರೆ ಒಂದು ವಾರ ನೀರು ಸಾಕಾಗಬಹುದು. ಅದರೊಳಗೆ ಮಳೆ ಬಂದರೆ ಸಂಕಷ್ಚಗಳು ದೂರವಾಗಬಹುದು. ಇಲ್ಲದಿದ್ದರೆ ನೀರಿನ ರೇಷನಿಂಗ್ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಪ್ರಮೋದ್ ಹೇಳಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಶೇ.90ರಷ್ಟು ಜನರಿಗೆ ಪೈಪ್ಲೈನ್ ಮೂಲಕ ನೀರು ನೀಡಲಾಗುತ್ತಿದೆ. ಅಲ್ಲಲ್ಲಿ ಹೊಂಡಗಳಲ್ಲಿದ್ದ ನೀರನ್ನು ಡ್ರೆಜ್ಜಿಂಗ್ ಮಾಡಿ ಸರಬರಾಜು ಮಾಡಲಾಗುತ್ತಿದೆ ಎಂದರು. ಶೇ.10ರಷ್ಟು ಮಂದಿಗೆ ಮಾತ್ರ 27 ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಬಜೆಯಲ್ಲಿ ಹೂಳೆತ್ತುವ ಬಗ್ಗೆ ಜಿಲ್ಲಾಧಿಕಾರಿ ಕ್ರಮ ತೆಗೆದು ಕೊಳ್ಳಲಿದ್ದಾರೆ ಎಂದರು.