ಸೂ ಕಿ ನೊಬೆಲ್ ರದ್ದತಿಗೆ ಇದು ಸಕಾಲ

ಬಹುಶಃ ಸೂ ಕಿಯವರ ನೊಬೆಲ್ ಪ್ರಶಸ್ತಿಯನ್ನು ವಾಪಸ್ ಪಡೆದುಕೊಂಡರೂ ಅವರು ಬದಲಾಗುವ ಸಾಧ್ಯತೆ ಇಲ್ಲ. ಆದರೆ ಅದು ವಿಶ್ವಕ್ಕೆ ಅತ್ಯಂತ ಪ್ರಬಲ ಸಂದೇಶ ರವಾನಿಸಬಲ್ಲದು ಹಾಗೂ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಮತ್ತೆ ಹೊಳಪು ನೀಡಬಲ್ಲದು.
ಕಳೆದ ಕೆಲ ದಿನಗಳಿಂದ ನಾನು ತೊಡಗಿಸಿಕೊಂಡಿರುವ ‘ಒಸ್ಲೋ ಫ್ರೀಡಂ ಫೋರಂ’ (ಒಎಫ್ಎಫ್) ಹಲವು ಕಾರಣಗಳಿಂದ ಚರಿತ್ರಾರ್ಹ. ಇದು ವಿಶ್ವದ ಎಲ್ಲೆಡೆ ವೈಯಕ್ತಿಕ ಅಪಾಯವನ್ನು ಲೆಕ್ಕಿಸದೆ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ಜನರನ್ನು ಒಗ್ಗೂಡಿಸಿರುವುದರಿಂದ ಇದನ್ನು ವೈವಿಧ್ಯಮಯವಾಗಿ ‘ಭಿನ್ನರ ದಾವೋಸ್’ ’ಹೋರಾಟಗಾರರ ಆಸ್ಪೆನ್’ ಎಂದು ಕರೆಯಲಾಗುತ್ತದೆ. ಸದಾ ಸ್ಫೂರ್ತಿದಾಯಕ ಎನಿಸುವ ತಮ್ಮ ಹೋರಾಟದ ರೋಚಕ ಕಥೆಗಳನ್ನು ವಿನಿಯಮ ಮಾಡಿಕೊಳ್ಳುವ ಸಲುವಾಗಿ ನಾರ್ವೆ ರಾಜಧಾನಿಯಲ್ಲಿ ಈ ಅದ್ಭುತ ವ್ಯಕ್ತಿಗಳು ಜತೆ ಸೇರಿದ್ದರು. ಕೆಲವೊಮ್ಮೆ ಇದನ್ನು ಕೇಳಿದ ಪ್ರೇಕ್ಷಕರ ಕಣ್ಣುಗಳು ತೇವವಾದವು.
ಒಎಫ್ಎಫ್ನ ಅಧಿಕೃತ ಕಾರ್ಯಕ್ರಮ ವಾರ್ಷಿಕ ವಕ್ಲೋವ್ ಹವೇಲ್ ಪ್ರಶಸ್ತಿ ಪ್ರದಾನ. ಸೃಜನಶೀಲ ಭಿನ್ನಮತೀಯರಿಗೆ ಕೊಡಮಾಡುವ ಪ್ರಶಸ್ತಿ ಇದು. ಆದರೆ ನನಗೆ ನಿಜವಾಗಿ ತೃಪ್ತಿ ಸಿಕ್ಕಿದ್ದು, ಈ ಹೋರಾಟಗಾರರ ಜತೆಗಿನ ಖಾಸಗಿ ಸಂವಾದದಲ್ಲಿ. ಹೋರಾಟಗಾರರು ಇಲ್ಲಿ ಸಲಹೆಗಳನ್ನು ವಿನಿಮಯ ಮಾಡಿಕೊಂಡರು. ಒಳ್ಳೆ ಕ್ರಮಗಳನ್ನು ಹಂಚಿಕೊಂಡರು. ಕ್ಯೂಬಾದಲ್ಲಿ ಹೇಗೆ ಪ್ರಜಾಪೀಡಕರ ವಿರುದ್ಧ ಹೋರಾಟ ಮಾಡಲು ತಂತ್ರ, ಕೌಶಲವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಕೇಳುವುದೇ ಅದ್ಭುತ ಅನುಭವ. ಉದಾಹರಣೆಗೆ ಉತ್ತರ ಕೊರಿಯಾ, ಸಿರಿಯಾ, ಸೌದಿ ಅರೇಬಿಯಾದಲ್ಲಿ ಇಂಥ ಪ್ರಜಾಪೀಡಕರ ವಿರುದ್ಧ ಹೋರಾಡುವುದು ಸುಲಭವೇ?
ಈ ವರ್ಷದ ಮುಖ್ಯ ಭಾಷಣಕಾರರಲ್ಲಿ ಭಾರತದ ನೆರೆರಾಷ್ಟ್ರಗಳ ಹಲವು ಮಂದಿ ಸೇರಿದ್ದರು. ಬಾಂಗ್ಲಾದೇಶದಿಂದ ಗಡಿಪಾರಾದ ಜಾತ್ಯತೀತ ಪ್ರಕಾಶಕ, ಅಹ್ಮದುರ್ರಶೀದ್ (ತುತುಲ್) ಚೌಧರಿ, ಪದಚ್ಯುತ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ನಶೀದ್, ಪಾಕಿಸ್ತಾನದ ಸ್ವ್ಯಾಷ್ ಆಟಗಾರ್ತಿ ಮಾರಿಯಾ ತೂರ್ಪಕೈ ವಜೀರ್ ಹಾಗೂ ಬರ್ಮಾದ ರೊಹಿಂಗ್ಯಾ ಚಳವಳಿಗಾರ ವೈ ವೈ ನೂ ಈ ಪೈಕಿ ಕೆಲವರು. ವೆನಿಝುವೆಲಾದ ವಿಡಂಬನಾತ್ಮಕ ವೆಬ್ಸೈಟ್ ಎಲ್ ಚಿಗ್ಯೂರ್ ಬೈಪೋಲಾರ್, ಜಿಂಬಾಬ್ವೆ ನಾಟಕಗಾರ ಸಿಲ್ವನೊ ಮುದ್ಜೋವಾ ಹಾಗೂ ಬಹರೈನ್ ಕವಿ ಅಯಾತ್ ಅಲ್ಖೊರ್ಮೋಝಿ ಈ ವರ್ಷದ ಹವೇಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.
ಆದರೆ ಈ ವರ್ಷದ ಒಎಫ್ಎಫ್ ಸಮಾರಂಭದ ಗಮನಾರ್ಹ ಅಂಶ ಬಹುತೇಕ ಯಾರ ಗಮನಕ್ಕೂ ಬರಲಿಲ್ಲ. ಫೋರಂನ ಸಂಸ್ಥಾಪಕ ಥೋರ್ ಹಲ್ವರ್ಸನ್ ತಮ್ಮ ಭಾಷಣದಲ್ಲಿ, ‘‘ಬರ್ಮಾದಲ್ಲಿ ಬೌದ್ಧ ತೀವ್ರಗಾಮಿಗಳ ಸರಕಾರ, ವ್ಯವಸ್ಥಿತವಾಗಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವಾದ ರೊಹಿಂಗ್ಯಾ ಜನರನ್ನು ಸದ್ದಡಗಿಸುತ್ತಿರುವ ಬಗ್ಗೆ ಅಂಗ್ ಸಾನ್ ಸೂ ಕಿ ಮೌನವಾಗಿರುವುದು ನಿಜಕ್ಕೂ ಹೃದಯವಿದ್ರಾವಕ’’ ಎಂದು ಬಣ್ಣಿಸಿದರು. ಅವರ ಭಾಷಣದ ಈ ಒಂದು ವಾಕ್ಯ ಮಹತ್ವದ್ದು. ಏಕೆಂದರೆ ಸೂ ಕಿ ಅವರು ಹವೇಲ್ ಪ್ರಶಸ್ತಿ ಪಡೆದ ಮೊದಲಿಗರಲ್ಲಿ ಒಬ್ಬರು. ಮಾನವ ಹಕ್ಕುಗಳ ಹೋರಾಟದ ಐಕಾನ್ ಆಗಿದ್ದವರು. ಇಷ್ಟಾಗಿಯೂ ಹಿಂದೆ ಪ್ರಶಸ್ತಿ ಪುರಸ್ಕೃತರಾಗಿದ್ದವರನ್ನು, ಪ್ರಶಸ್ತಿ ನೀಡಿದವರೇ ನೇರವಾಗಿ ಬಹಿರಂಗ ಟೀಕೆ ಮಾಡಿದ್ದು ಇದೇ ಮೊದಲು.
ಒಸ್ಲೋ ಬಂದರಿನ ಬಳಿಇರುವ ನೊಬೆಲ್ ಶಾಂತಿ ಕೇಂದ್ರದತ್ತ ಸಂಜೆ ನಾನು ಹೆಜ್ಜೆ ಹಾಕಿದಾಗ, ಹೆಲ್ವೆರ್ಸನ್ ಅವರ ಭಾಷಣದ ತುಣುಕುಗಳು ನೆನಪಿಗೆ ಬಂದವು. ಶಾಂತಿಗೆ ಸಂಬಂಧಿಸಿದ ಸಾಹಿತಿಗಳು ಹಾಗೂ ಸಾಹಿತ್ಯದ ಮ್ಯೂಸಿಯಂನಂತಿರುವ ಆ ಅತ್ಯಾಕರ್ಷಕ, ತಿಳಿ ಹಳದಿ ಬಣ್ಣದ ಕಟ್ಟಡ ಅದು. ಪಕ್ಕದ ಚೌಕದಲ್ಲಿರುವ ಆಕರ್ಷಕ ಟೌನ್ಹಾಲ್ನಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನ ನಡೆಯುತ್ತದೆ. ಇತರ ಎಲ್ಲ ನೊಬೆಲ್ ಪ್ರಶಸ್ತಿಗಳನ್ನು ಸ್ವೀಡನ್ನ ಸ್ಟಾಕ್ಹೋಂನಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಮ್ಯೂಸಿಯಂನಲ್ಲಿ ಸೂ ಕಿ ಅವರಿಗೆ 1991ರಂದು ಪ್ರಶಸ್ತಿ ನೀಡಲಾಗಿತ್ತು.
ಹಲ್ವೆರ್ಸನ್ ಅವರ ನಿದರ್ಶನವನ್ನು ನೊಬೆಲ್ ಸಮಿತಿ ಅನುಸರಿಸಿ, ಸೂ ಕಿ ಅವರನ್ನು ಟೀಕಿಸಿದರೆ ಹೇಗಿರಬಹುದು ಎಂಬ ಬಗ್ಗೆ ನನಗೆ ಅಚ್ಚರಿಯಾಯಿತು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರಶಸ್ತಿಯನ್ನು ರದ್ದುಪಡಿಸಿದರೆ ಹೇಗೆ? ಪ್ರಶಸ್ತಿ ಹಣವನ್ನು ವಾಪಸ್ಮಾಡುವಂತೆ ಒತ್ತಾಯಿಸಿದರೆ ಹೇಗೆ? (ಸೂ ಕಿ ಅವರಿಗೆ ಪ್ರಶಸ್ತಿ ರೂಪದಲ್ಲಿ 60 ಲಕ್ಷ ಸ್ವಿಡಿಷ್ ಕ್ರೋನಾ ಅಂದರೆ ಸುಮಾರು 10 ಲಕ್ಷ ಡಾಲರ್ ನಗದು ನೀಡಲಾಗಿತ್ತು).
ನಾನು ಇನ್ನೂ ಮುಂದಕ್ಕೆ ಹೋದರೆ ಅದರಲ್ಲಿ ಅರ್ಥವಿದೆ. ಹಾಲಿ ಇರುವ ಎಲ್ಲ ಸಾಹಿತಿಗಳ ಕೃತಿ ಹಾಗೂ ಕೆಲಸವನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಸಮಿತಿ ಪರಿಶೋಧಿಸಬೇಕು. ನೊಬೆಲ್ ಪರಿಕಲ್ಪನೆಗೆ ಧಕ್ಕೆ ಬರುವ ರೀತಿಯಲ್ಲಿ ಇದ್ದಾರೆ ಎನಿಸಿದರೆ ಹಾಗೂ ಅವರದ್ದೇ ಮಾನದಂಡಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ, ಅಂಥವರನ್ನು ಹಿಂದೆ ಗೌರವಿಸಿದಂತೆಯೇ ಬಹಿರಂಗವಾಗಿಯೇ ಖಂಡಿಸಬೇಕು. ಇಂಥ ಸಾಹಿತಿಗಳಿಗಾಗಿ ಹಾಗೂ ಸಾಹಿತ್ಯಕ್ಕಾಗಿಯೇ ಮ್ಯೂಸಿಯಂನಲ್ಲಿ ಪ್ರತ್ಯೇಕ ಒಂದು ಕೊಠಡಿಯನ್ನೂ ಮೀಸಲಿಡಬೇಕು. ಇದು ಭವಿಷ್ಯದ ಪುರಸ್ಕೃತರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ವಾಸ್ತವವಾಗಿ ಅವರು ಟೌನ್ಹಾಲ್ನಲ್ಲಿ ಪ್ರಶಸ್ತಿ ಸ್ವೀಕರಿಸುವ ಮುನ್ನ, ಪ್ರತಿಯೊಬ್ಬ ಭವಿಷ್ಯದ ಪುರಸ್ಕೃತರು ಕೆಲ ಗಂಟೆಗಳನ್ನಾದರೂ ಈ ಹಾಲ್ ಆಫ್ ಶೇಮ್ನಲ್ಲಿ ಕಳೆಯುವುದು ಕಡ್ಡಾಯ. ನೊಬೆಲ್ ತತ್ವಗಳಿಗೆ ವಿಶ್ವಾಸದ್ರೋಹ ಎಸಗಿದರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದು ಅವರಿಗೆ ಮನದಟ್ಟಾಗಬೇಕು.
ಕೊನೆಯದ್ದು ಬಹುಶಃ ಅತಿ ಎನಿಸಬಹುದು. ಆದರೆ ಪ್ರಶಸ್ತಿಯನ್ನು ವಾಪಾಸು ಪಡೆಯುವುದಕ್ಕೆ ಬಹುಶಃ ವಿಶೇಷ ಮಹತ್ವವಿದೆ. ಇದರಿಂದ ಸಮಿತಿಗೆ, ತಾವು ಇತ್ತೀಚಿನ ದಿನಗಳಲ್ಲಿ ಮಾಡುವ ತಪ್ಪನ್ನು ಸರಿಪಡಿಸಿಕೊಳ್ಳಲು ಕೂಡಾ ಸಾಧ್ಯವಾಗುತ್ತದೆ. ಪ್ರಸ್ತುತ ವಾಸವಿರುವ ಸಾಹಿತಿಗಳ ಪಟ್ಟಿಯನ್ನು ಅವಲೋಕಿಸಿದರೆ, (ಈಗಾ ಗಲೇ ಕಾಲವಾಗಿರುವ ಸಾಹಿತಿಗಳನ್ನು ಅವಮಾನಿಸುವುದು ಕಷ್ಟ), ತಮ್ಮ ಪ್ರಶಸ್ತಿಯನ್ನು ಮರಳಿಸಬೇಕಾದ ಐದು ಮಂದಿಯ ಪಟ್ಟಿ ನನ್ನ ಮನಸ್ಸಿಗೆ ಬರುತ್ತದೆ. ಯೂರೋಪಿಯನ್ ಯೂನಿಯನ್ (2012), ಬರಾಕ್ ಒಬಾಮ (2009), ಮುಹಮ್ಮದ್ ಎಲ್ ಬರದೇಯಿ (2005), ಕೋಫಿ ಅನ್ನಾನ್ (2001), ಹೆನ್ರಿ ಕಿಸ್ಸಿಂಜರ್ (1973). ಯೂರೋಪಿಯನ್ ಯೂನಿಯನ್ ನಿರಾಶ್ರಿತರನ್ನು ಪರಿಗಣಿಸುವ ರೀತಿಯ ಮೂಲಕ ಗೌರವ ಕಳೆದುಕೊಂಡಿದೆ. ಒಬಾಮ ಅವರ ಪಾಪಗಳು ಹಾಗೂ ಹೇಯ ಕೃತ್ಯಗಳು ಸಿರಿಯಾದಲ್ಲಿ ಸಾವಿರಾರು ಜೀವಗಳನ್ನು ಬಲಿ ಪಡೆದಿವೆ; ಎಲ್ ಬರದೇಯಿ, ಸೇನೆಯ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸುವ ಮೂಲಕ ಈಜಿಪ್ಟ್ ನ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಿದ್ದಾರೆ. ರುವಾಂಡಾದಲ್ಲಿ ತಮ್ಮ ವೈಫಲ್ಯಕ್ಕೆ ಮತ್ತು ವಿಶ್ವಸಂಸ್ಥೆಯಲ್ಲಿ ಆಹಾರಕ್ಕಾಗಿ ತೈಲದ ಹಗರಣಕ್ಕೆ ಉತ್ತರಿಸಬೇಕಾಗುತ್ತದೆ. ಇಂಡೊ-ಚೀನಾ, ಬಾಂಗ್ಲಾದೇಶ ಹಾಗೂ ಚಿಲಿಯಲ್ಲಿನ ಯುದ್ಧಾಪರಾಧಕ್ಕಾಗಿ ಕಿಸ್ಸಿಂಜರ್ ಜೈಲಿನಲ್ಲಿರಬೇಕು.
ಮತ್ತೆ ಸೂ ಕಿ ವಿಚಾರಕ್ಕೆ ಬರೋಣ. ಅವರ ಸ್ವಭಾವದ ಒಳ್ಳೆಯ ಗುಣಗಳನ್ನು ಗುರುತಿಸುವಂತೆ, ಅವರ ಆತ್ಮಸಾಕ್ಷಿಯನ್ನು ಅನಾವರಣ ಗೊಳಿಸಲು ಅವಮಾನವನ್ನು ಬಳಸುವ ಆಗ್ರಹಗಳು ಕೇಳಿಬಂದವು. ಕಳೆದ ವರ್ಷದ ಕೊನೆಯಲ್ಲಿ, ಹಿಂಸೆಯನ್ನು ತಡೆಯುವಲ್ಲಿ ವಿಫಲರಾದ ಸೂ ಕಿ ಅವರನ್ನು ಟೀಕಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ಮನವಿಪತ್ರಕ್ಕೆ ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್ ಹಾಗೂ ಡೆಸ್ಮಂಡ್ ಸಹಿ ಮಾಡಿದ್ದರು. ರುವಾಂಡ, ದರ್ಫುರ್, ಬೋಸ್ನಿಯಾ ಹಾಗೂ ಕೊಸೊವೊದ ದುರಂತಗಳನ್ನು ಬರ್ಮಾ ಮರುಪ್ರದರ್ಶಿಸುತ್ತಿದೆ ಎಂದು ಎಚ್ಚರಿಸಿದರು. ಆದರೆ ಈ ಎಲ್ಲ ಪ್ರಯತ್ನಗಳು ವಿಫಲವಾದವು. ಬಹುಶಃ ಅವರ ನೊಬೆಲ್ ಪ್ರಶಸ್ತಿಯನ್ನು ವಾಪಾಸು ಪಡೆದುಕೊಂಡರೂ ಅವರು ಬದಲಾಗುವ ಸಾಧ್ಯತೆ ಇಲ್ಲ. ಆದರೆ ಅದು ವಿಶ್ವಕ್ಕೆ ಅತ್ಯಂತ ಪ್ರಬಲ ಸಂದೇಶ ರವಾನಿಸಬಲ್ಲದು ಹಾಗೂ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಮತ್ತೆ ಹೊಳಪು ನೀಡಬಲ್ಲದು.