ಉಪಗ್ರಹ ಉಡಾವಣೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ: ಜಿ.ಮಾಧವನ್ ನಾಯರ್
ಉಳ್ಳಾಲ, ಜು. 7: ಭಾರತವು ಉಪಗ್ರಹಗಳನ್ನು ಉಡಾಯಿಸುವ ವಿಷಯದಲ್ಲಿ ಸ್ವಾವಲಂಬಿ ದೇಶವಾಗಿ ಹೊರಹೊಮ್ಮಿದೆ. ತಿಂಗಳ ಹಿಂದೆ ಜಿಎಸ್ಎಲ್ವಿ ಮಾರ್ಕ್3 ಮೂಲಕ ನಾಲ್ಕು ಟನ್ ತೂಗುವ ಹಲವು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸುವ ಮೂಲಕ ಇಸ್ರೊ ಹೊಸ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಗಿದೆ ಎಂದು ಇಸ್ರೋದ ವಿಶ್ರಾಂತ ಅಧ್ಯಕ್ಷ ಪದ್ಮವಿಭೂಷಣ ಜಿ. ಮಾಧವನ್ ನಾಯರ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾದ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿ ಅಸೋಸಿಯೇಶನ್ ಮತ್ತು ಪ್ರೊ. ಎನ್ ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಸಮಿತಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಕ್ಯಾಂಪಸ್ನ ಕ್ಷೇಮ ಆಡಿಟೋರಿಯಂನಲ್ಲಿ ನಡೆದ ಪ್ರೊ. ಎನ್ ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಚಾಲೆಂಜಸ್ ಇನ್ ಇಂಡಿಯನ್ ಹೆಲ್ತ್ಕೇರ್ ಸಿನಾರಿಯೊ' ವಿಚಾರದಲ್ಲಿ ದತ್ತಿ ಉಪನ್ಯಾಸ ನೀಡಿದರು.
70ರ ದಶಕದಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರಯತ್ನದ ಫಲವಾಗಿ ಇಂದು ನಾವು ಜಾಗತಿಕವಾಗಿ ಇತರ ದೇಶಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಆರಂಭದಲ್ಲಿ ನಾವು ರಾಕೆಟ್ ತಂತ್ರಜ್ಞಾನಕ್ಕಾಗಿ ರಷ್ಯಾದತ್ತ ನೋಡುತ್ತಿದ್ದೆವು ಆದರೆ ರಷ್ಯಾ ರಾಕೆಟ್ ತಂತ್ರಜ್ಞಾನವನ್ನು ನಮಗೆ ನೀಡಲು ನಿರಾಕರಿಸಿದ ಪರಿಣಾಮವಾಗಿ ನಾವು ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಬಳಸಿ ರಾಕೆಟ್ಗಳನ್ನು ನಿರ್ಮಿಸಲು ಆರಂಭಿಸಿದೆವು. ರಷ್ಯನ್ ತಂತ್ರಜ್ಞಾನದಲ್ಲಿ 5.5 ಟನ್ ಬಾಹ್ಯಾಕಾಶ ಉಪಗ್ರಹಗಳನ್ನು ಉಡಾಯಿಸುವ ಸಾಮಥ್ರ್ಯ ಹೊಂದಿದ್ದರೆ ಭಾರತದ ರಾಕೆಟ್ಗಳು 20 ಟನ್ ಭಾರವನ್ನು ಹೊರುವ ಗುರಿಯನ್ನು ನಾವು ಹೊಂದಿದ್ದೆವು. ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದ್ದ ನಿರಂತರ ಪರಿಣಾಮದ ಫಲವಾಗಿ ಕಳೆದ ತಿಂಗಳು ನಲ್ವತ್ತು ಟನ್ ಭಾರ ಹೊರುವ ರಾಕೆಟನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಯಿತು ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ವಿಶ್ರಾಂತ ಡೀನ್ ಪ್ರೊ. ಎನ್ ಶ್ರೀಧರ್ ಶೆಟ್ಟಿ ಮಾತನಾಡಿ ದರು.
ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ. ಎಂ ಶಾಂತಾರಾಮ ಶೆಟ್ಟಿ, ಉಪಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ, ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಡೀನ್ ಪ್ರೊ. ಯು.ಎಸ್. ಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಸಮಿತಿ ಸದಸ್ಯರಾದ ಡಾ| ಚೇತನ್ ಹೆಗ್ಡೆ ಸ್ವಾಗತಿಸಿದರು. ಡಾ| ನಿತೇಶ್ ಶೆಟ್ಟಿ ಮಾಧವನ್ ನಾಯರ್ ಅವರ ಪರಿಚಯ ಮಾಡಿದರು. ಡಾ| ಶಿಶಿರ್ ಶೆಟ್ಟಿ ವಂದಿಸಿದರು. ಡಾ| ಅಮರಶ್ರೀ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.