ಪ್ರತಿಭಟನೆಗೆ ನಿಷೇಧ: ಡಿಸಿ ಆದೇಶಕ್ಕೆ ವ್ಯಾಪಕ ಖಂಡನೆ
ಉಡುಪಿ, ಸೆ.9: ಉಡುಪಿ ನಗರದ ಕ್ಲಾಕ್ ಟವರ್, ಜಟಕಾ ಸ್ಟ್ಯಾಂಡ್ ಹಾಗೂ ಸರ್ವಿಸ್ ಬಸ್ ನಿಲ್ದಾಣ ಸುತ್ತ ಮುತ್ತ ಪ್ರದೇಶಗಳಲ್ಲಿ ಪ್ರತಿಭಟನೆಗೆ ನಿಷೇಧ ಹೇರಿರುವ ಉಡುಪಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ವಿವಿಧ ಸಂಘಟನೆ ಗಳು ಹಾಗೂ ರಾಜಕೀಯ ಪಕ್ಷಗಳು ಖಂಡನೆ ವ್ಯಕ್ತಪಡಿಸಿದ್ದು, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿವೆ.
ತನ್ನ ಸುತ್ತಲಿನ ಆಗುಹೋಗುಗಳನ್ನು ಪ್ರಶ್ನಿಸುವ, ಅವುಗಳ ಬಗ್ಗೆ ಚಿಂತನೆ ನಡೆಸಿ ತನಗನ್ನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಆರೋಗ್ಯವಂತ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಇದೇ ಕಾರಣಕ್ಕಾಗಿ ಸಂವಿಧಾನವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿಶೇಷ ಗಮನ ನೀಡಿದೆ. ಆದರೆ ಈ ಆದೇಶವನ್ನು ಎತ್ತಿ ಹಿಡಿಯಬೇಕಾದ ಉಡುಪಿ ಜಿಲ್ಲಾಧಿಕಾರಿ ಧ್ವನಿ ಎತ್ತಿದ ವರ ಬಾಯಿ ಮುಚ್ಚಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಜಯನ್ ಮಲ್ಪೆಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಜಿಲ್ಲಾಧಿಕಾರಿಯ ಈ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಉಡುಪಿ ನಗರಸಭಾ ಸದಸ್ಯ ಜನಾರ್ದನ ಭಂಡಾರ್ಕಾರ್, ಅನಿರ್ದಿಷ್ಟಾವಧಿ ನಡೆಸುವ ಧರಣಿ ಸತ್ಯಾಗ್ರಹಕ್ಕೆ ಬೇಕಾದಲ್ಲಿ ಜಿಲ್ಲಾಧಿಕಾರಿ ಕಛೇರಿ ಬಳಿಯ ಸತ್ಯಾಗ್ರಹ ಕಟ್ಟೆಯಲ್ಲಿ ಅವಕಾಶ ಕೊಡಲಿ. ಸರ್ವಿಸ್ ಬಸ್ ನಿಲ್ದಾಣದ ಬಳಿ, ಕ್ಲಾಕ್ ಟವರ್, ಜಟ್ಕಾ ಸ್ಟಾಂಡ್ ಮುಂತಾದ ಸ್ಥಳಗಳಲ್ಲಿ ಯಾವುದಾರೂ ಒಂದು ಸ್ಥಳದಲ್ಲಿ ದಿನದ ಒಂದು ಗಂಟೆಯಾದರೂ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ಮಾಡಲು ಸೀಮಿತ ಕಾರ್ಯಕರ್ತರನ್ನು ಒಳಗೊಂಡ ಶರತನ್ನು ವಿಧಿಸಿ ಸಂಘಟನೆಗಳಿಗೆ, ರಾಜಕೀಯ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ಪ್ರತಿಭಟಿಸುವ ಹಕ್ಕನ್ನು ಭಾರತದ ಸಂವಿಧಾನವು ಖಾತರಿ ಪಡಿಸಿದೆ. ಪರ್ಯಾಯ ಜಾಗವನ್ನು ಸೂಚಿಸದೆ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಕಾನೂನು ಬಾಹಿರವಾಗಿದೆ. ಕೂಡಲೇ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಂಘಸಂಸ್ಥೆಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಬೇಕು ಹಾಗೂ ಅಲ್ಲಿಯವರೆಗೆ ಕ್ಲಾಕ್ ಟವರ್ ಅಥವಾ ಜಟಕಾ ಸ್ಟ್ಯಾಂಡ್ ಬಳಿ ಪ್ರತಿಭಟನೆಗೆ ಅವಕಾಶ ನೀಡಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.