ಯಕ್ಷರಂಗಕ್ಕೆ ಹೊಸ ಸ್ಫೂರ್ತಿ ತುಂಬಿದ ಕಲಾವಿದ ಚಿಟ್ಟಾಣಿ: ಪ್ರಭಾಕರ ಜೋಷಿ
ಮಂಗಳೂರು, ಅ. 9: ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಬಹುದೊಡ್ಡ ಎತ್ತರಕ್ಕೆ ಏರಿ ಪೂರ್ಣತೆಯನ್ನು ಕಂಡ ಅನನ್ಯ ಕಲಾವಿದ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂದು ವಿದ್ವಾಂಸ ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಷಿ ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ಅಶ್ರಯದಲ್ಲಿ ಏರ್ಪಡಿಸಲಾಗಿದ್ದ ಚಿಟ್ಟಾಣಿಯವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಯಲ್ಲಿ ಅವರು ನುಡಿ ನಮನ ಸಲ್ಲಿಸಿದರು. ಓರ್ವ ಆನಕ್ಷರಸ್ಥರಾಗಿದ್ದುಕೊಂಡು ಕಲಾಜೀವನವನ್ನು ಸಮೃದ್ಧಗೊಳಿಸಿರುವ ಚಿಟ್ಟಾಣಿಯವರು ತನ್ನ ಅಪ್ರತಿಮ ಕಲಾ ಸಾಧನೆ ಯಿಂದ ಪದ್ಮಶ್ರೀ ಪ್ರಶಸ್ತಿಯನ್ನು ಗಳಿಸುವ ಮಟ್ಟಕ್ಕೂ ಬೆಳೆದಿರುವುದು ಇತಿಹಾಸವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಚಿಟ್ಟಾಣಿಯವರು ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿ ತನ್ನ ಸರಳತೆಯಿಂದ ಕಲಾಭಿಮಾನಿಗಳ ಮನದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದು ಮಾತ್ರವಲ್ಲ ಸಮಾಜದ ಒಬ್ಬ ಪ್ರತಿನಿಧಿಯಾಗಿಯೂ ಗುರುತಿಸ ಲ್ಪಟ್ಟಿದ್ದಾರೆ ಎಂದರು.
ಶ್ರದ್ಧಾಂಜಲಿ ಸಮಾರಂಭದಲ್ಲಿ ಕೊಂಕಣಿ ಸಾಹಿತ್ಯ ಆಕಾಡೆಮಿಯ ಲಕ್ಷ್ಮಣಪ್ರಭು, ಜ್ಞಾನದೇವ ಕಾಮತ್, ಪೊಳಲಿ ನಿತ್ಯಾನಂದ ಕಾರಂತ, ಎಂ.ರವೀಂದ್ರ ಶೇಟ್, ಎಸ್. ಎಂ. ಹೆಗಡೆ, ಬಾಲಕೃಷ್ಣ ಭಾರಧ್ವಜ್ ಮತ್ತು ಶಾರದಾ ಹೆಗಡೆ, ಜಯಲಕ್ಷ್ಮೀ ಶೆಟ್ಟಿ, ಜನಾರ್ದನ ಹಂದೆ, ಜಿ.ಕೆ. ಭಟ್ ಸೇರಾಜೆ, ಚಂಬಲ್ತಿಮಾರ್, ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದು ಚಿಟ್ಟಾಣಿಯವರಿಗೆ ಪುಷ್ಪಾಂಜಲಿ ಸಲ್ಲಿಸಿದರು.