ಮೂತ್ರದಲ್ಲಿ ರಕ್ತ ಹೋಗುತ್ತಿದೆಯೇ...? ಅದು ಪ್ರಾಸ್ಟೇಟ್ ಕ್ಯಾನ್ಸರ್ನ ಸಂಕೇತವಾಗಿರಬಹುದು
ನಿಮ್ಮ ಮೂತ್ರವನ್ನು ಪರೀಕ್ಷಿಸುವುದು ನಿಮಗೆ ರೇಜಿಗೆಯನ್ನು ಹುಟ್ಟಿಸಬಹುದು. ಆದರೆ ಈ ಕೆಲಸವನ್ನು ನೀವು ಆಗಾಗ್ಗೆ ಮಾಡುತ್ತಿರಬೇಕು. ಮೂತ್ರದ ಬಣ್ಣ ಮತ್ತು ಹರಿವಿನಲ್ಲಿ ಬದಲಾವಣೆಗಳು ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಹೇಳುತ್ತವೆ. ಮೂತ್ರದಲ್ಲಿ ರಕ್ತ ಕಂಡು ಬಂದರಂತೂ ಹೆಚ್ಚಿನ ಜಾಗರೂಕತೆ ಅಗತ್ಯವಾಗುತ್ತದೆ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಮೂತ್ರದಲ್ಲಿ ರಕ್ತ ಕಂಡುಬಂದರೆ ಅದು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ನ ಆರಂಭಿಕ ಸಂಕೇತವಾಗಿರಬಹುದು ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ. ಮೂತ್ರದಲ್ಲಿ ರಕ್ತ ಕಂಡು ಬಂದರೆ ಅಂತಹ ಸ್ಥಿತಿಯನ್ನು ಪೂರ್ಣ ರಕ್ತಮೇಹ ಎಂದು ಕರೆಯಲಾಗುತ್ತದೆ ಮತ್ತು ಮೂತ್ರವು ಗುಲಾಬಿ, ಕೆಂಪು ಅಥವಾ ಕೋಲಾದ ಬಣ್ಣಕ್ಕೆ ತಿರುಗಬಹುದು.
ಹಾಗೆಂದು ಮೂತ್ರದಲ್ಲಿ ರಕ್ತ ಕಂಡುಬರುವ ಎಲ್ಲ ಪ್ರಕರಣಗಳೂ ಪ್ರಾಸ್ಟೇಟ್ ಕ್ಯಾನ್ಸರ್ನ್ನು ಸೂಚಿಸುತ್ತವೆ ಎಂದು ಅರ್ಥವೇನಲ್ಲ. ಆದರೂ ಮೂತ್ರದಲ್ಲಿ ರಕ್ತ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಮೂತ್ರ ವಿಸರ್ಜನೆಗೆ ತುಂಬ ಸಮಯ ಹಿಡಿಯುವುದು ಅಥವಾ ಮೂತ್ರದ ಹರಿವು ಕ್ಷೀಣವಾಗಿರುವುದು ಪ್ರಾಸ್ಟೇಟ್ ಕ್ಯಾನ್ಸರ್ನ ಇತರ ಲಕ್ಷಣಗಳಲ್ಲಿ ಸೇರಿವೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸಿದರೆ ಅಥವಾ ಮೂತ್ರ ವಿಸರ್ಜನೆ ಮುಗಿದರೂ ಮೂತ್ರಕೋಶ ಇನ್ನೂ ಖಾಲಿಯಾಗಿಲ್ಲ ಎಂದು ಅನಿಸಿಕೆಯೂ ಪ್ರಾಸ್ಟೇಟ್ ಕ್ಯಾನ್ಸರ್ನ ಸಾಧ್ಯತೆಯನ್ನು ಸೂಚಿಸುತ್ತವೆ. ನಿಮಿರು ದೌರ್ಬಲ್ಯವೂ ಈ ರೋಗದ ಲಕ್ಷಣವಾಗಬ ಹುದು.
ಆದರೆ ಯಾವ ಕಾರಣದಿಂದ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ ಎನ್ನುವುದು ಈಗಲೂ ಹೆಚ್ಚುಕಡಿಮೆ ನಿಗೂಢವಾಗಿಯೇ ಉಳಿದಿದೆ. ಆದರೆ ವ್ಯಕ್ತಿಗಳಿಗೆ ವಯಸ್ಸಾಗು ತ್ತಿದ್ದಂತೆ ಪ್ರಾಸ್ಟೇಟ್ ಕ್ಯಾನ್ಸರ್ನ ಅಪಾಯವೂ ಹೆಚ್ಚುತ್ತ ಹೋಗುತ್ತದೆ. ಈ ರೋಗವು ನಿಧಾನವಾಗಿ ಬೆಳವಣಿಗೆಯಾಗುತ್ತದೆ ಮತ್ತು ಇಂತಹ ರೋಗವೊಂದು ತಮ್ಮನ್ನು ಅಮರಿಕೊಂಡಿದೆ ಎನ್ನುವ ಯಾವುದೇ ಲಕ್ಷಣಗಳು ದಶಕಗಳು ಕಳೆದರೂ ರೋಗಿಗಳಿಗೆ ಗೊತ್ತಾಗುವುದಿಲ್ಲ.
ಪ್ರಾಸ್ಟೇಟ್ ಕ್ಯಾನ್ಸರ್ನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು. ರೇಡಿಯೊ ಥೆರಪಿ ಅಥವಾ ಹಾರ್ಮೋನ್ ಥೆರಪಿಯಿಂದಲೂ ಗುಣಪಡಿಸಬಹುದಾಗಿದೆ.