ಕೇರಳ : ಕಿರಿಯ ವೈದ್ಯರ ಮುಷ್ಕರ; ವೈದ್ಯಕೀಯ ಸೇವೆಗೆ ತೊಡಕು

ತಿರುವನಂತಪುರ, ಜ.1: ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸರಕಾರದ ನಿರ್ಧಾರವನ್ನು ವಿರೋಧಿಸಿ ಕೇರಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರಿದಿದ್ದು, ರಾಜ್ಯದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ಅಡ್ಡಿಯಾಗಿದ್ದು ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ತೊಂದರೆಯಾಗಿದೆ.
ಮುಷ್ಕರ ನಿರತ ವೈದ್ಯರ ಪ್ರತಿನಿಧಿಗಳು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಜೊತೆ ನಡೆಸಿದ ಮಾತುಕತೆ ವಿಫಲವಾಗಿರುವ ಕಾರಣ ಮುಷ್ಕರ ಮುಂದುವರಿದಿದೆ. ಡಿ.29ರಿಂದ ಕಿರಿಯ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಮುಷ್ಕರ ಕೈಬಿಡುವಂತೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸುಪರಿಂಟೆಂಡೆಂಟ್ ಎಂ.ಎಸ್.ಶರ್ಮದ್ ಕಿರಿಯ ವೈದ್ಯರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿದ ಬಳಿಕ ಮುಷ್ಕರ ಹಿಂಪಡೆದಿರುವುದಾಗಿ ರವಿವಾರ ತಿಳಿಸಿದ್ದ ವೈದ್ಯರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಕಳೆದ ನವೆಂಬರ್ನಲ್ಲಿ ಕೇರಳ ಸಚಿವ ಸಂಪುಟವು ಆರೋಗ್ಯ ವಿಭಾಗದಲ್ಲಿರುವ ವೈದ್ಯರ ನಿವೃತ್ತಿ ವಯಸ್ಸನ್ನು 56 ವರ್ಷದಿಂದ 60ಕ್ಕೆ ಹಾಗೂ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿರುವ ವೈದ್ಯರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಹೆಚ್ಚಿಸಿತ್ತು. ಇದನ್ನು ಕಿರಿಯ ವೈದ್ಯರು ವಿರೋಧಿಸುತ್ತಿದ್ದಾರೆ. ಅಲ್ಲದೆ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡಿಕೊಳ್ಳಬೇಕು, ಕರಾರು (ಬಾಂಡ್) ಆಧಾರಿತ ನೇಮಕಾತಿ ಪದ್ದತಿ ಕೈಬಿಡಬೇಕು ಎಂಬ ಬೇಡಿಕೆಯನ್ನೂ ಕಿರಿಯ ವೈದ್ಯರು ಮುಂದಿರಿಸಿದ್ದಾರೆ.