ಮಂಬೈ ಕಮಲಾಮಿಲ್ಸ್ ಕಾಂಪೌಂಡ್ ಅಗ್ನಿ ಆಕಸ್ಮಿಕ: ಇಬ್ಬರು ಮ್ಯಾನೇಜರ್ಗಳ ಬಂಧನ

ಮುಂಬೈ, ಜ. 1: ಹದಿನಾಲ್ಕು ಜನರ ಸಾವಿಗೆ ಕಾರಣವಾದ ಕಳೆದ ವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿ ವನ್- ಅಬೊವ್ ಪಬ್ನ ಇಬ್ಬರು ಮ್ಯಾನೇಜರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಿಬ್ಸನ್ ಲೋಪೆಝ್ (34) ಹಾಗೂ ಕೆಲ್ವಿನ್ ಬಾವಾ (35) ಅವರನ್ನು ಎನ್.ಎಂ. ಜೋಶಿ ಮಾರ್ಗ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡ ಬಂಧಿಸಿದೆ. ಇಲ್ಲಿನ ಲೋವರ್ ಪರೇಲ್ನ ಕಮಲಾ ಮಿಲ್ಸ್ ಕಾಂಪೌಂಡ್ನಲ್ಲಿ ಇರುವ ಪಬ್ನಲ್ಲಿ ಈ ಲೋಪೆಜ್ ಹಾಗೂ ಬಾವಾ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆ ವಾರ ಕಮಲಾ ಮಿಲ್ಸ್ನ ವನ್-ಅಬೊವ್ ಪಬ್ನಲ್ಲಿ ಬೆಂಕಿ ವ್ಯಾಪಿಸಿ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಯುವತಿ ಸೇರಿದಂತೆ 14 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಕನಿಷ್ಠ 23 ಮಂದಿ ಗಾಯಗೊಂಡಿದ್ದರು. ಅಪಘಡಕ್ಕೆ ಸಂಬಂಧಿಸಿ ವನ್-ಅಬೊವ್ ಮಾಲಕರಿಗೆ ಆಶ್ರಯ ನೀಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಪಬ್ನ ಮಾಲಕರಾದ ಹಿತೇಶ್ ಸಂಘ್ವಿ, ಜಿಗರ್ ಸಂಘ್ವಿ, ಸಹ ಮಾಲಕರಾದ ಅಭಿಜಿತ್ ಮಂಕಾ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಂಘ್ವಿ ಸಹೋದರರ ವಿರುದ್ಧ ಲುಕೌಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು.