ಕಾಶ್ಮೀರದಲ್ಲಿ ರಕ್ತಪಾತ ತಡೆಯಲು ದಯವಿಟ್ಟು ಏನಾದರೂ ಮಾಡಿ
ಹುತಾತ್ಮ ಯೋಧರ ಕುಟುಂಬಿಕರ ಮನವಿ

ಜಮ್ಮುಕಾಶ್ಮೀರ, ಜ. 1: ಕಾಶ್ಮೀರ ಕಣಿವೆಯಲ್ಲಿ ರಕ್ತಪಾತ ತಡೆಯಲು ಏನಾದರೂ ಮಾಡಿ ಎಂದು ಜಮ್ಮು ಹಾಗೂ ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪಡೆಯ ತರಬೇತಿ ಕೇಂದ್ರ (ಸಿಆರ್ಪಿಎಫ್)ದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಿಕರು ಮಂಗಳವಾರ ಆಗ್ರಹಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆಥಪೊರಾದಲ್ಲಿ ಕೇಂದ್ರ ಮೀಸಲು ಪಡೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಪಾಕಿಸ್ತಾನ ಮೂಲದ ಜೈಶೆ ಸಂಘಟನೆಯ ಮೂವರು ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು ಹಾಗೂ ಇಬ್ಬರು ಉಗ್ರರು ಹತರಾಗಿದ್ದರು.
ಭಯೋತ್ಪಾದನೆ ಅಂತ್ಯಗೊಳ್ಳುವುದಿಲ್ಲ. ನಮ್ಮ ಯೋಧರು ನಿರಂತರ ಜೀವ ಬಲಿದಾನ ನೀಡುತ್ತಿದ್ದಾರೆ. ದಯವಿಟ್ಟು ಏನಾದರೂ ಮಾಡಿ. ಪಾಕಿಸ್ತಾನಕ್ಕಿಂತ ಕೆಟ್ಟದಾದ ದೇಶವನ್ನು ಈ ಜಗತ್ತು ನೋಡಿಲ್ಲ ಎಂದು ಹುತಾತ್ಮರಾದ ಸಿಆರ್ಪಿಎಫ್ ಯೋಧ ತುಫೈಲ್ ಮುಹಮ್ಮದ್ ಅವರ ಪುತ್ರ ಅನೀಸ್ ಹೇಳಿದ್ದಾರೆ.
ನಮ್ಮ ಕೆಚ್ಚೆದೆಯ ಯೋಧರ ಬಲಿದಾನ ವ್ಯರ್ಥವಾಗಲಾರದು. ಇಡೀ ದೇಶ ಅವರ ಕುಟುಂಬದೊಂದಿಗಿದೆ. ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಕೆಚ್ಚೆದೆಯ ಯೋಧರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ರವಿವಾರ ಮುಂಜಾನೆ 2 ಗಂಟೆಗೆ ಉಗ್ರರು ದಾಳಿ ನಡೆಸಿದರು. ಈ ದಾಳಿ ನಡೆಯುವ ಸಂದರ್ಭ ಈ ಕೇಂದ್ರದಲ್ಲಿ ಎಷ್ಟು ಮಂದಿ ಸಿಆರ್ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿತ್ತು ಎಂಬುದು ತಿಳಿದುಬಂದಿಲ್ಲ. ಉಗ್ರರು ಗ್ರೆನೆಡ್ ಎಸೆದರು. ಸಿಆರ್ಪಿಎಫ್ 185 ಬೆಟಾಲಿಯನ್ನ ತರಬೇತಿ ಕೇಂದ್ರದ ಪರಿಧಿ ಉಲ್ಲಂಘಿಸುವ ಮುನ್ನ ಗುಂಡು ಹಾರಿಸಿದರು. ಉಗ್ರರ ವಿರುದ್ಧ ಪ್ರತಿದಾಳಿ ನಡೆಸಲಾಯಿತು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಮೊದಲು ಬಲಿಯಾದವರು ಸಿಆರ್ಪಿಎಫ್ನ ಶರೀಫುದ್ದಿನ್ ಗನಿ.
ಅನಂತರ ಉಗ್ರರ ಗುಂಡಿಗೆ ಯೋಧರಾದ ತುಫೈಲ್ ಅಹ್ಮದ್, ರಾಜೇಂದ್ರ ನಾಯಿನ್, ಪಿ.ಕೆ. ಪಾಂಡಾ ಜೀವ ಕಳೆದುಕೊಂಡರು. ಕಟ್ಟಡದ ಒಳಗಡೆ ಸಿಲುಕಿಕೊಂಡ ಅಧಿಕಾರಿ ಕುಲದೀಪ್ ರೈ ಹೃದಯಾಘಾತದಿಂದ ಮೃತರಾಗಿದ್ದರು.
ಸಿಆರ್ಪಿಎಫ್ ಶಿಬಿರವನ್ನು ಉಗ್ರರು ಗುರಿಯಾಗಿರಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಹೊರತಾಗಿಯೂ ದಾಳಿ ನಡೆದಿದೆ. ಈ ದಾಳಿಯ ಬಗ್ಗೆ ಬೇಹುಗಾರಿಕೆ ಪೂರ್ವಬಾವಿ ಎಚ್ಚರಿಕೆ ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.