ಮಸೀದಿಯೊಳಗೆ ಮುಅಝ್ಝೀನ್ ಹತ್ಯೆ: ತನಿಖೆಗೆ ಆಂಧ್ರಪ್ರದೇಶ ಸರಕಾರ ಆದೇಶ

ಹೈದರಾಬಾದ್, ಜ. 1: ರಾಜಮುಂಡ್ರಿಯ ಲಾಲ್ಚೆರುವು ಪ್ರದೇಶದಲ್ಲಿರುವ ಮಸೀದಿಯ ಒಳಗಡೆ 61 ವರ್ಷದ ಮುಅಝಿನ್ ಹತ್ಯೆ ಪ್ರಕರಣದ ತನಿಖೆಗೆ ಆಂಧ್ರಪ್ರದೇಶ ಸರಕಾರ ಆದೇಶ ನೀಡಿದೆ. ಮಸೀದಿ ಅಪವಿತ್ರಗೊಳಿಸಿರುವುದು ಹಾಗೂ ಪವಿತ್ರ ಗ್ರಂಥಗಳನ್ನು ದಹಿಸಿರುವುದು ಕಂಡು ಬಂದಿದೆ. ಅಲ್ಲದೆ ಸ್ಥಳದಲ್ಲಿ ದಾಳಿ ಕೋರರು ಸೇದಿ ಉಳಿದ ಬೀಡಿಯ ತುಂಡುಗಳು ಪತ್ತೆಯಾಗಿವೆ. ಜನರು ಶನಿವಾರ ಬೆಳಗ್ಗೆ ಮಸೀದಿಗೆ ಪ್ರಾರ್ಥನೆಗೆಂದು ಆಗಮಿಸಿದಾಗ ಮುಹಮ್ಮದ್ ಫಾರೂಕ್ ಅವರ ಮೃತದೇಹ ಪತ್ತೆಯಾಗಿದೆ. ಅವರು ರಾಜಮುಂಡ್ರಿಗೆ ಸುಮಾರು 5 ತಿಂಗಳ ಹಿಂದೆ ಬಂದಿದ್ದರು ಹಾಗೂ ಈ ಮಸೀದಿಯಲ್ಲಿ ಮುಅಝ್ಝೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಕಾರಣ ಹಾಗೂ ಉದ್ದೇಶದ ಬಗ್ಗೆ ನಾವು ಈಗ ಏನೂ ಹೇಳಲು ಸಾಧ್ಯವಿಲ್ಲ. ಫಾರೂಕ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಹಾಗೂ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ರಾಜಮುಂಡ್ರಿ ನಗರ ಎಸ್ಪಿ ಬಿ. ರಾಜಕುಮಾರಿ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಸ್ಲಿಂಮರು ರವಿವಾರ ಪ್ರತಿಭಟನೆ ನಡೆಸಿದ್ದು, ಕೋಮುಶಕ್ತಿಗಳು ಈ ಪ್ರದೇಶದ ಶಾಂತಿ ಕದಡುತ್ತಿದೆ ಎಂದು ಆರೋಪಿಸಿವೆ.