ವಿಜಯ್ ಕೇಶವ್ ಗೋಖಲೆ ನೂತನ ವಿದೇಶಾಂಗ ಕಾರ್ಯದರ್ಶಿ

ಹೊಸದಿಲ್ಲಿ, ಜ.1: ಚೀನಾ ವಿಷಯದ ಕುರಿತ ತಜ್ಞರೆಂದು ಪರಿಗಣಿಸಲ್ಪಟ್ಟಿರುವ ವಿಜಯ್ ಕೇಶವ್ ಗೋಖಲೆ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಸೇವಾವಧಿ ಮುಂದುವರಿಸಲ್ಪಟ್ಟಿರುವ ಹಾಲಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಜನವರಿ 28ರಂದು ನಿವೃತ್ತರಾಗಲಿದ್ದು ಅವರ ಹುದ್ದೆಯನ್ನು ಗೋಖಲೆ ತುಂಬಲಿದ್ದಾರೆ.
ಐಎಫ್ಎಸ್ನ 1981ರ ಬ್ಯಾಚ್ನ ಅಧಿಕಾರಿಯಾಗಿರುವ ಗೋಖಲೆ, ಭಾರತ- ಚೀನಾ ಮಧ್ಯೆ 73 ದಿನಗಳವರೆಗೆ ಮುಂದುವರಿದಿದ್ದ ಡೋಕಾಲಾ ಬಿಕ್ಕಟ್ಟನ್ನು ಅಂತ್ಯಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2013ರ ಅಕ್ಟೋಬರ್ನಿಂದ 2016ರ ಜನವರಿವರೆಗೆ ಜರ್ಮನಿಯಲ್ಲಿ ಉನ್ನತ ರಾಯಭಾರಿಯಾಗಿ , 2016ರ ಜನವರಿ 20ರಿಂದ 2017ರ ಅಕ್ಟೋಬರ್ 21ರವರೆಗೆ ಚೀನಾದಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ 58 ವರ್ಷದ ಗೋಖಲೆ, ಈಗ ವಿದೇಶ ವ್ಯವಹಾರ ಸಚಿವಾಲಯದಲ್ಲಿ ಕಾರ್ಯದರ್ಶಿ(ಆರ್ಥಿಕ ಸಂಬಂಧ)ಯಾಗಿ ಕರ್ತವ್ಯದಲ್ಲಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿ ಗೋಖಲೆಯ ನೇಮಕಕ್ಕೆ ಅನುಮೋದನೆ ನೀಡಿದ್ದು ಅವರ ಸೇವಾವಧಿ 2 ವರ್ಷವಾಗಿರುತ್ತದೆ.