ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ: ಎಲ್ಲರ ಚಿತ್ತ ಕಾಂಗ್ರೆಸ್ನತ್ತ

ಹೊಸದಿಲ್ಲಿ, ಜ.2: ತ್ರಿವಳಿ ತಲಾಖ್ ನಿಷೇಧ ಮಸೂದೆ ಈ ವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದ್ದು, ಎಲ್ಲರ ಕಣ್ಣು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ನತ್ತ ನೆಟ್ಟಿದೆ. ಈ ಮಸೂದೆಯನ್ನು ಸಂಸದೀಯ ಸಮಿತಿಯ ಪರಾಮರ್ಶೆಗೆ ನೀಡಲಾಗುತ್ತದೆಯೇ ಅಥವಾ ಇದು ಕಾನೂನಾಗಿ ಪರಿವರ್ತನೆಯಾಗಲಿದೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಕಳೆದ ವಾರ ಎಡಪಕ್ಷಗಳು ಕಾಂಗ್ರೆಸ್ ಜತೆ ಮಾತುಕತೆ ನಡೆಸಿದ್ದು, "ಮುಸ್ಲಿಂ ಮಹಿಳಾ (ವಿವಾಹ ಕುರಿತ ಹಕ್ಕುಗಳ ರಕ್ಷಣೆ) ಮಸೂದೆ- 2017ನ್ನು ಆಯ್ದ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಬೇಕು" ಎಂದು ಎಡಪಕ್ಷಗಳು ಆಗ್ರಹಿಸಿವೆ.
ಪ್ರಮುಖ "ಜಾತ್ಯತೀತ" ಮಿತ್ರಪಕ್ಷದ ನಿಲುವು ಕಾಂಗ್ರೆಸ್ನ ಕೈಕಟ್ಟಿಹಾಕುವ ಎಲ್ಲ ಸಾಧ್ಯತೆಗಳಿವೆ. ಸಮಾನ ಮನಸ್ಕ ಪಕ್ಷಗಳಿಂದ ದೂರ ಸರಿಯುತ್ತಿರುವ ಬಗ್ಗೆ ಪಕ್ಷದ ಒಂದು ವಲಯದಲ್ಲಿ ಕಳವಳ ವ್ಯಕ್ತವಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
"ತ್ರಿವಳಿ ತಲಾಖ್ ಅಸ್ತ್ರವನ್ನು ಬೇಕಾಬಿಟ್ಟಿಯಾಗಿ ಬಳಸುವುದಕ್ಕೆ ನಮ್ಮ ವಿರೋಧವಿದೆ. ಇದು ತೊಲಗಬೇಕು ಎನ್ನುವುದು ನಮ್ಮ ಆಶಯ. ಆದರೆ ಮುಸ್ಲಿಮರಲ್ಲಿ ವಿವಾಹ ಎನ್ನುವುದು ನಾಗರಿಕ ಗುತ್ತಿಗೆಯಾಗಿದ್ದು, ಈ ಉದ್ದೇಶಿತ ಕಾನೂನು ಅಪರಾಧ ಅಂಶಗಳನ್ನು ಒಳಗೊಂಡಿದ್ದು, ಇದು ತಪ್ಪು. ಬಿಜೆಪಿ ತರಾತುರಿಯಲ್ಲಿ ಈ ಮಸೂದೆ ಮಂಡಿಸಿದ್ದು, ಕೋಮು ಧ್ರುವೀಕರಣಕ್ಕೆ ಹಾಗೂ ರಾಜಕೀಯ ಮೈಲೇಜ್ ಪಡೆಯಲು ಇದನ್ನು ಬಳಸಿಕೊಳ್ಳುತ್ತಿದೆ" ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ದೂರಿದ್ದಾರೆ.
ಸಿಪಿಎಂ ರಾಜಕೀಯ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಪ್ರತಿಕ್ರಿಯಿಸಿ, "ಮೂಲಭೂತವಾಗಿ ಸಿವಿಲ್ ವ್ಯಾಜ್ಯವಾಗಿರುವ ಇದನ್ನು ಅಪರಾಧ ಪ್ರಕರಣವಾಗಿ ಬಳಸಿಕೊಳ್ಳಲು ಬಿಜೆಪಿ ಸುಪ್ರೀಂಕೋರ್ಟ್ ತೀರ್ಪನ್ನು ಬಳಸಿಕೊಳ್ಳುತ್ತಿದೆ. ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಇದನ್ನು ಜಾರಿಗೆ ತರಲಾಗುತ್ತಿದ್ದು, ಮುಸ್ಲಿಂ ಸಂಘಟನೆಗಳ ನಿಲುವು ತಿಳಿದುಕೊಳ್ಳುವ ಪ್ರಯತ್ನ ನಡೆಸಿಲ್ಲ" ಎಂದು ಆಕ್ಷೇಪಿಸಿದ್ದಾರೆ.